ರೆವರೆಂಡ್‌ ಫರ್ಡಿನಾಂಡ್ ಕಿಟೆಲ್ (08-04-1832 -19-12-1903)

2 years ago

ರೆವರೆಂಡ್‌ ಫರ್ಡಿನಾಂಡ್ ಕಿಟೆಲ್ (08-04-1832 -19-12-1903)

ಜನನ: 1832 ಏಪ್ರಿಲ್ 8, ತಂದೆ: ನಾಟ್‌ ಫ್ರೀಡ್ ಕ್ರಿಶ್ಚಿಯನ್ ಕಿಟೆಲ್, ತಾಯಿ: ತೆಯೊಡೊವ್ ಹೆಲೆನ್ ಹಾಬರ್ಟ್. 1853ರಲ್ಲಿ ಬಾಸೆಲ್ ನಗರದ ಮಿಷನ್ ಸಂಸ್ಥೆಯಲ್ಲಿ ಶಿಕ್ಷಣ. 1854ರಲ್ಲಿ ಮಂಗಳೂರಿಗೆ ಆಗಮನ. ನಿಧನ: 1903 ಡಿಸೆಂಬರ್ 19.

ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಅವರು ಜರ್ಮನಿಯಲ್ಲಿ ಜನಿಸಿದ ಕನ್ನಡ ಸಾಹಿತಿ. ಕನ್ನಡ – ಇಂಗ್ಲಿಷ್ ನಿಘಂಟು ಇವರ ಮಹತ್ವದ ಕೃತಿ. ಈ ಕೃತಿ ನೂರಾರು ಪಿಎಚ್.ಡಿ., ಮಾಡಲು ಯೋಗ್ಯವಾದ ಕೃತಿಯಾಗಿದ್ದು, ಇದುವರೆಗಿನ ಭಾರತೀಯ ಭಾಷೆ ಮತ್ತು ಇಂಗ್ಲಿಷ್ ನಿಘಂಟು ಎಂದೇ ಹೆಸರಾಗಿದೆ. ಗಾದೆ, ಆಡುಮಾತು, ನುಡಿಗಟ್ಟು ಮತ್ತು ಪ್ರಾಚೀನ ಗ್ರಂಥಗಳ ಉಲ್ಲೇಖವನ್ನು ಈ ನಿಘಂಟು ಒಳಗೊಂಡಿದೆ. ಕಿಟೆಲ್ ಅವರು ಹೀಬ್ರೂ, ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳು ಭಾರತಕ್ಕೆ ಬರುವ ಮುನ್ನವೇ ಕಲಿತುಕೊಂಡಿದ್ದರು. ಕರ್ನಾಟಕಕ್ಕೆ ಆಗಮಿಸಿದ ನಂತರ, ಕನ್ನಡ, ಸಂಸ್ಕೃತ, ತುಳು ಮತ್ತು ಮಲಯಾಳಂ ಭಾಷೆಗಳನ್ನು ಕಲಿತರು. ಕನ್ನಡ ಕಲಿತ 13 ವರ್ಷಗಳಲ್ಲೇ ‘ಕನ್ನಡ ವ್ಯಾಕರಣ ಸೂತ್ರಗಳು’ ಎಂಬ ಕೃತಿ ರಚಿಸಿದರು.

1862ರಲ್ಲಿ ಬೈಬಲ್ ನ ಹೊಸಒಡಂಬಡಿಕೆ ವಿಷಯವನ್ನು ಕನ್ನಡಕ್ಕೆ ಅನುವಾದಿಸಿದರು. 1863ರಲ್ಲಿ, ಏಸುವಿನ ಜೀವನ ವೃತ್ತಾಂತದ ಕಥನವಾಗಿರುವ ಕಥಾಮಾಲಿಕೆಯನ್ನು ಪ್ರಕಟಿಸಿದರು. ಈ ಕೃತಿಯಲ್ಲಿ 280 ಭಾಮಿನಿ ಷಟ್ಪದಿ, 75 ವಾರ್ಧಕ ಷಟ್ಪದಿ ಹಾಗೂ 175 ಪೂರ್ವೀರಾಗದ ಹಾಡುಗಳಿರುವುದು ವಿಶೇಷ ಸಂಗತಿಯಾಗಿದೆ. 1865ರಲ್ಲಿ, “ಸಣ್ಣ ಕರ್ನಾಟಕ ಕಾವ್ಯಮಾಲೆ” ಪದ್ಯಸಂಗ್ರಹ ಪ್ರಕಟವಾಯಿತು. ಮುಂದೆ ಇದೇ ಕೃತಿ ‘ಕರ್ನಾಟಕ ಕಾವ್ಯಮಾಲೆ’ ಹೆಸರಿನಲ್ಲಿ ಪ್ರಕಟವಾಗಿ ಹಲವು ಮುದ್ರಣಗಳನ್ನು ಕಂಡಿತು. ಈ ಕೃತಿಯ ವಿಶೇಷವೆಂದರೆ, ‘ಬಸವ ಪುರಾಣ’, ‘ಪ್ರಭುಲಿಂಗಲೀಲೆ’, ‘ಕುಮಾರವ್ಯಾಸ ಭಾರತ’, ‘ಭಾಗವತ’, ‘ಗಿರಿಜಾ ಕಲ್ಯಾಣ’ ಇತ್ಯಾದಿ ಪ್ರಾಚೀನ ಕನ್ನಡ ಕವಿಗಳ ಪದ್ಯಗಳನ್ನು ಒಳಗೊಂಡಿದೆ. ಜೊತೆಗೆ, ಕಿಟೆಲ್ ಅವರ ಸ್ವಂತ ಕವನಗಳನ್ನೂ ಸೇರಿಸಿ ಈ ಪದ್ಯಗಳಿಗೆ ಸಂಬಂಧಿಸಿದಂತೆ ಪದಕೋಶವನ್ನೂ ಒಳಗೊಂಡಿದೆ.

1865ರಲ್ಲಿ ‘Coorg Superstitions’ ಎಂಬ ಲೇಖನದಲ್ಲಿ ಕೊಡಗಿನಲ್ಲಿ ಅಸ್ತಿತ್ವದಲ್ಲಿರುವ ಭೂತಾರಾದನೆ ವಿಷಯದ ಕುರಿತು ಗುಳಿಗ, ಕುಟ್ಟಿಚಾತ, ಕಲ್ಲುರ್ಟಿ, ಪಂಜುರ್ಲಿ, ಕರಿಂಗಾಳಿ ಮೊದಲಾದ ಭೂತಗಳ ಆರಾಧನೆಯನ್ನು ಐತಿಹಾಸಿಕವಾಗಿ ಪರಿಶೀಲನೆ ನಡೆಸಿದ್ದಾರೆ. ‘ಯೇಸು ಕ್ರಿಸ್ತನ ಶ್ರಮ ಚರಿತ್ರೆ’ ಕೃತಿಯಲ್ಲಿ ಯೇಸು ಅನ್ಯರಿಗಾಗಿ ಪಟ್ಟ ಶ್ರಮದ ಕಥೆಯನ್ನು ಹಿಡಿದಿಟ್ಟಿದ್ದಾರೆ. ಇದು ಸರಳ ಕನ್ನಡ ಗದ್ಯಶೈಲಿಗೆ ಉತ್ತಮ ಉದಾಹರಣೆಯಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. 1865ರಲ್ಲಿ ‘ಕನ್ನಡ ಸಂಗೀತಗಳು’ ಎಂಬ ಸಂಕಲನವನ್ನು ಪ್ರಕಟಿಸಿದರು. ಈ ಕೃತಿಯಲ್ಲಿ ದೇಶಿ ಕವಿಗಳ ಪದ್ಯಗಳ ಸಂಗ್ರಹದ ಜೊತೆಗೆ, ಸ್ವರಚಿತ ಧಾರ್ಮಿಕ ಕವನಗಳನ್ನು ಸೇರಿಸಿದ್ದಾರೆ.

1865ರಲ್ಲಿ ಪ್ರಾರಂಭಗೊಂಡ ‘ವೃತ್ತಾಂತ ಬೋಧಿನಿ’ ಪತ್ರಿಕೆಯಲ್ಲಿ ಕಿಟೆಲರು ಕನ್ನಡ ಸಾಹಿತ್ಯ ಮತ್ತು ಚರಿತ್ರೆಯನ್ನು ಕುರಿತ ವಿದ್ವತ್ಪೂರ್ಣ ಲೇಖನಗಳನ್ನು ಬರೆದರು. 1865ರಲ್ಲಿ ‘ಸಂಕ್ಷೇಪ ವ್ಯಾಕರಣ’ ಎಂಬ ಕನ್ನಡ ವ್ಯಾಕರಣ ಕುರಿತ ಕೃತಿಯನ್ನು ಪ್ರಕಟಿಸಿದರು. ಅನಂತರ ಇದೇ ಕೃತಿ ಪರಿಷ್ಕರಣೆಗೊಂಡು ‘ಹಳೆಗನ್ನಡ ವ್ಯಾಕರಣ ಸೂತ್ರಗಳು’ ಎಂಬ ಹೆಸರಿನಲ್ಲಿ 1866ರಲ್ಲಿ ಪ್ರಕಟವಾಯಿತು.

1872ರಿಂದ ಇಂಗ್ಲಿಷ್ ಭಾಷೆಯಲ್ಲಿ ಬರೆದ 24 ಅಮೂಲ್ಯ ಲೇಖನಗಳು ‘Indian Antiquery’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದವು. ಈ ಲೇಖನಗಳಲ್ಲಿ ದ್ರಾವಿಡ ಸಂಖ್ಯಾವಾಚಕಗಳು, ದ್ರಾವಿಡ ಪದಗಳ ನಿಷ್ಪತ್ತಿ ಕುರಿತು ಮಹತ್ವದ ಚರ್ಚೆಗಳನ್ನು ನಡೆಸಿದ್ದಾರೆ. ಯೂರೋಪಿಯನ್ ಭಾಷೆಗಳಲ್ಲಿ ಕೂಡ ಕನ್ನಡ ಹಾಗೂ ಇತರ ದ್ರಾವಿಡ ಭಾಷೆಗಳ ಕುರಿತು ಲೇಖನಗಳನ್ನು ಪ್ರಕಟಿಸುವ ಮೂಲಕ ವಿದೇಶಿ ಭಾಷೆಗಳಲ್ಲಿ ಕೂಡ ದ್ರಾವಿಡ ಭಾಷೆಗಳ ಕುರಿತು ಆಸಕ್ತಿ ಕೆರಳಿಸುವ ಯತ್ನವನ್ನು ನಡೆಸಿದ್ದಾರೆ.

1873ರಲ್ಲಿ ಮಂಗಳೂರು ಬಾಸೆಲ್ ಮಿಶನ್ ಪ್ರಕಟಣಾಲಯದಿಂದ ಕಿಟೆಲರು ಅನುವಾದಿಸಿದ ‘ಹೊಸ ಒಡಂಬಡಿಕೆ’ಯನ್ನು ಪ್ರಕಟಿಸಲಾಯಿತು. 1873ರಲ್ಲಿ ಕರ್ನಾಟಕದ ವೈಷ್ಣವ ದಾಸರ ಬಗೆಗೆ ಸಂಶೋಧನೆ ನಡೆಸಿ, ಪುರಂದರದಾಸ, ಕನಕದಾಸ, ಮಾಧವ, ವಿಠ್ಠಲ, ವಿಜಯದಾಸ, ವೆಂಕಟದಾಸ ಮೊದಲಾದವರ ಕೃತಿಗಳನ್ನು ಸಂಗ್ರಹಿಸಿದರು. ಅವುಗಳ ಪೈಕಿ ಆಯ್ದ ಕೆಲವನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದರು. 1875ರಲ್ಲಿ ‘ಕರ್ನಾಟಕ ಕಾವ್ಯಮಾಲೆ’ ಪ್ರಕಟಿಸಿದರು. ಜೊತೆಗೆ ನಾಗವರ್ಮನ ‘ಛಂದೋಬುಧಿ’ಯನ್ನು ಪ್ರಕಟಿಸಿದರು. ಇದರ ವಿಶೇಷವೆಂದರೆ ತಾಳೆಯಗರಿಗಳಲ್ಲಿದ್ದ ಈ ಕೃತಿಗೆ ಕಿಟೆಲ್ ಅವರೇ ಮುದ್ರಣ ಭಾಗ್ಯ ಕರುಣಿಸಿದರು. ಕನ್ನಡದ ಸಂಶೋಧಕರ ಪ್ರಕಾರ, ಕನ್ನಡದಲ್ಲಿ ವೈಜ್ಞಾನಿಕ ರೀತಿಯ ಗ್ರಂಥ ಸಂಪಾದನೆಗೆ ಫರ್ಡಿನೆಂಟ್ ಕಿಟೆಲ್ ಅವರ ಕೊಡುಗೆಯೇ ಅಪಾರ. ಈ ಹಿನ್ನೆಲೆಯಲ್ಲಿ ಅವರನ್ನು ಈ ಕ್ಷೇತ್ರದ ಪಿತಾಮಹ ಎಂದೇ ಗುರುತಿಸಲಾಗುತ್ತದೆ.

1875ರಲ್ಲಿ “Lingayat Legends’ ಎಂಬ ಸುದೀರ್ಘ ಲೇಖನದಲ್ಲಿ ವೀರಶೈವ ಧರ್ಮ, ಇತಿಹಾಸ, ಸಾಹಿತ್ಯದ ಕುರಿತು ಸಂಶೋಧನೆ ನಡೆಸಿದ್ದಾರೆ. ಅದೇ ವರ್ಷದಲ್ಲಿ ಪ್ರಕಟವಾದ “Jaina, Vaishnava and Shaiva Literature” ಎಂಬ ಸಂಶೋಧನಾತ್ಮಕ ಲೇಖನದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಸ್ಥೂಲ ಚಿತ್ರಣ ಕೊಟ್ಟಿದ್ದಾರೆ. 1877ರಲ್ಲಿ ‘ಕರ್ನಾಟಕ ಕಾವ್ಯಮಂಜರಿ’ಯನ್ನು ಪ್ರಕಟಿಸಿದ್ದು, ಇದರಲ್ಲಿ ಆಯ್ದ ಹಳಗನ್ನಡದ ಸೊಗಸಾದ ಪದ್ಯಗಳು, ಸ್ವರಚಿತಕವನಗಳನ್ನೂ ಸೇರಿಸಿದ್ದಾರೆ. ಇದರಲ್ಲಿ ಟೀಕೆ, ಶಬ್ದಕೋಶ ಇತ್ಯಾದಿಗಳನ್ನು ಕೊಟ್ಟಿರುವುದು ವಿಶೇಷವಾಗಿದೆ.

1903ರಲ್ಲಿ 483 ಪುಟಗಳ 28ಅಧ್ಯಾಯಗಳನ್ನೊಳಗೊಂಡ ಬೃಹತ್ ಕನ್ನಡ ವ್ಯಾಕರಣ ಗ್ರಂಥ ‘A Grammar of Kannada Language’ ಬಾಸೆಲ್ ಮಿಶನ್ ಮುದ್ರಣಾಲಯದಲ್ಲಿ ಅಚ್ಚಾಯಿತು. ಇದರಲ್ಲಿ, ಹಳಗನ್ನಡ ಮತ್ತು ಹೊಸಗನ್ನಡ ಎಂಬ ಕನ್ನಡದ ಬೆಳವಣಿಗೆಯ ವಿವಿಧ ಘಟ್ಟಗಳ ವಿವರಣೆಯನ್ನು ದಾಖಲಿಸಿದ್ದಾರೆ. ಜೊತೆಗೆ ಪ್ರಾದೇಶಿಕ ಹಾಗೂ ಜನಪದ ಪ್ರಯೋಗಗಳನ್ನು ಉದಾಹರಿಸಿದ್ದಾರೆ. ಕೇಶಿರಾಜನ ಶಬ್ದಮಣಿದರ್ಪಣ ಗ್ರಂಥವನ್ನು 1872ರಲ್ಲಿ ಸಂಪಾದಿಸಿದರು. ಇದರಲ್ಲಿ ಅವರು ಕೇಶಿರಾಜನ ಬಗ್ಗೆ ಬರೆದ ಮೊದಲ ಮತ್ತು ಪರಿಷ್ಕೃತ ಲೇಖನವನ್ನು ಪ್ರಕಟಿಸಿದ್ದಾರೆ.

1875ರಲ್ಲಿ 14 ಹಸ್ತಪ್ರತಿಗಳ ನೆರವಿನಿಂದ ನಾಗವರ್ಮನ ಛಂದೋಂಬುಧಿಯನ್ನು ಸಂಪಾದಿಸಿ, ಪ್ರಕಟಿಸಿದರು. ಸದರಿ ಹಸ್ತಪ್ರತಿಗಳನ್ನು ಗದಗ, ಧಾರವಾಡ, ಮೈಸೂರು, ಕೊಡಗು, ಮಡಿಕೇರಿ ಸುತ್ತಮುತ್ತ ಸಂಚರಿಸಿ ಸಂಗ್ರಹಿಸುವಲ್ಲಿ ಯಶಸ್ಸುಗಳಿಸಿದರು. ಇದಕ್ಕಾಗಿ ಕಿಟೆಲ್ ಅವರು, ಬಿ.ಎಲ್.ರೈಸ್ ಮತ್ತು ತಿರುಮಲೆ ಶಾಮಣ್ಣನವರ ನೆರವನ್ನು ಪಡೆದಿದ್ದರು.

ಸಾಹಿತ್ಯ ಕೃಷಿ: ಸಂಸಾರ ಕ್ರಮ, ಉಭಯ ಮಾರ್ಗ, ನಂಬಿ ಜೀವಿಸಿರಿ, ಡೇನಿಯಲ್ಲನೂ ಅವನ ಜೊತೆಗಾರನೂ ಪ್ರಬಂಧಗಳು, ಹಲವಾರು ಪಠ್ಯ ಪುಸ್ತಕಗಳು. ‘ಕಥಾಮಾಲೆ’ ಯೇಸುವಿನ ಜೀವನ ವೃತ್ತಾಂತದ ಪದ್ಮಕಥನ, ಪರಮಾತ್ಮ ಜ್ಞಾನ, ಕ್ರೈಸ್ತ ದೈವಶಾಸ್ತ್ರ. ಕನ್ನಡ ಅನುವಾದ: History of England by ಹೆನ್ರಿ ಮೊರೇಸ್ (1864), ಪಂಚತಂತ್ರ (1864), Coorg Superstitions (1865). ಯೇಸು ಕ್ರಿಸ್ತನ ಶ್ರಮ ಚರಿತ್ರೆ (1865), ಕನ್ನಡ ಸಂಗೀತಗಳು, ಸಂಕ್ಷೇಪ ವ್ಯಾಕರಣ, ಹಳೆಗನ್ನಡ ವ್ಯಾಕರಣ ಸೂತ್ರಗಳು (1866). ಕ್ರೈಸ್ತ ಸಭಾಚರಿತ್ರೆ (1868), ಸಣ್ಣ ಕರ್ನಾಟಕ ಕಾವ್ಯಮಾಲೆ (1868), ಹೊಸ ಒಡಂಬಡಿಕೆ (1873), ಕರ್ನಾಟಕ ಕಾವ್ಯಮಾಲೆ (1875), ನಾಗವರ್ಮನ ಛಂದೋಂಬುಧಿ (ಸಂಪಾದಿತ – 1875) Lingayat Legends (1875), Jaina Vaishnava & Shiva Literature (1875), Washerman Veerasena (ಕಥೆ 1875), ಕರ್ನಾಟಕ ಕಾವ್ಯಮಂಜರಿ (1877), Canarese-English Dialogue (1878) ಸಂಸ್ಕೃತ ಸಣ್ಣ ವ್ಯಾಕರಣ (1880), ಕನ್ನಡ – ಇಂಗ್ಲಿಷ್ ಕೋಶ (1894), A Grammar of Kannada Language (1903).

Leave a Reply