ಬೆಂಗಳೂರು: ಕಾಲಿನ್ಸ್ ಏರೋಸ್ಪೇಸ್ನ ನೂತನ ಎಂಆರ್ಒ ಘಟಕದಿಂದಾಗಿ ಭಾರತದ ವೈಮಾನಿಕ ಕ್ಷೇತ್ರ ಇನ್ನಷ್ಟು ಬಲವಾಗಲಿದ್ದು, ದೇಶ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಬೆಳೆಯುವ ಮಹತ್ವಕಾಂಕ್ಷೆಗೆ ಮತ್ತೊಂದು ಮಹತ್ವದ ಮೈಲುಗಲ್ಲಾಗಲಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಬಣ್ಣಿಸಿದ್ದಾರೆ.
- ಭಾರತ ಕೇವಲ ವೈಮಾನಿಕ ಮಾರುಕಟ್ಟೆಯಾಗದೆ, ಜಾಗತಿಕ ಆವಿಷ್ಕಾರದ ಕೇಂದ್ರವಾಗಿ ಬೆಳೆಯಬೇಕು: ಡಾ.ಕೆ.ಸುಧಾಕರ್
- ಮಹಿಳಾ ಮೀಸಲು ವಿಧೇಯಕ ಸಂಸತ್ತಿನ ಚಳಿಗಾಲದ ಅಧಿವೇಶನ ಅಂಗೀಕಾರ ನಿರೀಕ್ಷೆ: ಡಿ.ಕೆ.ಶಿವಕುಮಾರ್
- ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಎಸ್.ಎಲ್.ಪಿ.: ಈಶ್ವರ್ ಖಂಡ್ರೆ ಸೂಚನೆ
- ನಕಲಿ ದಾಖಲೆ ಸೃಷ್ಟಿಸಿ 110 ಕೋಟಿ ರೂ. ತೆರಿಗೆ ಮರುಪಾವತಿಗೆ ಬೇಡಿಕೆ
- 60 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಿ, 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ: ಎಂ.ಬಿ.ಪಾಟೀಲ್
ದೇವನಹಳ್ಳಿಯ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್ನಲ್ಲಿ ಕಾಲಿನ್ಸ್ ಏರೋಸ್ಪೇಸ್ ಸಂಸ್ಥೆಯ ನೂತನ ಪ್ರೊಪೆಲ್ಲರ್ ನಿರ್ವಹಣೆ, ದುರಸ್ತಿ ಮತ್ತು ಪರಿಶೀಲನಾ (MRO) ಘಟಕದ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ವೈಮಾನಿಕ ಕೈಗಾರಿಕಾ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆಗಳಾಗುತ್ತಿವೆ. ಜಾಗತಿಕ ಕಂಪನಿಗಳು ಭಾರತವನ್ನು ಕೇವಲ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಮಾರುಕಟ್ಟೆಯಾಗಿ ನೋಡದೆ, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಹೂಡಿಕೆಯ ಕೇಂದ್ರವಾಗಿ ಪರಿಗಣಿಸುತ್ತಿವೆ ಎಂದರು.
ಪ್ರಧಾನಿ ಮೋದಿಯವರು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಕರೆ ನೀಡಿದಾಗ ಅದು ಕೇವಲ ಘೋಷಣೆಯಾಗಿರಲಿಲ್ಲ. ಅದು ಭಾರತದ ಕೈಗಾರಿಕಾ ಮಹತ್ವಾಕಾಂಕ್ಷೆಯ ಘೋಷಣೆಯಾಗಿತ್ತು. ಅದೇ ರೀತಿ ಆತ್ಮನಿರ್ಭರ ಭಾರತ ಎಂದರೆ ಬೇರೆ ದೇಶಗಳಿಂದ ಪ್ರತ್ಯೇಕವಾಗಿ ಉಳಿಯುವುದು ಎಂದರ್ಥವಲ್ಲ. ಬದಲಾಗಿ ಭಾರತವನ್ನು ಸಮರ್ಥ, ಆತ್ಮವಿಶ್ವಾಸದ ಮತ್ತು ಸ್ಪರ್ಧಾತ್ಮಕ ದೇಶವಾಗಿ ಬೆಳೆಸುವ ಉದ್ದೇಶವನ್ನು ಅದು ಹೊಂದಿತ್ತು. ಇಡೀ ಜಗತ್ತು ನಮ್ಮ ಪಾಲುದಾರಿಕೆಯನ್ನು ಬಯಸಬೇಕು ಎಂಬ ಗುರಿಯನ್ನು ಅದು ಹೊಂದಿತ್ತು ಎಂದರು.
ಕರ್ನಾಟಕದಲ್ಲಿ ಕಾಲಿನ್ಸ್ ಏರೋಸ್ಪೇಸ್ ಸಂಸ್ಥೆ ತನ್ನ ಹೂಡಿಕೆ ಮಾಡುತ್ತಿರುವುದನ್ನು ಶ್ಲಾಘಿಸಿದ ಅವರು, ಇದು ದೇಶದ ಕೈಗಾರಿಕಾ ಕ್ಷೇತ್ರದ ಮೇಲೆ ಜಾಗತಿಕ ಕಂಪನಿಗಳಿಗಿರುವ ವಿಶ್ವಾಸ ಮತ್ತು ದೇಶದ ಬೆಳವಣಿಗೆಯ ಸಾಮರ್ಥ್ಯವನ್ನು ತೋರಿಸುತ್ತದೆ. ಒಬ್ಬ ವ್ಯಕ್ತಿ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಮೂಲಕ ಅನಾರೋಗ್ಯ ಬರುವುದನ್ನು ತಪ್ಪಿಸಬಹುದು. ಅದೇ ರೀತಿ ವಿಮಾನಗಳನ್ನು ಆಗಾಗ್ಗೆ ಪರೀಕ್ಷೆ ಮಾಡಿ ನಿರ್ವಹಣೆ ಮಾಡುವುದರಿಂದ ಜೀವಗಳನ್ನು ಉಳಿಸಬಹುದು. ವಿಮಾನವನ್ನು ಒಮ್ಮೆ ತಯಾರಿಸಬಹುದು, ಆದರೆ ಅದರ ಸುರಕ್ಷತೆಯ ಬಗ್ಗೆ ಪ್ರತಿದಿನವೂ ಗಮನ ಇರಿಸಬೇಕಾಗುತ್ತದೆ. ಹೀಗಾಗಿ ವಿಮಾನಯಾನ ವ್ಯವಸ್ಥೆಯಲ್ಲಿ ಎಂಆರ್ಒ ಸೇವೆಗಳು ಅತ್ಯಂತ ಅಗತ್ಯ ಎಂದರು.
ಮೂರನೇ ಅತಿ ದೊಡ್ಡ ಮಾರುಕಟ್ಟೆ: ಭಾರತ ಈಗಾಗಲೇ ಜಗತ್ತಿನ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದೆ. ಆದರೆ ನಮ್ಮ ದೇಶದ ಕೇವಲ ವಿಮಾನಗಳು ಹಾರಾಡುವ ದೇಶವಾಗಿ ಮಾತ್ರ ಉಳಿಯಬಾರದು ಅದಕ್ಕಿಂತ ಮುಂದಕ್ಕೆ ಹೋಗಿ ಬೆಳೆಯಬೇಕು. ಇಡೀ ಜಗತ್ತಿಗೆ ಅಗತ್ಯವಿರುವ ವಿಮಾನಗಳನ್ನು ವಿನ್ಯಾಸಗೊಳಿಸುವ, ಉತ್ಪಾದಿಸುವ, ನಿರ್ವಹಿಸುವ ಮತ್ತು ಸೇವೆ ಒದಗಿಸುವ ದೇಶವಾಗಿ ಭಾರತ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ನೂತನ ಘಟಕ ಮಹತ್ವದ ಹೆಜ್ಜೆಯಾಗಿದೆ. ಇದು ನಮ್ಮ ದೇಶೀಯ ಏರೋಸ್ಪೇಸ್ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಪ್ರಾದೇಶಿಕ ಮತ್ತು ಸೇನಾ ವಿಮಾನಗಳ ನಿರ್ವಹಣೆಗೆ ನೆರವಾಗಲಿದೆ. ಜೊತೆಗೆ ಭಾರತೀಯ ವೃತ್ತಿಪರರಿಗೆ ಹೊಸ ಉದ್ಯೋಗಾವಕಾಶಗಳನ್ನು ನೀಡಲಿದೆ ಎಂದರು.
39,000 ಕೋಟಿ ರೂ. ರಫ್ತು: ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಪ್ರಗತಿ ಸಾಧಿಸಿದೆ. ರಕ್ಷಣಾ ವಲಯದಲ್ಲಿ ರಫ್ತು ಪ್ರಮಾಣ ವಾರ್ಷಿಕ ಸುಮಾರು 1,000 ಕೋಟಿ ರೂ.ನಿಂದ ವಾರ್ಷಿಕ 39,000 ಕೋಟಿ ರೂ.ಗೆ ಏರಿಕೆಯಾಗಿದೆ. ಹಾಗೆಯೇ ರಕ್ಷಣಾ ವಲಯದಲ್ಲಿ ಉತ್ಪಾದನೆ 2014 ರಲ್ಲಿ 46,000 ಕೋಟಿ ರೂ. ಮೊತ್ತದಷ್ಟಿದ್ದರೆ, 2025-26 ರ ವೇಳೆಗೆ 1.8 ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ. ಇವು ಕೇವಲ ಅಂಕಿಅಂಶಗಳಲ್ಲ. ಜಾಗತಿಕ ರಕ್ಷಣಾ ಮತ್ತು ವೈಮಾನಿಕ ಉತ್ಪಾದನಾ ಕ್ಷೇತ್ರದಲ್ಲಿ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮುವ ಭಾರತದ ಆತ್ಮವಿಶ್ವಾಸ, ತಾಂತ್ರಿಕ ಸಾಮರ್ಥ್ಯ ಮತ್ತು ದೃಢಸಂಕಲ್ಪವನ್ನು ಇದು ಬಿಂಬಿಸುತ್ತದೆ ಎಂದರು.
ರಾಜ್ಯದಲ್ಲಿ ಎಚ್ಎಎಲ್, ಇಸ್ರೋ ಮತ್ತು ಡಿಆರ್ಡಿಒ ಸಂಸ್ಥೆಗಳು ಹಾಗೂ ಬೆಂಗಳೂರಿನಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಎಂಜಿನಿಯರಿಂಗ್ ಮತ್ತು ಸಂಶೋಧನಾ ಸಂಸ್ಥೆಗಳು, ವೈಮಾನಿಕ ಕ್ಷೇತ್ರದಲ್ಲಿ ರಾಜ್ಯವನ್ನು ದೇಶದ ಪ್ರಮುಖ ಕೇಂದ್ರವನ್ನಾಗಿ ರೂಪಿಸಿವೆ. ಜಾಗತಿಕ ಏರೋಸ್ಪೇಸ್ ಶಕ್ತಿಯಾಗಿ ಬೆಳೆಯಬೇಕೆಂಬ ಗುರಿಯನ್ನು ಭಾರತ ಇಟ್ಟುಕೊಂಡರೆ, ಆ ಮಹತ್ವಕಾಂಕ್ಷೆಯನ್ನು ಈಡೇರಿಸುವಲ್ಲಿ ಬೆಂಗಳೂರು ಕೂಡ ಪಾತ್ರ ವಹಿಸಲಿದೆ ಎಂದರು.
ಉದ್ಯೋಗಾವಕಾಶ ಕಲ್ಪಿಸಿ: ಇದೇ ಸಂದರ್ಭದಲ್ಲಿ ಕಾಲಿನ್ಸ್ ಏರೋಸ್ಪೇಸ್ ಸಂಸ್ಥೆಯ ಆಡಳಿತ ಮಂಡಳಿಗೆ ವಿಶೇಷ ಮನವಿ ಮಾಡಿದ ಡಾ.ಕೆ.ಸುಧಾಕರ್, ಸ್ಥಳೀಯ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುವಂತೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡುವಂತೆ ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಜ್ಞಾನ ಇರುವ ಯುವಜನರಿದ್ದಾರೆ. ರೈತ ಕುಟುಂಬ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಂದ ಬಂದಿರುವ ಅನೇಕ ಪ್ರತಿಭಾವಂತ ಯುವಜನರಿಗೆ ಸಾಮರ್ಥ್ಯವಿದ್ದರೂ ಸೂಕ್ತ ಅವಕಾಶ ಮತ್ತು ಮಾರ್ಗದರ್ಶನದ ಕೊರತೆಯಿದೆ. ಅಂತಹವರಿಗೆ ನೆರವಾಗಬೇಕು ಎಂದರು.
ಕಾಲಿನ್ಸ್ ಏರೋಸ್ಪೇಸ್ ಸಂಸ್ಥೆಯು ಸ್ಥಳೀಯ ಎಂಜಿನಿಯರಿಂಗ್ ಕಾಲೇಜುಗಳು, ಐಐಟಿ, ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳೊಂದೊಗೆ ಒಪ್ಪಂಡ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. ಸುತ್ತಮುತ್ತಲಿನ ಜಿಲ್ಲೆಗಳ ಯುವ ಪ್ರತಿಭೆಗಳು ವೈಮಾನಿಕ ಕೈಗಾರಿಕಾ ಕ್ಷೇತ್ರದ ಭಾಗವಾಗಬೇಕು. ಇಲ್ಲಿನ ಯುವಜನರಿಗೆ ಅಸಾಧಾರಣ ಹಿನ್ನೆಲೆ ಅಥವಾ ಉತ್ತಮ ಸಂಪನ್ಮೂಲ ಇರುವುದಿಲ್ಲ. ಆದರೆ ಅವರಲ್ಲಿ ಅಸಾಧಾರಣ ಪ್ರತಿಭೆ ಮತ್ತು ಮಹತ್ವಕಾಂಕ್ಷೆಯಿದೆ. ಅಂತಹವರ ಕನಸುಗಳಿಗೆ ರೆಕ್ಕೆಯನ್ನು ನೀಡಿ ಎಂದರು.
ಕೈಗಾರಿಕಾ ಹೂಡಿಕೆಯ ಯಶಸ್ಸನ್ನು ಕೇವಲ ಎಷ್ಟು ಬಂಡವಾಳ ಹೂಡಿಕೆಯಾಗಿದೆ ಎಂಬುದರ ಆಧಾರದ ಮೇಲೆ ಅಳೆಯಬಾರದು. ಬದಲಾಗಿ ಅದು ಎಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, ಎಷ್ಟು ಜನರಿಗೆ ಕೌಶಲ್ಯ ತರಬೇತಿ ನೀಡಿದೆ ಮತ್ತು ಎಷ್ಟು ಜನರ ಬದುಕಿನಲ್ಲಿ ಬದಲಾವಣೆ ತಂದಿದೆ ಎಂಬುದರ ಆಧಾರದ ಮೇಲೆ ಅಳೆಯಬೇಕು ಎಂರು.
ಸಾಮೂಹಿಕ ಪ್ರಯತ್ನ ಬೇಕು: ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ- 2047 ರ ಕನಸಿನ ಕುರಿತು ಹೇಳಿದ ಅವರು, ಜಾಗತಿಕ ನಾಯಕತ್ವ ಸಾಧಿಸಲು ಭಾರತವು ಮೂರು ಪ್ರಮುಖ ಅಂಶಗಳ ಮೇಲೆ ಗಮನಹರಿಸಬೇಕು. ಉತ್ಪಾದನಾ ಕ್ಷೇತ್ರವನ್ನು ಬಲಪಡಿಸಲು ‘ಮೇಕ್ ಇನ್ ಇಂಡಿಯಾ’, ಯುವಜನರನ್ನು ಸಬಲೀಕರಣಗೊಳಿಸಲು ‘ಸ್ಕಿಲ್ ಇಂಡಿಯಾ’ ಮತ್ತು ಜಗತ್ತನ್ನು ಮುನ್ನಡೆಸಲು ‘ಇನ್ನೋವೇಟ್ ಇನ್ ಇಂಡಿಯಾ’ ಅಗತ್ಯವಿದೆ. ಭಾರತವು ಕೇವಲ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಭಾಗವಹಿಸುವ ರಾಷ್ಟ್ರವಾಗಿರಬಾರದು. 2047ರ ವೇಳೆಗೆ ಜಾಗತಿಕ ಆರ್ಥಿಕ ವ್ಯವಸ್ಥೆಯ ದಿಕ್ಕನ್ನೇ ನಿರ್ಧರಿಸುವ ರಾಷ್ಟ್ರವಾಗಬೇಕು. ಈ ಗುರಿ ಸಾಧಿಸಲು ಕೈಗಾರಿಕೆಗಳು, ಸರ್ಕಾರ, ಶಿಕ್ಷಣ ಸಂಸ್ಥೆಗಳು ಮತ್ತು ಯುವ ಪ್ರತಿಭೆಗಳ ಸಾಮೂಹಿಕ ಪ್ರಯತ್ನ ಅಗತ್ಯ ಎಂದರು.
ರಾಜ್ಯದಲ್ಲಿ ಕೈಗಾರಿಕೆಗಳನ್ನು ಆಕರ್ಷಿಸಲು ಮತ್ತು ಹೂಡಿಕೆಗೆ ಪೂರಕ ವಾತಾವರಣ ನಿರ್ಮಿಸಲು ಶ್ರಮಿಸುತ್ತಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರ ಪ್ರಯತ್ನವನ್ನು ಅವರು ಶ್ಲಾಘಿಸಿದರು ಉದ್ಯಮಸ್ನೇಹಿ ವಾತಾವರಣ ಮತ್ತು ಬಲಿಷ್ಠ ಕೈಗಾರಿಕಾ ವ್ಯವಸ್ಥೆಗೆ ಕರ್ನಾಟಕ ನೀಡುತ್ತಿರುವ ಆದ್ಯತೆಯಿಂದಾಗಿ ಜಾಗತಿಕ ಹೂಡಿಕೆದಾರರಿಗೆ ರಾಜ್ಯ ಆಕರ್ಷಕ ತಾಣವಾಗಿದೆ ಎಂದರು.
ನೂತನ ಘಟಕವು ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುವುದರ ಜೊತೆಗೆ ಭಾರತವನ್ನು ಜಾಗತಿಕ ಏರೋಸ್ಪೇಸ್ ಕೇಂದ್ರವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜಗತ್ತಿಗೆ ರೆಕ್ಕೆ ನೀಡುವ ಭಾರತವನ್ನು ನಾವೆಲ್ಲರೂ ನಿರ್ಮಿಸೋಣ ಎಂದರು.
ಸಮಾರಂಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಅಡ್ವಾನ್ಸ್ಡ್ ಸ್ಟ್ರಕ್ಚರ್ಸ್ ಮುಖ್ಯಸ್ಥ ಅಜಯ್ ಮಹಾಜನ್, ಕಾಲಿನ್ಸ್ ಇಂಡಿಯಾ ಆಪರೇಷನ್ಸ್ನ ವ್ಯವಸ್ಥಾಪಕ ನಿರ್ದೇಶಕ ಬಿನು ಕೃಷ್ಣನ್ಕುಟ್ಟಿ, ಪ್ರೊಪೆಲ್ಲರ್ ಸಿಸ್ಟಮ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಜೀನ್ ಫ್ರಾಂಕೋಯಿಸ್ ಚಾನುಟ್, ಕಾಲಿನ್ಸ್ ಏರೋಸ್ಪೇಸ್ ಮತ್ತು ಆರ್ಟಿಎಕ್ಸ್ ಇಂಡಿಯಾದ ಹಿರಿಯ ಅಧಿಕಾರಿಗಳಾದ ಜೇಮ್ಸ್ ಬೆಲ್, ಸ್ಕಾಟ್ ಪಾರ್ಕಿನ್ಸ್, ಸ್ಟೀಫನ್ ಡಿಯಾನ್, ನಿಕೋಲಸ್ ಲೆರಿಸನ್ ಮತ್ತು ಸಮಿತ್ ರೇ ಹಾಜರಿದ್ದರು.




