ಮಹಿಳಾ ಮೀಸಲು ವಿಧೇಯಕ ಸಂಸತ್ತಿನ ಚಳಿಗಾಲದ ಅಧಿವೇಶನ ಅಂಗೀಕಾರ ನಿರೀಕ್ಷೆ: ಡಿ.ಕೆ.ಶಿವಕುಮಾರ್

7 hours ago

ಬೆಂಗಳೂರು: ಐತಿಹಾಸಿಕ ಮಹಿಳಾ ಮೀಸಲು ವಿಧೇಯಕ ಸಂಸತ್ತಿನ ಚಳಿಗಾಲದ ಅಧಿವೇಶನ ಅಂಗೀಕಾರವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕಾಮನ್ ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತೀಯ ಪ್ರಾದೇಶಿಕ ವಿಭಾಗದ ಮೊದಲ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಡಿಸೆಂಬರ್ ನ ಅಧಿವೇಶನ ಇತಿಹಾಸ ನಿರ್ಮಿಸಲಿದೆ. ಈ ಮೀಸಲಾತಿಯಿಂದಾಗಿ ನಾವು ಎಷ್ಟು ಜನರು ಸಂಸತ್ ಹಾಗೂ ವಿಧಾನಸೌಧದಿಂದ ಹೊರಬರಬೇಕಾಗುವುದೋ, ತಿಳಿಯದು. ಆದರೆ ಶೇ. 50ರಷ್ಟು ಹೆಚ್ಚುವರಿ ಕ್ಷೇತ್ರಗಳಿವೆ ಎಂದು ಹೇಳಲಾಗುತ್ತಿದೆ. ಯಾವ ಕ್ಷೇತ್ರಗಳಲ್ಲಿ ಮೀಸಲಾತಿ ಬರುವುದು ಎಂದು ತಿಳಿದಿಲ್ಲ ಎಂದರು.

ಮಹಿಳಾ ಮೀಸಲಾತಿಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಮಹಿಳೆಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಮಹಿಳೆಯರ ಬೆಂಬಲವಿಲ್ಲದೆ ಪುರುಷರು ಯಶಸ್ವಿಯಾಗಲು ಸಾಧ್ಯವಿಲ್ಲ. ಇದು ನಮ್ಮ ಪ್ರಗತಿ ಪರ ಸಮಾಜದ ತಳಪಾಯವೂ ಹೌದು ಎಂದರು.

ಅನುಭವ ಮಂಟಪ ಸಂಸದೀಯ ವ್ಯವಸ್ಥೆಯನ್ನು 12 ನೇ ಶತಮಾನದಲ್ಲಿಯೇ ಪರಿಚಯಿಸಿದೆ. ವಿಧಾನಸೌಧದ ಪ್ರವೇಶದ್ವಾರದಲ್ಲಿ ಮಹಿಳೆಯರಿಗೆ ನಮ್ಮ ರಾಜ್ಯ ನೀಡಿರುವ ಪ್ರಾಮುಖ್ಯತೆಯನ್ನು ತೋರಿಸುವ ಚಿತ್ರವಿದೆ. ಇದನ್ನು ನೀವು ತಪ್ಪದೇ ವೀಕ್ಷಿಸಿ ಎಂದರು.

ನಮ್ಮಲ್ಲಿ ಶೇ. 42ರಷ್ಟು ವೈದ್ಯರು ಮಹಿಳೆಯರು, ಶೇ. 80ರಷ್ಟು ಅರೆ ವೈದ್ಯಕೀಯ ಸಿಬ್ಬಂದಿ ಮಹಿಳೆಯರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಶೇ.40ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದೆವು. ಐದರಲ್ಲಿ ನಾಲ್ಕು ಗ್ಯಾರಂಟಿಗಳು ಮಹಿಳೆಯರನ್ನು ಸಶಕ್ತಗೊಳಿಸುವ ಯೋಜನೆಗಳಾಗಿವೆ ಎಂದರು.

ಮಹಿಳೆಯರ ಸಾಮಾಜಿಕ ಅರ್ಥಿಕ ಪರಿಸ್ಥಿತಿ ಜೊತೆಗೆ ರಾಜಕೀಯ ಸಬಲೀಕರಣವೂ ಆಗಬೇಕಿದೆ ಎಂಬುದು ನಮ್ಮ ನಂಬಿಕೆ. ಮಹಿಳೆಯರಿಲ್ಲದ ಪ್ರಜಾಪ್ರಭುತ್ವ ರೆಕ್ಕೆಯಿಲ್ಲದ ಹಕ್ಕಿಯಂತೆ. ಎತ್ತರಕ್ಕೇರಲು ಸಾಧ್ಯವಿಲ್ಲ. ನೀವೆಲ್ಲರೂ ಒಂದಾಗಿ ಈ ಸಮ್ಮೇಳನದಲ್ಲಿ ನಡೆಸುವ ಚರ್ಚೆ ಹೊಸ ಬೆಳಕನ್ನು ಮೂಡಿಸಬೇಕು. ದೇಶದಲ್ಲಿ ಹಲವಾರು ನಾಯಕಿಯರನ್ನು ನಾವು ಕಾಣಬಹುದು. ಸಂಸತ್ತು, ಶಾಸನ ಸಭೆಗಳಲ್ಲಿ ಭವಿಷ್ಯಕ್ಕಾಗಿ ನೀವು ಇನ್ನಷ್ಟು ಸದೃಢರಾಗಬೇಕು ಎಂದರು.

ಮಹಿಳೆಯರು ಕೇವಲ ಹುದ್ದೆಗಳನ್ನು ಅಲಂಕರಿಸುವುದಷ್ಟೇ ಅಲ್ಲ, ತೀರ್ಮಾನಗಳಲ್ಲಿ ತಮ್ಮ ಅಭಿಪ್ರಾಯ ಮಂಡಿಸಬೇಕು. ಶಾಸನ ರೂಪಿಸುವಲ್ಲಿ ಕೊಡುಗೆ ನೀಡಬೇಕು. ಆಡಳಿತಕ್ಕೆ ಹೊಸ ದಿಶೆಯನ್ನು ನೀಡಬೇಕು. ರಾಜೀವ್ ಗಾಂಧಿಯವರು 1988-89 ರ ಅವಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ರ ಮೀಸಲಾತಿ ಜಾರಿಗೆ ತಂದರು. ನಂತರ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿಯೂ ಮೀಸಲಾತಿ ಜಾರಿಯಾಯಿತು. ಈ ಅವಕಾಶವನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು. ಮಹಿಳೆಯರು ಆಯ್ಕೆಯಾದ ನಂತರ ಅವರ ಪತಿ ಅಥವಾ ಪುತ್ರ ಅಧಿಕಾರ ಚಲಾಯಿಸಬಾರದು ಎಂದರು.

Leave a Reply