ಗ್ಯಾರಂಟಿ ಯೋಜನೆಗಳನ್ನು ನೀಡದ ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಉಕ್ಕಿ ಹರಿಯುತ್ತಿತ್ತೇ?

2 years ago

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಇದಕ್ಕಾಗಿ ಹಣವನ್ನ ಮೀಸಲಿಟ್ಟ ಕಾರಣಕ್ಕೆ ಅಭಿವೃದ್ಧಿಗೆ ಹಣ ಇಲ್ಲ ಎಂದು ಪ್ರತಿದಿನವೂ ಮಾತನಾಡುವ ಬಿಜೆಪಿಯವರು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಯಾವ ಗ್ಯಾರಂಟಿಗಳು ಇರಲಿಲ್ಲ‌ ಆದರೂ, ಸಾಲದ ಪ್ರಮಾಣ ಹೆಚ್ಚಿನ ರೀತಿಯಲ್ಲಿ ಇತ್ತು. ಜೊತೆಗೆ ಅಭಿವೃದ್ಧಿ ಏನು ಉಕ್ಕಿ ಹರಿಯುತ್ತಿತ್ತೇ?

ಆಸ್ಪತ್ರೆಗಳಲ್ಲಿ ಸೌಕರ್ಯ ಸೌಲಭ್ಯದಿಂದ ತುಂಬಿ ಕಂಗೊಳಿಸುತ್ತಿತ್ತೇ, ಸರ್ಕಾರಿ ಶಾಲೆಗಳೆಲ್ಲವೂ ನವ ವಧುವಿನಂತೆ ಸಿಂಗಾರಗೊಂಡಿತ್ತೇ, ರಸ್ತೆಗಳೆಲ್ಲವೂ ಚಿನ್ನದ ತಗಡಿನಿಂದ ನಿರ್ಮಾಣವಾಗಿತ್ತೇ, ಎಲ್ಲ ಯೋಜನೆಗಳು ಪರಿಪೂರ್ಣವಾಗಿ ಸಕಾಲದಲ್ಲಿ ಎಲ್ಲರಿಗೂ ದೊರೆಯುತ್ತಿತ್ತೇ?

ಸಾರ್ವಜನಿಕರಿಗೆ ಎಲ್ಲ ರೀತಿಯ ಸೌಕರ್ಯ ಸೌಲಭ್ಯಗಳು ಸೌಲಭ್ಯಗಳು, ಎಲ್ಲಿಯೂ ಲೋಪವಾಗದೆ ಮನೆ ಬಾಗಿಲಿಗೆ ಹೋಗಿ ತಲುಪಿಸಿ ಬಿಡುತ್ತಿದ್ದರೇ, ಔಷಧಿಗಳಿಗೆ ಕೊರತೆ ಇರಲಿಲ್ಲವಾ, ಆಸ್ಪತ್ರೆಗಳಲ್ಲಿ ಸಾವು ಸಂಭವಿಸಿರ ಲಿಲ್ಲವೇ, ಪ್ರತಿಯೊಂದು ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು ಸಹಸ್ರರು ಕೋಟಿಯಲ್ಲಿ ಪೂರ್ಣಗೊಳಿಸಿ ಎಲ್ಲವನ್ನು ಜಾರಿ ಮಾಡಿ ಸಾಧನೆಯನ್ನು ಮಾಡಿ ಬಿಟ್ಟಿರುವ ರೀತಿಯಲ್ಲಿ ಮಾತನಾಡುತ್ತಿದ್ದೀರಿ, ನಿಮ್ಮ ಕಾಲದಲ್ಲಿ ಖಜಾನೆಯಲ್ಲಿ ಕಾಸಿಲ್ಲದೆ ಅದೆಷ್ಟೋ ತಿಂಗಳು ಕೆಎಸ್ಆರ್ಟಿಸಿ ನೌಕರರಿಗೆ ಸಂಬಳ ಕೊಟ್ಟಿರಲಿಲ್ಲ, ಬಿಬಿಎಂಪಿಯಲ್ಲಿ ಅನೇಕ ಕಟ್ಟಡಗಳನ್ನು ಬ್ಯಾಂಕುಗಳಲ್ಲಿ ಅಡಮಾನ ಮಾಡಿದ್ದೀರಿ ಇದು ಮರೆತು ಹೋಗಿದೆಯೇ?

ಕೆಲಸಕ್ಕೆ ಬರದ ಯೋಜನೆಗಳಿಗೆ ಅನುದಾನವನ್ನ ನೂರಾರು ಕೋಟಿ ರೂಪಾಯಿಗಳಲ್ಲಿ ಬಿಡುಗಡೆ ಮಾಡಿಸಿಕೊಂಡು ಅದರಲ್ಲಿ ಕಮಿಷನ್ ಹೊಡೆಯುವಂತಹ ವ್ಯವಸ್ಥೆಯೇ ಬಿಜೆಪಿಯವರಿಗೆ ಇಷ್ಟ. ನೇರವಾಗಿ ಜನರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅನುಕೂಲವನ್ನು ಕಲ್ಪಿಸಿ ಕೊಡಬಲ್ಲ ಯೋಜನೆಗಳನ್ನ ರೂಪಿಸುವುದೇ ಹೆಚ್ಚು ಉಪಯುಕ್ತ.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಷ್ಟು ಶಾಲಾ ಕಟ್ಟಡಗಳನ್ನ ನಿರ್ಮಿಸಿದ್ದೀರಿ. ಅವುಗಳ ಸ್ಥಿತಿಗತಿಗಳು ಏನಾಗಿದೆ ಎಂಬ ವಿವರವನ್ನು ಕೊಟ್ಟು ಅಭಿವೃದ್ಧಿಯ ಮಾತನಾಡಿ.

ಬಿಜೆಪಿಯ ಆಡಳಿತದ ಅವಧಿಯಲ್ಲಿ ಎಷ್ಟು ಕಿಲೋಮೀಟರ್ಗಳ ಹಳ್ಳಿಗಳ ರಸ್ತೆಗಳನ್ನ ಅಭಿವೃದ್ಧಿ ಮಾಡಿದ್ದೀರಿ, ಎಷ್ಟು ಕಿಲೋಮೀಟರ್, ರಾಜ್ಯ ಹೆದ್ದಾರಿ ರಸ್ತೆಗಳನ್ನು ನಿರ್ಮಾಣ ಮಾಡಿದ್ದೀರಿ ಇವುಗಳನ್ನ ತಿಳಿಸಿ ಅಭಿವೃದ್ಧಿಯ ಬಗ್ಗೆ ಮಾತನಾಡಿ.

ಬಿಜೆಪಿಯ ಅಧಿಕಾರದ ಅವಧಿಯಲ್ಲಿ ಎಷ್ಟು ಲಕ್ಷ ಮನೆಗಳನ್ನು ಬಡವರಿಗಾಗಿ ನಿರ್ಮಿಸಿ ಕೊಟ್ಟಿದ್ದೀರಿ ಇವುಗಳಿಗೆ ಎಷ್ಟು ಕೋಟಿ ಖರ್ಚು ಮಾಡಿದ್ದೀರಿ ಅಂಕಿ ಅಂಶಗಳೊಂದಿಗೆ ಮಾತನಾಡಿ. ಆಗ ನಿಮ್ಮ ಅಭಿವೃದ್ಧಿಯ ಮಾತಿಗೆ ಅರ್ಥವಿರುತ್ತದೆ.

ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಸ್ಥಾಪಿಸಿದ್ದೀರಿ ಮತ್ತು ಅವುಗಳನ್ನು ಉನ್ನತೀಕರಣಗೊಳಿಸಿದ್ದೀರಿ, ಜಿಲ್ಲಾ ಮತ್ತು ತಾಲ್ಲೂಕ್ ಮಟ್ಟದಲ್ಲಿ ಎಷ್ಟು ಆಸ್ಪತ್ರೆಗಳನ್ನು ನಿರ್ಮಿಸಿದ್ದೀರಿಇವುಗಳ ವಿವರವನ್ನು ಕೊಟ್ಟು ಅಭಿವೃದ್ಧಿಯ ಬಗ್ಗೆ ಮಾತನಾಡಿ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಎಷ್ಟು ಸಾವಿರ ಕೋಟಿಯನ್ನು ಕೊಟ್ಟಿರುತ್ತೀರಿ? ಎಷ್ಟು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದ್ದೀರಿ? ಇವುಗಳ ಮಾಹಿತಿಯನ್ನು ಜನರ ಮುಂದೆ ಇಟ್ಟು ಅಭಿವೃದ್ಧಿಯ ಮಾತನಾಡಿ.

ತಾವು ಅಧಿಕಾರಕ್ಕೆ ಬರುವ ಮುನ್ನ ರಾಜ್ಯ ಸರ್ಕಾರದ ಮೇಲೆ ಇದ್ದ ಸಾಲದ ಪ್ರಮಾಣವೆಷ್ಟು? ತಾವು ಅಧಿಕಾರ ಬಿಡುವ ವೇಳೆಯಲ್ಲಿ ರಾಜ್ಯ ಸರ್ಕಾರದ ಮೇಲೆ ಇದ್ದಂತಹ ಸಾಲದ ಮೊತ್ತವೆಷ್ಟು? ಇವುಗಳನ್ನು ಜನರ ಮುಂದಿಟ್ಟು ಅಭಿವೃದ್ಧಿಯ ಬಗ್ಗೆ ಮಾತನಾಡಿ.

ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲ ಎಂಬ ಮಾತು ಮೂರ್ಖತನದಿಂದ ಕೂಡಿರುತ್ತದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಜಾರಿಯಾಗಿದೆ. ಬಿಜೆಪಿಯವರಿಗೆ ಬೇಕಾದರೆ ಪ್ರತಿಯೊಂದು ಇಲಾಖೆಯ ಮಾಹಿತಿಯನ್ನ ಪಡೆದುಕೊಂಡು ನಂತರ ಮಾತನಾಡಲಿ. ರಾಜ್ಯದಲ್ಲಿ ಯಾವುದೇ ತಿಂಗಳು ಯಾವ ಸರ್ಕಾರಿ ನೌಕರರ ಸಂಬಳಕ್ಕೆ ತೊಂದರೆಯಾಗಿಲ್ಲ. ಯಾವುದೇ ರೀತಿಯ ಕಾರ್ಯಕ್ರಮಗಳಿಗೆ ಹಣದ ಅಡಕ್ಷಣೆಯಾಗಿಲ್ಲ. ಆದರೂ ಸಹ ಪ್ರಚಾರಕ್ಕಾಗಿ ರಾಜ್ಯ ಸರ್ಕಾರ ಗ್ಯಾರಂಟಿಗಳಿಂದ ದಿವಾಳಿಯಾಗಿದೆ ಎಂದು ಹೇಳುತ್ತಲೇ ಕಾಲ ಹಾಕುತ್ತಿದ್ದೀರಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply