“ಹಿಂದೂ ಸಂಘಟನೆಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕ್ತಾರಂತೆ. ಕುತ್ಲೂರು ಕಥನ ಅಂದರೆ ಎಂತ ಪುಸ್ತಕ ಅದು ?” ಪೊಲೀಸ್ ಅಧಿಕಾರಿಯೊಬ್ಬರು ಕಾಳಜಿಯ ಮಾತುಗಳೆಂಬಂತೆ ನಯವಾಗಿ ಬೆದರಿಸಲು ಆರಂಭಿಸಿದರು.
“ದಯವಿಟ್ಟು ಹರ್ಷ್ ಮಂದರ್ ರನ್ನು ಕಾರ್ಯಕ್ರಮ ಪಟ್ಟಿಯಿಂದ ಕೈ ಬಿಟ್ಟು ಕಾರ್ಯಕ್ರಮ ಮಾಡಿ” ಅದೇ ಪೊಲೀಸ್ ಅಧಿಕಾರಿ ಮನವಿ ಮಾಡಿದರು.
“ನಿಮ್ದೇನು ತಪ್ಪಿಲ್ಲ ಸರ್, ನೀವು ಪುಸ್ತಕ ಬಿಡುಗಡೆ ಮಾಡಿ. ಆದ್ರೆ ನಿಮಗೆ ಹಾಲ್ ಹೇಗೆ ಕೊಟ್ಟರು ? ನಿಮಗೆ ಹಾಲ್ ಕೊಡುವ ಮುನ್ನ ಸಭಾಂಗಣದ ಆಡಳಿತ ಮಂಡಳಿ ನಮಗೆ ಮಾಹಿತಿ ಕೊಡಬೇಕಿತ್ತಲ್ವಾ ?” ಮತ್ತೊಬ್ಬ ಪೊಲೀಸ್ ಅಧಿಕಾರಿಯ ಮಾತು.
ಸ್ವಲ್ಪ ಹೊತ್ತಲ್ಲೇ ಸಭಾಂಗಣದ ಆಡಳಿತ ಕಚೇರಿ ಸಿಬ್ಬಂದಿಯಿಂದ ಫೋನ್ ಕರೆ.
“ಕಾರ್ಯಕ್ರಮದಲ್ಲಿ ಸಮಸ್ಯೆ ಏನಾದ್ರು ಉಂಟಾ ? ಪೊಲೀಸ್ ನವರು ಭಯಂಕರ ಕಿರಿಕಿರಿ ಮಾಡ್ತಾ ಇದ್ದಾರೆ. ನಮಗೆ ನಿಮ್ಮ ಸಹವಾಸ ಬೇಡವಿತ್ತು. ನೀವು ಪೊಲೀಸರಿಂದ ಅನುಮತಿ ಪತ್ರ ತಂದು ಕೊಡಿ” ಸಭಾಂಗಣ ಆಡಳಿತ ಕಚೇರಿ ಸಿಬ್ಬಂದಿ ದುಗುಡ.
ಇದು ಈ ನೆಲದ ಮೂಲ ನಿವಾಸಿಗಳ ಬದುಕಿನ ಕುರಿತಾದ ಪುಸ್ತಕ “ಕುತ್ಲೂರು ಕಥನ” ಬಿಡುಗಡೆಗೂ ಮೊದಲು ನಡೆದ ಪೊಲೀಸ್ ಹೈಡ್ರಾಮಾದ ಹೈಲೈಟ್.
ಪೊಲೀಸರಿಗೆ ಜನರ ಬದುಕು, ಸಾಹಿತ್ಯ, ಬುದ್ದಿಜೀವಿ ವರ್ಗ, ಸೈದ್ದಾಂತಿಕತೆಗಳ ಗಂಧಗಾಳಿ ಗೊತ್ತಿಲ್ಲದೇ ಇದ್ದರೆ, ರಾಜಕೀಯ ಪಕ್ಷಗಳ ಚೇಲಾಗಿರಿಯನ್ನು ಮಾಡುತ್ತಾ ಕಾನೂನು, ಸಂವಿಧಾನವನ್ನು ಮರೆತಿದ್ದರೆ ಹೀಗಾಗುತ್ತದೆ. ನಮಗೂ ಕಾಟ ಕೊಡುತ್ತಾ, ಅವರೂ ದಿನವಿಡೀ ಹಿಂಸೆ ಅನುಭವಿಸುತ್ತಾ ಇರಬೇಕಾಗುತ್ತದೆ.
ಕುತ್ಲೂರು ಕಥನ ಪುಸ್ತಕ ಬಿಡುಗಡೆಯ ಮುನ್ನ ದಿನ ಒಬ್ಬರು ಸಬ್ ಇನ್ಸ್ ಸ್ಪೆಕ್ಟರ್, ಹಲವು ಪೊಲೀಸರನ್ನು ಪದೇ ಪದೇ ಸಭಾಂಗಣಕ್ಕೆ ಕಳುಹಿಸಿ ಮಾಹಿತಿಯ ನೆಪದಲ್ಲಿ ನಯವಾಗಿ ಹಿಂಸಿಸಿದರು.
“ಹಿಂದೂ ಸಂಘಟನೆಗಳು ಯಾರೂ ಕೂಡಾ ಕುತ್ಲೂರು ಕಥನ ಪುಸ್ತಕಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಹಾಗೊಂದು ವೇಳೆ ಕುತ್ಲೂರು ಕಥನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳು ದಾಳಿ ಮಾಡಲು ಯೋಜಿಸಿದ್ದರೆ ಪೊಲೀಸರಿಗಿಂತ ಮೊದಲು ನನಗೇ ತಿಳಿಯುತ್ತದೆ. ನನ್ನ ಪತ್ರಿಕೋದ್ಯಮದ ಮಾಹಿತಿ ಮೂಲಗಳ ಬಗ್ಗೆ ನನಗೆ ಇನ್ನೂ ನಂಬಿಕೆ ಇದೆ” ಎಂದು ಪೊಲೀಸರಿಗೆ ಹೇಳಿದೆ.
“ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ದಾಳಿಯಾಗುತ್ತದೆ ಎಂದು ನಿಮಗೆ ಮಾಹಿತಿ ನೀಡಿದವರು ಯಾರು ? ದಾಳಿ ಮಾಡುವವರು ಯಾರು ? ನಾನು ಆ ದಾಳಿಕೋರರ ಜೊತೆ ಮಾತನಾಡುತ್ತೇನೆ. ನಾವು ಸಂವಾದದಲ್ಲಿ ನಂಬಿಕೆ ಇರುವವರು” ಎಂದೆ.
ಆ ಪೊಲೀಸ್ ಅಧಿಕಾರಿ ದಾಳಿ ಬೆದರಿಕೆ ಒಡ್ಡಿದವರ ಮಾಹಿತಿ ನೀಡಲು ಸಿದ್ದರಿಲ್ಲ.
ಈ ಪುಸ್ತಕ ಕುತ್ಲೂರಿನ ಮಲೆಕುಡಿಯರ ಬದುಕಿಗೆ ಸಂಬಂಧಿಸಿದ್ದು. ಹಿಂದೂ-ಮುಸ್ಲಿಂ ರಾಜಕಾರಣಕ್ಕಾಗಲೀ, ಪಕ್ಷ ರಾಜಕಾರಣಕ್ಕಾಗಲೀ ಸಂಬಂಧಿಸಿದ್ದಲ್ಲ. ಆದಿವಾಸಿಗಳ ಬದುಕಿಗೂ ಹಿಂದುತ್ವಕ್ಕೂ ಹೇಗೆ ಸಂಬಂಧ ಇಲ್ಲವೋ, ಹಾಗೆಯೇ ಈ ಪುಸ್ತಕ ಬಿಡುಗಡೆಗೂ ಹಿಂದುತ್ವಕ್ಕೂ ಸಂಬಂಧವಿಲ್ಲ. ಯಾವ ದಾಳಿಯೂ ನಡೆಯಲ್ಲ. ಪುಸ್ತಕ ಬಿಡುಗಡೆ ನಡೆದೇ ನಡೆಯುತ್ತೆ ಎಂದೆ.
ಆ ಬಳಿಕ ಸಭಾಂಗಣದ ಆಡಳಿತ ಕಚೇರಿ ಸಿಬ್ಬಂದಿ ಪೊಲೀಸ್ ರಿಗೆ ಮಾಹಿತಿ ನೀಡಿದ ಪತ್ರದ ಸ್ವೀಕೃತಿ ಪ್ರತಿ ನೀಡುವಂತೆ ಒತ್ತಾಯಿಸ ತೊಡಗಿದರು. ನಾವು ಇನ್ನೊಂದು ಗಂಟೆಯಲ್ಲಿ ಕಾರ್ಯಕ್ರಮ ಆರಂಭಿಸಿಬೇಕಿದೆ. ಈ ಸಂದರ್ಭದಲ್ಲಿ ಪೊಲೀಸ್ ಮಾಹಿತಿಯ ಸ್ವೀಕೃತಿ ಪ್ರತಿ ನೀಡುವುದಿಲ್ಲ ಎಂದು ಕಾರ್ಯಕ್ರಮ ಶುರು ಮಾಡಿದೆವು. ಪೊಲೀಸರು ವಿನಾಕಾರಣ ಅಭೂತಪೂರ್ವ ಭದ್ರತೆ ಒದಗಿಸಿದ್ದರು.
ಪೊಲೀಸರು ಈ ರೀತಿ ಸಭಾಂಗಣದ ಆಡಳಿತಕ್ಕೆ ಬೆದರಿಸುವುದು, ಆಯೋಜಕರಿಗೆ ಬೆದರಿಸುವುದು (ನಮಗೆ ಬೆದರಿಸಲಿಲ್ಲ. ಕಾಳಜಿ ದಾಟಿಯ ಬೆದರಿಕೆಯ ಮಾತು) ಕೇವಲ ಜನ ಪರವಾಗಿರುವವರಿಗೆ ಮಾತ್ರನಾ ? ಅಥವಾ ಹಿಂದುತ್ವ ಸಂಘಟನೆಗಳಿಗೂ ಹೀಗೆ ಕಾಡಿಸುತ್ತಾರಾ ? ಇನ್ ಡೋರ್ ಕಾರ್ಯಕ್ರಮ ಮಾಡುವಾಗ, ಇಲ್ಲದ ಕಾನೂನು ಹೇರಿಕೆ ನಮಗೆ ಮಾತ್ರನಾ ಅಥವಾ ಹಿಂಧುತ್ವ ಸಂಘಟನೆಗಳಿಗೂ ಇರುತ್ತಾ ?
ಸರ್ಕಾರಗಳು ಬರುತ್ತದೆ, ಹೋಗುತ್ತದೆ. ಯಾವ ಮಂತ್ರಿ, ಶಾಸಕನೂ ಇಲ್ಲಿ ಗೂಟ ಹೊಡೆದುಕೊಂಡು ಕೂರುವುದಿಲ್ಲ. ಅಂತಿಮವಾಗಿ ಪೊಲೀಸರು ತಲೆಬಾಗ ಬೇಕಿರೋದು ಕೇವಲ ಸಂವಿಧಾನದ ಆಶಯಗಳಿಗೆ ಮಾತ್ರ. ಇಂತದ್ದೊಂದು ಭೀತಿಯ ವಾತಾವರಣ ಸೃಷ್ಟಿಸಿಕೊಂಡಿರುವ ಪೊಲೀಸರು ಕ್ಷಮಾರ್ಹರಲ್ಲ.
ಅಂತೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಮಂಗಳೂರಿನಲ್ಲಿ ಇಂದೇ ಗಣರಾಜ್ಯೋತ್ಸವ, ಮದುವೆ, ಗೃಹಪ್ರವೇಶ, ಹಲವು ಜನಪರ ಕಾರ್ಯಕ್ರಮಗಳು ಇದ್ದಾಗ್ಯೂ, ಅತ್ಯಾಪ್ತರೂ ಬರಲಾಗದಿದ್ದಷ್ಟು ಕಾರ್ಯಕ್ರಮವಿದ್ದರೂ ಸಭಾಂಗಣ ತುಂಬಿ ಹೋಗುವಷ್ಟು ಸಾಹಿತಿ, ಹೋರಾಟಗಾರರು, ಯುವ ಜನರು ಆಗಮಿಸಿದ್ದರು.
ಲವ್ ಯೂ ಆಲ್…
– ನವೀನ್ ಸೂರಿಂಜೆ, ಪತ್ರಕರ್ತರು




