ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಾಳೆಯಿಂದ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ವಿಧಾನಸಭೆ ಚುನಾವಣೆ ಬೆನ್ನಲ್ಲೇ ನಡೆಯುತ್ತಿರುವ ಅಧಿವೇಶನ ಕದನ ಕೌತುಕ ಮೂಡಿಸಿದೆ.
ಕಬ್ಬು ಬೆಳೆಗಾರರ ಬೇಡಿಕೆ, ಗಡಿ ಸಂಘರ್ಷ, ಸರ್ಕಾರದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪ, ಮತದಾರರ ಪಟ್ಟಿಯಲ್ಲಿ ಗೋಲ್ ಮಾಲ್ ಆರೋಪದ ಜೊತೆಗೆ ಮೀಸಲಾತಿ ಹೆಚ್ಚಳದ ಬೇಡಿಕೆ, ಮಳೆ ಹಾನಿ, ಅತಿವೃಷ್ಟಿ ಪರಿಹಾರ ನೀಡಿಕೆ ವಿಳಂಬ, ಮಾನವ-ಕಾಡು ಪ್ರಾಣಿಗಳ ನಡುವಿನ ಸಂಘರ್ಷ, ರಸ್ತೆಗಳ ದುಃಸ್ಥಿತಿ, ಗಡಿ ವಿವಾದ ಮೊದಲಾದ ಜ್ವಲಂತ ಸಮಸ್ಯೆಗಳು ಪ್ರತಿಧ್ವನಿಸಲಿವೆ.
ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ. ಆದರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪಕ್ಷ ಸಂಘಟನೆ ಹಿನ್ನೆಲಯಲ್ಲಿ ಅಧಿವೇಶನಕ್ಕೆ ಗೈರಾಗುವುದಾಗಿ ಘೋಷಿಸಿದ್ದಾರೆ. ಅದೇ ರೀತಿ ಆಡಳಿತ ಪಕ್ಷವು ಪ್ರತಿ ಪಕ್ಷಗಳ ಆಸಗಳಿಗೆ ಪ್ರತ್ಯಸ ಪ್ರಯೋಗಿಸಲು ತಯಾರಿ ಮಾಡಿಕೊಂಡಿದೆ. ಹತ್ತು ದಿನಗಳ ಕಾಲ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಚುನಾವಣಾ ವರ್ಷವಾಗಿರುವುದರಿಂದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಿಗಿಂತ ಹೆಚ್ಚಾಗಿ ಸಂದರ್ಭಯೋಚಿತವಾಗಿ ರಾಜಕೀಯ ವಿಚಾರಗಳು ಪ್ರಸ್ತಾಪವಾಗುವ ಸಂಭವವೇ ಅಧಿಕ. ಈಗಾಗಲೇ ಚುನಾವಣಾ ತಯಾರಿ ಹಾಗೂ ಪ್ರಚಾರವನ್ನು ರಾಜಕೀಯ ಪಕ್ಷಗಳು ಆರಂಭಿಸಿವೆ. ಕೆಲವರಿಗಂತೂ ಸದನಕ್ಕಿಂತ ಕ್ಷೇತ್ರದಲ್ಲಿ ಕಾರ್ಯಕ್ರಮಗಳೇ ಮುಖ್ಯವಾಗಿವೆ.
ಮಹಾರಾಷ್ಟ್ರ ಮತ್ತೆ ಗಡಿ ವಿವಾದವನ್ನು ಮುನ್ನೆಲೆಗೆ ತಂದಿರುವ ವಿಚಾರ ಉಭಯ ಸದನಗಳಲ್ಲಿ ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಡಲಿದೆ. ಕಳೆದ ಬಾರಿಯೂ ಈ ವಿಚಾರ ಪ್ರಸ್ತಾಪವಾಗಿ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಪದೇ ಪದೇ ಗಡಿ ಭಾಗದಲ್ಲಿ ಕನ್ನಡಿಗರ ಸಹನೆ ಕೆಣಕುತ್ತಿರುವ ವಿಚಾರಕ್ಕೆ ಅಂತ್ಯವಾಡಲು ಸರ್ಕಾರವನ್ನು ಆಗ್ರಹಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಮತದಾರರ ಪಟ್ಟಿಯಲ್ಲಿ ಹಲವರ ಹೆಸರು ಕೈಬಿಟ್ಟಿರುವ ವಿಚಾರವೂ ಸದನಲ್ಲಿ ಪ್ರಸ್ತಾಪವಾಗಿ ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ವಾಕ್‍ಸಮರಕ್ಕೆ ವೇದಿಕೆಯಾಗವ ಸಂಭವವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ ಹೆಚ್ಚಳ ನಂತರ ಒಕ್ಕಲಿಗ ಹಾಗೂ ಪಂಚಮಸಾಲಿ ಸಮುದಾಯಗಳು ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ತರುತ್ತಿವೆ. ಜತೆಗೆ ಒಳ ಮೀಸಲಾತಿ ವಿಚಾರವೂ ಪ್ರಸ್ತಾಪವಾಗುತ್ತಿದೆ.
ಶಾಸಕಾಂಗ ಸಭೆ: ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸೋಮವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಜೆಡಿಎಸ್ ಸೋಮವಾರ ಕಲಾಪ ಆರಂಭಕ್ಕೆ ಮುನ್ನ ಶಾಸಕರ ಸಭೆ ನಡೆಸಲಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇನ್ನಷ್ಟೇ ನಿಗದಿಯಾಗಬೇಕಾಗಿದೆ.
ಸರ್ಕಾರ ಸಮರ್ಥ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ಡಿ. 19ರಿಂದ ಪ್ರಾರಂಭವಾಗುತ್ತಿದೆ. ಅಲ್ಲಿ ಪ್ರತಿಪಕ್ಷಗಳು ಮಾಡುವ ಎಲ್ಲಾ ಪ್ರಸ್ತಾಪಗಳಿಗೆ ಉತ್ತರ ನೀಡಲು ಸರ್ಕಾರ ಸಮರ್ಥವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಕರ್ನಾಟಕ ಪ್ರದೇಶ ವಿಶೇಷ ಹೂಡಿಕೆ ವಿಧೇಯಕ ಸೇರಿ ಆರು ಪ್ರಮುಖ ವಿಧೇಯಕಗಳು ಮಂಡನೆಯಾಗಲಿವೆ ಎಂದು ಹೇಳಿದರು.
ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಮಸೂದೆ ಸೇರಿದಂತೆ, ಇತರ ಇಲಾಖೆಗಳ ಹಲವು ಮಸೂದೆಗಳನ್ನು ಮಂಡಿಸಲಾಗುವುದು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿಸಿದರು.




