ಯಾರಾಗಲಿದ್ದಾರೆ ಬಿಜೆಪಿ ಅಧ್ಯಕ್ಷ? ಇದು ಯತ್ನಾಳ್‌ – ವಿಜಯೇಂದ್ರ ಸಿಲ್ಲಿ ಕಥೆಯಲ್ಲ

1 year ago

ಮೋದಿ-ಆರೆಸ್ಸೆಸ್‌ ಸಂಘರ್ಷದ ದಿಲ್ಲಿ ಕಥೆ!

ಊಹ್ಞೂಂ…. ಯಾವ ಕೋನದಿಂದ ನೋಡಿದರೂ ಜಗತ್ತಿನ ಅತಿದೊಡ್ಡ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿಗಿದು ಸವಾಲೇ ಅಲ್ಲ. ಚಿಟಿಕೆ ಹೊಡೆಯೋದ್ರಲ್ಲಿ ಸರಿ ಮಾಡಿ, ಸುಮ್ಮನಿರಿಸಬಹುದಿದ್ದ ಗಲಾಟೆ. ಅದರಲ್ಲೂ ಮೋದಿ, ಅಮಿತ್ ಶಾ ತರಹದ ಪವರ್‍‌ಫುಲ್ ನಾಯಕರ ನೇತೃತ್ವವಿರುವ ಪಕ್ಷಕ್ಕೆ ಇದೊಂದು ಸಂಗತಿಯೇ?

ರಾಜ್ಯ ಬಿಜೆಪಿ ಘಟಕದಲ್ಲಿ ಭುಗಿಲೆದ್ದಿರುವ ಅಲ್ಲೋಲಕಲ್ಲೋಲದ ಕುರಿತಂತೆ ಹೇಳ್ತಿರುವ ಮಾತಿದು. ಬಂಡಾಯದ ನೇತೃತ್ವ ವಹಿಸಿರುವ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಸಿದ್ದೇಶ್ವರ, ಪ್ರತಾಪ್‌ ಸಿಂಹ, ಕುಮಾರ್‍‌ ಬಂಗಾರಪ್ಪ, ಬಿ ಪಿ ಹರೀಶ್‌  ಇವರ್‍ಯಾರು ಮಾಸ್‌ ಲೀಡರುಗಳೂ ಅಲ್ಲ, ಪಕ್ಷಕ್ಕೆ ದೀರ್ಘಕಾಲದ ಅಸೆಟ್‌ ಆಗಬಲ್ಲಂತವರೂ ಅಲ್ಲ. ವಿವಾದಾತ್ಮಕ ಹೇಳಿಕೆಕೊಟ್ಟು, ತಮಗೆ ಟಿಆರ್‍‌ಪಿ ತಂದುಕೊಡಬಲ್ಲರು ಅನ್ನೋ ಕಾರಣಕ್ಕೆ ಮೀಡಿಯಾಗಳು ಯತ್ನಾಳ್‌ರನ್ನು ಪ್ಯಾಂಪರ್‍‌ ಮಾಡುತ್ತಿವೆಯಷ್ಟೆ. ಆ ಕಾರಣಕ್ಕೆ ಆತ ಕೊಂಚ ಸುದ್ದಿಯಲ್ಲಿರೋದು ಬಿಟ್ಟರೆ, ಗ್ರೌಂಡ್‌ ಲೆವೆಲ್‌ ಪೊಲಿಟಿಕ್ಸ್‌ ನಲ್ಲಿ ಆತ Nothing! ಈ ಹಿಂದೆ ಬಿಜೆಪಿಯೊಳಗೆ ಇದೇ ಕೆಲಸ ಮಾಡುತ್ತಿದ್ದ ಮತ್ತು ಆ ಕಾರಣಕ್ಕೆ ಮೀಡಿಯಾಗಳಿಂದ ಪ್ಯಾಂಪರಿಂಗ್‌ಗೆ ಒಳಗಾಗಿದ್ದ ಈಶ್ವರಪ್ಪ ಇವತ್ತು ಏನಾಗಿದ್ದಾರೆ ಅನ್ನೋದು ಕಣ್ಣಮುಂದಿನ ಸತ್ಯ.

ಕನ್ನಡದ ಹೆಸರಾಂತ ಪತ್ರಕರ್ತ-ಸಾಹಿತಿ ಲಂಕೇಶ್‌ ಅವರು ಬಹಳ ಹಿಂದೆಯೇ ಹೇಳಿದಂತೆ ‘ಚಪ್ಪಾಳೆಗಳ ನಡುವೆ ಹುಟ್ಟಿದ ನಾಯಕ ಚಪ್ಪಾಳೆಗಳ ನಡುವೆಯೇ ನಶಿಸಿಹೋಗುತ್ತಾನೆ’ ಎಂಬುದು ಇಂತವರಿಗೆ ಅನ್ವಯವಾಗುತ್ತದೆ. ತಮಗಿರುವ ಪ್ಲಾಟ್ ಫಾರಂ ಬಳಸಿಕೊಂಡು ಡೈಲಾಗ್ ಹೊಡೆಯುವ ಮೂಲಕ ಮೀಡಿಯಾಗಳಲ್ಲಿ ಮಿಂಚುವ ಇವರು, ಆ ಪ್ಲಾಟ್ ಫಾರಂ ಇಲ್ಲವಾದ ಮರುಕ್ಷಣವೇ ಡಮ್ಮಿಯಾಗಿಬಿಡುತ್ತಾರೆ. ಯಾಕೆಂದರೆ, ವೇದಿಕೆಯಲ್ಲಿ ವರ್ಕ್‌ ಆಗುವ ಡೈಲಾಗ್‌ಗಳು; ಗ್ರೌಂಡ್‌ನಲ್ಲಿ ಕೆಲಸಕ್ಕೆ ಬರುವುದಿಲ್ಲ. ಅಲ್ಲಿ ವರ್ಕ್‌ ಆಗುವ ಸಂಗತಿಗಳೇ ಬೇರೆ. ಅವು ದೇವೇಗೌಡರು, ಸಿದ್ರಾಮಯ್ಯ, ಯಡಿಯೂರಪ್ಪ ತರಹದ ರಾಜಕಾರಣಿಗಳಿಗೆ ಗೊತ್ತು. ಆ ಕಾರಣಕ್ಕೆ ಅವರು ಪ್ಲಾಟ್ ಫಾರಂಗಳು ಕೈತಪ್ಪಿಹೋದರೂ ದಡಸೇರುವ ಛಾತಿ ಹೊಂದಿರುತ್ತಾರೆ. ಇನ್‌ಫ್ಯಾಕ್ಟ್‌, ಆ ಛಾತಿಗೂ ಒಂದು ಟೈಮ್‌ಬೌಂಡ್‌ ಎನ್ನುವ ವ್ಯಾಲಿಡಿಟಿ ಇರುತ್ತದೆ ಅನ್ನೋದು ಬೇರೆ ವಿಷಯ.

ಇವತ್ತು ಬಿಜೆಪಿಯೊಳಗೆ ಬಂಡಾಯವನ್ನು ಬೀಸಾಡುತ್ತಿರುವ ಯಾವ ನಾಯಕರೂ ಇಂತಹ ಹಿನ್ನೆಲೆಯಿರುವವರಲ್ಲ. ಹಾಗಾಗಿ ಅವರನ್ನು ತೆಪ್ಪಗಾಗಿಸುವುದು ಬಿಜೆಪಿ ಹೈಕಮಾಂಡ್‌ಗೆ ಕಷ್ಟದ ಕೆಲಸವಾಗಿರಲಿಲ್ಲ. ಆದರೂ ಹೈಕಮಾಂಡ್‌ ಯಾಕೆ ಈ ವಿಚಾರದಲ್ಲಿ ಇಷ್ಟು ಅನನುಭವಿಯಂತೆ ವರ್ತಿಸುತ್ತಿದೆ? ಬಿಜೆಪಿ ಹಿರಿಯ ನಾಯಕ ಸದಾನಂದಗೌಡರಂತವರೇ, “ಎಲ್ಲಾ ಗೊತ್ತಿದ್ದು ವರಿಷ್ಠರು ವಿಳಂಬ ಮಾಡ್ತಿದ್ದಾರೆ, ಅಶಿಸ್ತು ನಿಯಂತ್ರಿಸಲು ಗಮನ ಕೊಡ್ತಿಲ್ಲ” ಎಂದು ಬಹಿರಂಗವಾಗಿ ದೂರುತ್ತಾರೆ ಎಂದರೆ ಬಿಜೆಪಿ ಹೈಕಮಾಂಡ್‌ನ ನಿಷ್ಕ್ರಿಯತೆ ಅರ್ಥವಾಗುತ್ತದೆ. ಯಾಕೆ ಹೀಗೆ..??

ಇದಕ್ಕೆ ಎರಡು ಆಯಾಮಗಳಿವೆ. ಮೊದಲನೆಯದ್ದಂತು ನಮಗೆಲ್ಲ ಸ್ಪಷ್ಟವಾಗಿ ಗೊತ್ತು. ಈ ಬಂಡಾಯದ ಹಿಂದೆ ಸ್ವತಃ ಹೈಕಮಾಂಡ್‌ ಮಟ್ಟದ ವರಿಷ್ಠರುಗಳ ಕೈವಾಡವಿದೆ. ಅದರಲ್ಲೂ ಬಿ ಎಲ್‌ ಸಂತೋಷ್‌, ಪ್ರಹ್ಲಾದ್‌ ಜೋಷಿ ತರಹದವರು ಯಡಿಯೂರಪ್ಪನವರ ಕುಟುಂಬವನ್ನು ಸೈಡ್‌ಲೈನ್‌ ಮಾಡಲು ಯತ್ನಾಳ್‌ ಬಣಕ್ಕೆ ಕುಮ್ಮಕ್ಕು ನೀಡ್ತಿದ್ದಾರೆ. ಹಾಗಾಗಿ ಮುನ್ನುಡಿಯಲ್ಲೇ ಮುಗಿದುಹೋಗಬೇಕಿದ್ದ ಬಂಡಾಯ, ಮೊದಲೆರಡು ಅಧ್ಯಾಯಗಳವರೆಗೆ ವ್ಯಾಪಿಸಿದೆ.

ಆದರೆ, ರಾಜ್ಯ ಬಿಜೆಪಿ ಬಂಡಾಯಕ್ಕೆ ಮದ್ದರೆಯುವಲ್ಲಿ ಹೈಕಮಾಂಡ್‌ ಸೋತಿರೋದಕ್ಕೆ ಇದಕ್ಕಿಂತಲೂ ಗಹನವಾದ ಮತ್ತೊಂದು ಕಾರಣವಿದೆ.  ಯಾವ ‘ಅಧ್ಯಕ್ಷ’ ಹುದ್ದೆಯ ಸುತ್ತ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಿದೆಯೋ, ಅದೇ ಅಧ್ಯಕ್ಷ ಹುದ್ದೆಯ ಕಗ್ಗಂಟು ಬಿಜೆಪಿ ಹೈಕಮಾಂಡನ್ನೂ ಹೈರಾಣು ಮಾಡಿಟ್ಟಿದೆ ಎನ್ನುವುದು ಲೇಟೆಸ್ಟ್‌ ಸುದ್ದಿ! ಹೌದು, ಎಲ್ಲವೂ ನೆಟ್ಟಗಿದ್ದಿದ್ದರೆ ಇಷ್ಟೊತ್ತಿಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಒಂದು ಹೆಸರನ್ನು ಘೋಷಣೆ ಮಾಡಬೇಕಿತ್ತು. ಯಾಕೆಂದರೆ ಹೀಗಿರುವ ಜೆ ಪಿ ನಡ್ಡಾ ಅವಧಿ ಮುಗಿದು, ಅವರೀಗ ಉಸ್ತುವಾರಿ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರಷ್ಟೆ.

ರಾಷ್ಟ್ರೀಯ ಅಧ್ಯಕ್ಷ ಯಾರಾಗಬೇಕು ಎನ್ನುವ ಚರ್ಚೆಯೇ ಈಗ ಬಿಜೆಪಿ ಹೈಕಮಾಂಡ್‌ನಲ್ಲಿ ದೊಡ್ಡ ಬೇಗುದಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ನಾಯಕರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದರೆ, ಹೈಕಮಾಂಡ್‌ನಲ್ಲಿ ಆರೆಸ್ಸೆಸ್‌ ಮತ್ತು ಮೋದಿ-ಶಾ ಜೋಡಿಯ ನಡುವೆ ಈ ಸಂಘರ್ಷ ನಡೆಯುತ್ತಿದೆ. ಇದು ನಿನ್ನೆ ಮೊನ್ನೆಯ ಸಂಘರ್ಷವಲ್ಲ. ಮೋದಿಯವರು ಪ್ರಧಾನಿ ಹುದ್ದೆಗೇರಿದ ದಿನದಿಂದಲೂ ಬೂದಿಮುಚ್ಚಿದ ಕೆಂಡದಂತಿದ್ದ ಈ ಸಂಘರ್ಷ, ಯಾವಾಗ ಜೆ ಪಿ ನಡ್ಡಾ “ಬಿಜೆಪಿಗೆ ಈಗ ಆರೆಸ್ಸೆಸ್‌ನ ಅವಶ್ಯಕತೆ ಇಲ್ಲ” ಎಂಬ ಹೇಳಿಕೆ ನೀಡಿದರೋ, ಆಗಿನಿಂದ ಜ್ವಲಿಸಲಾರಂಭಿಸಿದೆ. ನಡ್ಡಾ ಅವರ ಅಧಿಕಾರಾವಧಿ 2024ರ ಜನವರಿಯಲ್ಲೇ ಮುಕ್ತಾಯವಾಗಿತ್ತಾದರೂ, ಲೋಕಸಭಾ ಚುನಾವಣೆಯ ಕಾರಣಕ್ಕೆ ಅವರ ಅವಧಿಯನ್ನು ವಿಸ್ತರಿಸಿ, ಉಸ್ತುವಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆ ಅವಧಿಯೂ 2024 ಜೂನ್‌ 30ಕ್ಕೆ ಮುಕ್ತಾಯವಾಗಿದೆ. ಆದರೆ ಇದುವರೆಗೆ, ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಮೋದಿ-ಶಾ ಮತ್ತು ಆರೆಸ್ಸೆಸ್‌ ನಡುವೆ ನಡೆಯುತ್ತಿರುವ ಘರ್ಷಣೆಯೇ ಇದಕ್ಕೆ ಕಾರಣ ಎನ್ನುವುದು ಈಗ ಜಗಜ್ಜಾಹೀರು.

ಮೋದಿ ಪರ್ವದ ನಂತರ ಬಿಜೆಪಿ ಪಕ್ಷವು ಸಂಪೂರ್ಣವಾಗಿ ಆರೆಸ್ಸೆಸ್‌ನ ಕೈತಪ್ಪಿ, ಮೋದಿಯವರ ಪರ್ಸನಾಲಿಟಿ ಕಲ್ಟ್‌ನ ಪ್ರಭಾವಕ್ಕೆ ಸಿಲುಕಿದೆ. ಇದು ಆರೆಸ್ಸೆಸ್‌ಗೆ ಗೊತ್ತು. ಅದನ್ನು ವಾಪಾಸ್‌ ಆರೆಸ್ಸೆಸ್‌ನ ಪ್ರಭಾವಲಯಕ್ಕೆ ಮರಳಿ ತರೋದು ಅದರ ಪ್ರಯತ್ನ. ಅದರ ಭಾಗವಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ದೂರ ಉಳಿದು, ಮೋದಿಯವರ `ಚಾರ್‍‌ ಸೌ ಪಾರ್‍‌’ ಓವರ್‍‌ಕಾನ್ಫಿಡೆನ್ಸಿಗೆ ತಕ್ಕ ಪಾಠ ಕಲಿಸಿತು. ಆನಂತರ ಮೋದಿಯನ್ನು ನಿಯಂತ್ರಿಸುವ ಎಲ್ಲಾ ಅವಕಾಶಗಳನ್ನು ಆರೆಸ್ಸೆಸ್‌ ಬಳಸಿಕೊಳ್ಳುತ್ತಾ ಬರುತ್ತಿದೆ. ಉದಾಹರಣೆಗೆ, ಇತ್ತೀಚೆಗೆ ಬಿಜೆಪಿ ಗೆದ್ದ ಮಹಾರಾಷ್ಟ್ರ, ಹರ್ಯಾಣ ಚುನಾವಣೆಗಳನ್ನೇ ನೋಡುವುದಾದರೆ. ಚುನಾವಣಾ ಮಿಷಿನರಿಯನ್ನು ಬಿಜೆಪಿಯಿಂದ ತನ್ನ ಕೈಗೆ ವರ್ಗಾಯಿಸಿಕೊಂಡ ಆರೆಸ್ಸೆಸ್‌ ಈ ಎರಡೂ ರಾಜ್ಯಗಳಲ್ಲಿ ಮೋದಿಯವರನ್ನು ಆದಷ್ಟು ಪ್ರಚಾರದಿಂದ ದೂರವಿಟ್ಟಿತು. ಮಹಾರಾಷ್ಟ್ರದಂತಹ ದೊಡ್ಡ ಮತ್ತು ನಿರ್ಣಾಯಕ ರಾಜ್ಯದ ಚುನಾವಣೆಯಲ್ಲಿ ಮೋದಿ ಭಾಗವಹಿಸಿದ್ದು ಕೇವಲ 9 ಚುನಾವಣಾ ರ್‍ಯಾಲಿ ಮತ್ತು 2 ರೋಡ್‌ ಶೋಗಳಲ್ಲಿ ಮಾತ್ರ. ನೆನಪಿರಲಿ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಬರೋಬ್ಬರಿ 19 ರ್‍ಯಾಲಿ ಮತ್ತು 9 ರೋಡ್‌ ಶೋಗಳಲ್ಲಿ ಭಾಗವಹಿಸಿದ್ದರು. ಇದಕ್ಕೆ ಹೋಲಿಸಿದರೆ, ಮಹಾರಾಷ್ಟ್ರದಲ್ಲಿ ಮೋದಿಯ ಪ್ರಚಾರವನ್ನು ಕಟ್ಟಿಹಾಕಿರೋದು ಅರ್ಥವಾಗುತ್ತೆ. ಇನ್ನು ಹರ್ಯಾಣದಲ್ಲೂ ಮೋದಿ ಭಾಗವಹಿಸಿದ್ದು ಕೇವಲ 4 ರ್‍ಯಾಲಿಗಳಲ್ಲಿ ಮಾತ್ರ. ಇದೇ ರಾಜ್ಯದಲ್ಲಿ 2014ರಲ್ಲಿ 10, 2019ರಲ್ಲಿ 6 ರ್‍ಯಾಲಿಗಳಲ್ಲಿ ಮೋದಿ ಭಾಗವಹಿಸಿದ್ದರು. ಮೋದಿಯ ವರ್ಚಸ್ಸನ್ನು ದೂರವಿರಿಸಿ ಕೂಡಾ ಬಿಜೆಪಿಯನ್ನು ಗೆಲ್ಲಿಸುವ ತಾಕತ್ತು ತನಗಿದೆ ಎಂಬುದನ್ನು `ಮೋದಿ ಪರಿವಾರಕ್ಕೆ’ ಅರ್ಥ ಮಾಡಿಸುವಲ್ಲಿ ಸಂಘ ಪರಿವಾರ ಈ ಎರಡು ಚುನಾವಣೆಯಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

ಹೀಗೆ ಮೋದಿಯನ್ನು ಕಟ್ಟಿಹಾಕುವ ಆರೆಸ್ಸೆಸ್‌ನ ತಂತ್ರಗಾರಿಕೆ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಗಾದಿಯವರೆಗೆ ಬಂದು ತಲುಪಿದೆ. ಯಥಾಪ್ರಕಾರ, ತನ್ನ ಆಣತಿಯಂತೆ ನಡೆಯುವ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವುದು ಮೋದಿಯವರ ಇಚ್ಛೆ. ಇದಕ್ಕೆ ಪ್ರತಿಯಾಗಿ, ಸಂಘ ಪರಿವಾರಕ್ಕೆ ನಿಷ್ಠವಾದ ಆರೆಸ್ಸೆಸ್‌ ಮೂಲದ ವ್ಯಕ್ತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಬೇಕೆನ್ನುವುದು ಸಂಘದ ಎಣಿಕೆ. ಇದೇ ಈಗ ಸಂಘರ್ಷದ ಧಾತು. ಮೋದಿಯವರ ಪರವಾಗಿ ಅಮಿತ್‌ ಶಾ ಮತ್ತು ಬಿ ಎಲ್‌ ಸಂತೋಷ್‌ ಹಾಗೂ ಆರೆಸ್ಸೆಸ್‌ನ ಪರವಾಗಿ ಜನರಲ್‌ ಸೆಕ್ರೆಟರಿ ದತ್ತಾತ್ರೇಯ ಹೊಸಬಾಳೆ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್‍‌, ಕಳೆದ ಆಗಸ್ಟ್‌ 12ನೇ ತಾರೀಖು ರಾಜನಾಥ್‌ ಸಿಂಗ್‌ ಅವರ ಮನೆಯಲ್ಲಿ ಸಭೆ ಸೇರಿ ಸತತ ಐದು ಗಂಟೆಗಳ ಚರ್ಚೆ ನಡೆಸಿದರೂ ಒಮ್ಮತಕ್ಕೆ ಬರಲಾಗಿಲ್ಲ. ಅಧ್ಯಕ್ಷಗಿರಿಯನ್ನು ಸಂಘ ಪರಿವಾರಕ್ಕೆ ಬಿಟ್ಟುಕೊಟ್ಟರೆ, ತನಗೆ ಆರೆಸ್ಸೆಸ್‌ ಇನ್ನಷ್ಟು ಮೂಗುದಾರ ಹಾಕುತ್ತೆ ಎಂಬುದು ತಿಳಿದಿರುವ ಮೋದಿಯವರು ಶತಾಯಗತಾಯ ಜೆ ಪಿ ನಡ್ಡಾ ತರಹದ ತನ್ನ ವ್ಯಕ್ತಿಯನ್ನೇ ಅಲ್ಲಿ ಪ್ರತಿಷ್ಠಾಪಿಸುವ ಹಠಕ್ಕೆ ಬಿದ್ದಿದ್ದಾರೆ. ಆದರೆ ಆರೆಸ್ಸೆಸ್‌ ದೇವೇಂದ್ರ ಫಡ್ನವೀಸ್, ಸುನೀಲ್ ಬನ್ಸಲ್, ವಿನೋದ್ ತಾವ್ಡೆ ತರಹದ ಆರೆಸ್ಸೆಸ್ ನಿಷ್ಠರ ಹೆಸರನ್ನು ಪ್ರಸ್ತಾಪಿಸುತ್ತಿದೆ.

ಇತ್ತೀಚೆಗೆ ಆರೆಸ್ಸೆಸ್‌ ಪಟ್ಟಿಯಲ್ಲಿ ಸಂಜಯ್‌ ಜೋಷಿ ಹೆಸರು ಕೂಡಾ ಹರಿದಾಡುತ್ತಿರೋದು ದಿಲ್ಲಿ ಮಟ್ಟದಲ್ಲೇ ಬಿಜೆಪಿಯ ವರಿಷ್ಠರನ್ನು ತಬ್ಬಿಬ್ಬುಗೊಳಿಸಿದೆ. ಈ ಸಂಜಯ್‌ ಜೋಷಿ, ಗುಜರಾತ್‌ನಲ್ಲಿ ಮೋದಿ ಸಮಕಾಲೀನರಾಗಿ ಆರೆಸ್ಸೆಸ್‌-ಬಿಜೆಪಿಯ ಜಂಟಿ ರಾಜಕಾರಣವನ್ನು ಶುರು ಮಾಡಿದವರು. ಮೋದಿಗಿಂತಲೂ ಪವರ್‍‌ಫುಲ್‌ ನಾಯಕ ಮತ್ತು ರಾಜಕೀಯ ತಂತ್ರಗಾರ ಎಂದು ಹೆಸರಾದವರು. ಅದೇ ಕಾರಣಕ್ಕೆ ಮೋದಿ-ಜೋಷಿ ನಡುವೆ ಪೈಪೋಟಿ ಹುಟ್ಟಿಕೊಂಡು ಅದು ವೈರತ್ವಕ್ಕೂ ತಿರುಗಿತ್ತು.  ಜೋಷಿಯವರದ್ದು ಎನ್ನಲಾದ ಸೆಕ್ಸ್‌ ಸಿಡಿಯೊಂದು ಬೆಳಕಿಗೆ ಬರುವಲ್ಲಿ ಮೋದಿಯವರ ಕೈವಾಡವೂ ಇದೆ ಎಂದು ಈಗಲೂ ಕೆಲವರು ಮಾತಾಡಿಕೊಳ್ಳುತ್ತಾರೆ. ಅದರಲ್ಲಿ ಸತ್ಯವೆಷ್ಟು, ಸುಳ್ಳೆಷ್ಟೊ ಗೊತ್ತಿಲ್ಲ. ಆದರೆ ಆ ಸಿಡಿಯ ಕಾರಣಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್‌ ಎರಡೂ ಕಡೆ ಜೋಷಿಯವರ ವರ್ಚಸ್ಸು ಕುಂದಿತು. ಅವರನ್ನು ಸಂಘಟನೆಯಿಂದ ದೂರ ಇಡಲಾಯ್ತು. ಈಗ ಅದೇ ಸಂಜಯ್‌ ಜೋಷಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಮೋದಿಯವರಿಗೆ ಎದಿರೇಟು ಕೊಡಲು ಆರೆಸ್ಸೆಸ್‌ ತಂತ್ರ ರೂಪಿಸಿದೆ ಎನ್ನುವ ಸುದ್ದಿ ಹರಿದಾಡ್ತಿದೆ. ಅದೇನೆ ಇರಲಿ, ಜೋಷಿಯಲ್ಲದೆ ಬೇರೆ ಯಾರೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರೂ ಅದು ಮೋದಿ ವ್ಯಕ್ತಿಯಾಗಿರಬಾರದು, ಸಂಘನಿಷ್ಠ ವ್ಯಕ್ತಿಯಾಗಿರಬೇಕು ಎಂಬ ಹಠ ಆರೆಸ್ಸೆಸ್‌ನದ್ದು ಎನ್ನುವುದು ಮಾತ್ರ ಸತ್ಯ.

ಹೀಗೆ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯ ತಳಮಳದಲ್ಲಿ ಬೆಂದು ಹೋಗುತ್ತಿರುವ ಬಿಜೆಪಿ ಹೈಕಮಾಂಡ್‌, ರಾಜ್ಯ ನಾಯಕರ ಈ ಬಂಡಾಯದತ್ತ ಗಮನಕೊಡಲು ಸಾಧ್ಯವೇ? ಕಾಟಾಚಾರಕ್ಕೆಂಬಂತೆ ಬಂದುಹೋದ ರಾಧಾ ಮೋಹನ್‌ ದಾಸ್‌ ಅಗರ್‍ವಾಲ್‌, ಬಂಡಾಯವನ್ನು ಆರಿಸುವ ಬದಲು ಮತ್ತಷ್ಟು ಭುಗಿಲೆಬ್ಬಿಸಿ ಹೋಗಿದ್ದಾರೆ. ಇಂತಹ un-coordinated ವರ್ತನೆ ಬಿಜೆಪಿ ಮಟ್ಟಿಗೆ ಸಹಜವಾದುದಲ್ಲ. ಹೈಕಮಾಂಡ್‌ನಲ್ಲೇ ಏನೋ ಸಮಸ್ಯೆ ಇದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply