“ಹೊಲೆಮಾರಿ” ಹಾಗೆಂದರೇನು?

2 years ago

ಊರಮಾರಮ್ಮನ ಪರಿಷೆಯಲ್ಲಿ ಮಾರಿ ದೇವತೆಗೆ ತಳಾರನು ಪಟ್ಟದ ಕೋಣವನ್ನು ಬಲಿ ಹೊಡೆದ ಬಳಿಕ, ನೆತ್ತರು ಸೋರುವ ಕಟುಗತ್ತಿಯನ್ನು ತನ್ನ ಎರಡೂ ಕೈಗಳಿಂದ ಮೇಲಕ್ಕೆತ್ತಿ ಹಿಡಿದುಕೊಂಡು, ‘ಕೋ ಬಲಿ’ ‘ಕೋ ರಣಬಲಿ’ ಎಂದು ಕೂಗುತ್ತಾ, ಊರಿನ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಓಟ ಓಡಿಹೋಗುತ್ತಾನೆ. ಕೋಣದ ನೆತ್ತರು, ಜಠರದ ಕಲೀಜ ಕಸರದಲ್ಲಿ ಮತ್ತು ಮೊಸರಿನಲ್ಲಿ ದೇವರ ಎಡೆಯನ್ನವನ್ನು ಮಡಕೆಯಲ್ಲಿ ಕಲೆಸಿಕೊಂಡು ಕೋರುಮಗನು (ತೋಟಿ) ಊರಿನ “ಹೊಲಮೇರೆ” ಸುತ್ತಲೂ ಮೂರು ಸುತ್ತು ಚರಗ ಚೆಲ್ಲಬೇಕು. ಆಗ ಕೋರುಮಗನ ಮೈಮೇಲೆ ಸೊಂಟದ ಉಡುದಾರಕ್ಕೆ ಸಿಕ್ಕಿಸಿದ ಲಂಗೋಟಿ ಹೊರತಾಗಿ ಯಾವುದೇ ವಸ್ತ್ರ ಇರುವುದಿಲ್ಲ. ಊರಿನ ಸುತ್ತಲ ಹೊರ ಅಂಚನ್ನು “ಹೊಲಮೇರೆ” (ಊರಿನ ಸರಹದ್ದು) ಎಂದು ಕರೆಯುತ್ತಾರೆ.

ಕಟುಗತ್ತಿ ಹಿಡಿದ ತಳಾರ ಮತ್ತು ಚರಗ ಚೆಲ್ಲುವ ಕೋರುಮಗನ (ತೋಟಿ) ಹಿಂದೆ ಗ್ರಾಮದ ಕಟ್ಟಾಳು ಗಂಡಸರು, ‘ಕೋ ಬಲಿ’ ‘ಕೋ ರಣಬಲಿ’ ಎಂದು ಕೇಕೆ ಹಾಕುತ್ತಾ ಓಡುತ್ತಾರೆ. ತಮಟೆ ನಗಾರಿ ಭೇರಿ ಮುಂತಾದ ವಾದ್ಯಗಳನ್ನು ನುಡಿಸುತ್ತಾ ಕಾಕು ಹಾಕುತ್ತಾ ಜನ ಹಿಂಬಾಲಿಸುತ್ತಾರೆ. ಊರಿನ ಸುತ್ತಲೂ ಮರಳೆರಚಿದಂತೆ ಇಟ್ಟಾಡಿಕೊಂಡು ಚರಗದ ಅನ್ನವನ್ನು ಎರಚಬೇಕು. ಹಾವು ಹಲ್ಲಿ ಕೂಡಾ ಊರಿನೊಳಕ್ಕೆ ನುಸುಳದಂತೆ, ಊರಂಚಿನ ಮನೆಗಳ ಗೋಡೆಗಳಿಗೆ ಹೊಂದಿಕೊಂಡ boundary line-ನ ಭೂಮಿಯ ಇಂಚಿಂಚೂ ನೆಲದ ಮೇಲೆ ಚರಗದ ಅನ್ನದ ಅಗುಳುಗಳು ಚೆಲ್ಲಾಡಿರಬೇಕು. ಹೊಲಮೇರೆಯ ಅಂಚಿನಲ್ಲಿರುವ ಮನೆಗಳ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಬಸುರಿ ಬಾಣ್ತಿ ಮಕ್ಕಳು ಮುಪ್ಪಾದವರು ಮತ್ತು ಕೈಲಾಗದವರು ಮನೆಯೊಳಗಿರಬೇಕೇ ಹೊರತು ನರಪಿಳ್ಳೆ ಮನೆಯಾಚೆಗೆ ಬರುವಂತಿಲ್ಲ. ಇನ್ನುಳಿದ ಜನ ಮಾರಿಗುಡಿಯ ಮುಂದ್ಲಾರದಲ್ಲಿ ಇರಬೇಕೇ ಹೊರತು ಎತ್ತಲೂ ಸುತ್ತಮುತ್ತಲು ಸುಳಿಯಕೂಡದು. ಇದು ನಿಯಮ.

ಹೀಗೆ ಊರಿನ ಹೊಲಮೇರೆ ಸುತ್ತಲೂ ಮೂರು ಸುತ್ತು ಚರಗ ಚೆಲ್ಲಿದ ನಂತರ, ಮಾರಿದೇವತೆಗೆ ಬಲಿಯಾದ ಪಟ್ಟದ ಕೋಣದ ನೆತ್ತರು, ಎಡೆಯನ್ನ, ಅಕ್ಕಸಾಲಿಗ ತಿದ್ದಿಕೊಟ್ಟ ಕೋಣಸಹಿತವಾದ ಮಾರಿಯ ಗೊಂಬೆಯನ್ನು (ಪ್ರತಿಕೃತಿ) ಹೊಸಮೊರ ಅಥವಾ ಹೊಸ ಹೆಡಿಗೆಯಲ್ಲಿರಿಸಿ ಊರಾಚೆಯ ಗಡಿಬಾಂದಿನ ಬೇಲಿಯ ಅಥವಾ ಪೊದೆಯ ಮರೆಯಲ್ಲಿರಿಸಬೇಕು. ಇದನ್ನು ಹೊಲಮೇರೆಯಾಚೆಗೆ ಮಾರಿಯನ್ನು ಸಾಗ್ಹಾಕುವುದು (ಕಳಿಸಿಕೊಡುವುದು) ಎನ್ನುತ್ತಾರೆ.

ಹೀಗೆ ಸಾಗಹಾಕಿದ ಮಾರಿಯ ಸಂಕೇತಗಳನ್ನು ಬೇರೆ ಊರಿನ ಯಾರಾದರೂ ಮೀಸೆಮಿಂಡಾಳುಗಳು ಬಂದು ತಮ್ಮ ಊರಿಗೆ ಹೊತ್ತೊಯ್ದರೆ, ಹಾಗೆ ಹೊತ್ತೊಯ್ದ ಊರಿಗೆ ಸಿರಿ ಬರುತ್ತದೆಂದೂ ಮಾರಿಜಾತ್ರೆ ನಡೆಸಿದ ಊರಿನವರಿಗೆ ಕೇಡು ಸಂಭವಿಸುವುದೆಂದೂ ಗ್ರಾಮೀಣ ಜನರಲ್ಲಿ ನಂಬಿಕೆ ಇದೆ. ಆದುದರಿಂದಲೇ ಜಾತ್ರೆ ನಡೆಸಿದ ಊರಿನವರು, ಪರ ಊರಿನ ಯಾರೊಬ್ಬರೂ ಮಾರಿದೇವತೆಯ ಸಂಕೇತಗಳನ್ನು ಹೊತ್ತೊಯ್ಯದಂತೆ ರಕ್ಷಿಸಲು ಹೊಲಮೇರೆಯಾಚೆ ಆಯುಧಗಳನ್ನು ಹಿಡಿದು ಬೆಳಕಾಗುವವರೆಗೂ ಕಣ್ಗಾವಲಿದ್ದು ಕಾಯುತ್ತಾರೆ. ಬೇರೆ ಊರಿನ ಗುಂಡಿಗೆ ಇರುವ ಗಂಡಸರು ಬಂದು ಹೊತ್ತೊಯ್ಯಲೂಬಹುದು. ಕೋಣದ ಬಲಿಯ ಪದ್ಧತಿಯನ್ನು ಅನುಸರಿಸುವ ಯಾವುದೇ ಶಕ್ತಿದೇವತೆಯ ಜಾತ್ರೆಯಲ್ಲಿ “ಹೊಲಮೇರೆ” ಚರಗ ಚೆಲ್ಲುವ ಅಥವಾ ಸರಗು ಹಾಕುವ ಸಂಪ್ರದಾಯ ನಮ್ಮ ಕೊರಟಗೆರೆ- ಮಧುಗಿರಿ ಸೀಮೆಯಲ್ಲಿ ಆಚರಣೆಯಲ್ಲಿತ್ತು.

ಚರಗ ಚೆಲ್ಲುವ (ಸರಗು ಹಾಕುವ) ಮತ್ತು ಮಾರಿದೇವತೆಯ ಪ್ರತಿಕೃತಿಯನ್ನು ಊರಾಚೆಗೆ ಸಾಗುಹಾಕುವ ಈ ಆಚರಣೆಯನ್ನು “ಕಾಟೇರ” ಸಿನಿಮಾದಲ್ಲಿ “ಹೊಲೆಮಾರಿ” ಎಂದು ಹೇಳಲಾಗಿದೆ.

  • ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು

Leave a Reply