ಪಿಎಂನಾಡಗೌಡರ ದೇಶಸೇವೆಯನ್ನು ನೆನಪು ಮಾಡಿಕೊಳ್ಳುವ ಕಾಲ

1 year ago

1962ರಲ್ಲಿ ಭಾರತ ಮತ್ತು ಚೀನಾ ನಡುವೆ ಯುದ್ಧವಾಗಿ ಭಾರತ ದೇಶದ ಸೈನಿಕರಿಗೆ ಅನೇಕ ರೀತಿಯ ಸವಲತ್ತು ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಯುದ್ಧದಲ್ಲಿ ಭಾರತ ದೇಶ ಕಠಿಣ ವಾದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಸ್ವಾತಂತ್ರ್ಯ ಬಂದು ಇನ್ನೂ 15 ವರ್ಷಗಳ ಕಾಲಾವಷ್ಟೇ ಮುಗಿದಿದ್ದ ಸಂದರ್ಭವಾಗಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸುಭಿಕ್ಷವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರುರವರು ಸೈನಿಕರ ನಿಧಿಗೆ ಸಹಾಯವನ್ನು ಮಾಡುವಂತೆ ದೇಶದ ಜನರಿಗೆ ಕರೆಯನ್ನ ನೀಡಿದರು.

ಇಡೀ ಭಾರತ ದೇಶದಲ್ಲಿ ಅನೇಕ ನಾಗರಿಕರು ವೈಯಕ್ತಿಕವಾಗಿ ಸಾಕಷ್ಟು ಹಣವನ್ನು ತಮ್ಮ ಮೈ ಮೇಲಿನ ಆಭರಣಗಳನ್ನು ಸೈನಿಕರ ನಿಧಿಗೆ ಅರ್ಪಿಸಿದರು. ದೇಶದ ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ 1963ರಲ್ಲಿ ನಡೆದಂತಹ ಒಂದು ಘಟನೆ ದೇಶದ ಜನರ ಗಮನವನ್ನು ಸೆಳೆಯಿತು. ಬರಗಾಲದ ತವರಾಗಿದ್ದ ಬಿಜಾಪುರದ ಜನತೆ 120ಕ್ಕೂ ಹೆಚ್ಚು ಕೆಜಿ ಬಂಗಾರವನ್ನು ರಾಷ್ಟ್ರದ ನಿಧಿಗೆ ಅರ್ಪಿಸಿದರು. ಶ್ರೀಮತಿ ಇಂದಿರಾ ಗಾಂಧಿಯವರನ್ನು ಮತ್ತು ಅಂದಿನ ರಾಜ್ಯದ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರನ್ನ ಬಂಗಾರದಲ್ಲಿ ತುಲಾಭಾರ ಮಾಡಿ ಸೈನಿಕರ ನಿಧಿಗೆ ಚಿನ್ನವನ್ನು ನೀಡಿದರು.

ಇಂತಹ ದೊಡ್ಡ ಕಾರ್ಯವನ್ನ ಮಾಡಿದ್ದು ಬಿಜಾಪುರ ಜಿಲ್ಲೆಯ ಅಂದು ಕಾಂಗ್ರೆಸ್ ನಾಯಕರಾಗಿದ್ದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಜಿಲ್ಲಾ ಸ್ಕೂಲ್ ಬೋರ್ಡ್ ಚೇರ್ಮನ್ ಆಗಿದ್ದ ದಿವಂಗತ ಪಿಎಂ ನಾಡಗೌಡರು.

ಪಿಎಂ ನಾಡಗೌಡರು ಬಿಜಾಪುರ ಜಿಲ್ಲೆಯ ಅತ್ಯಂತ ಪ್ರಮುಖವಾದ ಪ್ರಾಮಾಣಿಕವಾದ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. ನಿಜಲಿಂಗಪ್ಪನವರು ಸಭೆಯನ್ನ ಮಾಡಿ ದೇಶದ ಸೈನಿಕರ ನಿಧಿಗೆ ಹಣವನ್ನು ಸಂಗ್ರಹಿಸಿ ಕೊಡಬೇಕೆಂದು ಎಲ್ಲರಲ್ಲೂ ಮನವಿ ಮಾಡಿದಾಗ ಪಿಎಂ ನಾಡಗೌಡರು ನಿಮ್ಮ ಮತ್ತು ಶ್ರೀಮತಿ ಇಂದಿರಾ ಗಾಂಧಿಯವರ ತೂಕದಷ್ಟು ಬಂಗಾರವನ್ನ ನಮ್ಮ ಜಿಲ್ಲೆಯಿಂದ ಕೊಡಿಸುತ್ತೇನೆ ಎಂದು ಮಾತು ಕೊಟ್ಟರು. ಅಲ್ಲಿದ್ದ ಅನೇಕರಿಗೆ ಇದು ಸಾಧ್ಯವೇ ಎನಿಸಿತು. ಕೆಲವರು ಅಚ್ಚರಿಯನ್ನ ವ್ಯಕ್ತಪಡಿಸಿದರು. ಆದರೆ ಅದೇ ಸಂದರ್ಭದಲ್ಲಿ ಅಲ್ಲಿದ್ದಂತಹ ಕೆಲವು ನಾಯಕರಿಗೆ ಪಿಎಂ ನಾಡಗೌಡರ ಸಂಘಟನಾ ಶಕ್ತಿ ಜನಪ್ರೀತಿ ತಿಳಿದಿತ್ತು. ಇವರು ಈ ಕಾರ್ಯವನ್ನ ಮಾಡಿಯೇ ತೀರುತ್ತಾರೆ ಎಂದು ಭರವಸೆಯನ್ನ ನೀಡಿದರು.

ಅದರಂತೆಯೇ ಪಿಎಂ ನಾಡಗೌಡರು 1963 ರಲ್ಲಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ನಿಜಲಿಂಗಪ್ಪನವರನ್ನು ಬಂಗಾರದಲ್ಲಿ ತುಲಾಭಾರ ಮಾಡಿ 120ಕ್ಕೂ ಹೆಚ್ಚು ಕೆಜಿ ಬಂಗಾರದ ಆಭರಣಗಳನ್ನು ದೇಶದ ಸೈನಿಕರ ನಿಧಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಪಿಎಂ ನಾಡಗೌಡರ ಧರ್ಮಪತ್ನಿ ಶ್ರೀಮತಿರವರು ತಮ್ಮ ಮೈ ಮೇಲಿದ್ದ 20 ಬಂಗಾರದ ಒಡವೆಯನ್ನು ತಕ್ಕಡಿಗೆ ಹಾಕಿದರು. ಇಂದಿರಾ ಗಾಂಧಿ ರವರನ್ನ ತೂಕ ಮಾಡಿದ ನಂತರ ತೂಕ ಮಾಡುವ ವೇಳೆಯಲ್ಲಿ ಮತ್ತೆ ತಕ್ಕಡಿಯಲ್ಲಿ ಏರುಪೇರಾಯಿತು. ಆಗ ನೆರೆದ ಜನಸ್ತೋಮಕ್ಕೆ ನಾಡಗೌಡರು ಕೈ ತೋರಿಸಿ ತಕ್ಕಡಿ ಮತ್ತು ಜನತೆಯ ಕಡೆಗೆ ಸನ್ನೆ ಮಾಡಿದರು. ಕೂಡಲೇ ಅಲ್ಲಿದ್ದ ಶಿಕ್ಷಕ ಬಂಧುಗಳು ತಾವು ಧರಿಸಿದ್ದ ಉಂಗುರ ಸರ ಇವುಗಳನ್ನು ಸಹ ತಕ್ಕಡಿಗೆ ಹಾಕಿದರು ಆಗ ತುಲಾಭಾರ ಕಾರ್ಯ ಪೂರ್ಣವಾಯಿತು.

ಬರಗಾಲದ ಬಿಜಾಪುರದ ಜನತೆ ಒಬ್ಬ ನಾಯಕನ ಮೇಲೆ ವಿಶ್ವಾಸವನ್ನಿಟ್ಟು 120ಕ್ಕೂ ಹೆಚ್ಚು ಕೆಜಿ ಬಂಗಾರವನ್ನು ದೇಶದ ಸೈನಿಕರ ನಿಧಿಗೆ ಅರ್ಪಿಸಿದಂತಹ ಘಟನೆ ದೇಶದಾದ್ಯಂತ ಸುದ್ದಿ ಆಯಿತು. ನೆಹರುರವರು ಈ ಕಾರ್ಯಕ್ಕೆ ಪ್ರಶಂಶಿಸಿ ಪಿಎಂ ನಾಡಗೌಡರಿಗೆ ಪತ್ರವನ್ನು ಬರೆದರು. ಈ ಘಟನೆಯ ಸಂಬಂಧ ಲಾವಣಿಗಳು ಪದ್ಯಗಳು ರಚನೆಯಾಯಿತು.

ಈಗ ಕೆಲವರು ದೇಶದ ಸೈನಿಕರ ಕಲ್ಯಾಣ ನಿಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿ ಇಂತಹ ಸಂಸ್ಕೃತಿ ಸಂಸ್ಕಾರ ಹೊಸದೇನಲ್ಲ. ಇಂತಹ ಮಹಾನ್ ಕಾರ್ಯವನ್ನು ಮಾಡಿದಂತಹ ಪಿಎಮ್ ನಾಡಗೌಡರು ನಿಜಲಿಂಗಪ್ಪನವರ ಸಂಪುಟದಲ್ಲಿ ಮುಂದೆ ಸಚಿವರಾದರು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಇದಕ್ಕಿಂತ ಮೊದಲು ಸ್ಕೂಲ್ ಬೋರ್ಡ್ ಚೇರ್ಮನ್ ಆಗಿ ಬಿಜಾಪುರ ಜಿಲ್ಲೆಯ  ಇಂದು ಬಾಗಲಕೋಟೆಯನ್ನು ಸೇರಿಸಿದಂತೆ ಪ್ರತಿಯೊಂದು ಹಳ್ಳಿಯಲ್ಲಿ ಶಾಲೆ ಮತ್ತು ಆ ಶಾಲೆಗೆ ಶಿಕ್ಷಕರನ್ನ ನೇಮಕ ಮಾಡಿ ಹತ್ತಾರು ಸಾವಿರ ಶಿಕ್ಷಕರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟು ಬಿಜಾಪುರ ಜಿಲ್ಲೆಯನ್ನ ಸಾಕ್ಷರತೆಯ ಪ್ರಮಾಣದಲ್ಲಿ ಹೆಚ್ಚಿಸಲು ಶ್ರಮ ಪಟ್ಟಂತಹ ಪ್ರಮಾಣಿಕ ನಾಯಕರಾಗಿದ್ದರು.

ಇಂದು ದೇಶದಲ್ಲಿ ಮತ್ತೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಆದರೆ ಅಂದು 1962ರಲ್ಲಿ ನೆಹರೂರವರು ಅನುಭವಿಸಿದಂತಹ ಆರ್ಥಿಕ ಸಂಕಷ್ಟ ಇಂದು ಇಲ್ಲ. ಆದರೂ ದೇಶ ಕರೆಕೊಟ್ಟರೆ ಈಗಲೂ ದೇಶದ ಜನತೆ ತಮ್ಮ ಇತಿಮಿತಿಯನ್ನ ಮೀರಿ ಸಹಾಯ ಮಾಡಲು ಕೋಟ್ಯಾಂತರ ಭಾರತೀಯರು ಸನ್ನದ್ಧರಾಗಿದ್ದಾರೆ. ಆದರೆ ಇಂದು ಪಿಎಂ ನಾಡಗೌಡರ ರೀತಿಯಲ್ಲಿ ಶ್ರದ್ಧೆ ಪ್ರಾಮಾಣಿಕತೆಯಿಂದ ಜನರ ಪ್ರೀತಿ ನಡುವೆ ಇಂತಹ ಕಾರ್ಯವನ್ನ ಮಾಡುವ ವ್ಯಕ್ತಿತ್ವಗಳ ಕೊರತೆ ಕಾಣುತ್ತಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply