ನೂರು ಗೊಬೆಲ್ಸ್ ಹಾಕಿದರೆ ಒಬ್ಬ ಸುರೇಶ್ ಕುಮಾರ್ ಸೃಷ್ಟಿಯಾಗುತ್ತಾರೆ

1 year ago

ಸಜ್ಜನ ಶಾಸಕರೆಂದು ತಮ್ಮ ಅಭಿಮಾನಿಗಳಿಂದ ಕೊಂಡಾಡಿಸಿಕೊಳ್ಳುತ್ತಿರುವ ಶಾಸಕ ಎಸ್.ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ಗೋಡೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿ ಕೊನೆಗೆ ಅವರೇ ಉತ್ತರ ನೀಡಿದ್ದಾರೆ.

ಸುರೇಶ್ ಕುಮಾರ್ ಅವರಂತೆ ದಿನ ಬೆಳಿಗ್ಗೆ ಎದ್ದು ಫೇಸ್ ಬುಕ್ ನಲ್ಲಿ ಗಳಿಗೆಗೊಂದು ಪೋಸ್ಟ್ ಹಾಕುತ್ತಾ ತಮಗೆ ತಾವೇ ಸಂಭ್ರಮಿಸಿಕೊಳ್ಳುವಷ್ಟು ಸಮಯ ಖರ್ಗೆ ಅವರಿಗೆ ಇರಲಿಕ್ಕಿಲ್ಲ ಮತ್ತು ಅವರು ಸುರೇಶ್ ಕುಮಾರ್ ಅವರ ಮಟ್ಟಕ್ಕೆ ಇಳಿದು ಉತ್ತರಿಸುವ ಅಗತ್ಯವೂ ಇಲ್ಲ.ಇದಕ್ಕಾಗಿ ನಾನೇ ಸುರೇಶ್ ಕುಮಾರ್ ಅವರಿಗೆ ಐದು ಪ್ರಶ್ನೆ ಕೇಳುವವನಂತಾಗುತ್ತೇನೆ,, ದಮ್ಮು ತಾಕತ್ ಇದ್ದರೆ ಅವರು ಉತ್ತರಿಸುವವರಂತಾಗಬೇಕು.

1.ಭಾರತ ಸಂವಿಧಾನದ ಅತ್ಯಂತ ಕೆಟ್ಟ ವಿಚಾರ ಏನಂದ್ರೆ, ಅದರಲ್ಲಿ ಭಾರತೀಯತೆ ಎನ್ನುವುದೇ ಇಲ್ಲ ಪುರಾತನ ಭಾರತದ ಕಾನೂನು-ಕಟ್ಟಳೆಗಳಾಗಲಿ, ಸಂರಚನೆಗಳಾಗಲಿ, ನುಡಿಗಟ್ಟುಗಳಾಗಲಿ ಯಾವುದೂ ಇಲ್ಲ… ಸ್ಪಾರ್ತದ ಲೈಕುರ್ಗಸ್ ಅಥವಾ ಪರ್ಸಿಯಾದ ಸೊಲೊನ್ ಬರೆಯುವುದಕ್ಕು ಮೊದಲೇ ಮನು ಈ ನಿಯಮಗಳನ್ನು ಇಲ್ಲಿ ರಚಿಸಿದ್ದರು. ಇವತ್ತಿಗೂ ಮನುಸಂಸ್ಮೃತಿಯಲ್ಲಿ ಮನು ಉಲ್ಲೇಖಿಸಿರುವ ಕಾನೂನುಗಳು ಪ್ರಪಂಚದ ಗೌರವಕ್ಕೆ ಪಾತ್ರವಾಗಿವೆ ಮತ್ತು ಸ್ವಾಭಾವಿಕ ವಿಧೇಯತೆ ಮತ್ತು ಅನುಸರಣೆಯಲ್ಲಿವೆ. ಆದರೆ ನಮ್ಮ ಸಂವಿಧಾನವನ್ನು ರಚಿಸಿದ ಪಂಡಿತರಿಗೆ ಇದ್ಯಾವುದೂ ಲೆಕ್ಕಕ್ಕಿಲ್ಲ”- ಆರ್ ಎಸ್.ಎಸ್
(ಮೂಲ: 1949ರ ನವಂಬರ್ 26ರಂದು  ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ ನಾಲ್ಕು ದಿನಗಳ ನಂತರ (ನವಂಬರ್ 30) ಆರ್ ಎಸ್ ಎಸ್ ಮುಖವಾಣಿಯಾದ “ಆರ್ಗನೈಸರ್ ಪತ್ರಿಕೆ ಬರೆದಿದ್ದ ಸಂಪಾದಕೀಯದ ಸಾಲುಗಳು)

2: “ನಮ್ಮದು ಎಂದು ಹೇಳಲಾಗುತ್ತಿರುವ ಈ ಸಂವಿಧಾನವು, ಪಾಶ್ಚಾತ್ಯ ದೇಶಗಳ ಸಂವಿಧಾನಗಳಿಂದ ಬೇರೆಬೇರೆ ಕಲಮುಗಳನ್ನು ಹೆಕ್ಕಿತಂದು ಒಟ್ಟುಗೂಡಿಸಿದ ಕಂತೆಯಾಗಿದ್ದು ಇದರಲ್ಲಿ ಹಲವಾರು ತೊಡಕುಗಳು ಮತ್ತು ಭಿನ್ನನಿಲುವುಗಳು ಎದ್ದು ಕಾಣುತ್ತವೆ. ನಮ್ಮದು ಅಂತ ಕರೆದುಕೊಳ್ಳುವ ಯಾವ ಭಾರತೀಯ ಅಂಶವೂ ಇದರಲ್ಲಿಲ್ಲ. ನಮ್ಮ ರಾಷ್ಟ್ರೀಯ ಕಾರ್ಯಯೋಜನೆ ಏನು ಮತ್ತು ನಮ್ಮ ಬದುಕಿನ ಮುಖ್ಯ ಧಾತುವೇನು ಎಂಬುದರ ಬಗ್ಗೆ ಇದರ ನಿರ್ದೇಶಕ ತತ್ವಗಳಲ್ಲಿ ಒಂದೇಒಂದು ಪದ ಇಲ್ಲ!” ಎಂದು ಆರ್ ಎಸ್ ಎಸ್ ನ ಎರಡನೇ ಸರಸಂಘ ಚಾಲಕರಾದ ಎಂ.ಎಸ್. ಗೋಳ್ವಾಲ್ಕರ್.
(ಮೂಲ: ಗೋಲ್ವಾಲ್ಕರ್ ಬರೆದಿರುವ  ಬಂಚ್ ಆಫ್ ಥಾಟ್ಸ್)

3: “ವೇದಗಳ ನಂತರ ನಮ್ಮ ಹಿಂದೂ ರಾಷ್ಟ್ರಕ್ಕೆ ಪೂಜನೀಯವಾದ ಗ್ರಂಥವೆಂದರೆ ಮನುಸ್ಮೃತಿಯಾಗಿದೆ. ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ-ಸಂಪ್ರಾದಯ, ಆಲೋಚನೆಗಳು ಮತ್ತು ಆಚಾರಗಳಿಗೆ ಅದೇ ಆಧಾರ. ಶತಮಾನಗಳಿಂದ ನಮ್ಮ ದೇಶವು ಸಾಗಿಬಂದ ಆಧ್ಯಾತ್ಮಿಕ ಮತ್ತು ದೈವಿಕ ಪಥಗಳಿಗೆ ಈ ಕೃತಿಯೇ ಕ್ರೋಢೀಕೃತ ರೂಪ. ಇವತ್ತಿಗೂ ಕೋಟ್ಯಂತರ ಹಿಂದೂಗಳು ತಮ್ಮ ಜೀವನ ಮತ್ತು ಆಚರಣೆಗಳಲಿ ಅನುಸರಿಸುತ್ತಿರುವ ಕಟ್ಟಳೆಗಳಿಗೆ ಈ ಮನುಸ್ಮೃತಿಯೇ ಮೂಲವಾಗಿದೆ.  ಮನುಸ್ಮೃತಿಯೇ ಹಿಂದೂ ಕಾನೂನು” ಎಂದು ಹೇಳಿದವರು ವಿನಾಯಕ ದಾಮೋದರ ಸಾವರ್ಕರ್.

(ಮೂಲ:  ದೆಹಲಿಯ ಪ್ರಭಾತ್ ಸಂಸ್ಥೆ ಹಿಂದಿಯಲ್ಲಿ ಪ್ರಕಟಿಸಿರುವ ಸಾವರ್ಕರ್ ಸಮಗ್ರ ಬರಹಗಳ ಪುಸ್ತಕದ ಸಂಪುಟ 4ರ 416ನೇ ಪುಟ)

4. “….ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪೃಷ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ. ನಾವು ಅಸ್ಪೃಷ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು” ಎಂದು ಹೇಳಿದವರು ಆರ್ ಎಸ್ ಎಸ್ ನ ಮೂಲ ಚಿಂತಕರಲ್ಲಿ ಒಬ್ಬರಾದ ಬಿ.ಎಸ್. ಮೂಂಜೆ.

( ಮೂಲ: ಮೂಂಜೆ ಡೈರಿ , ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು  ಗ್ರಂಥಾಲಯ. ಕೀತ್ ಮೇದೋಕ್ರಾಫ್ಟ್ ಅವರ “the Moonje–Ambedkar Pact” ಎಂಬ ಲೇಖನ )

5. ‘’ ಏನು ತಿನ್ನಬೇಕೆನ್ನುವುದನ್ನು ಸಲಹೆ ನೀಡಬೇಕಾಗಿರುವುದು ವೈದ್ಯರು, ಧರ್ಮಗ್ರಂಥಗಳಲ್ಲ. ದನದ ಮಾಂಸವನ್ನು ಅಮೆರಿಕ ಇಂಗ್ಲಂಡ್ ದೇಶಗಳಲ್ಲಿ ಬೇರೆ ಪ್ರಾಣಿಗಳ ಮಾಂಸವನ್ನು ತಿಂದರೆ ತಪ್ಪಲ್ಲ ಎಂದು ಹೇಳಿದವರು ವಿ.ಡಿ.ಸಾವರ್ಕರ್/
( ‘’ಸಾವರ್ಕರ್ ಸಮಗ್ರ’’  ಎಂಟನೇ ಸಂಪುಟ ಪುಟ 446-47)

ಈ ಐದು ಅಭಿಪ್ರಾಯಗಳನ್ನು ಆರ್ ಎಸ್ ಎಸ್ ಇಲ್ಲವೇ ಭಾರತೀಯ ಜನತಾಪಕ್ಷದ ಯಾವ ನಾಯಕರು ಈ ಕ್ಷಣದ ವರೆಗೆ ನಿರಾಕರಿಸಿಲ್ಲ, ಅಂದರೆ ಒಪ್ಪಿಕೊಂಡಿದ್ದಾರೆ ಎಂದು ಅರ್ಥವಲ್ಲವೇ?

ಸುರೇಶ್ ಕುಮಾರ್ ಅವರೇ ಈಗ ನಿಮ್ಮ ಸರದಿ: ಈ ಅಭಿಪ್ರಾಯಗಳನ್ನು ನೀವು ಒಪ್ಪುತ್ತಿರೋ , ನಿರಾಕರಿಸುತ್ತಿರೋ?

ಕೊನೆಯದಾಗಿ, ‘’ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದೆ, ಸೋಲಿಸಿದೆ’’ ಎಂದು ನೀವು ಮತ್ತು ನಿಮ್ಮ ನಾಯಕರು ಕಂಠಶೋಷಣೆ ಮಾಡುತ್ತಿದ್ದಿರಲ್ಲಾ? ಅದೇ ಚುನಾವಣೆಯಲ್ಲಿ ಅಂಬೇಡ್ಕರ್  ವಿರುದ್ದ ಹಿಂದೂ ಮಹಾ ಸಭಾದ ಅಭ್ಯರ್ಥಿ ಯಾಕೆ ಸ್ಪರ್ಧಿಸಿದ್ದರು ಎನ್ನುವುದನ್ನು ಹೇಳುವಿರಾ?

ಭಾರತೀಯ ಮಜ್ದೂರ್ ಸಂಘದ ನಾಯಕರಾಗಿದ್ದ ದತ್ತೋಪಂಥ್ ಠೇಂಗಡಿ ಅವರನ್ನು ಬಹಳಭಕ್ತಿ -ಗೌರವದಿಂದ ನೆನಪು ಮಾಡಿಕೊಂಡಿದ್ದೀರಿ. ವಾಜಪೇಯಿ ಸರ್ಕಾರ ಭರದಿಂದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಾ, ಇದಕ್ಕಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕರಿಗೆ ದ್ರೋಹ ಬಗೆಯುತ್ತಿದ್ದಾಗ ಆ ಪುಣ್ಯಾತ್ಮ ನಿಮ್ಮ ನಾಯಕರಿಗೆ ಉಗಿದು ಉಪ್ಪು ಹಾಕುತ್ತಿದ್ದರು. ಆ ಹೇಳಿಕೆಗಳನ್ನು ಕೂಡಾ ನೀವು ಬರೆದು ಪುಣ್ಯ ಕಟ್ಟಿಕೊಳ್ಳಿ.

ನನಗೆ ಗೊತ್ತು, ಈ ಯಾವ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರ ಇಲ್ಲ. ಖರ್ಗೆಯವರಂತಹ ಹಿರಿಯ ನಾಯಕರನ್ನು ಸುಮ್ಮನೆ ಕೆಣಕಲು ಹೋಗಿ ನಮ್ಮಂತಹರ ಕೈಗೆ ಬಡಿಗೆ ಕೊಟ್ಟು ಹೊಡೆಸಿಕೊಳ್ಳಬೇಡಿ.

ನೂರು ಗೊಬೆಲ್ಸ್ ಹಾಕಿದರೆ ಒಬ್ಬ ಸುರೇಶ್ ಕುಮಾರ್ ಸೃಷ್ಟಿಯಾಗುತ್ತಾರೆ ಎನ್ನುವುದನ್ನು ನೀವು ಸಾಬೀತುಪಡಿಸುತ್ತಲೇ ಇರಿ,

ಗುಡ್ ಲಕ್.

– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು

Leave a Reply