ಅಂದು ಅನ್ನರಾಮಯ್ಯ ಇಂದು ಪ್ರಬುದ್ಧರಾಮಯ್ಯ

2 days ago

ಕರ್ನಾಟಕ ರಾಜ್ಯದ ರಾಜಕೀಯ ಚರಿತ್ರೆಯಲ್ಲಿ ಅಧಿಕಾರ ಹಂಚಿಕೆ ಪ್ರಸಂಗ ಇಷ್ಟೊಂದು ಗೌರವಯುತವಾಗಿ ಮತ್ತು ಪ್ರಬುದ್ಧವಾಗಿ ನಡೆದಿರುವುದು ಇದೇ ಮೊದಲ ಬಾರಿಗೆ. ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆಯ ಮೂಲಕ ಅನ್ನರಾಮಯ್ಯರವರಾಗಿ ಹೆಸರುಗಳಿಸಿದರು. ಅದೇ ರೀತಿಯಲ್ಲಿ ಹೈಕಮಾಂಡ್ ಆದೇಶದಂತೆ ಡಿ ಕೆ ಶಿವಕುಮಾರ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ನಡೆದುಕೊಂಡಂತಹ ರೀತಿ ಅವರ ಪ್ರಬುದ್ಧತೆಯನ್ನು ತೋರಿಸುತ್ತದೆ.

ಬಡವರಾಗಿ ಹುಟ್ಟಿದ ಸಿದ್ದರಾಮಯ್ಯನವರು ತಮ್ಮ ನಡವಳಿಕೆ ಮತ್ತು ಸಂಸ್ಕಾರ ಇವುಗಳ ಮೂಲಕ ಅತ್ಯಂತ ಶ್ರೀಮಂತರಾಗಿ ರಾಜ್ಯದ ಜನರ ಮುಂದೆ ಇಂದು ತಮ್ಮ ಮತ್ತೊಂದು ವ್ಯಕ್ತಿತ್ವವನ್ನ ಪ್ರದರ್ಶಿಸಿದ್ದಾರೆ. ಅಧಿಕಾರ ಎನ್ನುವುದು ಯಾರನ್ನು ಸಹ ಅಷ್ಟು ಸುಲಭವಾಗಿ ಬಿಟ್ಟುಕೊಡಲು ಮನಸ್ಸು ಬರುವುದಿಲ್ಲ. ಆದರೆ ಸಿದ್ದರಾಮಯ್ಯನವರಂತಹ ಪ್ರಬುದ್ಧರು ಮತ್ತು ಅನುಭವಶಾಲಿಗಳು ಹಾಗೂ ವಿಶಾಲ ಮನಸ್ಸಿನವರಿಂದ ಮಾತ್ರ ಇಂತಹ ನಡವಳಿಕೆಗಳು ಕಾಣಲು ಸಾಧ್ಯವಿದೆ.

ತಿಳುವಳಿಕೆಯ ಕೊರತೆ, ಸಿದ್ದರಾಮಯ್ಯನವರ ಸಂಸ್ಕಾರವಂತಿಕೆಯ ಅರಿವು ಇಲ್ಲದ ಅನೇಕರು, ಅನೇಕ ರೀತಿಯಲ್ಲಿ ವ್ಯಾಖ್ಯಾನವನ್ನು ಮಾಡಿ ಸಮಾಧಾನವನ್ನು ಮಾಡಿಕೊಂಡಿದ್ದರು. ಆದರೆ ಸಿದ್ದರಾಮಯ್ಯನವರು ಗೌರವಯುತವಾಗಿ ಪ್ರೀತಿಯಿಂದ ಅಪ್ಪಿಕೊಂಡು ಆಶೀರ್ವಾದವನ್ನು ಮಾಡಿ ಮನಸ್ಸು ತುಂಬಿ ಸಹಕಾರ ನೀಡುವ ಮಾತುಗಳನ್ನಾಡಿ ಯಾವುದೇ ನೋವಿಲ್ಲದೆ, ಬೇಸರವಿಲ್ಲದೆ, ದುಃಖವಿಲ್ಲದೆ ಅಧಿಕಾರವನ್ನು ಬಿಡು ಬಿಟ್ಟುಕೊಡುತ್ತಿದ್ದೇನೆ ಎಂದು ಹೇಳುವುದರ ಮೂಲಕ ಅಧಿಕಾರದಲ್ಲಿ ಕುಳಿತ ಜನ ಅಧಿಕಾರವನ್ನು ಯಾವ ರೀತಿಯಲ್ಲಿ ಎಷ್ಟರಮಟ್ಟಿಗೆ ಮಾತ್ರ ತಲೆಗೆ ಅಂಟಿಸಿಕೊಂಡಿರಬೇಕು ಎನ್ನುವುದಕ್ಕೆ ಇವರ ನಡವಳಿಕೆಯು ಸಾಕ್ಷಿಯಾಗಿದೆ.

ಈ ಹಿಂದೆ ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಬಿಜೆಪಿಯಲ್ಲಿ ನಡೆದಂತಹ ಅನೇಕ ಅನಾಹುತಗಳು, ಸಂಘರ್ಷಗಳು, ಕೋಪ, ಸಿಟ್ಟು ಮತ್ತು ಕಣ್ಣೀರು ಇವುಗಳನ್ನು ಕಂಡಂತಹ ನಾಡಿನ ಜನರಿಗೆ ಸಿದ್ದರಾಮಯ್ಯನವರ ನಡವಳಿಕೆ ಒಂದು ಮಾದರಿಯಾಗಿದೆ.

ಸಿದ್ದರಾಮಯ್ಯನವರು ಅಧಿಕಾರವನ್ನು ನಡೆಸಿ ಜನರ ಮನಸ್ಸನ್ನು ಗೆದ್ದ ವಿಚಾರಕ್ಕಿಂತ ಇಂದು, ತಮ್ಮ ನಡವಳಿಕೆಯ ಮೂಲಕ, ಸಂಸ್ಕೃತಿಯ ಮೂಲಕ ಸಂಸ್ಕಾರವಂತಿಕೆಯ ಮೂಲಕ ರಾಜಕೀಯ ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಬಹಳ ಹೆಚ್ಚಿನ ಗೌರವಕ್ಕೆ ಪಾತ್ರರಾಗಿದ್ದಾರೆ.

ಮುಖ್ಯಮಂತ್ರಿ ಸ್ಥಾನ ಇಲ್ಲದಿದ್ದರೂ ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆಯ ಸದಸ್ಯರಾಗಿ ತಾವು ಮುಂದುವರೆಯಬೇಕಾದದ್ದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು‌. ಈಗಾಗಲೇ ರಾಜ್ಯದ ವಿಧಾನಸಭೆಯಲ್ಲಿ ಈ ಬಾರಿ ಪ್ರಬುದ್ಧರು, ಅನುಭವಶಾಲಿಗಳು, ಸಂಸದೀಯ ಪಟುಗಳ ಕೊರತೆ ಎದ್ದು ಕಾಣುತ್ತಿದೆ. ತಾವು ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ವಿಧಾನಸಭೆಯಲ್ಲಿ ಇದ್ದು ಸರ್ಕಾರಕ್ಕೆ ಮಾರ್ಗದರ್ಶನ ಮಾಡುವುದರ ಜೊತೆಗೆ ನಿಮ್ಮ ಅನುಭವದ ಮಾತುಗಳನ್ನ ಕೇಳುವಂತಹ ಅವಕಾಶವನ್ನು ಎಲ್ಲರಿಗೂ ಕಲ್ಪಿಸಿ ಕೊಡಬೇಕು.

ಗ್ರಾಮೀಣ ಶೈಲಿಯ, ಆಡಂಬರವಿಲ್ಲದ ನಾಟಕೀಯವಲ್ಲದ, ನೇರವಂತಿಕೆಯ, ಹಾಸ್ಯ ಪ್ರಜ್ಞೆಯ ನಿಮ್ಮ ಮಾತುಗಳು ಸದನದಲ್ಲಿ ಎಲ್ಲರಿಗೂ ಪ್ರಿಯವಾಗಿತ್ತು. ಇಂತಹ ಮಾತುಗಳಿಗಾಗಿ ಮತ್ತು ಸಂಸದೀಯ ನಡವಳಿಕೆಯ ಗಂಭೀರ ಚರ್ಚೆಗಳಿಗಾಗಿ ತಾವು ರಾಜ್ಯದ ರಾಜಕಾರಣದಲ್ಲಿ ಇದ್ದು ವಿಧಾನಸಭೆಯಲ್ಲಿ ಮುಂದುವರಿಯಬೇಕಾದದ್ದು ಪ್ರಜಾಪ್ರಭುತ್ವವನ್ನ ಪ್ರೀತಿಸುವ ಎಲ್ಲರ ಅಭಿಪ್ರಾಯವಾಗಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply