ಬೆಂಗಳೂರು: ಕಾಲಿನ್ಸ್ ಏರೋಸ್ಪೇಸ್ ಕಂಪನಿ ದೇಶದ ಮೊದಲ ವಿಮಾನ ನಿರ್ವಹಣೆ ಮತ್ತು ದುರಸ್ತಿ (ಎಂ.ಆರ್.ಒ) ಘಟಕ ನಿರ್ಮಾಣ ಮಾಡುತ್ತಿದೆ. ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಈ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಎಂ ಬಿ ಪಾಟೀಲ್ ಭೂಮಿಪೂಜೆ ನೆರವೇರಿಸಿದರು.
- ನಕಲಿ ದಾಖಲೆ ಸೃಷ್ಟಿಸಿ 110 ಕೋಟಿ ರೂ. ತೆರಿಗೆ ಮರುಪಾವತಿಗೆ ಬೇಡಿಕೆ
- 60 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಿ, 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ: ಎಂ.ಬಿ.ಪಾಟೀಲ್
- ಬಾಕಿ ವೇತನ ಪಾವತಿ , ಕನಿಷ್ಠ ಕೂಲಿ ಜಾರಿ, ಪಿಎಫ್ ಇಎಸ್ಐ ಸೌಲಭ್ಯಕ್ಕಾಗಿ ಹೋರಾಟ
- ಸೋನಿಯಾ ಗಾಂಧಿಯವರ ಬಗ್ಗೆ ಮಾತ್ರ ವಿಕೃತ ಭಾವದ ಟೀಕೆ ಏಕೆ?
- ಏಷ್ಯಾದ ಅತಿದೊಡ್ಡ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ
ಈ ವೇಳೆ ಮಾತನಾಡಿದ ಅವರು, ಈ ಘಟಕ ನಿರ್ಮಾಣಕ್ಕೆ ಸರಕಾರ 26 ಎಕರೆ ಜಾಗ ನೀಡಿದ್ದು, ಇಲ್ಲಿ 2,100 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇಲ್ಲಿ ಬರುವ ಎಂ.ಆರ್.ಒ. ಘಟಕದ ಮೂಲಕ ಕಾಲಿನ್ಸ್ ಏರೋಸ್ಪೇಸ್ ಕಂಪನಿ ಏಷ್ಯಾ-ಪೆಸಿಫಿಕ್ ಪ್ರದೇಶದ ವಿಶಾಲ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತು ಮೂಡಿಸಲಿದೆ ಎಂದರು.
ದೇಶದ ಏರೋಸ್ಪೇಸ್ ವಲಯದಲ್ಲಿ ಶೇಕಡ 65ರಷ್ಟು ಪಾಲು ಹೊಂದಿರುವ ಕರ್ನಾಟಕ ಇಲ್ಲಿಂದ ರಫ್ತು ವಹಿವಾಟನ್ನೂ ನಡೆಸಲಿದೆ. ಕಂಪನಿ ಭಾರತದಲ್ಲಿ ಕಳೆದ 5 ವರ್ಷಗಳಲ್ಲಿ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಹೋದ ವರ್ಷದ ನವೆಂಬರಿನಲ್ಲಿ ದೇವನಹಳ್ಳಿಯಲ್ಲೇ ಕಂಪನಿಯ ತಯಾರಿಕಾ ಘಟಕವನ್ನು ಉದ್ಘಾಟಿಸಲಾಗಿದೆ ಎಂದರು.
ಇದನ್ನೆಲ್ಲ ಪರಿಗಣಿಸಿಯೇ ರಾಜ್ಯ ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಜಾರಿಗೆ ತಂದಿದೆ. 2031ರೊಳಗೆ ಈ ವಲಯಕ್ಕೆ 60 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಿ, 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಸರಕಾರದ್ದಾಗಿದೆ. ಇದಕ್ಕಾಗಿ 7 ಮುಖ್ಯ ವಿಭಾಗಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಎಂ.ಆರ್.ಒ.ಗಳ ಅಭಿವೃದ್ಧಿ ಕೂಡ ಒಂದಾಗಿದೆ. ವಿಮಾನಗಳ ತಯಾರಿಕೆ ಬೇಕಾಗುವ ಸಮಗ್ರ ಕಾರ್ಯಪರಿಸರ ಸೃಷ್ಟಿ, ರಕ್ಷಣಾ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜನ ನೀಡುವುದೂ ಇದರಲ್ಲಿ ಸೇರಿವೆ ಎಂದರು.
ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಒ ಘಟಕವು ಜಾಗತಿಕ ಮಟ್ಟದ ಒಇಎಂ (ಒರಿಜಿನಲ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್) ಕಂಪನಿಯೊಂದು ಭಾರತದಲ್ಲಿ ಸ್ಥಾಪಿಸುತ್ತಿರುವ ಇಂತಹ ಪ್ರಪ್ರಥಮ ಘಟಕವಾಗಿದೆ. ಇದು ಎಟಿಆರ್ 42 ಮತ್ತು ಎಟಿಆರ್ 72 ಮಾದರಿಯ ವಿಮಾನಗಳಲ್ಲಿರುವ 568ಎಫ್ ಸ್ತರದ ಪ್ರೊಪೆಲ್ಲರ್ ಗಳಿಗೆ ಹಾಗೂ ಸೇನೆಯಲ್ಲಿ ಬಳಸುವ ಸಿ295 ವಿಮಾನಗಳಿಗೆ ಬೇಕಿರುವ ಸೇವೆಗಳನ್ನು ಒದಗಿಸಲಿದೆ. ಇದರಿಂದ ಬೆಂಗಳೂರು ನಗರವು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ವಿಮಾನ ಸೇವೆಗಳ ಹಬ್ ಆಗಿ ಬೆಳೆಯಲಿದೆ ಎಂದಿದ್ದಾರೆ.
ಇದರಿಂದ ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ಸಹಾಯವಾಗಲಿದೆ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಮುಂಬರುವ ಏಪ್ರಿಲ್ ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮುನ್ನವೇ ಜಾಗತಿಕ ಮಟ್ಟದ ಒಇಎಂ ಕಂಪನಿಗಳು, ಟೈಯರ್-1 ಸ್ಥಾನಮಾನ ಹೊಂದಿರುವ ಕಂಪನಿಗಳು ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಒಟ್ಟುಗೂಡಿಸಿ ಸಮಾವೇಶ ನಡೆಸಲಾಗುವುದು ಎಂದು ಪಾಟೀಲ ನುಡಿದಿದ್ದಾರೆ.
ದೇಶದಲ್ಲಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಜಾಲವು ವ್ಯಾಪಕ ಸ್ವರೂಪದಲ್ಲಿ ವೃದ್ಧಿಸುತ್ತಿದೆ. ರಕ್ಷಣಾ ಇಲಾಖೆಯಲ್ಲೂ ವೈಮಾನಿಕ ಸೇವೆ, ನಿರ್ವಹಣೆ, ದುರಸ್ತಿಗಳ ಅಗತ್ಯ ಹೆಚ್ಚುತ್ತಿದೆ. ಹೀಗಾಗಿ ಎಂ.ಆರ್.ಒ ಘಟಕಗಳಿಗೆ ತುಂಬಾ ಬೇಡಿಕೆ ಇದೆ. ವೈಮಾಂತರಿಕ್ಷ ವಲಯದಲ್ಲಿ ಸ್ವಾವಲಂಬನೆ ಸಾಧಿಸಿ, ಆರ್ಥಿಕ ಬೆಳವಣಿಗೆ ಹೊಂದಲು ಸ್ಥಳೀಯವಾಗಿಯೇ ಎಂ.ಆರ್.ಒ ಘಟಕಗಳನ್ನು ಅಭಿವೃದ್ಧಿ ಪಡಿಸುವುದು ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯ ಪ್ರತ್ಯೇಕ ನಾಗರಿಕ ವಿಮಾನಯಾನ ನೀತಿಯನ್ನು ರೂಪಿಸಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ಸಿಗಲಿದೆ. ಈ ನೀತಿಯಿಂದ ಉಡಾನ್ ಯೋಜನೆಗೂ ನೆರವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್, ಕಾಲಿನ್ಸ್ ಏರೋಸ್ಪೇಸ್ ಮುಖ್ಯಸ್ಥ ಅಜಯ್ ಮಹಾಜನ್, ಕಾಲಿನ್ಸ್ ಏರೋಸ್ಪೇಸ್ ನ ಪ್ರೊಪೆಲ್ಲರ್ ಸಿಸ್ಟಮ್ ಪ್ರಧಾನ ವ್ಯವಸ್ಥಾಪಕ ಜಾನ್ ಫ್ರಾಂಕೋಯಿಸ್ ಚನುವಾತ್ ಮಾತನಾಡಿದರು.




