ಜಗತ್ತಿನ ನಾಟಕ ಪರಂಪರೆಯಲ್ಲಿ ಆಫ್ರಿಕಾ ನೆಲದ ನಾಟಕಗಳ ‘ದನಿ’ಬಹಳ ಭಿನ್ನವಾದದ್ದು. ಲೋಕಕೆಲ್ಲ ಆಫ್ರಿಕಾ ಎಂದರೆ ಕಗ್ಗತ್ತಲ ಖಂಡವೆಂಬ ‘ತಪ್ಪು’ ನಿರೂಪಣೆಗಳನ್ನು ಕಟ್ಟಿಕೊಟ್ಟ ‘white’ ಜಗತ್ತು. ಕಪ್ಪು ಜಗತ್ತಿಂದ ಹುಟ್ಟಿದ ನೋಟ ಕ್ರಮಗಳು, ಕಥನ, ಕಾವ್ಯ, ನಾಟಕಗಳನ್ನು ಅರ್ಥೈಸಿಕೊಳ್ಳಲು ಇನ್ನು ಹೆಣಗಾಡುತ್ತಲೇ ಇದೆ. ಇಂದು ಜಗತ್ತಿನಾದ್ಯಂತ ರಂಗಭೂಮಿಯೆಂದು ಹೆಚ್ಚಾಗಿ ಅಭ್ಯಾಸಿಸುತ್ತಿರುವುದು ರಷ್ಯಾ, ಗ್ರೀಕ್ ಯುರೋಪ್ ಮತ್ತು ಅಮೆರಿಕಾ ಪ್ರೇರಿತ ರಂಗಭೂಮಿಯನ್ನು ಮಾತ್ರ. ಇಂಡಿಯಾದ ರಂಗಭೂಮಿಯಲ್ಲಿ ಆಗುತ್ತಿರುವುದು ಕೂಡ ಅದರ ಕೆಟ್ಟ ನಕಲಷ್ಟೆ.

ಇನ್ನು ಕನ್ನಡ ರಂಗಭೂಮಿಗೆ ಲ್ಯಾಟಿನ್ ಅಮೆರಿಕ, ಪೌರಾತ್ಯ ಮತ್ತು ಆಫ್ರಿಕನ್ ರಂಗಭೂಮಿಯ ಪರಿಚಯವಿರುವುದು ಎಳ್ಳಷ್ಟು ಮಾತ್ರ. ಸಾಹಿತ್ಯ ಪಠ್ಯಗಳಾಗಿ ಅಲ್ಲಲ್ಲಿ ಕೆಲವು ನಾಟಕ ಅನುವಾದಗಳು ಬಂದಿವೆಯಾದರೂ ರಂಗಪಠ್ಯಗಳಾಗಿ ಪ್ರಯೋಗಗೊಂಡವು ಅಲ್ಲೊಂದು ಇಲ್ಲೊಂದು.
ಈ ದೃಷ್ಟಿಯಿಂದ ಲೂಯಿ ನಕೊಸಿಯ’ The Rythems of voilence’ ಆ ಲಯ ಈ ಲಯ’ ನಾಟಕದ ಅನುವಾದ ಮತ್ತು ಪ್ರಯೋಗ ಕನ್ನಡ ನಾಟಕ ಪರಂಪರೆಗೆ ಮಹತ್ವದ ಸೇರ್ಪಡೆ.
ವೊಲೇಶೋಯಿಂಕ, ಚಿನುವ ಆಚಿಬೆ ಮತ್ತು ಅವರಿಬ್ಬರಿಗು ಕಿರಿಯರು ಅನಿಸುವ ಗೂಗಿ ವಾ ಥಿಯಾಂಗೋ ನಾಟಕಗಳಿಗೆ ಹೋಲಿಸಿದರೆ ನಕೊಸಿಯ ಈ ನಾಟಕ ಹಿಂಸೆ, ಪ್ರೇಮ, ವರ್ಣ ಭೇದ,ನ್ಯಾಯ, ರಾಜಕೀಯ ಸಿದ್ಧಾಂತಗಳು, ಆಫ್ರಿಕಾದ ಆಧುನಿಕತೆ ಇವುಗಳನ್ನು ತೀರ ಭಿನ್ನವಾಗಿ, ನೇರಾನೇರ ಎದುರುಗೊಳ್ಳುತ್ತದೆ. ಹಿಂಸೆಯ ಹಲವು ಪದರುಗಳು ಏಕಕಾಲದಲ್ಲಿ ವ್ಯಕ್ತಿ ಮತ್ತು ಸಮುದಾಯವನ್ನ ಹೇಗೆ ಆವರಿಸಿಕೊಳ್ಳುತ್ತವೆ ವಿಕ್ಷಿಪ್ತಗೊಳ್ಳುವಂತೆ ಮಾಡುತ್ತವೆ ಅನ್ನುವುದನ್ನು ಪ್ರೇಕ್ಷಕರಿಗೆ ತೆರೆದಿಡುತ್ತದೆ.
ಕಥೆ ಆಫ್ರಿಕಾದ್ದು ಆದರೆ ಭೇದ ಮತ್ತು ತಾರತಮ್ಯ ಎನ್ನುವುದು ಇಂಡಿಯಾಕ್ಕೆ ಹೊಸದಲ್ಲವಾದ್ದರಿಂದ ಮತ್ತು ಈ ನೆಲದಲ್ಲಿ ಅದು ಅನುದಿನದ ಸಂಗತಿಯಾದ್ದರಿಂದ ಈ ನಾಟಕ ಇಲ್ಲಿನ ಜನ ಸಮುದಾಯಗಳ ನಾಟಕವೂ ಆಗಿದೆ.
ನಿರ್ದೇಶಕಿ ಶ್ವೇತಾ ಅವರ ಎಚ್ಚರದ ಕಣ್ಣೋಟದಿಂದ ನಾಟಕಕ್ಕೊಂದು ವಿಶಿಷ್ಟ ಸಮಕಾಲೀನತೆಯೂ ದಕ್ಕಿದೆ.
ನಾನು ಈ ನಾಟಕ ನೋಡುತ್ತಿರುವುದು ಮೂರನೇ ಬಾರಿ.
ಇವತ್ತು ಸಂಜೆ ರಂಗಶಂಕರದಲ್ಲಿ ನಾಟಕ ನೋಡೋಣ ಬನ್ನಿ.
– ವಿ.ಎಲ್.ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರರು




