ಬೆಂಗಳೂರು: ಯಾವುದೇ ಪರಿಸ್ಥಿತಿಯಲ್ಲಾದರೂ ಸರಿ ಮಹಿಳಾ ನೌಕರರು ಜಾತಿ ಸಂಘಗಳ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಾರದ ಮೇಲೆ ಸಂಘಟನೆ ಮಾಡಿ. ನಿಮ್ಮದು ಕೇವಲ ಒಂದೇ ಒಂದು ಸಂಘ ಇರಬೇಕು. ಅದು ಮಹಿಳಾ ಸಂಘವಾಗಿರಬೇಕು. ಇದು ನಾನು ನಿಮಗೆ ನೀಡುತ್ತಿರುವ ಸಲಹೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಸರ್ಕಾರಿ ಮಹಿಳಾ ನೌಕರರ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಬಂಗಾರಪ್ಪನವರ ಸರ್ಕಾರದಲ್ಲಿ ಸಚಿವನಾಗಿದ್ದಾಗಿನಿಂದ ಅಂದರೆ 40 ವರ್ಷಗಳಿಂದ ಈ ಸಂಘವನ್ನು ಗಮನಿಸಿಕೊಂಡು ಬಂದಿದ್ದೇನೆ. ನಿಮ್ಮ ಒಗ್ಗಟ್ಟು ಬಿಡಬೇಡಿ ಎಂದರು.
ಲಿಂಗಾಯತರ, ಹಿಂದುಳಿದ ವರ್ಗಗಳ, ಒಕ್ಕಲಿಗರ, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಸಂಘ ಎಂದು ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ. ಈ ಆಲೋಚನೆಯನ್ನು ನಿಮ್ಮ ತಲೆಯಿಂದ ತೆಗೆದುಹಾಕಿ ಎಂದು ಕಿವಿಮಾತು ಹೇಳಿದರು.
ಸಂಘಟನೆ ಬಹಳ ಮುಖ್ಯ. ಶಿಕ್ಷಣ ಇಲಾಖೆಯಲ್ಲಿ 50%ಗೂ ಹೆಚ್ಚು ಜನ ಇದ್ದೀರಿ. ಮಹಿಳೆಯರು ಕರುಣೆಯ ಕಡಲು, ಮಮತೆಯ ಮುಗಿಲು. ನಾನಾಗಲಿ, ಸಿದ್ದರಾಮಯ್ಯ ಅವರಾಗಲಿ, ಯಾವುದೇ ವ್ಯಕ್ತಿಯಾಗಲಿ ಮಹಿಳೆಯರ ಕೊಡುಗೆ ಇಲ್ಲದೆ ಯಾವುದೇ ಪುರುಷ ಯಶಸ್ವಿಯಾಗಲಾರ ಎಂದರು.
ನಾವೆಲ್ಲರೂ ರಾಜಕಾರಣ ಮಾಡಿಕೊಂಡು ಮನೆಗೆ ಸಮಯ ನೀಡುವುದಿಲ್ಲ. ನಮ್ಮ ಮನೆ ನಡೆಸಿ ನಿಭಾಯಿಸುತ್ತಿರುವವರು ಮಹಿಳೆಯರು. ನನಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನನಗಿಂತ ಹೆಚ್ಚು ದಕ್ಷತೆಯಿಂದ ಕೆಲಸ ಮಾಡುತ್ತಾರೆ. ಅವರು ಈಗ ಮಾಡಿರುವ ಸಾಧನೆ ನಾನು ಆ ವಯಸ್ಸಿನಲ್ಲಿ ಮಾಡಿರಲಿಲ್ಲ ಎಂದರು.
ಮಹಿಳೆಯರು ಪುರುಷರಿಗಿಂತ ಹೆಚ್ಚು ಸಮರ್ಥರಿದ್ದೀರಿ. ಡಿಜಿಯಾಗಿ, ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಿ ಆಡಳಿತದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ನೀವು ಯಾರಿಗೂ ಕಮ್ಮಿ ಇಲ್ಲ ಎಂದು ಸಾಬೀತುಪಡಿಸಿದ್ದೀರಿ. ನೀವುಗಳು ದೂರಿನ ಪೆಟ್ಟಿಗೆಯಂತೆ ಆಗಬಾರದು. ನಿಮ್ಮ ಹಕ್ಕನ್ನು ಚಲಾಯಿಸಬೇಕು. ಹೆಣ್ಣು ಕುಟುಂಬದ ಕಣ್ಣು ಎಂದು ನಾವು ನಂಬಿದ್ದೇವೆ ಎಂದರು.
ನಾವು ಎಲ್ಲೇ ಹೋದರು, ಗ್ರಾಮ ದೇವತೆ ಯಾವುದು ಎಂದು ಕೇಳುತ್ತೇವೆ. ಬೆಂಗಳೂರಿನ ಗ್ರಾಮ ದೇವತೆ ಅಣ್ಣಮ್ಮ. ಭೂಮಿಯನ್ನು ಭೂತಾಯಿ ಎಂದು ಕರೆಯುತ್ತೇವೆ. ನಾಡ ದೇವತೆ ಚಾಮುಂಡೇಶ್ವರಿ ಎಂದು ಪರಿಗಣಿಸಿದ್ದೇವೆ. ಹೀಗೆ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ ಎಂದರು.
ಮುಂದಿನ ಒಂದು ವರ್ಷದಲ್ಲಿ ಅರಮನೆ ಮೈದಾನದಲ್ಲಿ ದೊಡ್ಡ ಮಟ್ಟದ ಮಹಿಳಾ ಸಮಾವೇಶವನ್ನು ಮಾಡಲು ನೀವು ರೂಪುರೇಷೆ ಸಿದ್ಧಮಾಡಿಕೊಳ್ಳಿ. ಅದಕ್ಕೆ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುವುದು. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲೇ ಕಾನೂನು ತಿದ್ದುಪಡಿ ತಂದು ಮಹಿಳೆಯರಿಗೆ ಶಕ್ತಿ ತುಂಬಬೇಕು ಎಂದು ಹೆಚ್.ಕೆ ಪಾಟೀಲ್ ಅವರು ನನ್ನ ಬಳಿ ಹೇಳಿದ್ದಾರೆ ಎಂದರು.




