ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಿದ ಡಿ ಕೆ ಶಿವಕುಮಾರ್

1 year ago

ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣ, ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪ್ರಕರಣ ಸೇರಿದಂತೆ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಹಲವು ವಿಚಾರಗಳ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದಾರೆ.

ರಾಜ್ಯ ಸಚಿವ ಸಂಪುಟ ನಿಗದಿಯಾಗಿದ್ದರೂ, ಅದರಲ್ಲಿ ಪಾಲ್ಗೊಳ್ಳದೆ ದಿಡೀರ್ ದೆಹಲಿಗೆ ದೌಡಾಯಿಸಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. 

ಸಚಿವರಾದ ಕೆ ಎನ್ ರಾಜಣ್ಣ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ರಾಜ್ಯದಲ್ಲಿ ನಡೆದಿರುವ ಹನಿಟ್ರ್ಯಾಪ್ ಪ್ರಕರಣದ ಸೂತ್ರಧಾರ ತಾವೇ ಎಂದು ಬಿಂಬಿಸುವ ಮೂಲಕ ಅನಗತ್ಯ ಗೊಂದಲ ಮೂಡಿಸುತ್ತಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಅವರಿಗೆ ವಿವರಿಸಿರುವುದಾಗಿ ಪಕ್ಷದ ಉನ್ನತಮೂಲಗಳಿಂದ ತಿಳಿದುಬಂದಿದೆ.

ಅಧಿಕಾರ ಹಸ್ತಾಂತರ ಕುರಿತ ಚರ್ಚೆಯ ವಿಷಯಾಂತರ ಮಾಡುವ ದೃಷ್ಟಿಯಿಂದ ವ್ಯವಸ್ಥಿತವಾಗಿ ಈ ಪ್ರಕರಣವನ್ನು ಪ್ರಸ್ತಾಪಿಸುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಎಂದು ಹೈಕಮಾಂಡ್ ನಾಯಕರಿಗೆ ವಿವರಿಸಿದ ಶಿವಕುಮಾರ್ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ಗೊತ್ತಾಗಿದೆ. 

ಪ್ರಕರಣದ ಪ್ರಮುಖ ಸೂತ್ರಧಾರಿಯಾಗಿರುವ ಸತೀಶ್ ಜಾರಕಿಹೊಳಿ ಅವರು ಇಲಾಖೆಯ ಕೆಲಸದ ಹೆಸರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿ ಮಾಡಿ ಅಧಿಕಾರ ಹಸ್ತಾಂತರ ಕುರಿತು ಮಾತುಕತೆ ನಡೆಸಿದ್ದಾರೆ. ಇದು ಪಕ್ಷ ಮತ್ತು ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ದೂರಿದ್ದಾರೆ ಎನ್ನಲಾಗಿದೆ. 

ಇದೆ ವೇಳೆ ತಮ್ಮ ಹಲವು ಹೇಳಿಕೆಗಳನ್ನು ವಿವಾದವಾಗಿ ಬಿಂಬಿಸಿದ ಬಿಜೆಪಿ ನಾಯಕರ ಕುರಿತು ಸಮಗ್ರ ವಿವರಣೆಗಳನ್ನು ನೀಡಿದ ಅವರು, ತಾವು ಎಲ್ಲಿಯೂ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಪಕ್ಷದ ಕಾರ್ಯಕರ್ತರ ಬಗ್ಗೆ ಪ್ರೀತಿಯಿಂದ ಆಡಿದ ಮಾತುಗಳನ್ನು ಕೆಲವರು ವಿವಾದ ಮಾಡುತ್ತಿದ್ದಾರೆ ಎಂದು ವರದಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸರ್ಕಾರ ಎರಡು ವರ್ಷ ಆಡಳಿತ ಅವಧಿಯನ್ನು ಪೂರ್ಣಗೊಳಿಸುತ್ತಿದೆ. ಇನ್ನೂ ಇಲ್ಲಿಯವರೆಗೆ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ನೀಡಿಲ್ಲ. ಹೀಗಾಗಿ ತಕ್ಷಣವೇ ಕಾರ್ಯಕರ್ತರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದ ಅವರು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಾಮಕರಣ ಮಾಡುವ ವೇಳೆ ಕಾರ್ಯಕರ್ತರನ್ನು ಪರಿಗಣಿಸಬೇಕು, ಪಕ್ಷಕ್ಕೆ ದುಡಿದವರಿಗೆ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಇದರಲ್ಲಿ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದ್ದು, ಈ ಕುರಿರು ಪಟ್ಟಿಯೊಂದನ್ನು ನೀಡಿದ್ದಾರೆ.

Leave a Reply