ನಿನ್ನೆ ಮಹಾಮನೆ ಜೊತೆ ಮೈಸೂರಿಗೆ ಪ್ರಯಾಣ ಮಾಡಿದೆ…. ದಸರಾ ನೋಡಲು ಅಲ್ಲ….. ನಟನ ರಂಗ ಮಂದಿರದಲ್ಲಿ ನಿರ್ದಿಗಂತ ಸಂಸ್ಥೆಯ ಹೊಸ ನಾಟಕ, ಪ್ರಾಜೆಕ್ಟ್ ಡಾರ್ಲಿಂಗ್ ನೋಡಲು…
ಬಹುಭಾಷಾ ಚಲನಚಿತ್ರ ನಟ, ರಂಗಭೂಮಿಯ ಬೇರುಗಳನ್ನು ಗಟ್ಟಿಯಾಗಿ ಹಿಡಿಯುವ ಉದ್ದೇಶದಿಂದ ನಿರ್ದಿಗಂತ ಎನ್ನುವ ರಂಗ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ತಿರುಗಾಟ ಮಾಡಿಕೊಂಡು ನಾಟಕ ಪ್ರದರ್ಶನ ಮಾಡುವುದು ಇದರ ಮೂಲ ಉದ್ದೇಶ. ನಿರ್ದಿಗಂತ ಆವರಣದಲ್ಲಿ ನಟರು ನಾಟಕ ಕಟ್ಟಿ, ಮೊದಲ ಪ್ರದರ್ಶನವನ್ನು ನಟನದಲ್ಲಿ ನೀಡುತ್ತಾರೆ. ನಂತರ ರಾಜ್ಯ-ದೇಶ ಸುತ್ತಿ ಪ್ರದರ್ಶನಗಳನ್ನು ನೀಡುತ್ತಾರೆ….
ಮೊದಲಿಗೆ ನಿರ್ದಿಗಂತ ಶ್ರೀಪಾದ ಭಟ್ಟರ ಗಾಯಗಳು ನಾಟಕ ಪ್ರದರ್ಶನ ಮಾಡಿತು. ಈಗ ಎರಡನೆಯದು, ಪ್ರಾಜೆಕ್ಟ್ ಡಾರ್ಲಿಂಗ್…. ಶರಣ್ಯ ರಾಮ ಪ್ರಕಾಶ್ ಅವರು ಈ ಪ್ರಜೆಕ್ಟ್ ನ ನಿರ್ದೇಶಕರು….
ನಟನ ರಂಗ ಸಂಸ್ಥೆ ಮಂಡ್ಯ ರಮೇಶ್ ಅವರ ಒಡೆತನದ ಒಂದು ರಂಗ ಮಂದಿರ…. ಇಷ್ಟೇ ಆಗಿದ್ದರೆ, ಸುಮ್ಮನೆ ಇರಬಹುದಿತ್ತು….. ಆದರೆ, ನಟನ ಒಳಹೊಕ್ಕು ನೋಡಿದರೆ ಅದು ಒಂದು ರಂಗ ವಿಶ್ವವಿದ್ಯಾಲಯ….
ಒಂದು ರಂಗ ತಂಡ ತಮ್ಮ ನಾಟಕಗಳನ್ನು ಪ್ರದರ್ಶನ ನೀಡುವುದು ಮುಖ್ಯ ಅಲ್ಲ… ಒಂದೋ, ನೂರೋ ಪ್ರದರ್ಶನಗಳನ್ನು ಕಾಣುತ್ತೆ… ಆದರೆ, ಆ ನಾಟಕವನ್ನು ಜತನದಿಂದ ಕಾಪಾಡಿಕೊಳ್ಳುವುದು ಅಸಾಧ್ಯ ಕೆಲಸ…. ನಾಟಕದ ರಂಗ ಸಜ್ಜಿಕೆ, ರಂಗ ಪರಿಕರಗಳು, ವಸ್ರ್ತಾಲಂಕಾರದ ಉಡುಪುಗಳು ಬೆಳಕು ಮತ್ತು ಧ್ವನಿ ವರ್ಧಕಗಳ ಸಲಕರಣೆಗಳು, ಪ್ರಚಾರ ಕಲೆಯ ಪೋಸ್ಟರ್ ಗಳು, ಸಾಹಿತ್ಯದ ಪುಸ್ತಕಗಳು… ಹೀಗೆ ಪಟ್ಟಿ ಬೆಳೆಯತ್ತಾ ಹೋಗುತ್ತದೆ… ಇದು ಒಂದೋ- ಎರಡೋ ನಾಟಕಗಳದ್ದಾದರೆ ಹೇಗೆ ಒಂದು ಮನೆಯಲ್ಲಿ ಸಂಗ್ರಹಿಸಿಡಬಹುದು…
ಆದರೆ ನಟನದಂತಹ ಒಂದು ಸಂಸ್ಥೆ ನೂರಾರು ನಾಟಕಗಳನ್ನು, ಸಾವಿರಾರು ಪ್ರದರ್ಶನಗಳು ಮಾಡಿರುವಾಗ ಪ್ರತಿಯೊಂದು ನಾಟಕದ ವಸ್ತುಗಳನ್ನು ಜತನದಂದ ಕಾಪಾಡುವುದು ಹರ ಸಾಹಸ…. ಹೀಗೆ ಎಲ್ಲ ರಂಗ ಸಾಮಾಗ್ರಿಗಳನ್ನು ವಿಭಾಗವಾರು ಜೋಡಿಸಿದಾಗ ಅದು ಸಹಜವಾಗಿ ಒಂದು ರಂಗ ವಸ್ತು ಸಂಗ್ರಹಾಲಯವಾಗಿ ಮಾರ್ಪಾಟಾಗುತ್ತದೆ…
ನಾಟಕ ಕಲಿಯಲು ಮೊದಲ ಹೆಜ್ಜೆ ಇಟ್ಟಿರುವ ರಂಗಾಸಕ್ತನಿಗೂ, ಹಲವು ನಾಟಕಗಳಲ್ಲಿ ಕಾರ್ಯ ನಿರ್ವಹಿಸಿ ಪ್ರೌಢತೆಯನ್ನು ಸಾಧಿಸಿರುವ ಒಬ್ಬ ರಂಗಕರ್ಮಿಗೂ ಸಮಾನವಾಗಿ ಸದುಪಯೋಗಕ್ಕೆ ಬಂದಲ್ಲಿ, ಅದಕ್ಕಿಂತ ಹೆಚ್ಚು ಬೇರೇನು ಬೇಕು?
ನಟನ ರಂಗ ಸಂಸ್ಥೆ, ಹಲವು ರಂಗ ತಂಡಗಳು ಸಾಮೂಹಿಕವಾಗಿ ಮಾಡಬೇಕಾದ ಕಾರ್ಯಗಳನ್ನು, ಒಂದು ಸಂಸ್ಕೃತಿ ಇಲಾಖೆ, ಒಂದು ನಾಟಕ – ಸಾಹಿತ್ಯ ಅಕಾಡೆಮಿಗಳು ಮಾಡಬೇಕಾದ, ಒಂದು ರಂಗ ತರಬೇತಿ ನೀಡುವ ಸಂಸ್ಥೆ ಮಾಡಬೇಕಾದ ಕಾರ್ಯಗಳನ್ನು ರಮೇಶ್ ಒಬ್ಬರೇ ಮಾಡಿದ್ದಾರೆ… ಮೈಸೂರಿಗೆ ಹೋಗುವ ರಂಗಾಸಕ್ತರು, ಸಾಹಿತ್ಯಾಸಕ್ತರು ನಟನ ಒಳಹೊಕ್ಕು ಎಲ್ಲವನ್ನೂ ನೋಡಿ ಅಭ್ಯಸಿಸಬೇಕು…. ಅವರು ವಿಸ್ಮಯಗೊಳ್ಳದಿದ್ದರೆ ನೋಡಿ….. ಮಹಾಮನೆ ಒದಗಿಸಿರುವ ವೀಡಿಯೋ ಒಮ್ಮೆ ನೋಡಿಬಿಡಿ….ಸಾಕು…
ರಮೇಶ್ , ನಟನ ಕಟ್ಟಲು ಕೇವಲ ಅವರ ತಮ್ಮ ದುಡಿಮೆಯ ಭಾಗವನ್ನು ಮಾತ್ರ ಧಾರೆ ಎರೆದಿಲ್ಲ… ತಮ್ಮ ಸಂಪೂರ್ಣ ಬದುಕನ್ನೇ ನಟನ ಅಭಿವೃದ್ಧಿಗೆ ಧಾರೆ ಎರದಿದ್ದಾರೆ. ನಟನ ರಂಗ ಸಂಸ್ಥೆಯನ್ನು ಮತ್ತೆಷ್ಟು ಅಭಿವೃದ್ದಿಗೊಳಿಸಬಹುದು, ಇನ್ನೆಲ್ಲಾ ಏನು ಮಾಡಬಹುದು ಅನ್ನು ಆಲೋಚನೆಗಳನ್ನು ಬಿಟ್ಟರೆ ಅವರಿಗೆ ಬೇರೇನೂ ಯೋಚನೆಗಳಿಲ್ಲ. ನಟನ ರಂಗ ಸಂಸ್ಥೆ, ರಂಗ ಮಂದಿರ ಬಿಟ್ಟರೆ ಅವರ ಉಸಿರಾಟ ಇಲ್ಲ….
ನಮ್ಮ ರಾಜ್ಯಕ್ಕೆ ಒಂದು ಮಾದರಿ ರಂಗ ತಂಡ, ಸಂಸ್ಥೆ ಅಂದರೆ ಅದು ನಟನ ಎಂದರೆ ಉತ್ಪ್ರೇಕ್ಷೆ ಅಂತೂ ಅಲ್ಲ….
ನಟನದಲ್ಲಿ ನಿನ್ನೆ ನಡೆದ ಕಾರ್ಯಕ್ರಮಕ್ಕೆ ನನ್ನ ಆತ್ಮೀಯರೆಲ್ಲಾ ಬಂದಿದ್ದರು…. ಕಾಳೇಗೌಡ ನಾಗವಾರರು, ಪ್ರಕಾಶ್ ರೈ, ಜನಾರ್ಧನ, ಸುಮತಿ, ಇಂದಿರಾ ನಾಯರ್, ರಾಮಮೇಶ್ವರಿ ವರ್ಮಾ, ಅನ್ನಪೂರ್ಣ, ದಿಶಾ, ಜಯರಾಂ ಪಾಟೀಲ್, ನಿರ್ದಿಗಂತ ತಂಡದ ನಟರು…. ಮುಖ್ಯವಾಗಿ ಶೃಂಗ, ಎಲ್ಲರನ್ನೂ ಒಮ್ಮೆಗೆ ನೋಡಿದ ಸಂತಸದಲ್ಲಿ ಬೆಂಗಳೂರಿಗೆ ಪಯಣಿಸಿದಾಗ, ಮನಸ್ಸು ಉಲ್ಲಾಸಗೊಂಡಿದ್ದು ಸಹಜ…. ಹಾಗೆ ಚಂಚಲವೂ ಗೊಂಡಿತು… ಮೈಸೂರಿನಲ್ಲಿ ನೆಲಸಿದರೆ ಹೇಗೆ ಎಂದು???
ಕರೆದೊಯ್ದು, ಕರೆತಂದ ಮಹಾಮನೆಗೆ ಧನ್ಯವಾದಗಳು…..
- ಗುಂಡಣ್ಣ ಚಿಕ್ಕಮಗಳೂರು, ಹಿರಿಯ ರಂಗಕರ್ಮಿಗಳು




