Silence is not always a silence in politics…. ವಿಜಯೇಂದ್ರ ಟೀಮಿಗೆ ಇದನ್ನು ಅರ್ಥ ಮಾಡಿಸಲು ಯತ್ನಾಳ್ ಬಣ ಹೊಸ ಗೇಮ್‌ಪ್ಲ್ಯಾನ್ ರಚಿಸಿದಂತಿದೆ. ಯತ್ನಾಳ್‌ರನ್ನು ಬಿಜೆಪಿಯಿಂದ ಉಚ್ಛಾಟಿಸಿ ನಿಟ್ಟುಸಿರು ಬಿಟ್ಟು ಯಾತ್ರೆ ಹೊರಟಿರುವ ವಿಜಯೇಂದ್ರ ಹೌಹಾರುವಂತಹ ವಿದ್ಯಮಾನವೊಂದು ಬೆಂಗಳೂರಿನಲ್ಲಿ ನಡೆದಿದೆ. ಉಚ್ಚಾಟನೆಯ ನಂತರ ಯತ್ನಾಳ್ ಬಣದ ಸದಸ್ಯರು ಗಪ್‌ಚುಪ್ ಆದಂತೆ ಕಂಡುಬಂದಿದ್ದರೆ, ವಿಜಯೇಂದ್ರ ತನ್ನ ತಂದೆಯ ನಾಮಬಲದಿಂದಾಗಿ ಮೇಲುಗೈ ಸಾಧಿಸಿದಂತೆ ಭಾಸವಾಗಿತ್ತು. ಯತ್ನಾಳ್ ಸ್ನೇಹಿತರು ಕೂಡಾ ಯತ್ನಾಳ್‌ರಿಂದ ತುಸು ಅಂತರ ಕಾಯ್ದುಕೊಂಡಂತೆ ವರ್ತಿಸುತ್ತಿದ್ದರು. ಆದರೆ ಶತಾಯಗತಾಯ ವಿಜಯೇಂದ್ರನಿಗೆ ಅಡ್ಡಗಾಲು ಹಾಕಿಯೇ ತೀರಬೇಕೆಂದು ನಿರ್ಧರಿಸಿರುವ ಯತ್ನಾಳ್ ಬಣದ ಸದಸ್ಯರು ಒಳಗೊಳಗೇ ಖೆಡ್ಡಾ ತೋಡಲು ಮುಂದಾಗಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇಡೀ ರಾಜ್ಯ ಜಾತಿಗಣತಿಯ ಬಿಸಿ ಚರ್ಚೆಯಲ್ಲಿ ಮುಳುಗಿರುವ ವೇಳೆಯಲ್ಲೆ, ನಿನ್ನೆ ರಾತ್ರಿ ಯತ್ನಾಳ್ ಬಣದ ಜಿ ಎಂ ಸಿದ್ದೇಶ್ವರ್, ಬಿ ಪಿ ಹರೀಶ್ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ರನ್ನು ಭೇಟಿಯಾಗಿ ಚರ್ಚೆ ನಡೆಸಿರೋದು ಈಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಯತ್ನಾಳ್ ಉಚ್ಚಾಟನೆಯ ನಂತರ ಅವರ ಬಣದ ಮುಂದೆ ಮೂರು ಆಯ್ಕೆಗಳಿದ್ದವು. ಮೊದಲನೆಯದ್ದು, ಬಿಜೆಪಿ ಹೈಕಮಾಂಡ್ ಮೇಲೆ ಬಣದ ಸದಸ್ಯರು ಒತ್ತಡ ತಂದು, ಉಚ್ಛಾಟನೆಯ ಕ್ರಮವನ್ನು ರದ್ದು ಮಾಡಿಸಿ, ಯತ್ನಾಳ್‌ರನ್ನು ವಾಪಾಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದು. ಸದ್ಯಕ್ಕಂತೂ ಇದರ ಸಾಧ್ಯತೆ ಕ್ಷೀಣ. ಯಾಕೆಂದರೆ, ಯಾವ ಕಾರಣಕ್ಕಾಗಿ ಯತ್ನಾಳ್‌ರನ್ನು ಉಚ್ಛಾಟನೆ ಮಾಡಲಾಗಿತ್ತೊ, ಅದರಲ್ಲಿ ಯಾವ ರಾಜಿಗೂ ಯತ್ನಾಳ್ ಸಿದ್ದರಾದಂತೆ ತೋರುತ್ತಿಲ್ಲ. ವಿಜಯೇಂದ್ರ ಮೇಲೆ ತಮ್ಮ ದಾಳಿಯನ್ನು ಮತ್ತಷ್ಟು ತೀಕ್ಷ್ಣವಾಗಿಸಿದ್ದಾರೆ. ಯತ್ನಾಳ್‌ರನ್ನು ವಾಪಾಸ್ ಸೇರಿಸಿಕೊಂಡರೂ, ಈ ಸಮರ ಮತ್ತೆ ಮುಂದುವರೆಯುವ ಸಾಧ್ಯತೆ ಸ್ಪಷ್ಟವಾಗಿದ್ದು, ಬಿಜೆಪಿ ಹೈಕಮಾಂಡ್ ಅಂತಹ ತಪ್ಪು ಮಾಡಲಾರದು.
ಇನ್ನು ಎರಡನೆಯ ಆಯ್ಕೆ, ಸ್ವಂತ ಪ್ರಾದೇಶಿಕ ಪಕ್ಷ ಸ್ಥಾಪಿಸುವುದು. ಇದು ಕೂಡಾ ಯತ್ನಾಳ್ ಬಣಕ್ಕೆ ಸುಲಭವಿಲ್ಲ. ಪ್ರಾದೇಶಿಕ ಪಕ್ಷ ಸ್ಥಾಪಿಸುವ ಈ ಹಿಂದಿನ ಯತ್ನಗಳು ಕರ್ನಾಟಕದಲ್ಲಿ ಅಷ್ಟೇನು ಫಲಪ್ರದವಾಗಿಲ್ಲ. ಬಂಗಾರಪ್ಪ, ಯಡಿಯೂರಪ್ಪ, ರಾಮುಲು, ಜನಾರ್ಧನ ರೆಡ್ಡಿ ಇಂತಹ ಯತ್ನಗಳಲ್ಲಿ ಮುಗ್ಗರಿಸಿದ ಉದಾಹರಣೆಗಳಿವೆ. ಅಲ್ಲದೇ, ಇವರೆಲ್ಲರಿಗಿದ್ದ ಹಣಬಲವಾಗಲಿ ಅಥವಾ ಜನಬೆಂಬಲವಾಗಲಿ ಯತ್ನಾಳ್‌ಗೆ ಮತ್ತು ಆ ಬಣದ ಯಾವೊಬ್ಬ ಸದಸ್ಯರಿಗೂ ಇಲ್ಲ. ಜನರ ಒತ್ತಡ ಬಂದ್ರೆ, ಸ್ವಂತ ಪಕ್ಷ ಕಟ್ಟುವ ಬಗ್ಗೆ ಯೋಚಿಸ್ತೀನಿ ಎಂದು ಯತ್ನಾಳ್ ಹೇಳಿದ್ದರಾದರೂ, ಅದು ವಿಜಯೇಂದ್ರ ಮತ್ತು ಬಿಜೆಪಿಯನ್ನು ಬೆದರಿಸುವ ತಂತ್ರವೇ ಹೊರತು ಗೇಮ್‌ಪ್ಲ್ಯಾನ್ ಅಲ್ಲ.
ಕೊನೆಯದಾಗಿ ಯತ್ನಾಳ್ ಬಣದ ಮುಂದೆ ಉಳಿಯುವ ಮೂರನೇ ಆಯ್ಕೆ, ಬೇರೊಂದು ಪಕ್ಷವನ್ನು ಸೇರಿ, ವಿಜಯೇಂದ್ರ ಮತ್ತು ಬಿಜೆಪಿಯ ಗೆಲುವಿಗೆ ಅಡ್ಡಗಾಲು ಹಾಕಿ ಸೇಡು ತೀರಿಸಿಕೊಳ್ಳುವುದು. ಈ ಆಯ್ಕೆಯೇ ಅವರಿಗೆ ಹೆಚ್ಚು ಪ್ರಸ್ತುತ. ಈ ದಾರಿಯಲ್ಲಿ ಸಾಗಲು ಮುಂದಾದರೆ, ಕರ್ನಾಟಕದ ಮಟ್ಟಿಗೆ ಯತ್ನಾಳ್ ಬಣದ ಮುಂದೆ ಪ್ರಧಾನವಾಗಿ ಎರಡು ಆಯ್ಕೆಗಳಿವೆ. ಒಂದು ಜೆಡಿಎಸ್, ಮತ್ತೊಂದು ಕಾಂಗ್ರೆಸ್! ಜೆಡಿಎಸ್ ಪಕ್ಷ ಯತ್ನಾಳ್‌ಗೆ ಹೊಸದೇನೂ ಅಲ್ಲ. ಹಿಂದೊಮ್ಮೆ ಜೆಡಿಎಸ್ ಪಕ್ಷದಲ್ಲಿದ್ದು ಹೊರಬಂದವರು. ಆದರೆ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ, ಜೆಡಿಎಸ್ ಪಾರ್ಟಿಯು ಬಿಜೆಪಿ ಜೊತೆ ಮೈತ್ರಿಯಲ್ಲಿದೆ. ಮೈತ್ರಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದೆನ್ನುವ ಕಾರಣಕ್ಕೆ, ಬಿಜೆಪಿಯಿಂದ ಸಿಡಿದುಬಂದ ಯತ್ನಾಳ್ ಬಣವನ್ನು ಸೇರಿಸಿಕೊಳ್ಳಲು ಜೆಡಿಎಸ್ ಒಪ್ಪುವ ಸಾಧ್ಯತೆ ಕಡಿಮೆ. ಅದಕ್ಕಿಂತ ಮುಖ್ಯವಾಗಿ, ಜೆಡಿಎಸ್ ಸೇರಿಕೊಂಡರೆ ಒನ್ಸ್ ಎಗೇನ್ ವಿಜಯೇಂದ್ರ ಅಡಿಯಲ್ಲೆ ಕೆಲಸ ಮಾಡಿದಂತಾಗುತ್ತೆ ಎನ್ನುವ ಕಾರಣಕ್ಕೆ ಯತ್ನಾಳ್ ಬಣ ಕೂಡಾ ಈ ಆಯ್ಕೆಯನ್ನು ಆಯ್ದುಕೊಳ್ಳುವ ಸಾಧ್ಯತೆಯಿಲ್ಲ. ಸದ್ಯಕ್ಕಂತೂ ವಿಜಯೇಂದ್ರನಿಗೆ ಹಿನ್ನಡೆ ಉಂಟುಮಾಡಿ ಸೇಡು ತೀರಿಸಿಕೊಳ್ಳುವುದೇ ಈ ಬಣದ ಏಕಮೇವ ಗುರಿ.
ಈ ಆಯಾಮದಿಂದ ನೋಡಿದಾಗ, ಬಣಕ್ಕೆ ಉಳಿದ ಆಯ್ಕೆ ಕಾಂಗ್ರೆಸ್ ಮಾತ್ರ. ಉಗ್ರ ಹಿಂದೂತ್ವದ ಯತ್ನಾಳ್ ಸಿದ್ದಾಂತಕ್ಕೆ ಕಾಂಗ್ರೆಸ್ ಪಕ್ಷ ಆಗಿಬರೋದಿಲ್ಲ ಎನ್ನುವುದು ಸತ್ಯವಾದರೂ, ರಾಜಕಾರಣದಲ್ಲಿ ಸಿದ್ದಾಂತ ಎನ್ನುವುದೆಲ್ಲ ಅವಕಾಶವಾದದ ಮುಂದೆ ಸಪ್ಪೆ ಎನ್ನುವುದು ಸಾಬೀತಾಗಿ ಯಾವ ಕಾಲವೇ ಆಗಿಹೋಗಿದೆ. ಅಷ್ಟಕ್ಕೂ ಯತ್ನಾಳ್ ಜೊತೆ ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಗುಡ್‌ವಿಲ್ ಒಡನಾಟ ಹೊಂದಿದ್ದಾರೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೂ ತಾನು ಭವಿಷ್ಯದಲ್ಲಿ ಸಿಎಂ ಹುದ್ದೆಗೇರಬೇಕೆಂದರೆ ಪಕ್ಷವನ್ನು ಮತ್ತಷ್ಟು ಬಲಪಡಿಸಿ, ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆನ್ನುವ ತುಡಿತವಿದೆ. ಹಾಗಾಗಿ, ಯತ್ನಾಳ್ ಬಣವನ್ನು ಅವರು ಸ್ವಾಗತಿಸುವ ಸಾಧ್ಯತೆಯೂ ಉಂಟು. ವಿಜಯೇಂದ್ರ ಮೇಲಿನ ಸೇಡಿಗೆ ಹೋಲಿಸಿದರೆ ಐಡಿಯಾಲಜಿಕಲಿ ರಾಜಿಯಾಗುವುದು ಯತ್ನಾಳ್ ಬಣಕ್ಕೂ ಕಷ್ಟವೇನಲ್ಲ. ಅಷ್ಟಕ್ಕೂ ಈ ಹಿಂದೆ ಜೆಡಿಎಸ್ ಸೇರಿದ್ದಾಗ ಸೆಕ್ಯುಲರ್ ರೂಪದಲ್ಲಿ ಅವತರಿಸಿದ್ದ ಅನುಭವವೂ ಯತ್ನಾಳ್ ಅವರಿಗಿದೆ. ಜೊತೆಗೆ, ಕೌಂಟರ್-ಹಿಂದೂತ್ವದ ಮೂಲಕ ಬಿಜೆಪಿಯನ್ನು ಮಣಿಸಬಹುದೆನ್ನುವ ಲೆಕ್ಕಾಚಾರದಲ್ಲಿರುವ ಡಿ.ಕೆ. ಕೂಡಾ ಕುಂಭಮೇಳದಲ್ಲಿ ಮಿಂದೆದ್ದು, ಟೆಂಪಲ್ ರನ್ ಮಾಡುತ್ತಾ ನಮಗೂ ಕೂಡಾ ಹಿಂದೂ ರಾಜಕಾರಣ ಮಾಡಲು ಬರುತ್ತೆ ಎಂಬ ಮೆಸೇಜು ರವಾನಿಸುವ ಪ್ರಯೋಗದಲ್ಲಿದ್ದಾರೆ. ಯತ್ನಾಳ್ ಬಣವನ್ನು ಪಕ್ಷಕ್ಕೆ ಸೇರಿಸಿಕೊಂಡರೆ ತನ್ನ ಆ ಪ್ರಯೋಗಕ್ಕೆ ಮತ್ತಷ್ಟು ಬಲ ಬರುವುದೆಂದು ಡಿ.ಕೆ ಕೂಡಾ ಸಮ್ಮತಿಸಬಹುದು.
ಹಾಗಾದರೆ, ಯತ್ನಾಳ್ ಬಣ ಬಿಜೆಪಿಯಿಂದ ಸಿಡಿದು ಹೊರಬಂದು ಸಾಮೂಹಿಕವಾಗಿ ಕಾಂಗ್ರೆಸ್ ಸೇರಲಿದೆಯೇ? ಆ ಬಗ್ಗೆ ಡಿಕೆ ಮತ್ತು ಸಿದ್ದೇಶ್ವರ್-ಹರೀಶ್ ಭೇಟಿಯಲ್ಲಿ ಈ ಕುರಿತೇ ಚರ್ಚಿಸಲಾಗಿದೆಯೇ? ಇದರಿಂದ ಕಾಂಗ್ರೆಸ್‌ಗೆ ಎಷ್ಟು ಲಾಭವಾಗಲಿದೆ, ಬಿಜೆಪಿಗೆ ಎಷ್ಟು ಲುಕ್ಸಾನಾಗಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಈಗಲೇ ಉತ್ತರ ಹೇಳಲು ಸಾಧ್ಯವಿಲ್ಲ. ಆದರೆ ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು ಮತ್ತು ಸೇಡಿನ ಪ್ರತೀಕಾರ ಎಂತಹ ನಿರ್ಧಾರಕ್ಕಾದರೂ ಪ್ರೇರೇಪಿಸಬಹುದು ಅನ್ನೋದನ್ನು ಮರೆಯಬಾರದು. ಈ ಹಿಂದೆ ಜಗದೀಶ್ ಶೆಟ್ಟರ್ ಇಂತಹುದೇ ಪ್ರತೀಕಾರದಿಂದ ಕಾಂಗ್ರೆಸ್ ಸೇರಿದ್ದು ನೆನಪಿರಬಹುದು. ಬಹಳ ಕಾಲ ಅವರು ಕಾಂಗ್ರೆಸಿನಲ್ಲಿ ಉಳಿಯದೆ ಹೋದರೂ, 2023ರ ಚುನಾವಣೆಯಲ್ಲಿ ಅದರಿಂದ ಕಾಂಗ್ರೆಸಿಗೆ ಸ್ವಲ್ಪಮಟ್ಟಿಗೆ ಲಾಭವಾಗಿದ್ದನ್ನು ತಳ್ಳಿಹಾಕಲಾಗುವುದಿಲ್ಲ. ಬಿಜೆಪಿಯ ಹೀನಾಯ ಸೋಲಿನಲ್ಲಿ ಅದು ಕೂಡಾ ಒಂದು ಫ್ಯಾಕ್ಟರ್. ಒಂದಂತೂ ಸತ್ಯ, ವಿಜಯೇಂದ್ರನಿಗೆ ಕವಿದಿರುವ ಕತ್ತಲು ಇನ್ನೂ ದೂರವಾಗಿಲ್ಲ. ಒಂದೊಮ್ಮೆ ಯತ್ನಾಳ್ ಬಣ ಕಾಂಗ್ರೆಸ್ ಸೇರಿದ್ದೇ ಆದಲ್ಲಿ, ಕಾಂಗ್ರೆಸ್‌ನ ಸೆಕ್ಯುಲರ್ ಐಡಿಯಾಲಜಿ ಬಗ್ಗೆ ಒಂದಷ್ಟು ಅಸಮಾಧಾನದ ಪ್ರಶ್ನೆಗಳು ಚಿಗುರಬಹುದಾದರೂ, ಪೊಲಿಟಿಕಲಿ ಬಿಜೆಪಿ ಮತ್ತು ವಿಜಯೇಂದ್ರನಿಗೆ ದೊಡ್ಡ ಹಿನ್ನಡೆಯಾಗಲಿದೆ. ಕಾದುನೋಡಬೇಕು…
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




