ಕೊರಚರ ಭಾಷೆ ಮತ್ತು ಸಂಸ್ಕೃತಿ ಮರುಜನ್ಮದ ಸಡಗರ

2 months ago

ಮೈಸೂರಿನಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಮಾರಂಭ

ಮೈಸೂರು; ಕರ್ನಾಟಕದಲ್ಲಿ ಅಳಿದು ಹೋಗುತ್ತಿರುವ ಭಾಷೆಗಳಲ್ಲಿ ಒಂದಾಗಿರುವ ಕೊರಚ ಭಾಷೆಯನ್ನು ಮುಖ್ಯವಾಹಿನಿಗೆ ತರಲು ಮತ್ತು ಅದರ ಅಸ್ಮಿತೆಯನ್ನು ಉಳಿಸಲು ಒಂದು ಐತಿಹಾಸಿಕ ಹೆಜ್ಜೆ ಇಡಲಾಗುತ್ತಿದೆ. ಬೆಂಗಳೂರಿನ ನೇಗಿಲ ಯೋಗಿ ಟ್ರಸ್ಟ್ (ರಿ.) ವತಿಯಿಂದ ಮೈಸೂರಿನ ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಕೊರಚರ ಭಾಷೆ, ಮಾತುಕತೆ ಮತ್ತು ಸಾಹಿತ್ಯಿಕ ಕೃತಿಗಳ ಲೋಕಾರ್ಪಣೆ ಸಮಾರಂಭ ಜರುಗಲಿದೆ.

ಕಾರ್ಯಕ್ರಮದ ವಿವರಗಳು:

ದಿನಾಂಕ: 06.08.2026 ಭಾನುವಾರ

ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ

ಸ್ಥಳ: ಬಿ.ವಿ. ಕಾರಂತ ರಂಗ ಚಾವಡಿ, ರಂಗಾಯಣ, ಮೈಸೂರು

ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:

  • ಸಾಕ್ಷ್ಯಚಿತ್ರ ಪ್ರದರ್ಶನ
  • ಎರಡು ಮಹತ್ವದ ಪುಸ್ತಕಗಳ ಲೋಕಾರ್ಪಣೆ
  • ಕೊರಚ ಭಾಷೆಯಲ್ಲಿ ಬುದ್ಧ ಕಥಾವಾಚನ ಹಾಗೂ ಸಂವಿಧಾನ ಪೀಠಿಕೆ ವಾಚನ
  • ಸಾಮೂಹಿಕ ಊಟದ ವ್ಯವಸ್ಥೆ

ಜನಾರ್ಪಣೆಗೊಳ್ಳಲಿರುವ ಕೃತಿಗಳು:

  1. ಕರ್ನಾಟಕದ ಕೊರಚರು: ಡಾ.ಎಚ್.ಆರ್.ಸ್ವಾಮಿ ಅವರ ಈ ಸಂಶೋಧನಾ ಕೃತಿಯು ಕೊರಚ ಜನಾಂಗದ ಬದುಕು-ಬವಣೆ, ಇತಿಹಾಸ, ಸಂಸ್ಕೃತಿ ಮತ್ತು ಸಾಹಿತ್ಯದ ಕುರಿತು ಆಳವಾದ ಅಧ್ಯಯನ ನಡೆಸಿದೆ.
  2. ಕೊರಚ ಮಾತು ಕತೆ (ಕುಡ್ರ್ ವಾತಕತ – Spoken Koracha): ಕೊರಚ ಭಾಷೆಯನ್ನು ಪದವಾಗಿ ಮತ್ತು ವಾಕ್ಯವಾಗಿ ಜನರ ನಡುವೆ ಉಳಿಸುವ ನಿಟ್ಟಿನಲ್ಲಿ ಮೂಡಿಬಂದಿರುವ ಈ ಕೃತಿ ಕನ್ನಡ-ಇಂಗ್ಲಿಷ್ ಲಿಪಿಯಲ್ಲಿ ಕೊರಚ ಭಾಷೆಯನ್ನು ಕಲಿಯಲು ನೆರವಾಗಲಿದೆ. ವಿಶೇಷವಾಗಿ ಬುದ್ಧನ ಕಥೆಗಳು, ಬಸವಾದಿ ಶರಣರ ವಚನಗಳು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಚಯವನ್ನು ಈ ಕೃತಿ ಒಳಗೊಂಡಿದೆ.

ಗಣ್ಯರ ಉಪಸ್ಥಿತಿ:

ಉದ್ಘಾಟನೆ ಮತ್ತು ಹೊತ್ತಗೆಗಳ ಲೋಕಾರ್ಪಣೆ: ಡಾ. ಧರಣಿದೇವಿ ಮಾಲಗತ್ತಿ (ಡಿ.ಐ.ಜಿ ಇಂಟೆಲಿಜೆನ್ಸ್, ಸಾಹಿತಿಗಳು, ಮೈಸೂರು)

ಅಧ್ಯಕ್ಷತೆ: ಪ್ರೊ. ಕಾಳೇಗೌಡ ನಾಗವಾರ (ಜಾನಪದ ಸಂಶೋಧಕರು, ಮೈಸೂರು)

ಅತಿಥಿಗಳು: ಪ್ರೊ. ಎಂ.ಎಸ್. ಶೇಖರ್ (ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರು, ಮೈಸೂರು)

ಕೃತಿ ಪರಿಚಯ: ಡಾ. ಆರ್. ಸಂತೋಷ ನಾಯ್ಕ (ನಿರ್ದೇಶಕರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು) ಹಾಗೂ ಶ್ರೀ ರೋಹಿತ್ ಅಗಸರಹಳ್ಳಿ (ಕನ್ನಡ ಉಪನ್ಯಾಸಕರು, ಹಾಸನ)

ಪ್ರಾಸ್ತಾವಿಕ ನುಡಿ: ಪ್ರೊ. ರಾಜಪ್ಪ ದಳವಾಯಿ (ಅಧ್ಯಕ್ಷರು, ಸಗಟು ಖರೀದಿ ಸಮಿತಿ, ಗ್ರಂಥಾಲಯ ಇಲಾಖೆ, ಬೆಂಗಳೂರು)

ಜೊತೆಗೆ ಮಾಲತಿ ಅವರು ಕೊರಚ ಭಾಷೆಯಲ್ಲಿ ಬುದ್ಧ ಕಥಾವಾಚನ ಮಾಡಲಿದ್ದು, ಚಿಣ್ಣ ತ್ರಿಶಾನ್ ಸಂತೋಷ ಅವರು ಕೊರಚ ಭಾಷೆಯಲ್ಲಿ ಸಂವಿಧಾನ ಪೀಠಿಕೆಯನ್ನು ವಾಚಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಅರಸೀಕೆರೆ ಯೋಗಾನಂದ ಅವರು ನಡೆಸಿಕೊಡಲಿದ್ದಾರೆ.

ಸಂಶೋಧಕ ಡಾ. ಎಚ್.ಆರ್. ಸ್ವಾಮಿ ಅವರ ಸಾಧನೆ:

ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಕೊರಚರಹಟ್ಟಿಯವರಾದ ಡಾ.ಎಚ್.ಆರ್.ಸ್ವಾಮಿ ಅವರು ಬಾಲ್ಯದಿಂದಲೂ ಬಂಡಾಯ, ದಲಿತ, ರೈತ ಹಾಗೂ ಪ್ರಗತಿಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು. ಅರಸೀಕೆರೆಯ ಬಾಳೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿರುವ ಇವರು, ‘ಕನಕ ಶ್ರೀ ಸಸ್ಯವನ’ ಹಾಗೂ ‘ಡಾ. ಶಿವಕುಮಾರ ಸ್ವಾಮೀಜಿ ಸಸ್ಯವನ’ಗಳ ನಿರ್ಮಾಣದ ಮೂಲಕ ಪರಿಸರ ಕಾಳಜಿಯನ್ನೂ ಮೆರೆದಿದ್ದಾರೆ. ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಇವರ ಸೇವೆ ಅನನ್ಯ. ಇವರ ಸಾಹಿತ್ಯಿಕ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ‘ರಾಜ್ಯೋತ್ಸವ ಪ್ರಶಸ್ತಿ’, ‘ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ’ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದುಬಂದಿವೆ.

ಅಳಿವಿನಂಚಿನಲ್ಲಿರುವ ಕೊರಚ ಭಾಷೆಯನ್ನು ಉಳಿಸಿ, ಜನಾಂಗಕ್ಕೆ ಹೊಸ ಅಸ್ಮಿತೆ ತಂದುಕೊಡುತ್ತಿರುವ ಈ ಮಹತ್ವದ ಸಮಾರಂಭಕ್ಕೆ ನಾಡಿನ ಸಮಸ್ತ ಸಾಹಿತ್ಯಾಸಕ್ತರು, ಚಿಂತಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನೇಗಿಲ ಯೋಗಿ ಟ್ರಸ್ಟ್‌ನ ಪದಾಧಿಕಾರಿಗಳು ಅಕ್ಕರೆಯಿಂದ ಸ್ವಾಗತಿಸಿದ್ದಾರೆ.

Leave a Reply