ಕರ್ನಾಟಕದಲ್ಲಿ 1947ರಿಂದ ಇಲ್ಲಿಯ ತನಕ ಅನೇಕರು ಮುಖ್ಯಮಂತ್ರಿಗಳಾಗಿ ಸೇವೆಯನ್ನು ಸಲ್ಲಿಸಿ ನಮ್ಮನ್ನಗಲಿದ್ದಾರೆ. ಇವರುಗಳ ಪೈಕಿ ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತರಾಯ, ದೇವರಾಜ ಅರಸು, ನಿಜಲಿಂಗಪ್ಪ ಇವರುಗಳ ಹುಟ್ಟಿದ ದಿನ ಮತ್ತು ನಿಧನರಾದ ದಿನ ಸರ್ಕಾರದ ವತಿಯಿಂದ ಅವರ ಭಾವಚಿತ್ರಗಳನ್ನಿಟ್ಟು ಪುಷ್ಪಾರ್ಚನೆಯನ್ನು ಮಾಡಿ ಗೌರವ ಸಲ್ಲಿಸಿ ಅವರನ್ನು ನೆನಪಿಸಿಕೊಳ್ಳುತ್ತಾರೆ.
ಈ ನಾಲ್ಕು ಜನರ ಪ್ರತಿಮೆಗಳು ಈಗಾಗಲೇ ವಿಧಾನಸೌಧದ ಮುಂಭಾಗದಲ್ಲಿದೆ. ಆದರೆ ಇದೇ ಸಂದರ್ಭದಲ್ಲಿ ನಾಡಿನ ಮುಖ್ಯಮಂತ್ರಿಗಳಾಗಿ ಸೇವೆಯನ್ನು ಸಲ್ಲಿಸಿ ನಮ್ಮನ್ನಗಲಿರುವ ಕಡಿದಾಳ ಮಂಜಪ್ಪ, ಎಸ್.ಆರ್. ಕಂಠಿ, ಬಿ.ಡಿ.ಜತ್ತಿ, ವೀರೇಂದ್ರಪಾಟೀಲ್, ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಬಂಗಾರಪ್ಪ, ಧರ್ಮಸಿಂಗ್ ಮುಂತಾದವರು ಸಹ ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದ ಪ್ರಗತಿಗೆ ತಮ್ಮದೇ ಆದಂತಹ ಕೊಡಿಗೆಯನ್ನು ನೀಡಿರುತ್ತಾರೆ.
ಇವರು ಹುಟ್ಟಿದ ದಿನವೂ ಮತ್ತು ನಿಧನರಾದ ದಿನವೂ ಯಾರಿಗೂ ನೆನಪೆ ಇರುವುದಿಲ್ಲ. ಇನ್ನು ಸರ್ಕಾರಕ್ಕಂತೂ ಇದು ಬೇಕಿಲ್ಲ. ಈ ರೀತಿಯ ತಾರತಮ್ಯವನ್ನು ಸರಿಪಡಿಸಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಎಲ್ಲಾ ಮಾಜಿ ಮುಖ್ಯಮಂತ್ರಿಗಳ ಭಾವಚಿತ್ರಗಳನ್ನು ಅಳವಡಿಸಿ ಸರ್ಕಾರದ ವತಿಯಿಂದ ಅವರು ಹುಟ್ಟಿದ ದಿನ ಮತ್ತು ನಿಧನರಾದ ದಿನಗಳಲ್ಲಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆಯನ್ನು ಮಾಡಿ ಕನಿಷ್ಠ ಗೌರವವನ್ನು ಸಲ್ಲಿಸಬೇಕೆಂಬ ಕಾರಣಕ್ಕಾಗಿ ಸಭಾಪತಿ ಬಸವರಾಜ ಹೊರಟ್ಟಿರವರಿಗೆ ಈ ಹಿಂದೆಯೇ ಹಲವಾರು ಸಂಘಟನೆಯವರು ಪತ್ರಗಳನ್ನು ನೀಡಿರುತ್ತೇವೆ.
ಹೊರಟ್ಟಿಯವರು ಸಹ ಈ ವಿಚಾರದಲ್ಲಿ ಅಗತ್ಯಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಪತ್ರವನ್ನು ಬರೆದಿರುತ್ತಾರೆ. ಈ ಪತ್ರದ ವ್ಯವಹಾರ ನಡೆದು ಅನೇಕ ವರ್ಷಗಳು ಆಗುತ್ತಾ ಬಂದರೂ ಇನ್ನು ಇದು ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಆದುದರಿಂದ ಮಾನ್ಯ ಸಭಾಪತಿಯವರು ವಿಶೇಷವಾದ ಗಮನವನ್ನು ಹರಿಸಿ ದಿವಂಗತ ಮಾಜಿ ಮುಖ್ಯಮಂತ್ರಿಗಳಿಗೆ ಸಮಾನ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಕನಿಷ್ಠ ಪಕ್ಷ ಕರ್ನಾಟಕ 50ರ ಈ ಸಂಭ್ರಮದ ವರ್ಷದಲ್ಲಾದರೂ ಅನುಷ್ಠಾನಗೊಳಿಸುತ್ತಾರೆಂದು ಭರವಸೆಯನ್ನು ಹೊಂದಿರುತ್ತೇವೆ.
- ಕೆ.ಎಸ್.ನಾಗರಾಜ್, ಬೆಂಗಳೂರು




