ಬೆಂಗಳೂರು: ಜಗತ್ತಿನಲ್ಲಿ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಗಳಿಸುವ ಮಾರ್ಗವನ್ನು ಸಾಧಿಸಿದವರು ಮಹಾತ್ಮಗಾಂಧಿಯವರು. ನೆಹರೂ-ಇಂದಿರಾ ಮತ್ತು ರಾಜೀವ್ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕ ಭಾರತದ ನಿರ್ಮಾತೃಗಳು. ಕಾಂಗ್ರೆಸ್ ಜನರ ಪ್ರಗತಿಗಾಗಿ ಹುಟ್ಟಿದ ಹೋರಾಟದ ಸಿದ್ಧಾಂತ ಮತ್ತು ಚಳವಳಿ. ಸಾಮಾಜಿಕ ನ್ಯಾಯ ಉಳಿದಿರುವುದು ಕಾಂಗ್ರೆಸ್ನಿಂದ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಭಾರತ್ ಜೋಡೋ ಸಭಾಂಗಣದಲ್ಲಿ ಆಯೋಜಿಸಿದ್ದ 139ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿರುವ ಎಲ್ಲಾ ಅಣೆಕಟ್ಟುಗಳು ನಿರ್ಮಾಣ ಆಗಿದ್ದು ಕಾಂಗ್ರೆಸ್ ಮತ್ತು ನೆಹರೂ ಅವರ ಅವಧಿಯಲ್ಲಿ. ಬಿಜೆಪಿಯವರಿಗೆ ಒಂದೇ ಒಂದು ಅಣೆಕಟ್ಟನ್ನೂ ನಿರ್ಮಿಸಲು ಇದುವರೆಗೂ ಸಾಧ್ಯವಾಗಿಲ್ಲ. ಸತ್ಯದ ತಲೆ ಮೇಲೆ ಹೊಡೆದಂತೆ ಬಿಜೆಪಿಯವರು ಬುರುಡೆ ಬಿಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂ ಬೇರೆ – ಹಿಂದುತ್ವವೇ ಬೇರೆ. ನಾವು ರಾಮನನ್ನು ಪೂಜಿಸಲ್ವಾ? ನಮ್ಮೂರುಗಳಲ್ಲಿ ರಾಮಮಂದಿರ ಕಟ್ಟಿಲ್ವಾ? ರಾಮನ ಭಜನೆ ಮಾಡುವುದಿಲ್ವಾ? ಬಿಜೆಪಿಯವರದ್ದು ಡೋಂಗಿ ಹಿಂದುತ್ವ ಎಂದು ಕಿಡಿಕಾರಿದರು.
ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತದ ತುಂಬೆಲ್ಲ ಸಾವಿರಾರು ಸಮಸ್ಯೆಗಳಿದ್ದವು. ಆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಬಂದಿದ್ದು ಕಾಂಗ್ರೆಸ್. ಈಗಲೂ ಹಲವು ಸಮಸ್ಯೆಗಳಿವೆ. ಇವುಗಳ ಪರಿಹಾರಕ್ಕೂ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಕಾಂಗ್ರೆಸ್ ಹೋರಾಟದ ಮಾರ್ಗದಲ್ಲೇ ಅಧಿಕಾರಕ್ಕೆ ಬರುತ್ತದೆ. ಭಾರತ್ ಜೋಡೋ ನಂತರ ರಾಹುಲ್ ಗಾಂಧಿ ಅವರು ಮತ್ತೊಂದು ಸುತ್ತು ಪಾದಯಾತ್ರೆ ಹೊರಟಿದ್ದಾರೆ. ರಾಹುಲ್ ಗಾಂಧಿ ಅವರು ದೇಶದ ನೇತೃತ್ವ ವಹಿಸುತ್ತಾರೆ, ಪ್ರಧಾನಿ ಆಗುತ್ತಾರೆ ಎಂಬ ಭರವಸೆ ನನಗಿದೆ ಎಂದರು.
ಮಹಾತ್ಮ ಗಾಂಧಿಯವರು ಬ್ರಿಟಿಷರನ್ನು ಅಹಿಂಸೆಯ ಮೂಲಕ ಮಣಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಹುತಾತ್ಮರಾದರು. ಲಕ್ಷಾಂತರ ಮಂದಿಯ ತ್ಯಾಗ-ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದಕ್ಕಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿ ನಡೆಯಿತು ಎಂದರು.
ಬಿಜೆಪಿ, ಜನ ಸಂಘ, RSS ಮತ್ತು ಸಂಘ ಪರಿವಾರದ ಒಬ್ಬೇ ಒಬ್ಬರು ಬ್ರಿಟಿಷರ ವಿರುದ್ಧ ಹೋರಾಟ ಮಾಡಲಿಲ್ಲ. ಬ್ರಿಟಿಷರ ಅವಧಿಯಲ್ಲೇ RSS ಹುಟ್ಟಿತ್ತು. ಆದರೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಒಂದೇ ಒಂದು ದಿನವೂ ಇವರು ಭಾಗವಹಿಸಲಿಲ್ಲ. ಆದ್ದರಿಂದ ಬಿಜೆಪಿಯ ಡೋಂಗಿತನವನ್ನು ಅರ್ಥ ಮಾಡಿಕೊಂಡು ಜನರಿಗೆ ಮನವರಿಕೆ ಮಾಡಿಸಬೇಕು ಎಂದು ಕರೆನೀಡಿದರು.
ಸ್ವಾತಂತ್ರ್ಯಾ ನಂತರ ಭಾರತ ನಿರ್ಮಾಣದಲ್ಲಿ ಕಾಂಗ್ರೆಸ್ ಸರ್ವ ರಂಗಗಳಲ್ಲೂ ಪ್ರಗತಿ ಸಾಧಿಸಿತು. ದೇಶದಲ್ಲಿರುವ ಎಲ್ಲಾ ಅಣೆಕಟ್ಟುಗಳು ನಿರ್ಮಾಣ ಆಗಿದ್ದು ಕಾಂಗ್ರೆಸ್ ಮತ್ತು ನೆಹರೂ ಅವರ ಅವಧಿಯಲ್ಲಿ. ಬಿಜೆಪಿಯವರು ಒಂದೇ ಒಂದು ಅಣೆಕಟ್ಟನ್ನೂ ನಿರ್ಮಿಸಲು ಇದುವರೆಗೂ ಸಾಧ್ಯವಾಗಿಲ್ಲ ಎಂದರು.
ಇಂಟರ್ ನೆಟ್ ದೇಶದ ತುಂಬ ವಿಸ್ತರಿಸಲು ಅಡಿಪಾಯ ಹಾಕಿದವರು ರಾಜೀವ್ ಗಾಂಧಿ. ಬಿಜೆಪಿಯವರು ಬುರುಡೆ ಬಿಡುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಭಾರತ್ ಜೋಡೋ ಸಭಾಂಗಣದಲ್ಲಿ ಆಯೋಜಿಸಿದ್ದ 139ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿದ ಸಿದ್ದರಾಮಯ್ಯ, ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವೆ ರಾಣಿ ಸತೀಶ್ ಸೇರಿದಂತೆ ಹಲವರು ಹಾಜರಿದ್ದರು.




