ರಾಜ್ಯ ಬಿಜೆಪಿಯ ಫೇಸ್ಬುಕ್ ಪೇಜಿನಲ್ಲಿ ಲಡಾಯಿ ಪ್ರಕಾಶನ ಪುಸ್ತಕ

8 months ago

ಕಾಂಗ್ರೆಸ್‌ ಪಕ್ಷ ಮತಗಳ್ಳತನ ಮಾಡಿದೆ ಇವತ್ತು ನಾವು ಮಾಡುತ್ತಿದ್ದೇವೆ ಎನ್ನುವಂತಿದೆ ಅವರ ವಾದ

ರಾಜ್ಯ ಬಿಜೆಪಿಯ ಫೇಸ್ಬುಕ್ ಪೇಜಿನಲ್ಲಿ ಲಡಾಯಿ ಪ್ರಕಾಶನ ಪುಸ್ತಕ

ಹಾಗಾಗಲು ಹೇಗೆ ಸಾಧ್ಯ  ಎಂದು ಹುಬ್ಬೇರಿಸುತ್ತಿರುವಿರಾ? ಗೋಕುಲಾಷ್ಟಮಿಗೂ ಇಮಾಮ ಸಾಬರಿಗೂ ಹೇಗೆ ಸಂಬಂಧ ಕುದುರಲು ಸಾಧ್ಯ? ನಾನೂ ಹಾಗೆ ಅಂದುಕೊಂಡಿದ್ದೆ. ಲಡಾಯಿ ಪ್ರಕಾಶನವನ್ನು ದ್ವೇಷಿಸುವ ಪಕ್ಷದ ಪೇಜಿನಲ್ಲಿ ಲಡಾಯಿ ಪ್ರಕಾಶನ ಪುಸ್ತಕ ಬಂದು ಬಿಟ್ಟಿದೆ.

ನಿನ್ನೆ ದಿನ ಕರ್ನಾಟಕದ ಬಿಜೆಪಿ ಪಕ್ಷ ತನ್ನ ಫೇಸ್ಬುಕ್ ಪೇಜ್ ನಲ್ಲಿ ತನ್ನ ವಾದದ ಸಮರ್ಥನೆಗಾಗಿ  ಲಡಾಯಿ ಪ್ರಕಾಶನ ಪ್ರಕಟಿಸಿರುವ ಡಾ. ಸವಿತಾ ಅಂಬೇಡ್ಕರ್ ಅವರು ಬರೆದ ತಮ್ಮ ಆತ್ಮಕಥನ ‘ಡಾ. ಅಂಬೇಡ್ಕರ್ ಸಹವಾಸದಲ್ಲಿ’  ಪುಸ್ತಕದ ಮುಖಪುಟ ಹಾಕಿ ಅವರ ಒಂದು ಹೇಳಿಕೆಯನ್ನು ಅಂಡರ್ ಲೈನ್ ಮಾಡಿ ಪ್ರಕಟಿಸಿದೆ.

ನಿನ್ನೆ ರಾಹುಲ್ ಗಾಂಧಿಯವರು ಬೆಂಗಳೂರಿನಲ್ಲಿ ಮಾಡಿದ ಭಾಷಣದ ಪ್ರಭಾವ ಇದು. ರಾಹುಲ ಗಾಂಧಿಯವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಆಗಿರುವ ಮತಗಳ್ಳತನವನ್ನು ಒಂದು ಇಶ್ಯೂ ಮಾಡಿದ್ದಾರೆ. ಪುರಾವೆ ಸಮೇತ ಅದನ್ನು ಜನರೆದುರಿಗೆ ಬಹಿರಂಗವಾಗಿ ಇಟ್ಟಿದ್ದಾರೆ. ದೇಶದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಸಹಜವಾಗಿ ಮೋದಿಯವರ ಜನಪ್ರಿಯತೆಯ ಗ್ರಾಫ್ ಕೆಳಗಿಳಿಯುತ್ತಿದೆ. ಅದರಿಂದ ಆಗಿರುವ ಮುಖಭಂಗ ತಪ್ಪಿಸಿಕೊಳ್ಳಲು ಮರ್ಯಾದೆ ಉಳಿಸಿಕೊಳ್ಳಲು ಏನಾದರೂ ಸಿಕ್ಕೀತಾ ಎಂದು ಹುಡುಕುತ್ತಿರುವಾಗ ಅವರಿಗೆ ಲಡಾಯಿ ಪ್ರಕಾಶನದ ಈ ಪುಸ್ತಕ ಕಣ್ಣಿಗೆ ಕಂಡಿದೆ.

ಇಂಥ ಮತಗಳ್ಳತನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನಿಂತಿದ್ದ ಚುನಾವಣೆಯಲ್ಲಿಯೂ ಆಗಿತ್ತು. ಆಗಿನ ಚುನಾವಣೆಯಲ್ಲಿ ಚಲಾವಣೆ ಆಗಿದ್ದ ಮತಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳನ್ನು ಅಮಾನ್ಯ ಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ವಿಷಯವನ್ನು ಡಾ. ಸವಿತಾ ಅಂಬೇಡ್ಕರ್ ಅವರು ತಮ್ಮ ಆತ್ಮಕಥನದಲ್ಲಿ ‘ಸಂವಿಧಾನ ನಿರ್ಮಾತೃವಿನ ಸೋಲು’ ಎಂಬ ಅಧ್ಯಾಯದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಡಾ. ಸವಿತಾ ಅವರು ಚಾರಿತ್ರಿಕವಾಗಿ ಅನೇಕ ಮಹತ್ವದ ಸಂಗತಿಗಳನ್ನು ಈ ಪುಸ್ತಕದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಂಬೇಡ್ಕರ್ ಮೇಲಿದ್ದ ಅವರ ಆಗಾಧ ಪ್ರೀತಿಯ ವಿಷಯಗಳು ಇದರಲ್ಲಿ ಸೇರಿದೆ. ಈ ಪುಸ್ತಕವನ್ನು ಅನಿಲ ಹೊಸಮನಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ತಾವು ಮಾಡಿರುವ ಮತಗಳ್ಳತನವನ್ನು ಮರೆಮಾಚಲು ಅಂದು ಆಗಿದ್ದ ಮತಗಳ್ಳತನ ಮುಂದುಮಾಡಿ ಇದನ್ನು ತಮ್ಮ ಪೇಜಿನಲ್ಲಿ ಅಂಟಿಸಿಕೊಂಡಿದ್ದಾರೆ. ಆಗ ಕಾಂಗ್ರೆಸ್‌ ಪಕ್ಷ ಮತಗಳ್ಳತನ ಮಾಡಿದೆ ಇವತ್ತು ನಾವು ಮಾಡುತ್ತಿದ್ದೇವೆ ಎನ್ನುವಂತಿದೆ ಅವರ ವಾದ.

ಎಂಥ ವಿಚಿತ್ರ ನೋಡಿ ಕಳೆದ ಸಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ “ಗ್ರಂಥಾಲಯ ಪುಸ್ತಕ ಖರೀದಿ” ಯೋಜನೆಯಲ್ಲಿ ಲಡಾಯಿ ಪ್ರಕಾಶನ ಪ್ರಕಟಿಸಿದ ಪುಸ್ತಕಗಳನ್ನು ಖರೀದಿಸಬಾರದು ಎಂದು ನಮ್ಮ ಪುಸ್ತಕಗಳನ್ನೇ ಹೊರಗಿಟ್ಟಿತ್ತು.

ಲಡಾಯಿ ಪ್ರಕಾಶನ ನಂಬಿದ ಸಿದ್ಧಾಂತದ ಪುಸ್ತಕಗಳೆಂದರೆ ಬಿಜೆಪಿಗೆ ಅಷ್ಟೊಂದು ಸಿಟ್ಟು. ಸಾರಾಂಶದಲ್ಲಿ ಲಡಾಯಿ ಪುಸ್ತಕಗಳೆಂದರೆ ಅದಕ್ಕಾಗದು. ಅಷ್ಟು ದ್ವೇಷ. ಆಯ್ಕೆ ಸಮಿತಿ ಪುಸ್ತಕಗಳನ್ನು ಆಯ್ಕೆ ಮಾಡಿದ್ದರೂ ಖರೀದಿಯಿಂದ ಹೊರಗಿಡಲಾಗಿತ್ತು. ರೋಹಿತ ಚಕ್ರತೀರ್ಥ ಎಂಬ ಸನಾತನವಾದಿ ಲಡಾಯಿ ಪ್ರಕಾಶನದ ಪುಸ್ತಕಗಳನ್ನು ಖರೀದಿಯಿಂದ ಹೊರಗಿಟ್ಟುಕೊಂಡಿದ್ದನ್ನು ತನ್ನ ಫೇಸ್ಬುಕ್ ಪೇಜಿನಲ್ಲಿ ಅಭಿಮಾನದಿಂದ ಬರೆದುಕೊಂಡಿದ್ದರು.

ಅಂದು ಯಾವ ಲಡಾಯಿ ಪ್ರಕಾಶನದ ಪುಸ್ತಕಗಳನ್ನು ಅಷ್ಟೊಂದು ದ್ವೇಷ ಮಾಡಿದ್ದರೋ ಅದೇ ಪ್ರಕಾಶನದ ಪುಸ್ತಕವನ್ನು ಇವತ್ತು ತಮ್ಮ ಸಮರ್ಥನೆಗಾಗಿ ತಮ್ಮದೇ ಪೇಜಿನಲ್ಲಿ ಪ್ರಕಟಿಸುವ ಪ್ರಸಂಗ ಅವರಿಗೆ ಬಂದಿದೆ.

ನಿಜಕ್ಕೂ ಬಿಜೆಪಿಯವರಿಗೆ ನಮ್ಮ ಪುಸ್ತಕಗಳ ಬಗ್ಗೆ ಆಸಕ್ತಿ ಇದ್ದಲ್ಲಿ ಇಡೀಯಾಗಿ ನಮ್ಮ ಪುಸ್ತಕಗಳನ್ನು ಒಂದು ಸಲ ನೋಡಲಿ. ಅದಾಗದಿದ್ದರೂ ನಾವು ಪ್ರಕಟಿಸಿರುವ ಕೆಲವು ಪುಸ್ತಕಗಳನ್ನು ಅವರು ಓದಲೇಬೇಕು. ವಿಶೇಷವಾಗಿ ಇತ್ತೀಚಿಗೆ  ಪ್ರಕಟಿಸಿರುವ ಸಂವಿಧಾನ v/s ಸನಾತನವಾದ, ನಾನು ಹಿಂದೂ ಆಗಿ ಸಾಯಲಾರೆ, ಹಿಂದೂ ಧರ್ಮ ತತ್ವ, ಆರ್ ಎಸ್ ಎಸ್ ಚರಿತ್ರೆಗೆ ಸಂಬಂಧಿಸಿದ 17 ಪುಸ್ತಕಗಳನ್ನು ಓದಿ ತಮ್ಮ ಮುಖಗಳನ್ನು ನೋಡಿಕೊಳ್ಳಲಿ.. ಅವರ ಎದೆಯೊಳಗೆ ಒಂದು ಅರಿವಿನ ಹಣತೆ ಹತ್ತಿಕೊಳ್ಳಲಿ..

ಕೊನೆ ಮಾತು: ಬಿಜೆಪಿ ಗ್ರಂಥಾಲಯ ಖರೀದಿಯಿಂದ ಲಡಾಯಿ ಪ್ರಕಾಶನದ ಪುಸ್ತಕಗಳನ್ನು ಹೊರಗಿಡುವ ಪ್ರಯತ್ನ ಮಾಡಿದರೆ ಕಾಂಗ್ರೆಸ್‌ ಸರ್ಕಾರ ಖರೀದಿಸಿದ ಪುಸ್ತಕಗಳಿಗೆ ಹಣ ಪಾವತಿ ಮಾಡದೆ ಎರಡು ವರ್ಷಗಳಿಂದ ಸತಾಯಿಸುತ್ತಿದೆ..

ಇಷ್ಟೇ ವ್ಯತ್ಯಾಸ.

ಪ್ರಗತಿಪರವಾಗುವುದು ಎಂದರೆ ಇವರಿವರು ಎನ್ನದೆ ಪ್ರಭುತ್ವದ ವಿರುದ್ಧ ಹೋರಾಡುತ್ತಲೆ ಇರಬೇಕು ಎನ್ನುವಂತಾಗಿದೆ.

– ಬಸೂ

Leave a Reply