ಲಂಬಾಣಿ, ಗೊಲ್ಲರಿಗೆ ಭೂ ಒಡೆತನದ ಹಕ್ಕು ನೀಡಿದ್ದು ನಮ್ಮ ಸರ್ಕಾರ: ಸಿದ್ದರಾಮಯ್ಯ

3 years ago

ಹಾವೇರಿ: ಸಮ್ಮಿಶ್ರ ಸರ್ಕಾರದಲ್ಲಿ 1 ವರ್ಷ 2 ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ಅನೈತಿಕ ರಾಜಕಾರಣದಿಂದ ಅಧಿಕಾರ ಕಳೆದುಕೊಂಡರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತಾಡಿದ ಅವರು, ನಮ್ಮ ಪಕ್ಷದ 14 ಶಾಸಕರು ತಮ್ಮನ್ನು ತಾವು ಮಾರಿಕೊಂಡು, ಜನರ ಅಭಿಪ್ರಾಯಕ್ಕೆ ಬೆಲೆ ಕೊಡದೆ ಬಿಜೆಪಿ ಸೇರಿದರು. ಈ ಆಪರೇಷನ್‌ ಕಮಲಕ್ಕೆ ಸುಮಾರು 1,000 ಕೋಟಿ ಹಣ ಖರ್ಚಾಗಿರಬಹುದು. ಇದು ರಾಜಕೀಯ ವ್ಯಭಿಚಾರ ಎಂದು ನಾನು ಅಂದೇ ಹೇಳಿದ್ದೆ. ಹೀಗೆ ಅನೈತಿಕ ಮಾರ್ಗದಲ್ಲಿ ಸರ್ಕಾರ ರಚನೆ ಆದರೆ ಜನರಿಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದೆ ಎಂದರು.

ಆಪರೇಷನ್‌ ಕಮಲಕ್ಕೆ ಶಾಸಕರಿಗೆ 30 ರಿಂದ 35 ಕೋಟಿ ಹಣ ಕೊಟ್ಟಿದ್ದು ಯಡಿಯೂರಪ್ಪ ಅವರ ಹಣ. ಯಡಿಯೂರಪ್ಪ ಅವರ ಮನೆಯಲ್ಲೇ ಯಾರಿಗೆ ಗುತ್ತಿಗೆ ಕೆಲಸ ಕೊಡಬೇಕು, ಯಾರಿಂದ ಎಷ್ಟು ವಸೂಲಿ ಮಾಡಬೇಕು ಎಂದು ತೀರ್ಮಾನವಾಗುತ್ತದೆ. ಇದನ್ನು ಹೇಳಿದ್ದು ಬಿಜೆಪಿಯ ಬಸನಗೌಡ‌ ಪಾಟೀಲ್ ಯತ್ನಾಳ್. ಯತ್ನಾಳ್‌ ಅವರು ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ ತಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಆಗಲು 2000 ಕೋಟಿ ಮತ್ತು ಸಚಿವರಾಗಲು 100 ಕೋಟಿ ಲಂಚ ಕೊಡಬೇಕು ಎಂದರು. ಇದೆಲ್ಲ ನಿಮ್ಮ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ವ ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಅವರೇ ಬಿಜೆಪಿಯ ಬಂಡವಾಳ. ಯಾಕೆಂದರೆ ರಾಜ್ಯದ ಬಿಜೆಪಿ ಜನರಿಗೆ ಹಳಸಲಾಗಿದೆ. ತಮ್ಮದು ಭ್ರಷ್ಟ ಸರ್ಕಾರ ಆದರೂ ಕೂಡ ಮೋದಿ ಅವರನ್ನು ನೋಡಿ ಜನ ತಮಗೆ ಮತ್ತೆ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಇದ್ದಾರೆ. “ ನ ಖಾವೂಂಗ, ನ ಖಾನೆದೂಂಗ” ಎಂದಿದ್ದ ಮೋದಿ ಅವರು ರಾಜ್ಯ ಬಿಜೆಪಿ ನಾಯಕರಿಗೆ ಯಾಕೆ ಲಂಚ ತಿನ್ನಲು ಬಿಟ್ಟಿದ್ದಾರೆ? ಕೆಂಪಣ್ಣ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ. ಇವರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಹೈಕೋರ್ಟ್‌ ನ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ, ಅದಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಾನು ಕೊಡುತ್ತೇನೆ ಎಂದು ಕೆಂಪಣ್ಣ ಹೇಳಿದ್ದರು. ಬೇರೆಯವರ ಧಮ್‌, ತಾಕತ್‌ ಪ್ರಶ್ನೆ ಮಾಡುವ ಬೊಮ್ಮಾಯಿ ಅವರಿಗೆ ಧಮ್‌, ತಾಕತ್‌ ಇದ್ದರೆ ನ್ಯಾಯಾಂಗ ತನಿಖೆ ಮಾಡಿಸಲಿ ಎಂದರು.

ಕಳೆದ ಹಾನಗಲ್ ಉಪಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ 15 ದಿನ ಹಾನಗಲ್‌ ನಲ್ಲಿ ಟಿಕಾಣಿ ಹೂಡಿದ್ದರು. ಮಾವನ ಮನೆಯಲ್ಲಿ ಉಳಿದುಕೊಂಡು ಹೇಗಾದರೂ ಮಾಡಿ ಶ್ರೀನಿವಾಸ್‌ ಮಾನೆ ಅವರನ್ನು ಸೋಲಿಸಬೇಕು ಎಂದು ಕೆಲಸ ಮಾಡಿದ್ರು ಆದರೂ ಜನರು ನಮ್ಮ ಮಾತಿಗೆ ಬೆಲೆ ಕೊಟ್ಟು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ, ನಮ್ಮ ಶ್ರೀ‌ನಿವಾಸ್ ಮಾನೆ ಅವರನ್ನು ಗೆಲ್ಲಿಸಿದ್ರು. ಪಕ್ಕದ ಕ್ಷೇತ್ರದಲ್ಲೇ ಸೋತರೂ ಬೊಮ್ಮಾಯಿಗೆ ಇನ್ನು ಬುದ್ದಿ ಬಂದಿಲ್ಲ. ಭ್ರಷ್ಟಾಚಾರದಲ್ಲೇ ಇನ್ನೂ ಮುಳುಗಿ ಕೂತಿದ್ದಾರೆ. ದುರಂತ ಎಂದರೆ ಶಿಕ್ಷಣ ಕ್ಷೇತ್ರದ ಉಪ ಕುಲಪತಿಗಳಿಗೆ 10 ಕೋಟಿ ಲಂಚ ನಿಗದಿ ಮಾಡಿದ್ದಾರೆ ಎಂದರು.

ಪ್ರೀತಿ, ಸ್ನೇಹ, ಸಹೋದರತ್ವ ಇರಬೇಕಾದ ಜನರ ಮನಸಿನಲ್ಲಿ ದ್ವೇಷ, ವೈರತ್ವ ತುಂಬಿದ್ದಾರೆ. ಒಡೆದಿರುವ ಸಮಾಜವನ್ನು ಒಂದು ಮಾಡಲು ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಈ ತಿಂಗಳ 30 ರಂದು ಈ ಯಾತ್ರೆ ಕೊನೆಯಾಗಲಿದೆ, ನಾವು ಅಲ್ಲಿಗೆ ಹೋಗಬೇಕು ಎಂದು ಯೋಚನೆ ಮಾಡಿದ್ದೇವೆ. ರಾಹುಲ್‌ ಗಾಂಧಿ ಅವರು ಇಂದು ಜನರ ಮನಸಲ್ಲಿ ನೆಲೆಯೂರಿದ್ದಾರೆ. ಇಲ್ಲಿ ಬಡಜನರ, ಅಲ್ಪಸಂಖ್ಯಾತರ, ಮಹಿಳೆಯರ, ಮಕ್ಕಳ, ಕಾರ್ಮಿಕರ, ರೈತರ ವಿರೋಧಿ ಸರ್ಕಾರ ಇದೆ. ಈ ಸರ್ಕಾರ ಇರುವವರೆಗೆ ರಾಜ್ಯ ಉದ್ಧಾರವಾಗಲ್ಲ. ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಬೊಮ್ಮಾಯಿ ಅವರು ಸಾಲ ಮಾಡಿ ಹೋಳಿಗೆ ತಿನ್ನಲು ಶುರು ಮಾಡಿದ್ದಾರೆ ಎಂದರು.

ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಸಾಮಾನ್ಯ ಜನ ಬದುಕುವುದು ಕಷ್ಟವಾಗಿದೆ. ಗ್ಯಾಸ್‌ ಹಾಗೂ ದಿನಸಿ ಕೊಳ್ಳಲು ಬಡವರಿಗೆ ಕಷ್ಟವಾಗುತ್ತದೆ ಎಂದು ನಾವು ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಯೋಜನೆಯನ್ನು ಘೋಷಣೆ ಮಾಡಿದ್ದೇವೆ, ನಾವು ನುಡಿದಂತೆ ನಡೆಯುವವರು. ಬಡವ ಬಲ್ಲಿದನೆನ್ನದೆ ಪ್ರತೀ ಮನೆಗೆ 200 ಯುನಿಟ್‌ ಉಚಿತವಾಗಿ ವಿದ್ಯುತ್‌ ನೀಡುವ ಯೋಜನೆ ಘೋಷಣೆ ಮಾಡಿದ್ದೇವೆ. ಈ ಎಲ್ಲಾ ಯೋಜನೆಗಳು ನಿಮಗೆ ಬೇಕು ಎನ್ನುವುದಾದರೆ ಜನಪರವಾದ ಕಾಂಗ್ರೆಸ್‌ ಪಕ್ಷಕ್ಕೆ ತಾವೆಲ್ಲ ಬೆಂಬಲ ನೀಡಿ, ಮುಂಬರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ ಎಂದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿನ ರೈತರು ಗೊಬ್ಬರ, ಬೀಜ, ಔಷಧಿ ಕೇಳಿದ್ದಕ್ಕೆ ಗೋಲಿಬಾರ್‌ ಮಾಡಿಸಿ, ಅಮಾಯಕ ರೈತರನ್ನು ಕೊಂದರು. ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಲಂಬಾಣಿ ತಾಂಡಗಳು, ಗೊಲ್ಲರ ಹಟ್ಟಿಗಳು ಹೀಗೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಅವರಿಗೆ ಭೂಒಡೆತನ ಹಕ್ಕು ನೀಡಿದ್ದು ನಮ್ಮ ಸರ್ಕಾರ. ಬಿಜೆಪಿಯವರು ಓಟಿನಾಸೆಗೆ ಇದನ್ನು ತಾವು ಮಾಡಿದ್ದು ಎನ್ನುತ್ತಿದ್ದಾರೆ. ಲಂಬಾಣಿ ಜನರ ಆರಾಧ್ಯ ವ್ಯಕ್ತಿ ಸಂತ ಸೇವಾಲಾಲ್‌ ಅವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲು ಆರಂಭಿಸಿದವರು ನಾವು. ಸೇವಾಲಾಲ್‌ ಹುಟ್ಟಿದ ಜಾಗವನ್ನು ಅಭಿವೃದ್ಧಿ ಮಾಡಲು 130 ಕೋಟಿ ರೂ. ಹಣ ನೀಡಿದ್ದು ನಮ್ಮ ಸರ್ಕಾರ ಎಂದರು.

ಸಂತೋಷ್‌ ಪಾಟೀಲ್‌ ಅವರ ಸಾವಿಗೆ ಕಾರಣರಾದ ಈಶ್ವರಪ್ಪ ಅವರಿಗೆ ಮೂರೇ ತಿಂಗಳಲ್ಲಿ ಪೊಲೀಸರ ಮೂಲಕ ಬಿ ರಿಪೋರ್ಟ್‌ ಹಾಕಿಸಿದ್ರು. ಹೀಗೆ ಹಲವು ಜನ ಸರ್ಕಾರದ ಲಂಚಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ಈ ಸರ್ಕಾರ ಗುತ್ತಿಗೆದಾರರಿಗೆ ಕೊಡಬೇಕಾದ 25,000 ಕೋಟಿ ಹಣವನ್ನು ಬಾಕಿ ಇಟ್ಟುಕೊಂಡಿದೆ ಎಂಬ ಕಾರಣಕ್ಕೆ ನಿನ್ನೆ ಗುತ್ತಿಗೆದಾರರ ಸಂಘದವರು ಪ್ರತಿಭಟನೆ ಮಾಡಿದ್ರು. ಈ ಸರ್ಕಾರದಲ್ಲಿ ಬರೀ ಲಂಚ, ಲಂಚ, ಲಂಚ ಮಾತ್ರ ಇದೆ. ಇಂಥಾ ಭ್ರಷ್ಟ ಸರ್ಕಾರ ಬೇಕಾ? ಬೇಡ್ವಾ? ಎಂದು ರಾಜ್ಯದ ಜನ ತೀರ್ಮಾನ ಮಾಡಬೇಕು ಎಂದರು.

Leave a Reply