ಕರ್ನಾಟಕದ ಮೊದಲ ಮುಸ್ಲಿಂ ಸ್ಪೀಕರ್ ಯು.ಟಿ.ಖಾದರ್

3 years ago

ಬೆಂಗಳೂರು: ಕರಾವಳಿಯ ಕೇಸರಿ ಭದ್ರಕೋಟೆಯನ್ನು ಸತತವಾಗಿ ಛಿದ್ರ ಮಾಡುತ್ತಾ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗುತ್ತಿರುವ ಹಿರಿಯ ನಾಯಕ ಯು.ಟಿ. ಖಾದರ್ ಅವರು ಹದಿನಾರನೇ ವಿಧಾನಸಭೆಯ ಅಧ್ಯಕ್ಷರಾಗಲಿದ್ದಾರೆ. 

ಈ ಮೂಲಕ ವಿಧಾನಸಭೆಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಮುಸ್ಲಿಂ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಖಾದರ್ ಪಾತ್ರರಾಗಲಿದ್ದಾರೆ.

ಕಾನೂನು ಪದವೀಧರರಾಗಿರುವ ಯು.ಟಿ. ಖಾದರ್ ಅವರು ಪಕ್ಷ ನಿಷ್ಠೆಗೆ ಮತ್ತೊಂದು ಹೆಸರು. ವಿದ್ಯಾರ್ಥಿ ದಿಸೆಯಲ್ಲೇ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡ ಅವರು ಎನ್ ಎಸ್ ಯು ಐ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸಿದರು ಯುವ ಕಾಂಗ್ರೆಸ್ ಪದಾಧಿಕಾರಿ  ಸೇರಿದಂತೆ ಹಂತ ಹಂತವಾಗಿ ಪಕ್ಷದ ಹುದ್ದೆಗಳನ್ನು ಅಲಂಕರಿಸಿ ಶಾಸಕರಾದರು.

ಅಂದಿನ ಉಳ್ಳಾಲ ಹಾಗೂ ಈಗಿನ ಮಂಗಳೂರು ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿರುವ ಯುಟಿ ಖಾದರ್ ಒಂದು ರೀತಿಯಲ್ಲಿ ಆಜಾತಶತ್ರು ಕರಾವಳಿ ಜಿಲ್ಲೆ ಮಂಗಳೂರು ಬಿಜೆಪಿಯ ಭದ್ರಕೋಟೆಯಾಗಿ ಪರಿಣಮಿಸಿದೆ. ಹೀಗಿದ್ದರೂ, ಖಾತ ಮತದಾರರಿಗೆ ಖಾದರ್ ಅವರ ಬಗ್ಗೆ ವಿಶೇಷವಾದ ಮಮತೆ ಹೀಗಾಗಿ ಸತತವಾಗಿ ಅವರನ್ನು ಶಾಸನಸಭಾ ಸದಸ್ಯರನ್ನಾಗಿ ಆಯ್ಕೆ ಮಾಡುತ್ತಿದ್ದಾರೆ.

ಆರೋಗ್ಯ ಶಿಕ್ಷಣ ವಸತಿ ನಗರ ಅಭಿವೃದ್ಧಿ ಇಲಾಖೆ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ಖಾದರ್ ಅವರು ನೂತನ ಸರ್ಕಾರದಲ್ಲಿ ಮತ್ತೊಮ್ಮೆ ಮಂತ್ರಿ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದರು ಕಾಂಗ್ರೆಸ್ ಹೈಕಮಾಂಡ್ ಇವರ ಸೇವೆ ಹಾಗೂ ಅಜಾತಶತ್ರು ಮನೋಭಾವವನ್ನು  ಗುರುತಿಸಿ ವಿಧಾನಸಭೆಯ ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಿದೆ.

ಎಲ್ಲರೊಂದಿಗೆ ಸ್ನೇಹಪರವಾದ ನಡವಳಿಕೆ ಕಾನೂನು, ನಿಯಮಗಳ ಆಳವಾದ ಅರಿವು ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡದ ದಕ್ಷ ಆಡಳಿತ ವೈಖರಿ ಸೇರಿದಂತೆ ಹಲವಾರು ಅಂಶಗಳು ಖಾದರ್ ಅವರನ್ನು ಈ ಉನ್ನತ ಹುದ್ದೆಗೆ ಕೊಂಡೊಯ್ದಿದಿದೆ.

ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಅದರಲ್ಲಿ ಖಾದರ್ ಅವರನ್ನು ವಿಧಾನಸಭೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು ಅದನ್ನು ಡಿಸಿಎಂ ಶಿವಕುಮಾರ್ ಸೇರಿದಂತೆ ಹಲವರು ಅನುಮೋದಿಸಿದರು.

ಬಳಿಕ ಖಾದರ್ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮ್ಮದ್ ಖಾನ್, ಶಾಸಕ ಅಜಯ್ ಸಿಂಗ್ ಅವರೊಂದಿಗೆ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಇಂದು ನಾಮಪತ್ರ ಸಲ್ಲಿಸಿದರು.

ಸಭಾಧ್ಯಕ್ಷ ಸ್ಥಾನಕ್ಕೆ ನಡೆದಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಈ ಹಿನ್ನೆಲೆಯಲ್ಲಿ,ಯು.ಟಿ.ಖಾದರ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

Leave a Reply