ಬೆಂಗಳೂರು: ಪಕ್ಷದ ನಾಯಕತ್ವದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದ ಬೆನ್ನಲ್ಲೇ ಎಲ್ಲ ಭಿನ್ನಮತೀಯ ನಾಯಕರು ಅವರ ಬೆಂಬಲಕ್ಕೆ ಧಾವಿಸಿದ್ದಾರೆ.
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
ಉಚ್ಚಾಟನೆ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿರುವ ಈ ನಾಯಕರು ಇದೀಗ ತಮ್ಮ ಮುಂದಿನ ಹೋರಾಟದ ಕುರಿತು ತೀರ್ಮಾನಿಸಲು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ಸೇರಲು ತೀರ್ಮಾನಿಸಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಹೊಂದಾಣಿಕೆಯ ರಾಜಕಾರಣ ಮತ್ತು ವಂಶಪಾರಂಪರ್ಯ ಆಡಳಿತದ ಬಗ್ಗೆ ಧ್ವನಿ ಎತ್ತಿದ ಕಾರಣಕ್ಕಾಗಿ ಯತ್ನಾಳ್ ಅವರನ್ನು ಪಕ್ಷದಿಂದ ಹೊರ ಹಾಕಿರುವ ಕ್ರಮ ಸರಿಯಾದ ನಿರ್ಧಾರ ಅಲ್ಲ ಎಂದು ಅಭಿಪ್ರಾಯಪಟ್ಟಿರುವ ಈ ಎಲ್ಲ ನಾಯಕರು ವರಿಷ್ಠರನ್ನು ಭೇಟಿ ಮಾಡಿ ಉಚ್ಛಾಟನೆ ಆದೇಶ ವಾಪಸ್ ಪಡೆಯುವಂತೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಹೈಕಮಾಂಡ್ ಮತ್ತು ಸಂಘ ಪರಿವಾರ ನಾಯಕರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಕುರಿತು ಯಾವ ರೀತಿಯ ಹೋರಾಟ ನಡೆಸಬೇಕು ಎಂಬ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.
ಈ ನಡುವೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರ ಹಾಕಿರುವ ಕ್ರಮಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಹಿರಿಯ ನಾಯಕ ಜಗದೀಶ್ ಶೆಟ್ಟರ್, ಬಿ ಶ್ರೀರಾಮುಲು, ಸಿ ಟಿ ರವಿ ಸೇರಿದಂತೆ ಹಲವರು ಇದೊಂದು ದುರದೃಷ್ಟಕರ ವಿದ್ಯಾಮಾನ ಎಂದಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಸೇರಿದ ಯತ್ನಾಳ್ ಅವರು ಉತ್ತರ ಕರ್ನಾಟಕದ ಪ್ರಭಾವಿ ನಾಯಕ ರಾಗಿದ್ದಾರೆ. ಅವರನ್ನು ಪಕ್ಷದಿಂದ ಹೊರ ಹಾಕಿರುವ ಕ್ರಮ ಹಲವರಿಗೆ ಬೇಸರ ತಂದಿದ್ದು ಹೈಕಮಾಂಡ್ ಇದನ್ನು ಮರುಪರಿಶೀಲಿಸಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿರುವ ಬಿ ಶ್ರೀರಾಮುಲು, ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕನನ್ನು ಶಿಸ್ತು ಕ್ರಮದ ಹೆಸರಿನಲ್ಲಿ ಪಕ್ಷದಿಂದ ಹೊರ ಹಾಕಿರುವ ನಿರ್ಧಾರ ಸರಿಯಲ್ಲ ಎಂದರು.
ಹೈಕಮಾಂಡ್ ನಾಯಕರು ಯತ್ನಾಳ್ ಅವರನ್ನು ಕರೆದು ಮಾತುಕತೆ ನಡೆಸಿ ಎಲ್ಲವನ್ನು ಬಗೆಹರಿಸಬಹುದಿತ್ತು. ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಮೂಲಕ ಸಂಘಟಿತವಾಗಿ ಎಲ್ಲರೂ ಒಟ್ಟಾಗಿ ಪಕ್ಷ ಕಟ್ಟುವಂತೆ ಸಲಹೆ ಮಾಡಬೇಕಿತ್ತು ಎಂದರು.
ಈ ಹಿಂದೆ ಕಾಂಗ್ರೆಸ್ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಪಕ್ಷವಾಗಿತ್ತು. ಮಾಜಿ ಸಿಎಂ ವೀರೇಂದ್ರ ಪಾಟೀಲ್ ಅವರ ನಂತರದಲ್ಲಿ ಈ ಸಮುದಾಯವನ್ನು ತನ್ನತ್ತ ಸೆಳೆಯಲು ಬಿಜೆಪಿ ಯಶಸ್ವಿಯಾಗಿದೆ. ಈಗ ಪ್ರಭಾವಿ ಲಿಂಗಾಯತ ನಾಯಕರನ್ನು ಪಕ್ಷದಿಂದ ಹೊರಹಾಕಿದರೆ ಆ ಸಮುದಾಯದ ಆಕ್ರೋಶಕ್ಕೆ ಕಾರಣವಾಗಬಹುದು ಎಂದರು.
ಸಿ ಟಿ ರವಿ ಈ ಕುರಿತು ಪ್ರತಿಕ್ರಿಯಿಸಿದ್ದು, ಹೈಕಮಾಂಡ್ ವಸ್ತುಸ್ಥಿತಿಯನ್ನು ಗಮನಿಸಿ ಯತ್ನಾಳ್ ಅವರ ಅಮಾನತು ಆದೇಶ ವಾಪಸ್ ಪಡೆಯಲಿದೆ. ಹೈಕಮಾಂಡ್ ನಿರ್ಧಾರ ದುರದೃಷ್ಟಕರ. ಹೈಕಮಾಂಡ್ ಆದೇಶ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಹಾಗೂ ಭಿನ್ನಮತದ ಮುಖಂಡ ರಮೇಶ್ ಜಾರಕಿಹೊಳಿ, ನಾನು ಮತ್ತು ಯತ್ನಾಳ್ ಸೇರಿ ಎಲ್ಲರೂ ಬಿಜೆಪಿಯಲ್ಲೇ ಇರುತ್ತೇವೆ. ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ರಾಜ್ಯದಲ್ಲಿ ಮುಂದೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸೂರ್ಯ, ಚಂದ್ರನಿಗೂ ಗ್ರಹಣ ಹಿಡಿಯುತ್ತದೆ. ಹಾಗಾಗಿ, ನಮ್ಮಂಥವರಿಗೆ ಕೆಲ ಸಮಸ್ಯೆ ಆಗಿವೆ. ನಾವೆಲ್ಲರೂ ಗಟ್ಟಿ ಇದ್ದೇವೆ, ಯತ್ನಾಳ್ ಜೊತೆಗೆ ನಾವಿದ್ದೇವೆ. ಯತ್ನಾಳ್ ಒಂಟಿ ಅಲ್ಲ ಎಂದರು.
ತಮಗೆ ಈ ಹಿಂದೆಯೇ ಹೈಕಮಾಂಡ್ ನ ಶಿಸ್ತು ಕ್ರಮದ ವಾಸನೆ ಬಡಿದಿತ್ತು. ಆದರೆ ಉಚ್ಚಾಟನೆ ಮಾಡುತ್ತಾರೆ ಎಂದು ನಿರೀಕ್ಷಿಸಲಿಲ್ಲ. ಯತ್ನಾಳ ನಮ್ಮ ಪಕ್ಷದ ದೊಡ್ಡ ನಾಯಕ. ಹಾಗೆಂದ ಮಾತ್ರಕ್ಕೆ ಪಕ್ಷದ ನಿರ್ಧಾರ ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನಲ್ಲ ಎಂದರು.
ಈ ಬೆಳವಣಿಗೆಯ ಬಗ್ಗೆ ನಾವೆಲ್ಲರೂ ಒಟ್ಟಿಗೆ ಸೇರಿ ಚರ್ಚಿಸುತ್ತೇವೆ. ಉಚ್ಚಾಟನೆ ಕ್ರಮದ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಪತ್ರ ಬರೆದು ಹೈಕಮಾಂಡ್ಗೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಯತ್ನಾಳ ಅವರು ದೊಡ್ಡ ಸಮುದಾಯದ ನಾಯಕ. ಅವರ ಸಾಮರ್ಥ್ಯವನ್ನು ಬಿಜೆಪಿ ಬೆಳೆಸಿಕೊಳ್ಳಬೇಕು. ನಾನು ಕೂಡ ವೇದಿಕೆ ಮೇಲೆ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದೇನೆ. ಸೋಮಶೇಖರ ಅವರಿಗೂ ನೋಟಿಸ್ ನೀಡಿದ್ದಾರೆ. ಆದರೆ ಯತ್ನಾಳ ಅವರ ಮೇಲೆ ಹೆಚ್ಚು ಪ್ರೀತಿ ಇದೆ. ಆ ಕಾರಣಕ್ಕೆ ಉಚ್ಚಾಟಿಸಿದ್ದಾರೆ. ನಾವು ಇದನ್ನು ಪಕ್ಷದ ಪ್ರೀತಿ ಎಂದೇ ಭಾವಿಸುತ್ತೇವೆ ಎಂದರು.
ಏನೇ ಆಗಲಿ, ಯತ್ನಾಳ ಅವರೂ ಸೇರಿದಂತೆ ನಾನು ಮತ್ತು ನಮ್ಮ ತಂಡದವರೆಲ್ಲ ಬಿಜೆಪಿಯಲ್ಲೇ ಇರುತ್ತೇವೆ. ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ಸಲ ನಮ್ಮದೇ ಸರ್ಕಾರ ತರಲು ಏನು ಬೇಕೋ ಅದನ್ನು ಮಾಡುತ್ತೇವೆ ಎಂದರು.
ಈ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಈ ಹಿಂದೆ ಅವರ ಬಗ್ಗೆ ಆಡಿದ ಎಲ್ಲ ಮಾತಿಗೆ ನಾನು ಬದ್ಧನಿದ್ದೇನೆ ಎಂದರು.




