ಎಲ್ಲ ಸಮಸ್ಯೆಗಳಿಗೆ ರಾಜೀನಾಮೆ ಪರಿಹಾರವಲ್ಲ

1 year ago

ಬಳ್ಳಾರಿ ಆಸ್ಪತ್ರೆಯಲ್ಲಿ ಸತತವಾಗಿ ಆರು ಜನ ಬಾಣಂತಿಯರ ಸಾವಿನ ಪ್ರಕರಣವನ್ನು ಪ್ರತಿಯೊಬ್ಬರೂ ಸಹ ಗಂಭೀರವಾಗಿ ಪರಿಗಣಿಸಲೇಬೇಕು. ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ಅನಿವಾರ್ಯವಾಗಿ ಚಿಕಿತ್ಸೆಗೆ ದಾಖಲಾಗುತ್ತಾರೆ. ಅವರ ಬದುಕನ್ನು ಈ ರೀತಿಯಲ್ಲಿ ಸಂಕಷ್ಟಕ್ಕೆ ದೂಡಿದರೆ ಅವರ ಕುಟುಂಬಗಳನ್ನ ರಕ್ಷಿಸುವವರು ಯಾರು?

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಸ್ಪತ್ರೆಯಲ್ಲಿನ ಔಷಧಿಗಳ ನಿಯಂತ್ರಣ ಅಧಿಕಾರಿ ಮತ್ತು ಸರಬರಾಜು ಮಾಡುವ ಕಂಪನಿಗಳ ವಿಚಾರದಲ್ಲಿ ಕ್ರಮಗಳನ್ನು ಕೈಗೊಂಡಿರುವುದು ಸರಿಯಷ್ಟೇ. ಆದರೆ ಇದು ಕೇವಲ ಬಳ್ಳಾರಿ ಆಸ್ಪತ್ರೆಯಲ್ಲಿ ಘಟನೆಯಾದ ಕಾರಣಕ್ಕಾಗಿ ಎಚ್ಚರಿಕೆಯ ಕ್ರಮಗಳಾಗಬಾರದು. ಎಲ್ಲಾ ಆಸ್ಪತ್ರೆಗಳು ಔಷಧಿ ಮತ್ತು ಅದರ ಗುಣಮಟ್ಟದ ವಿಚಾರದಲ್ಲಿ ಕಾಲಕಾಲಕ್ಕೆ ತಪಾಸಣೆ ಮಾಡುವಂತಹ ಕೆಲಸ ನಡೆಯಲೇಬೇಕು. ಸರಿಯಾದ ರೀತಿಯಲ್ಲಿ ಔಷಧಿಗಳ ತಪಾಸಣೆ ಮಾಡದೇ ರೋಗಿಗಳಿಗೆ ವಿತರಿಸಿದರೆ ಸಂಬಂಧ ಪಟ್ಟ ಆಸ್ಪತ್ರೆಯ ಪ್ರಮುಖರ ಹೊಣೆಗಾರರನ್ನಾಗಿಸಬೇಕು. ಔಷಧಿಗಳ ಪೂರೈಕೆಯಲ್ಲಿ ಕೇವಲ ಗುಣಮಟ್ಟ ಮಾತ್ರವೇ ಮಾನದಂಡವಾಗಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು, ಸ್ಥಾನಿಕ ವೈದ್ಯಾಧಿಕಾರಿಗಳು, ಅಧೀಕ್ಷಕರು, ಎಲ್ಲರೂ ಇದ್ದರೂ ಸಹ ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿರುವುದು ಬಹಳ ದುಃಖದ ಸಂಗತಿ ಆಗಿರುತ್ತದೆ.

ವಿರೋಧ ಪಕ್ಷದ ನಾಯಕರಿಗೆ ಈ ಘಟನೆಯನ್ನು ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುವ ಚಿಂತನೆ ಅಷ್ಟೇ. ಎಲ್ಲದಕ್ಕೂ ಆರೋಗ್ಯ ಸಚಿವರ ರಾಜಿನಾಮೆಯನ್ನ ಕೇಳುವುದು ಸರಿಯಲ್ಲ, ಈ ವಿಚಾರದಲ್ಲಿ ಮಾನ್ಯ ದಿನೇಶ್ ಗುಂಡೂರಾವ್ ರವರು ಘಟನೆಯಾದ ನಂತರದಲ್ಲಿ ಈಗಾಗಲೇ ಆಸ್ಪತ್ರೆಗೆ ಭೇಟಿಕೊಟ್ಟು ಕ್ರಮಗಳನ್ನ ಕೈಗೊಂಡಿದ್ದಾರೆ. ಇವರು ಸಚಿವರಾದ ಮೇಲೆ ಸಾಕಷ್ಟು ಯೋಜನೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಿದ್ದಾರೆ. ಆಸ್ಪತ್ರೆಯ ಗುಣಮಟ್ಟ, ಸೌಲಭ್ಯ, ಸೌಕರ್ಯಗಳು ಆಂಬುಲೆನ್ಸ್ ಸೇವೆಗಳು ಮತ್ತು ಇತ್ತೀಚಿಗೆ ಕಠಿಣವಾದ ಶಸ್ತ್ರಚಿಕಿತ್ಸೆಗಳಿಗೆ ಉಚಿತವಾದಂತಹ ಎರಡನೇ ಅಭಿಪ್ರಾಯವನ್ನು ನೀಡುವ ನುರಿತ ವೈದ್ಯರ ಯೋಜನೆಯನ್ನು ಜಾರಿಗೆಗೊಳಿಸಿದ್ದಾರೆ. ತಮ್ಮ ಇಲಾಖೆಯಲ್ಲಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜೀನಾಮೆಯನ್ನು ಕೇಳುವುದು ಕೇವಲ ರಾಜಕಾರಣವಾಗುತ್ತದೆ.

ಈ ಹಿಂದೆ ಚಾಮರಾಜನಗರದಲ್ಲಿ ಆಮ್ಲಜನಕದ ಕೊರತೆಯಿಂದ 25 ಜನ ರೋಗಿಗಳು ಪ್ರಾಣವನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಬಿಜೆಪಿಯ ಅಂದಿನ ಆರೋಗ್ಯ ಸಚಿವರು ರಾಜೀನಾಮೆಯನ್ನು ನೀಡಲಿಲ್ಲ ಅಥವಾ ವಿರೋಧಪಕ್ಷದ ನಾಯಕರಾಗಿರುವ ಅಶೋಕ್ ರವರು ಅಂದು ಯಾವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎಂಬುದನ್ನ ಆಲೋಚಿಸಬೇಕಾಗಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ಹತ್ತಕ್ಕೂ ಹೆಚ್ಚು ಮಕ್ಕಳು ಜೀವಂತವಾಗಿ ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಸಾವನ್ನಪ್ಪಿದ್ದರು. ಅದು ಬೆಂಕಿ ಅನಾಹುತದಲ್ಲಿ, ಈ ರೀತಿಯಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತದೆ. ಇಲ್ಲಿ ಮನುಷ್ಯರ ಜೀವದ ಪ್ರಶ್ನೆ ಹೊರತು, ರಾಜಕಾರಣದ ಮಾತುಗಳು ಬೇಡ.

ಪರಿಸ್ಥಿತಿಯನ್ನ ಸುಧಾರಿಸಬೇಕು. ಬಡ ಜನರಿಗೆ ತೊಂದರೆ ಆಗಬಾರದು, ನಂಬಿಕೆಯಿಂದ ಬರುವ ರೋಗಿಗಳಿಗೆ ಗುಣಮುಖರಾಗಿ ನೆಮ್ಮದಿಯಿಂದ ಮನೆಗೆ ಹೋಗುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕು. ಯಾರೇ ಆಗಲಿ ಸರ್ಕಾರಿ ಸಂಸ್ಥೆಗಳ ವಿಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು. ಸರ್ಕಾರಿ ಸಂಸ್ಥೆಗಳ ಮೇಲೆ ಜನರಿಗೆ ನಂಬಿಕೆ ಹೋದರೆ ಜನರು ಬದುಕುವುದಾದರೂ ಹೇಗೆ? ವಿಶೇಷವಾಗಿ ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ಶಾಲೆ, ಬಡವರು ಮತ್ತು ಕಡು ಬಡವರ ಪಾಲಿಗೆ ದೇವಾಲಯಗಳಾಗಬೇಕು. ಅಲ್ಲಿ ಬದುಕು ಭದ್ರವಾಗಿರಬೇಕು, ಸಣ್ಣ ಪ್ರಮಾಣದಲ್ಲೂ ಲೋಪಗಳಾಗಬಾರದು.

ಸರ್ಕಾರಿ ಆಸ್ಪತ್ರೆಗಳ ಮೇಲ್ವಿಚಾರಣೆಗೆ ಶಾಸಕರುಗಳು ಸಹ ಆಸಕ್ತಿಯಿಂದ ಕೆಲಸ ಮಾಡಬೇಕು. ತಮ್ಮ ಕ್ಷೇತ್ರದ ಆಸ್ಪತ್ರೆಗಳಿಗೆ ಪದೇಪದೇ ಭೇಟಿಕೊಟ್ಟು, ಅಲ್ಲಿನ ವ್ಯವಸ್ಥೆಯ ಬಗ್ಗೆ ಗಮನಹರಿಸಿ ಲೋಪದೋಷಗಳನ್ನು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ಇದರಿಂದ ವ್ಯವಸ್ಥೆಯು ಸುಧಾರಣೆಯಾಗುತ್ತದೆ.

ಚುನಾಯಿತ ಪ್ರತಿನಿಧಿಗಳು ಕೇವಲ ತಮಗೆ ಬೇಕಾದವರು, ಇಲ್ಲವೇ ಹತ್ತಿರದ ಸಂಬಂಧಿಗಳು, ಸರ್ಕಾರಿ ಆಸ್ಪತ್ರೆಗೆ ದಾಖಲಾದರೆ ಅವರನ್ನು ನೋಡಲು ಮಾತ್ರ ಹೋಗುವುದು, ಇಲ್ಲದಿದ್ದರೆ ಅವರಿಗೆ ಚಿಕಿತ್ಸೆ ಕೊಡಿಸಲು ಪ್ರಭಾವವನ್ನು ಬಳಸುವುದು ಇಷ್ಟಕ್ಕೆ ಸೀಮಿತವಾದರೆ ಸಾಲದು. ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿರುವ ಆಸ್ಪತ್ರೆ, ಶಾಲೆ, ಸರ್ಕಾರಿ ಕಚೇರಿಗಳು, ಇವುಗಳಿಗೆ ಮೇಲಿಂದ ಮೇಲೆ ಆಕಸ್ಮಿಕವಾಗಿ ಭೇಟಿ ಮಾಡುವಂತಹ ಕೆಲಸವನ್ನು ಮಾಡಿದಾಗ ಮಾತ್ರ ವ್ಯವಸ್ಥೆ ಸುಧಾರಣೆಯಾಗುತ್ತದೆ. ಇಲ್ಲದಿದ್ದರೆ ಪರಸ್ಪರ ಟೀಕೆಟಿಪ್ಪಣಿಗಳಿಗೆ ಇವುಗಳು ಸೀಮಿತವಾಗಿ, ಜನಸಾಮಾನ್ಯರಿಗೆ ಕವಡೆ ಕಾಸಿನ ಅನುಕೂಲವಾಗುವುದಿಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply