ಶ್ರೀನಿವಾಸ ವೈದ್ಯರ ನೆನಪು: ಜಗದೀಶ್ ಕೊಪ್ಪ

3 years ago

ಏಳೆಂಟು ವರ್ಷಗಳ ಹಿಂದಿನ ನೆನಪು. ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ ನಡೆಯುತ್ತಿದ್ದ ಸಮಯದಲ್ಲಿ ಹಿರಿಯ ಲೇಖಕರಾದ ಶ್ರೀನಿವಾಸ ವೈದ್ಯ  ಧಾರವಾಡಕ್ಕೆ ಆಗಮಿಸಿದ್ದರು. ನನಗೆ ಅವರ ಪರಿಚಯವಿರಲಿಲ್ಲ.

ಬೆಂಗಳೂರಿನಿಂದ ಸಾಹಿತ್ಯ ಸಂಭ್ರಮಕ್ಕೆ ಆಗಮಿಸಿದ್ದ ಲೇಖಕಿಯರು ಹಾಗೂ ಸಹೋದರಿಯರಾದ ಬಿ.ವಿ.ಭಾರತಿ ಮತ್ತು ಸಂಧ್ಯಾರಾಣಿ ಅವರನ್ನು ಎರಡನೆಯ ದಿನ ಮನೆಗೆ ಊಟಕ್ಕೆ ಆಹ್ವಾನಿಸಿದ್ದೆ.

ಅವರು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ  ಶ್ರೀನಿವಾಸ ವೈದ್ರರು ಉಳಿದುಕೊಂಡಿದ್ದರು. ಅವರು ಹೊರಗೆ ಹೋಗಲು  ಬಂದು ಸ್ವಾಗತಕಾರಣಿಯ ಕಚೇರಿಯ ಸೋಫಾದಲ್ಲಿ ತಮ್ಮ ಸಹಾಯಕಿಯೊಡನೆ ಕುಳಿತಿದ್ದರು. ನಾನು ಹೋಟೆಲ್ ಗೆ ಹೋಗಿ  ರೂಂ 208 ರಲ್ಲಿ ಉಳಿದುಕೊಂಡಿರುವ ಭಾರತಿ ಮತ್ತು ಸಂಧ್ಯಾ ಅವರಿಗೆ ಜಗದೀಶ್ ಕೊಪ್ಪ ಹೊರಗೆ ಕಾಯುತ್ತಿದ್ದಾರೆ ಎಂದು ಇಂಟರ್ ಕಾಂ ನಲ್ಲಿ ತಿಳಿಸಿ ಎಂದು ಸ್ವಾಗತಕಾರಿಣಿಗೆ ಹೇಳಿ ಮತ್ತೋಂದು ಸೋಫಾದಲ್ಲಿ ಕುಳಿತೆ.

ನಾನು ನನ್ನ ಹೆಸರು ಹೇಳುತ್ತಿದ್ದಂತೆ ನನ್ನ ಬಳಿ ಬಂದ ವೈದ್ಯ ಅವರು . ಯು ಆರ್ ಮಿಸ್ಟರ್ ಜಗದೀಶ್ ಕೊಪ್ಪ? ಎಂದು ಪ್ರಶ್ನಿಸಿದರು. ಹೌದು ಸರ್ ಎಂದು ಹೇಳುತ್ತಾ, ತಾವು ಗೊತ್ತಾಗಲಿಲ್ಲ ಸರ್ ಎಂದೆ. ಆ ಹಿರಿಯ ಜೀವ ನಗುತ್ತಾ,  ನಾನು ಶ್ರೀನಿವಾಸ ವೈದ್ಯ ಎಂದು ಹೇಳುತ್ತಾ, ನಿಮ್ಮ ಮರುಭೂಮಿಯ ಹೂ ಕೃತಿ ಓದಿದ ನಂತರ ಸಮೀರನಿಗೆ ( ಮನೋಹರ ಗ್ರಂಥಮಾಲೆಯ ಸಮೀರ್ ಜೋಶಿ) ನಿಮ್ಮನ್ನು ಭೇಟಿ ಮಾಡಿಸು ಎಂದು ಹೇಳಿದ್ದೆ. ಅನಿರೀಕ್ಷಿತವಾಗಿ ಇಲ್ಲಿಯೇ ಸಿಕ್ಕಿಬಿಟ್ಟಿರಿ ಎಂದರು.

ಅವರ ಪರಿಚಯ ಕೇಳಿದಾಕ್ಷಣ ನನಗೆ ರೋಮಾಂಚನವಾಯಿತು. ಕೂಡಲೇ ಅವರ ಕಾಲು ಮುಟ್ಟಿ ನಮಸ್ಕರಿಸಿ, ಸಾರ್ ನಿಮ್ಮ ಮನ ಸುಖರಾಯನ ಮನಸು ಪ್ರಬಂಧಗಳನ್ನು ಪದೇ ಪದೇ ಓದುತ್ತಿದ್ದೀನಿ. ತೇಜಸ್ವಿ ಅವರ ಕರ್ವಾಲೋ ಹೊರತು ಪಡಿಸಿದರೆ, ನಿಮ್ಮ ಕೃತಿಯನ್ನು ಅತಿ ಹೆಚ್ಚು ಬಾರಿ ಓದಿದ್ದೀನಿ ಎಂದು ತಿಳಿಸಿದೆ.

ಧಾರವಾಡ ಮೂಲದ ಶ್ರೀಣಿವಾಸ ವೈದ್ಯರು ಬ್ಯಾಂಕ್ ಉದ್ಯೋಗದ ನಿವೃತ್ತಿಯ ನಂತರ ಬರೆವಣಿಗೆ ಆರಂಭಿಸಿದರು. ಅವರ ಹಳ್ಳ ಬಂತು ಹಳ್ಳ ಕಾದಂಬರಿ ಏಕಕಾಲಕ್ಕೆ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಢೆಮಿ ಬಹುಮಾನ‌  ಪಡೆದು ಕೊಂಡಿತು. ನನಗೆ ಅವರ ಲಲಿತ ಪ್ರಬಂಧಗಳ ಬಗ್ಗೆ ಇನ್ನಿಲ್ಲದ ಮೋಹ. ಅವರ ಧಾರವಾಡ ಭಾಷೆಯ ಬಳಕೆ ಪ್ರಬಂಧಗಳ ವಿಶಿಷ್ಟವಾಗಿದೆ.

ನಂತರದ ದಿನಗಳಲ್ಲಿ ಅವರು ಧಾರವಾಢಕ್ಕೆ ಬಂದಾಗ ತಪ್ಪದೇ ಭೇಟಿಯಾಗುತ್ತಿದ್ದೆ. ಸಾಹಿತ್ಯದ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿದ್ದವು. ಅವರು ನೆನಪಾದಗಲೆಲ್ಲಾ ಅವರಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಿದ್ದೆ. ಪಾಸ್ ಪೋರ್ಟ್ ಸಿದ್ಧವಾಗಿದೆ ವೀಸಾಕ್ಕಾಗಿ ಕಾಯುತ್ತಿದ್ದೀನಿ ಎಂದು ಹಾಸ್ಯ ಮಾಡುತ್ತಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಬರೆವಣಿಗೆಯ ಮೂಲಕ ನನ್ನ ಮೇಲೆ ತೀವ್ರ ಪರಿಣಾಮ ಬೀರಿದ ಲೇಖಕರಲ್ಲಿ ಶ್ರೀನಿವಾಸ ವೈದ್ಯ ಮುಖ್ಯರಾದವರು.

ಅವರ ಮನಸಖರಾಯನ ಮನಸು ಕೃತಿಯಲ್ಲಿನ ಧಾರವಾಡದ ಹಳೆಯ ನೆನಪುಗಳನ್ನು ಓದುವಾಗ, ಬಾಲ್ಯದ ಗೆಳೆಯರ ಬಗ್ಗೆ  ಓದುವಾಗ  ನನಗೆ ಡಾ.ರಾಜೇಂದ್ರ ಚೆನ್ನಿಯವರು ಬರೆದಿರುವ ಧಾರವಾಡದ ಹರೆಯದ ತುಂಟಾಟದ ದಿನಗಳ ಕೃತಿ ನೆನಪಾಯಿತು.

ಧಾರವಾಡದ ಮಣ್ಣಿಗೆ, ಅಲ್ಲಿನ ಸಂಸ್ಕೃತಿಗೆ ಜೀವಂತಿಕೆ ಇದೆ. ಅಲ್ಲಿನ ಮನುಷ್ಯ ಜೀವಿಗಳ ಭಾವನೆಗಳಲ್ಲಿರುವ ಹೃದಯವಂತಿಕೆಯನ್ನು ಇಪ್ಪತ್ತು ವರ್ಷ ಧಾರವಾಡದಲ್ಲಿ ಇದ್ದು ಅನುಭವಿಸಿದವನು ನಾನು. ನಿಜ ಹೇಳಬೇಕೆಂದರೆ ನಾನು  ಹುಟ್ಟಿದ ನೆಲ ಮಂಡ್ಯಕ್ಕಿಂತ ಒಂದು ಪಟ್ಟು ಹೆಚ್ಚು ಧಾರವಾಡದ ನೆಲವನ್ನು ಪ್ರೀತಿಸಿದವನು.

ಅಲ್ಲಿನ ವೈದ್ಯರು ಈಗ ಬೆಂಗಳೂರಿನಲ್ಲಿ ಇನ್ನಿಲ್ಲವಾಗಿದ್ದಾರೆ ಆದರೆ, ನನ್ನೊಳಗೆ  ಎಂ.ಎಂ. ಕಲ್ಬುರ್ಗಿಸರ್, ಗಿರಡ್ಡಿ ಸರ್ ಅವರಂತೆ ಸದಾ ಜೀವಂತವಾಗಿ ಇರುತ್ತಾರೆ.

-ಜಗದೀಶ್ ಕೊಪ್ಪ, ಚಿಂತಕರು

Leave a Reply