ಮೆಜೆಸ್ಟಿಕ್ ನಿಂದ ಮನೆಗೆ ಬರುವ ಸರ್ಕಸ್ ಇದೆಯಲ್ಲ ಅದು ಅನುಭವಿಸಲಾಗದ ನರಕ

2 months ago

ಬೆಂಗಳೂರಿನಿಂದ ಬೇರೆ ಬೇರೆ ಭಾಗಗಳಿಂದ ರಾತ್ರಿ ಹೊರಡುವ ಖಾಸಗಿ ಬಸ್ ಗಳು ಬೆಳಕು ಮೂಡುವ ಮೊದಲೆ ಅಂದರೆ ತೀರಾ 4:30ಕ್ಕೆ ನಮ್ಮನ್ನು ತಂದು ಮೆಜೆಸ್ಟಿಕ್ ಅಂಗಳಕ್ಕೆ ಬಿಸಾಕುತ್ತವೆ.

ಮೆಜೆಸ್ಟಿಕ್ ನಿಂದ ಮನೆಗೆ ಬರುವ ಸರ್ಕಸ್ ಇದೆಯಲ್ಲ ಅದು ಅನುಭವಿಸಲಾಗದ ನರಕ.

1) ನಮ್ಮನ್ನಿಳಿಸುವ ಜಾಗ ಬಿಎಂಟಿಸಿ ಬಸ್ ಸ್ಟ್ಯಾಂಡ್ ನಿಂದ ಬಹಳಷ್ಟು ದೂರವಿರುತ್ತದೆ. ಲಗ್ಗೇಜು ಹೊತ್ತುಕೊಂಡು ವಯಸ್ಸಾದವರನ್ನು ಮಕ್ಕಳನ್ನು ಕರೆದುಕೊಂಡು ನಡೆದು ಹೋಗಲು ಸಾಧ್ಯವಿಲ್ಲದ ಜಾಗವದು.

2) ಮೆಜೆಸ್ಟಿಕ್ ನಲ್ಲಿ ಮೆಟ್ರೋ ಸ್ಟೇಷನ್ ಇದೆಯಲ್ಲ ಅದರ ತದ್ವಿರುದ್ಧ ದಿಕ್ಕಿನಲ್ಲಿ ಇಳಿಸಿ ಹೋಗುತ್ತಾನೆ, ಅಲ್ಲಿಗೆ ಮೆಟ್ರೋ ಕೂಡಾ ಅಲಭ್ಯ (ಬೆಳ್ಳಂಬೆಳಿಗ್ಗೆ  4:30 ಕ್ಕೆ ಮೆಟ್ರೊ ರೈಲುಗಳ ಚಾಲನೆಯೂ ಪ್ರಾರಂಭವಾಗಿರುವುದಿಲ್ಲ)

3) ಆ ಹೊತ್ತಿನಲ್ಲಿ ಓಲಾ, ಉಬರ್, ರ್ಯಾಪಿಡೋ ಮುಂತಾದ ಆ್ಯಪ್ ಗಳಲ್ಲಿ ನಿಮಗೆ ಆಟೋ ಆಗಲೀ, ಕ್ಯಾಬ್ ಆಗಲಿ ಬುಕ್ ಆಗುವುದೇ ಇಲ್ಲ. ಕಾರಣ ನಿಗೂಢ (ಬೇಕಿದ್ದರೆ  ಪರೀಕ್ಷಿಸಿ ನೋಡಿ ಬೆಳಿಗ್ಗೆ 4ರಿಂದ 6ರವರೆಗೆ ಆಟೋ ಬುಕ್ ಆಗಲ್ಲ)

4) ಸಾಲಾಗಿ ನಿಂತ ಆಟೋ‌ ಡ್ರೈವರ್ ಗಳೆಂಬ ಹಗಲು ದರೋಡೆಕೋರರು ಅಕ್ಷರಶಃ ನಮ್ಮನ್ನು ದೋಚಲು ಹೊಂಚುಹಾಕಿ ನಿಂತಿರುತ್ತಾರೆ (ಮಾಮೂಲಿ ಸಂದರ್ಭದಲ್ಲಿ ಮೆಜೆಸ್ಟಿಕ್ ನಿಂದ ನಮ್ಮ ಮನೆಯಿರುವ ಇಟ್ಟಮಡುಗೆ ಗರಿಷ್ಟ 150 ರೂಪಾಯಿ ಮಾತ್ರ, ಆದರೆ ಈ ಹೊತ್ತಿನಲ್ಲಿ ಯಾವುದೇ ಆಟೋ ಡ್ರೈವರ್ ಕೇಳುವುದು ಮಿನಿಮಮ್ 600+ ರೂಪಾಯಿ)

5) ಮೆಜೆಸ್ಟಿಕ್ ನಲ್ಲಿ ಆ ಹೊತ್ತಿನಲ್ಲಿ ಸಾಲು ಸಾಲು ಖಾಸಗಿ ಬಸ್ ಗಳು ಟ್ರಾಫಿಕ್ ವ್ಯವಸ್ಥೆಯನ್ನು ನಾಶಮಾಡಲೆಂದೆ ಅಡ್ಡಡ್ಡ ಉದ್ದುದ್ದ ನಿಲ್ಲುತ್ತವೆ ವಿನಾಕಾರಣ

6) ನೀವು ಯಾವುದೇ ಆಟೋ ಡ್ರೈವರ್ ನನ್ನು ಯಾವುದೇ ಸ್ಥಳಕ್ಕೆ ಕರೆಯಿರಿ, ಅವರು ಹೇಳಿದ ರೇಟ್ ಗೆ ಒಪ್ಪದಿದ್ದರೆ ಅವರು ಬರಲ್ಲ. ಅವರು ಕೇಳಿದ ಮೊತ್ತಕ್ಕೆ ನೀವು ಹೋಗದೇ ಇದ್ದರೇ ಕಣ್ಣಲ್ಲೇ ನಿಮ್ಮ ಖಾತ್ಮಾ ಮಾಡುವಂತೆ ಗುರಾಯಿಸುವ ಆಟೋ ಡ್ರೈವರ್ ವೇಷದಲ್ಲಿರುವ ಪುಡಿ ರೌಡಿಗಳು ಹಳೆ ಮೈಸೂರು ಕನ್ನಡ ಭಾಷೆಯಿಂದ ಹಿಡಿದು ಉರ್ದು ಭಾಷೆಯವರೆಗೆ ಅವರ ಪದಕೋಶದ ಎಲ್ಲಾ ಬೈಗುಳಗಳ ಮಳೆ ಸುರಿಸುತ್ತಾರೆ, ಅದವರ ಸ್ವಗತ ಸಂಭಾಷಣೆ.

7) ಬೆಳಿಗ್ಗೆ ಆ ಹೊತ್ತಿನಲ್ಲಿ ನಿಮಗೆ ಒಬ್ಬನೆ ಒಬ್ಬ ಟ್ರಾಫಿಕ್ ಪೊಲೀಸನಾಗಲೀ ಅಥವಾ ಲಾ & ಆರ್ಡರ್ ಪೋಲೀಸರಾಗಲಿ ಕಾಣಿಸುವುದಿಲ್ಲ.

8) ಯಾರಾದರೂ ಒಬ್ಬನೇ ವ್ಯಕ್ತಿ ಊರಿಂದ ಬಸ್ಸಿಳಿದು ಆಟೋ ಸಹವಾಸವೇ ಬೇಡ ಎಂದು ರ್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡೋಣ ಎಂದುಕೊಂಡರೇ, ಗೂಂಡಾ ಆಟೋ ಡ್ರೈವರ್ ಗಳು ಆ ರ್ಯಾಪಿಡೋ ಬೈಕ್ ರೈಡರ್ ಗೆ ಹೊಡೆದು ಬಡಿದು ಹಣ್ಣುಗಾಯಿ ನೀರುಗಾಯಿ ಮಾಡಿ ಕಳಿಸ್ತಾರೆ. (ಈಗೀಗ ಮೆಜೆಸ್ಟಿಕ್ ನಿಂದ ನಿಮಗೆ ರ್ಯಾಪಿಡೋ ಬೈಕ್ ಗಳೂ ಸಿಗುವುದಿಲ್ಲ)

ಮಧ್ಯಮ ವರ್ಗದವರು ತಮ್ಮ ತಮ್ಮ ಊರುಗಳಿಂದ ಮೆಜೆಸ್ಟಿಕ್ ಗೆ ಬರುವವರಾದರೇ ಅವರು ಇಡೀ ವ್ಯವಸ್ಥೆಗೆ ಹಿಡಿಶಾಪ ಹಾಕಿ ನಿಟ್ಟುಸಿರು ಬಿಟ್ಟು ಹೆಣಗಾಡಿ ಮನೆ ಸೇರಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಬೆಂಗಳೂರಲ್ಲಿ ಹೀಗೆ ಅವ್ಯವಸ್ಥೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಬೆಳಗಿನ ಜಾವದ ಸಿಹಿನಿದ್ದೆ. ಹೋಮ್ ಮಿನಿಸ್ಟರ್ ಸಾಹೇಬರು ಇದ್ದಾರೋ ಇಲ್ಲವೋ ಅವರೇ ಹೇಳಬೇಕು. ಟ್ರಾಫಿಕ್ ಪೊಲೀಸ್ ಮತ್ತು ಲಾ & ಆರ್ಡರ್ ಕಮಿಷನರ್ ಗಮನಕ್ಕೆ ಈ ವಿಚಾರಗಳು ಬರತ್ತವೋ ಇಲ್ಲವೋ‌, ಅಥವಾ ಅವರೂ ಈ ಅವ್ಯವಸ್ಥೆಯಿಂದ ಆರ್ಥಿಕ ಫಲಾನುಭವಿಯೋ ಅವರೇ ಸ್ಪಷ್ಟಪಡಿಸಲಿ. ಒಟ್ಟಿನಲ್ಲಿ ನಮ್ಮ ಈ ದರಿದ್ರ ವ್ಯವಸ್ಥೆ ಬಡವರ ಮತ್ತು ಮಧ್ಯಮ ವರ್ಗದ ರಕ್ತ ಹೀರುವುದರಲ್ಲೇ ಪರಮಸುಖ ಕಾಣ್ತಿದೆ ಅನ್ನೋದು ಸತ್ಯ.‌

– ವಿಶ್ವಾಸ್ ಭಾರದ್ವಾಜ್, ಪತ್ರಕರ್ತರು

Leave a Reply