ನಿಜವಾದ ಜಾತಿಯನ್ನು ತಿಳಿಸದೆ ಸಮೀಕ್ಷೆಯಿಂದ ಹೊರಗುಳಿಯುವ ಸಂಭವ ಹೆಚ್ಚಿದೆ: ಕೆ.ಶಿವಕುಮಾರ್
ಇವರಿಗೆ,
ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ರವರು
ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಏಕಸದಸ್ಯ ವಿಚಾರಣಾ ಆಯೋಗ,
ಬೆಂಗಳೂರು.
ಇಂದ,
ಕೆ.ಶಿವಕುಮಾರ್
ಹಿರಿಯ ಪತ್ರಕರ್ತರು, ಮೈಸೂರು.
ಮಾನ್ಯರೆ,
ವಿಷಯ: ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಕುಟುಂಬವು ಮುಕ್ತವಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡುವಂತೆ ಕೋರಿ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‍ದಾಸ್ ಏಕಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ಕೈಗೊಂಡಿದ್ದು, ಈ ಸಂಬಂಧ ಮೇ 5ರಿಂದ ಸಮೀಕ್ಷಾ ಕಾರ್ಯ ಆರಂಭವಾಗಿರುವುದು ಸ್ವಾಗತಾರ್ಹ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಈ ದತ್ತಾಂಶಗಳ ಸಂಗ್ರಹಣೆಯ ಸಮೀಕ್ಷೆಯ ಮೊದಲನೇ ಹಂತದಲ್ಲಿ ಗಣತಿದಾರರು ಮನೆ– ಮನೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವರು. ಎರಡನೇ ಹಂತದಲ್ಲಿ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಹಾಗೂ ಮೂರನೇ ಹಂತವಾಗಿ ಮೊಬೈಲ್ ಆ್ಯಪ್‌ನಲ್ಲಿ ಸ್ವಯಂ ಮಾಹಿತಿ ದಾಖಲಿಸುವ ಮೂಲಕ ಸಮೀಕ್ಷೆಯು ನಡೆಯಲಿದೆ ಎಂಬ ಮಾಹಿತಿಯನ್ನು ಆಯೋಗವು ಒದಗಿಸಿದೆ.
ಈ ಮೂಲಕ ತಮ್ಮ ಗಮನಕ್ಕೆ ತರುವುದು ಏನೆಂದರೆ, ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದ ಪರಿಶಿಷ್ಟ ಜಾತಿಯ ಅನೇಕ ಕುಟುಂಬಗಳು ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಔದ್ಯೋಗಿಕ ಹಾಗೂ ಮಕ್ಕಳ ವಿದ್ಯಾಭ್ಯಾಸದ ಕಾರಣಕ್ಕಾಗಿ ವಲಸೆ ಬಂದಿರುತ್ತಾರೆ. ಇವರು ನಗರ ಪ್ರದೇಶಗಲ್ಲಿ ತಮ್ಮ ವಾಸಕ್ಕಾಗಿ ಬಾಡಿಗೆ ಅಥವಾ ಭೋಗ್ಯಕ್ಕೆ ಮನೆಯನ್ನು ಪಡೆಯುವ ಸಂದರ್ಭದಲ್ಲಿ ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಗೆ ಭೀತಿಗೊಂಡು ತಮ್ಮ ನಿಜವಾದ ಜಾತಿಯನ್ನು ಮರೆಮಾಚಿ ಮನೆ ಬಾಡಿಗೆ ಪಡೆಯುವಂಥ ಶೋಚನೀಯ ಸ್ಥಿತಿಯಲ್ಲಿ ಸಿಲುಕಿದ್ದಾರೆ.
ಮೊದಲನೇ ಹಂತದಲ್ಲಿ ನಡೆಯುತ್ತಿರುವ ಮನೆ-ಮನೆಗೆ ಭೇಟಿಯ ದತ್ತಾಂಶ ಶೇಖರಣೆ ಸಮೀಕ್ಷೆಯಲ್ಲಿ ಇವರು ಯಾವುದೇ ಕಾರಣಕ್ಕೂ ತಮ್ಮ ನಿಜವಾದ ಜಾತಿ ಹಾಗೂ ಉಪಜಾತಿಗಳನ್ನು ಬಹಿರಂಗಪಡಿಸುವುದಿಲ್ಲ. ತಮ್ಮ ಜಾತಿ ತಿಳಿಸಿದರೆ ನೆರೆಹೊರೆಯವರಿಂದಲೇ ಸಾಮಾಜಿಕ ಅಸಮಾನತೆಗೆ ಒಳಗಾಗುವ ಆತಂಕದಿಂದ ಇವರುಗಳು ಸಮೀಕ್ಷೆಯ ಸಂದರ್ಭದಲ್ಲಿ ತಮ್ಮ ನಿಜವಾದ ಜಾತಿಯನ್ನು ತಿಳಿಸದೆ ಸಮೀಕ್ಷೆಯಿಂದ ಹೊರಗುಳಿಯುವ ಸಂಭವ ಹೆಚ್ಚಿದೆ.
ಇದಲ್ಲದೆ, ಮೊಬೈಲ್ ಆಪ್ ಮೂಲಕ ಆನ್‌ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಲ್ಲಿ ಅಗತ್ಯ ಜ್ಞಾನದ ಕೊರತೆಯೂ ಇರುತ್ತದೆ. ಹೀಗಾಗಿ ತಮ್ಮಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ನಗರ ಪ್ರದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆಲೆಸಿರುವ ಪರಿಶಿಷ್ಟ ಜಾತಿ ಕುಟುಂಬಗಳ ಅನುಕೂಲಕ್ಕಾಗಿ ತಾಲ್ಲೂಕು ಕಚೇರಿ, ನಗರ ಪಾಲಿಕೆ ಕಚೇರಿ, ಪಟ್ಟಣ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಒಂದು ವಾರಗಳ ಕಾಲ ವಿಶೇಷ ಘಟಕಗಳನ್ನು ತೆರೆದು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸೂಕ್ತ ಅವಕಾಶ ಕಲ್ಪಿಸಬೇಕು.
ಈ ಮುಖೇನ ಬಾಡಿಗೆ ಮನೆಯಲ್ಲಿ ವಾಸವಿದ್ದು ತಮ್ಮ ಜಾತಿಯನ್ನು ಮರೆಮಾಚಿರುವ ಕುಟುಂಬವು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಭೇಟಿ ನೀಡಿ ಸಮೀಕ್ಷೆಯಲ್ಲಿ ತಮ್ಮ ಜಾತಿ ನೋಂದಾಯಿಸಲು ಮುಕ್ತವಾದ ವಾತಾವರಣ ನಿರ್ಮಾಣ ಮಾಡಿಕೊಟ್ಟಂತಾಗುತ್ತದೆ ಎಂಬುದನ್ನು ತಮ್ಮ ಅವಗಾಹನೆಗೆ ತರಲು ಬಯಸುತ್ತೇನೆ.
ಇಂತಿ
– ಕೆ.ಶಿವಕುಮಾರ್, ಹಿರಿಯ ಪತ್ರಕರ್ತರು, ಮೈಸೂರು




