ಬೆಂಗಳೂರು: ಗಡಿಗಳಲ್ಲಿ ಗಾಳಿ ಮಳೆ ಚಳಿ ಎನ್ನದೆ ನಮ್ಮ ದೇಶದ ಸಾರ್ವಭೌಮತೆ ಹಾಗೂ ನಾಗರಿಕರ ಆಸ್ತಿ ಪಾಸ್ತಿ, ಪ್ರಾಣ ರಕ್ಷಣೆಗೆತಮ್ಮ ಜೀವವನ್ನೇ ತ್ಯಾಗ ಮಾಡುವ ಸೈನಿಕರ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರ ಪುನರ್ವಸತಿ ಹಾಗೂ ಅಭಿವೃದ್ದಿಗೆ ಶ್ರಮಿಸುವುದು ಎಲ್ಲಾ ನಾಗರಿಕರ ಕರ್ತವ್ಯವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ರಾಜಭವನದಲ್ಲಿ ಆಯೋಜಿಸಲಾಗಿದ್ದ, ಸಶಸ್ತ್ರ ಪಡೆಗಳ ದಿನಾಚರಣೆ ಸಮಾರಂಭದಲ್ಲಿ ಮಾಜಿ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರನ್ನು ಉದೇಶಿಸಿ ಮಾತನಾಡಿದ ಅವರು, ಸಶಸ್ತ್ರ ಪಡೆಗಳ ಯೋಧರು ಗಡಿಗಳಲ್ಲಿ ಅನನ್ಯ ಸೇವೆಯನ್ನು ಮಾಡುತ್ತಾ ಅಗತ್ಯ ಸಂದರ್ಭದಲ್ಲಿ ದೇಶದ ಆಂತರಿಕ ಭದ್ರತೆ ಹಾಗೂ ನೈಸರ್ಗಿಕ ಪ್ರಕೋಪ ಸಂದರ್ಭ ಗಳಲ್ಲಿಯೂ ನಾಗರಿಕರ ರಕ್ಷಣೆಗೆ ಜೀವದ ಹಂಗು ತೊರೆದು ಧಾವಿಸುವವರ ಅಭಿವೃದ್ಧಿಗೆ ನೆರವು ನೀಡಬೇಕಾಗಿರುವುದು ಎಲ್ಲರ ಕರ್ತವ್ಯ ಎಂದರು.
ರಾಜ್ಯ ಸರಕಾರ ಯೋಧರ ಹಾಗೂ ಅವರ ಕುಟುಂಬ ಸದಸ್ಯರ ನೆರವಿಗೆ ಯಾವಾಗಲೂ ಸಿದ್ಧವಿದೆ ಎಂದು ಭರವಸೆ ನೀಡಿದರು.
ಕಳೆದ ವರ್ಷದಲ್ಲಿ ಸಶಸ್ತ್ರ ಸೇನಪಡೆಗಳ ದ್ವಜ ನಿಧಿಗೆ ಒಟ್ಟು ದಾಖಲೆಯ ಒಂದು ಕೋಟಿ ಎಂಬತ್ತೇಳು ಲಕ್ಷರೂ ಸಂಗ್ರಹವಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಇದೇ ಸಂಧರ್ಭದಲ್ಲಿ ಸಚಿವರು ಹಾಗೂ ರಾಜ್ಯಪಾಲ ತಾವಾರ್ ಚಂದ್ ಗೆಹ್ಲೋಟ್ ಅವರು ದೇಶದ ರಕ್ಷಣಾ ಕಾರ್ಯದಲ್ಲಿ ವೀರ ಮರಣ ಹೊಂದಿದ ಕುಟುಂಬ ಸದಸ್ಯರಿಗೆ ಪರಿಹಾರದ ಚೆಕ್ಕನ್ನು ವಿತರಿಸಿದರು. ಆರ್ಮ್ಸ್ ಫ್ಲ್ಯಾಗ್ ಫಂಡ್ ಗಾಗಿ ಕಾಣಿಕೆ ನೀಡಿದರು.
ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹಾಗೂ ಸಚಿವರು, ಫ್ಲ್ಯಾಗ್ ಡೇ ಫಂಡ್ ಗಾಗಿ ಅತ್ಯಂತ ಹೆಚ್ಚು ಕಾಣಿಕೆ ಸಂಗ್ರಹಿಸಿದವರಿಗೆ, ಪ್ರೋತಾಹಕ ಪಾರಿತೋಷಕವನ್ನು ವಿತರಿಸಿದರು.




