ಊರಿಗೆ ಬಂದದ್ದು ನೀರಿಗೂ ಬರಲಿ
ಹಠಾತ್ ಹೃದಯಾಘಾತದ ಸಾವುಗಳಿಗೆ “ಕೋವಿಡ್” ಕಾರಣ ಖಂಡಿತಕ್ಕೂ ಅಲ್ಲ ಎಂದು ಕ್ಷಣಕ್ಷಣಕ್ಕೂ ವೀಟೋ ಹೇಳುತ್ತಾ ಬಂದಿದ್ದ ಭಾರತ ಸರ್ಕಾರದ ಕಡೆಯಿಂದ ಈಗ ಮೊದಲ ಬಾರಿಗೆ, “ಕೋವಿಡ್ ಕಾರಣ ಇರಬಹುದು” ಎಂಬ ಮಾತು ಬಂದಿದೆ. ಜೊತೆಗೇ “ಕೋವಿಡ್ ಲಸಿಕೆ ಖಂಡಿತಕ್ಕೂ ಕಾರಣ ಅಲ್ಲ” ಎಂಬ ಉಪವೀಟೊ! ಕೂಡ ಹೊರಬಂದಿದೆ. ಸಂತೋಷ.
ಈಗ ಸರ್ಕಾರಗಳು/ICMR ಮಾಡಬೇಕಿರುವ ಸಂಗತಿ ಎಂದರೆ, ಕೋವಿಡ್ ಹಠಾತ್ ಸಾವಿಗೆ ಹೇಗೆ ಕಾರಣ ಆಗುತ್ತಿದೆ? ಯಾವುದೋ ಒಂದು ನಿರ್ದಿಷ್ಟ ರಕ್ತದಗುಂಪು/ಜೀನು ಇತ್ಯಾದಿ ಯಾವುದಾದರೂ ಹಿನ್ನೆಲೆ ಇರುವವರಿಗೆ ಆಗುತ್ತಿದೆಯೇ ಅಥವಾ ಯಾವುದಾದರೂ ಜೀವನಶೈಲಿ, ಆಹಾರ, ಪ್ರಾಯವರ್ಗದ ಕಾರಣಕ್ಕೆ ಜನ ಸಾಯತ್ತಿದ್ದಾರೆಯೆ, ಬೇರೇನಾದರೂ ಇಲ್ಲಿಯ ತನಕ ಗೊತ್ತಾಗಿರದ ಕಾರಣಗಳಿವೆಯೆ ಎಂಬುದನ್ನು ವಿವರವಾಗಿ ಅಧ್ಯಯನಕ್ಕೆ ಒಳಪಡಿಸಿ, ಮುಂದಿನ ದಿನಗಳಲ್ಲಿ ಸಾಯಬಹುದಾದ ಜೀವಗಳ ರಕ್ಷಣೆಗೆ ವೈದ್ಯಕೀಯವಾಗಿ ಏನು ಮಾಡಬೇಕೆಂಬ ಕಡೆಗೆ ತ್ವರಿತವಾಗಿ (ಎಷ್ಟು ತ್ವರಿತವಾಗಿ ಎಂದರೆ, ರಾತ್ರೋರಾತಿ ಕೋವಿಡ್ ಲಾಕ್‌ಡೌನ್ ಮಾಡಿದ ನೆನಪಿದೆಯಲ್ಲ ಅಷ್ಟೇ ತ್ವರಿತವಾಗಿ) ಅಧ್ಯಯನ ನಡೆಸಬೇಕು ಮತ್ತು ಸಾಯಬಹುದಾದ ಎಳೆಯ ಜೀವಗಳನ್ನು ಉಳಿಸಬೇಕು.
ಜನ ಸಾಯಲು ಯಾವುದು ಕಾರಣ, ಏನು ಕಾರಣ ಎಂಬುದಕ್ಕಿಂತ, ಸಾಯುವವರನ್ನು ಹೇಗೆ ಬದುಕಿಸಬಹುದು ಎಂಬುದು ಆದ್ಯತೆ ಆಗಬೇಕು. ಸರ್ಕಾರಗಳಿರುವುದು ಪೋಸ್ಟ್ ಮಾರ್ಟಂ ಮಾಡುವುದಕ್ಕಲ್ಲ; ಜನರ ಜೀವ ರಕ್ಷಿಸುವುದಕ್ಕೆ.
ICMR ತಾನು ಕೋವಿಡ್ ಕುರಿತು ಇತ್ತೀಚೆಗೆ ಮಾಡಿರುವ ಎಲ್ಲ ಅಧ್ಯಯನಗಳನ್ನು ಸಾರ್ವಜನಿಕವಾಗಿ, ವೈದ್ಯಕೀಯ ರಂಗಕ್ಕೆ ಲಭ್ಯಗೊಳಿಸಬೇಕು, ದೇಶದ ಎಲ್ಲ ಕಡೆ ಖಾಸಗಿ ಸಂಶೋಧನೆಗಳೂ (ಡೀಮ್ಡ್ ವಿವಿಗಳು, ರಾಜ್ಯಗಳ ವೈದ್ಯಕೀಯ ಸಂಶೋಧನಾ ಕೇಂದ್ರಗಳು ಇತ್ಯಾದಿ) ಈ ವಿಚಾರದಲ್ಲಿ ತ್ವರಿತವಾಗಿ ಇನ್ನಷ್ಟು ಅಧ್ಯಯನ ನಡೆಸಬೇಕು.
ಇನ್ನು ಮುಂದೆ ಸಂಭವಿಸುವ ಪ್ರತಿಯೊಂದು ಹಠಾತ್ ಸಾವೂ ಕೂಡ ವಿವರವಾದ ಅಟಾಪ್ಸಿಗೆ ಒಳಗಾಗಬೇಕು ಮತ್ತು ಸಮಗ್ರ ಅಧ್ಯಯನಕ್ಕೆ ಒಳಪಡಬೇಕು. ಆರೋಗ್ಯದ ಹೊಣೆ ಹೊತ್ತಿರುವ ರಾಜ್ಯ ಸರ್ಕಾರಗಳು (ಕೇಂದ್ರಸರ್ಕಾರವು ಆರೋಗ್ಯ ರಾಜ್ಯಪಟ್ಟಿಯ ಸಂಗತಿ ಎಂದು ಪದೇ ಪದೇ ಹೇಳುತ್ತಿರುವುದರಿಂದ) ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿ, ಪ್ರತಿಯೊಂದು “ಹಠಾತ್ ಸಾವು” ಕೂಡ ಸಮಗ್ರ ಅಧ್ಯಯನ ಆಗುವಂತೆ ಏರ್ಪಡಿಸಬೇಕು. ಕೇಂದ್ರ ಸರ್ಕಾರ ಈ ಅಧ್ಯಯನಕ್ಕಾಗಿ ಒಂದು ದೇಶವ್ಯಾಪಿ ಮಾರ್ಗಸೂಚಿ ಹೊರಡಿಸಬೇಕು ಮತ್ತು ದೇಶದಾದ್ಯಂತ ಈ ಅಧ್ಯಯನ ಫಲಿತಾಂಶಗಳು ರಿಯಲ್ ಟೈಮಿನಲ್ಲಿ ಒಂದೆಡೆ ಸಂಗ್ರಹವಾಗಿ ಸಾರ್ವಜನಿಕವಾಗಿ ಮಾಹಿತಿ ಲಭ್ಯ ಆಗಬೇಕು.
ಹೃದಯಾಘಾತ ಮಾತ್ರವಲ್ಲದೇ ಲಕ್ವಾ, ರಕ್ತದೊತ್ತಡ, ರಕ್ತಪರಿಚಲನಾ ವ್ಯವಸ್ಥೆಯ ತೊಂದರೆಗಳು, ಹೃದಯದ – ನರವ್ಯವಸ್ಥೆಯ ತೊಂದರೆಗಳು, ಅಲರ್ಜಿಗಳು… ಇತ್ಯಾದಿ, ಜಗತ್ತಿನ ಬೇರೆ ಬೇರೆ ಕಡೆ ಈಗಾಗಲೇ ಅಧ್ಯಯನ ಆಗಿರುವ ಹತ್ತಾರು ಬೇರೆ ಕೋವಿಡ್ ಅಡ್ಡಪರಿಣಾಮಗಳು, ದೀರ್ಘಕಾಲಿಕ ಕೋವಿಡ್ ಪರಿಣಾಮಗಳು ಕೂಡ ವಿವರವಾಗಿ ಅಧ್ಯಯನವಾಗಬೇಕು.
ಕೊನೆಯದಾಗಿ, ಲಸಿಕೆಯ ಪರಿಣಾಮಗಳೂ ಇಷ್ಟೇ ವಿವರವಾಗಿ ಅಧ್ಯಯನಕ್ಕೆ ಒಳಗಾಗಬೇಕು.
– ರಾಜಾರಾಮ್ ತಲ್ಲೂರ್




