ಅಲೆಮಾರಿ ಹೆಸರಿನಡಿ SC, ST ಪ್ರಮಾಣ ಪತ್ರಗಳ ದುರುಪಯೋಗ ನಿಯಂತ್ರಣ ಮಾಡಿ

2 years ago

#HCMahadevappa #DasanuruKusanna #Misuse #ScSt #certificates #nomadic #name #letter

ಗೆ,
ಡಾ. ಹೆಚ್.ಸಿ. ಮಹಾದೇವಪ್ಪ ಅವರಿಗೆ
ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರು
ಕರ್ನಾಟಕ ಸರ್ಕಾರ, ಬೆಂಗಳೂರು

ಮಾನ್ಯರೆ,
ವಿಷಯ: ಅಲೆಮಾರಿ ಹೆಸರಿನಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿ ಪತ್ರಗಳ ದುರುಪಯೋಗ ನಿಯಂತ್ರಣಕ್ಕೆ ಸರ್ಕಾರ ಮುಂದಾಗಬೇಕೆಂದು ಸಾರ್ವಜನಿಕ ಮನವಿ.

1950 ಮೀಸಲಾತಿಯನ್ನು ಸಂವಿಧಾನ ಸಭೆಯ ಅಂಗೀಕಾರ ಮಾಡುವಾಗ ಅದು 1936 ಕೇಂದ್ರ ಶಾಸನ ಆದೇಶ ಮಾನ್ಯ ಮಾಡಿದೆ. ಅಂದರೆ ಅದರ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳಿಗೆ ಅಲೆಮಾರಿ ಪದ ಸಾಂವಿಧಾನಿಕವಾಗಿ ಬಳಕೆ ಆಗಿಲ್ಲ. ಅದು ಆಡಳಿತಾತ್ಮಕ ಅನುಮೋದನೆ. ಅದರ ಮೂಲಕ ರಾಜ್ಯಾದ್ಯಂತ ನಕಲಿ ಜಾತಿ ಪ್ರಮಾಣ ಸೃಷ್ಟಿಯಾಗುತ್ತಿವೆ.

ಮೈಸೂರು ರಾಜ್ಯದ 1956 ಪೆಟ್ಟಿಗೆ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಕೊಡಗು. ಮದ್ರಾಸ್ ಕರ್ನಾಟಕ, ದಕ್ಷಿಣ ಮತ್ತು ಉತ್ತರ ಕನ್ನಡ ಜಾತಿಗಳು ಸೇರಿ 101 ಮತ್ತು 50 ಆದವು. ಆವಾಗ ಪ್ರಾದೇಶಿಕ ನಿಬಂಧನೆಗಳನ್ನು ಹೇರಲಾಗಿತ್ತು. ಆದುದರಿಂದ 1977-78ರ ಪೂರ್ವಕ್ಕೆ ಆ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಸಾರ್ವತ್ರಿಕವಾಗಿ ಪಡೆಯುವ ಮಾನ್ಯತೆ ಇರಲಿಲ್ಲ. 1977-78 ರಲ್ಲಿ ನಿಬಂಧನೆಗಳನ್ನು ತೆಗೆದು ಹಾಕಿದ ಮೇಲೆ ಸಾಮೂಹಿಕವಾದವು.

ಅಲೆಮಾರಿ ಪದ ಕೇಂದ್ರ ಸರ್ಕಾರ ಬಳಕೆಗೆ ತಂದಿದ್ದು ಅವುಗಳ‌ ಸಾಮಾಜಿಕ ಜೀವನ ಶೈಲಿಯಲ್ಲಿ ಇದ್ದ ಸಂಚಾರಿ ಸ್ವಭಾವದ ಮೇಲೆ, ಅವುಗಳ ಬಲವರ್ಧನೆ ಕಾರ್ಯಕ್ರಮ ಜಾರಿಗಾಗಿ ಅಷ್ಟೇ. ಅದು ಜಾತಿ ಪತ್ರ ನೀಡುವ ರಹದಾರಿ ಅಲ್ಲ. ಉದಾಹರಣೆಗೆ ಬೇಡ (ಬುಡ್ಗ) ಜಂಗಮ, ಮಾಲ ಜಂಗಮ ಜಾತಿಗಳು ತೆಲಂಗಾಣದಿಂದ ಬಂದಿವೆ. 1977ರ ತರುವಾಯ ಈ  ಸಮುದಾಯಗಳ ಸಾಮಾಜಿಕ ನೆಲೆಗೆ ಸುಳ್ಳು ಸಾಮಾಜಿಕ ವಾರಸುದಾರರು ಹೆಚ್ಚಿದಂತೆಲ್ಲಾ ಅನೇಕ ಗೊಂದಲ ಏರ್ಪಟ್ಟಿದೆ. ಬೇಡ ಜಂಗಮ ಎಂಬ  ಒಂದು ಸಣ್ಣ ಸಮುದಾಯ 80 ಉಪ ಪಂಗಡಗಳನ್ನು ಹೊಂದಿವೆ ಎಂದು ಅಲೆಮಾರಿ  ಸಂಘಟಕರ ವಿತಂಡವಾದ ಮೂಲಕ  ಅತಿ ಹಿಂದುಳಿದ ವರ್ಗಗಳನ್ನು ತುರುಕುವ ಸಾಮಾಜಿಕ ಸಣ್ಣತನ ರಾಜ್ಯದಲ್ಲಿ ಬಹಿರಂಗವಾಗಿ ನಡೆಯುತ್ತಿವೆ. ಬಳ್ಳಾರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹದ್ದು ಮೀರಿದೆ.

ವೀರಶೈವ ಜಂಗಮರು ಮತ್ತು ಲಿಂಗಾಯತ ಜಂಗಮ ಸಮುದಾಯ ಹೇಗೆ ಪರಿಶಿಷ್ಟ ಜಾತಿ ಆಗಲು ಸಾಧ್ಯವಿಲ್ಲವೋ ಹಾಗೆಯೇ ಅತಿ ಹಿಂದುಳಿದ ವರ್ಗದ ಅಂದರೆ, ದಕ್ಷಿಣ ಭಾರತದಲ್ಲಿ ಬಾಳ ಸಂತೋಷಿ, ಬಹುರೂಪಿ, ಕಾಟಿ ಪಾಪಲ, ಸಿದ್ದುಲು /ಸಿದ್ದರು ಅತಿ ಹಿಂದುಳಿದ ವರ್ಗಗಳು. ಅಂದಮೇಲೆ ಅವುಗಳೇಗೆ ಪರಿಶಿಷ್ಟ ಜಾತಿ ಆಗುತ್ತಾರೆ. ಮತ್ತೇಕೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜ್ಯಗಳು ಇವರ ವಾದ ಮಾನ್ಯ ಮಾಡಿಲ್ಲ.

ಚನ್ನದಾಸರು 1936ರಲ್ಲಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ  ಚಲುವಾದಿ ಉಪ ಜಾತಿ ಎಂದು ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿದೆ. 1956ರಲ್ಲಿ ಹೊಲೆಯ ದಾಸರು ಅವರೊಂದಿಗೆ ಸೇರಿಕೊಂಡು ಸಂಯುಕ್ತ ಜಾತಿ ಆದವು. ಹಾಗೆಯೇ ಲಿಂಗದೇರ್ ಜಾತಿ ಡೋಹಾರ ಕಕ್ಕಯ್ಯ ಸಮುದಾಯವನ್ನು ಪ್ರತಿನಿಧಿಸುವ ಉಪ ಜಾತಿ.

ಕರ್ನಾಟಕ ರಾಜ್ಯದಲ್ಲಿ ಹೇಗಾದರೂ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿಗೆ ಹಕ್ಕುದಾರಿಕೆ ಪಡೆಯಲು ನೂರಾರು ಸುಳ್ಳು ಜಾತಿಗಳ ವಿಕೃತ ಸಾಮಾಜಿಕ ಗುಣಲಕ್ಷಣಗಳನ್ನು ತುರುಕುವ ಪ್ರಯತ್ನ ಮಾಡಲಾಗುತ್ತಿದೆ.

ಒಂದು ಕಡೆ ಮೀಸಲಾತಿ ಸಿಗದವರ ಕಿತ್ತಾಟ ಇರುವಾಗ, ಹಾಡುಹಗಲೇ ವೀರಶೈವ ಜಂಗಮರು ಮತ್ತು ಕೆಲವು ಅತಿ ಹಿಂದುಳಿದ ವರ್ಗಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹಗಲು ದರೋಡೆಗೆ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಾರೆ. ಮೂಲ ಅಸ್ಪೃಶ್ಯ ಜಾತಿಗಳ ಸೂಕ್ಷ್ಮ ಸಮುದಾಯ ಮತ್ತು ಆದಿಮ ಬುಡಕಟ್ಟು ಸಮುದಾಯದವರ ಉದ್ಧಾರಕ್ಕಾಗಿ ಯಾರೂ ವಿರೋಧ ಇಲ್ಲ. ಆದರೆ ಅಲೆಮಾರಿ ಪದವನ್ನು ಅಸಂವಿಧಾನಿಕವಾಗಿ ಬಳಸುವುದು ಕಾನೂನು ಬಾಹಿರವಾಗಿದೆ ಎಂದು ಸರಕಾರ ಹೇಳುವುದು ಯಾವಾಗ. ರಾಜ್ಯದ ಅನೇಕ ದಲಿತ ಹೋರಾಟಗಾರರಿಗೆ ಈ ಬಗ್ಗೆ ಸುಳ್ಳು ಮಾಹಿತಿ ಮೂಲಕ ದಾರಿ ತಪ್ಪಿಸುವ ಹುನ್ನಾರ ನಡೆದಿದೆ.

ಶ್ರೀ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂಲ ಅಸ್ಪೃಶ್ಯ ಜಾತಿಗಳ ವಿರುದ್ಧ ಕೆಲವು ಸುಳ್ಳು  ಸಂಘಟನೆಗಳ ಮಾತಿಗೆ ಏನಾದರೂ ಬೆಲೆ ನೀಡಿ ಅವರ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸುವ ಹುನ್ನಾರ ಮಾಡಿದರೆ, ಅದರ ಪರೋಕ್ಷ ಹೊಡೆತಕ್ಕೆ ಸರಕಾರವೇ ಮುಂದೆ ಬಲಿಯಾಗುತ್ತದೆ.

ಆದುದರಿಂದ, ಸಾರ್ವಜನಿಕ ವಿನಂತಿ ಮೂಲಕ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ ಅವರಲ್ಲಿ ವಿಶ್ವಾಸವಿಟ್ಟು ಕೋರುವುದೇನೆಂದರೆ ಅಲೆಮಾರಿ ಪದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸಾಂವಿಧಾನಿಕ ಹಕ್ಕುಗಳ ಹರಣ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ  ತಾವು ಮುತುವರ್ಜಿವಹಿಲು ಮುಂದಾಗಬೇಕು. ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಪರಿಶ್ರಮದ ಮೀಸಲಾತಿಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಇಂತು ನಿಮ್ಮವ
ದಾಸನೂರು ಕೂಸಣ್ಣ

(ದಯಮಾಡಿ ನನ್ನ ಸಹೋದರ ಬಂಧುಗಳು ಈ ಬಗ್ಗೆ ತಾವು ಒಂದಷ್ಟು ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ.)

Leave a Reply