ಬೆಂಗಳೂರು: ಯತ್ನಾಳ್ ಹೆಗಲ ಮೇಲೆ ಬಂದೂಕು, ಯಡಿಯೂರಪ್ಪನವರತ್ತ ಗುರಿ; ಇದು #BSYmuktaBJP ಸಮರದ ಚಿತ್ರಣ ಎಂದು ಕೆಪಿಸಿಸಿ ದೂರಿದೆ.
ನಿನ್ನೆ ಸದನದಲ್ಲಿ ಬಸನಗೌಡ ಪಾಟೀಲ ಯತ್ನಾಳ್, ಪಂಚಮಸಾಲಿ ಮೀಸಲಾತಿ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ, BS Yediyurappa ಮುಕ್ತ ಬಿಜೆಪಿ ಮಾಡಲು ಬಿಜೆಪಿಯೊಳಗೆ ದೊಡ್ಡ ಸಮರವೇ ನಡೆಯುತ್ತಿದೆ. ಇದರ ಮುಖವಾಣಿಯಾಗಿ ನಿಂತಿರೋದು ಶಾಸಕ ಬಸನಗೌಡ ಯತ್ನಾಳ್ ಅವರು ಎಂದಿದೆ.
ಮುಖ್ಯಮಂತ್ರಿ ಮತ್ತವರ ಕುಟುಂಬ ಸದಸ್ಯರು ಹಾಗೂ ಸರ್ಕಾರದ ವಿರುದ್ಧ ಹಾದಿಬೀದಿಯಲ್ಲಿ ಹೀನಾಮಾನ ಬೈಯ್ಯುತ್ತಿದ್ದಾರೆ. ಭ್ರಷ್ಟಾಚಾರ, ಸಿಡಿಯಂತಹ ಗಂಭೀರ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆಯೂ ಇಲ್ಲ, ಯತ್ನಾಳ್ ಅವರ ವಿರುದ್ಧ ಕ್ರಮವೂ ಇಲ್ಲ ಎಂದು ಹೇಳಿದೆ.
ಮುಖಸ್ತುತಿಗೆ ಬಸನಗೌಡ ಯತ್ನಾಳ್ ಅವರಿಗೆ ಶೋಕಾಸ್ ನೋಟೀಸ್ ಕೊಡಲಾಗಿದೆ ಅಷ್ಟೇ. ಅದಕ್ಕೆ ಕಿಂಚಿತ್ತೂ ಪರಿಣಾಮವಿಲ್ಲ ಎಂಬುದುನ್ನು ರಾಜ್ಯದ ಜನ ಕಣ್ಣಾರೆ ನೋಡುತ್ತಿದ್ದಾರೆ. ಇದು ಸರ್ಕಾರಕಷ್ಟೇ ಅಲ್ಲ, ಇಡೀ ಪಕ್ಷಕ್ಕೆ ಮುಖಭಂಗವಾಗುತ್ತಿದ್ದರೂ ಬಸನಗೌಡ ಅವರ ಬಾಯಿಗೆ ಬೀಗ ಹಾಕಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಬಿಜೆಪಿಯಲ್ಲಿ ಒಳಗೊಳಗೆ ಯಡಿಯೂರಪ್ಪ ಅವರ ವಿರುದ್ಧ ಸಮರ ಸಾರಿರುವುದನ್ನು ಸ್ಪಷ್ಟಪಡಿಸುತ್ತಿದೆ ಎಂದಿದೆ.
ಸ್ಟ್ಯಾಂಡಪ್ ಕಮೀಡಿಯನ್ Nalin Kumar Kateel ಅವರು ರಾಜ್ಯಾಧ್ಯಕ್ಷರಾಗಿರುವುದು BJP Karnataka ದ ಈ ದುಸ್ಥಿತಿಗೆ ಕಾರಣವಾಗಿದೆ ಎಂಬುದು ಭಕ್ತ ಸಮೂಹದಲ್ಲಿ ಆಂತರಿಕವಾಗಿ ನಡೆಯುತ್ತಿರೋ ಚರ್ಚೆ ಎಂದು ಕುಹಕವಾಡಿದೆ.
ಸದ್ಯ ಬಿಜೆಪಿ ಒಡೆದ ಗಾಜಿನಂತಾಗಿದ್ದು, ಒಂದುಗೂಡುವುದು ಅಸಾಧ್ಯ ಎನ್ನುವ ಸ್ಥಿತಿ ತಲುಪಿದೆ. ಇನ್ನು ಬೇರೆ ರಾಜ್ಯಗಳ ಚುನಾವಣೆಯಲ್ಲಿ ಕಳೆದುಹೋಗಿರುವ Narendra Modi ಅವರಾಗಲಿ, Amit Shah ಅವರಾಗಲಿ J.P.Nadda ಅವರಾಗಲಿ, ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುವವರೆಗೂ ನಮ್ಮ ರಾಜ್ಯದ ಕಡೆ ಮೆಳ್ಳಗಣ್ಣಿನಲ್ಲೂ ನೋಡುವ ಲಕ್ಷಣಗಳಿಲ್ಲ ಎಂದಿದೆ.
ಸಿಡಿ ವ್ಯವಹಾರ ಹಾಗೂ ಬಿಎಸ್ ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡುವಲ್ಲಿ ಸಂಪೂರ್ಣವಾಗಿ ತಲ್ಲೀನವಾಗಿರುವ ಬಿಜೆಪಿ ರಾಜ್ಯದ ಜನರನ್ನು ಸಂಪೂರ್ಣವಾಗಿ ಮರೆತಿದ್ದು, ಅಪ್ಪ- ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತಾಗಿದೆ ರಾಜ್ಯದ ಸ್ಥಿತಿ. ಬಿಜೆಪಿಯ ಬಂಡ ಬಾಳು, ನವರಂಗಿ ಆಟ ನೋಡುತ್ತಿರುವ ಮತದಾರರು ಇವರಿಗೆ ಮತ ಹಾಕಿ ತಪ್ಪು ಮಾಡಿದೆವು ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದಿದೆ.




