ನೆನಪು ಸುಳ್ಳಲ್ಲ

2 years ago

ನೆನಪು ಸುಳ್ಳಲ್ಲ

ಚಲಿಸುವ ರೈಲಿನಲ್ಲಿ ನಿದ್ದೆ ಬಾರದ ಇರುಳು
ಮರುಕಳಿಸುವ ನೆನಪುಗಳು ಒಂದಲ್ಲ ಎರಡಲ್ಲ
ಪ್ಯಾಲೆಸ್ಟೈನ್ ಗಾಜಾಪಟ್ಟಿ ಇಸ್ರೇಲ್ ಉಕ್ರೇನ್
ಯಾರತಪ್ಪಿಗೆ ಯಾರು ಹೊಣೆ ಇನ್ನಾರು ಬಲಿ

ದೀಪದ ಬುಡದಲ್ಲಿ ಕತ್ತಲು  ಮಣಿಪುರ
ಮೈತೇಯಿ ಕುಕಿಗಳ ಯಾದವೀ ಕಲಹಕ್ಕೆ
ಬೆಂಕಿ ಹಚ್ಚಿದ  ದುರುಳ ಧೂರ್ತರು
ಮೈ ಕಾಯಿಸಿಕೊಳ್ಳುವ ವಣಿಕರು

ಯಾರ ಮನೆ ಹಾಳಾದರೇನು ಅಲ್ಲೊಂದು
ಕರುವ ಕಟ್ಟುವ ಇರಾದೆಯ ಗೋದ್ರಾ ಬಲಿಗರು
ಕತ್ತಲು ಸೀಳಿ ಮುನ್ನುಗ್ಗುತ್ತಿದೆ ರೈಲು
ಬಾರದ ನಿದ್ರೆಗೆ ಉರಿಯುವ ಬೆಂಕಿ ನೆನಪು

ಭೂಖಂಡದಲಿ ಉಂಡವರ ಹುಳಿದೇಗು
ಅಬ್ಬರಿಸಿ ಬಾಂಬುಗಳ ಸಿಡಿತ ಮಾತೆ ಮಕ್ಕಳ
ನೆತ್ತರಲ್ಲಿ ನೆಂದ ನೆಲದ ತುಂಬಾ ಬಿಕ್ಕಳಿಸಿ ಬುದ್ಧ
ಗಾಂಧಿ ಕೋಲನು ಹಿಡಿದು ನಡೆದು ಬಂದ.

ನಿಂತ ನಿಲ್ದಾಣದಲಿ ಹೆಜ್ಜೆ ಸಾಗಿದ ಗತಿಗೆ
ಕೋಲು ಸಪ್ಪಳ ಜೊತೆಗೆ ಕರುಣೆ ಪ್ರೀತಿ
ಸಾವಿರದ ಸಂಖ್ಯೆಯಲಿ ಮೌನಿ ಭಿಕ್ಕುಗಳು
ಮೂಡಣದ ಮುಗಿಲಲ್ಲಿ ಮಬ್ಬುಹರಿದಾ ಬೆಳಗು.

– ಎಸ್ ಜಿ ಸಿದ್ಧರಾಮಯ್ಯ

Leave a Reply