ಬಿಜೆಪಿಯಿಂದಲೇ ದ್ವೇಷ ರಾಜಕಾರಣ: ಎನ್.ಎಸ್.ಬೋಸರಾಜು

2 years ago

ಮಡಿಕೇರಿ: ದೇಶದಲ್ಲಿ ದ್ವೇಷ ರಾಜಕಾರಣ ಮಾಡುತ್ತಿರುವುದು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರೇ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್.ಭೋಸರಾಜು ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಹುಬ್ಬಳ್ಳಿಯಲ್ಲಿ ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತಿದೆಯೆ ಹೊರತು ರಾಮಭಕ್ತರನ್ನು ಗುರಿಯಾಗಿಸಿ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡಿದರು.

ಜಾರಿ ನಿರ್ದೇಶನಾಲಯ ಸೇರಿದಂತೆ ಸರ್ಕಾರಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿರುವುದು ಯಾರು ಎಂಬುದು ಎಲ್ಲರಿಗೂ‌ ಗೊತ್ತಿದೆ. ಕಾಂಗ್ರೆಸ್ ಇದುವರೆಗೂ ಈ ಪರಿಯ ದ್ವೇಷದ ರಾಜಕಾರಣ ಮಾಡಿಲ್ಲ. ವಿರೋಧ ಪಕ್ಷದ ನಾಯಕರಿಗೆ ಗೌರವ ಕೊಟ್ಟಿದೆ ಎಂದರು.

ಕೇಂದ್ರದಿಂದ ಬರಬೇಕಾದ ಅನುದಾನ ಕುರಿತು ಬಿಜೆಪಿಯ ಒಬ್ಬರೂ ಮಾತನಾಡುವುದಿಲ್ಲ. ಆದರೆ ಜನರ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ಮಾತ್ರ ಅವರು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರತಿಕ್ರಿಯೆ ನೀಡಿದ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ನಾವು ರಾಮಮಂದಿರದ ಪರವಾಗಿದ್ದೇವೆ. ಮುಖ್ಯಮಂತ್ರಿ ಅವರೂ ಇದನ್ನೇ ಹೇಳಿದ್ದಾರೆ. ನಾನು ಇದನ್ನೇ ಹೇಳುತ್ತಿದ್ದೇನೆ. ರಾಮಮಂದಿರ ಉದ್ಘಾಟನೆಗೆ ಶುಭವಾಗಲಿ ಎಂದು ಹಾರೈಸಿದರು.

ಬಿಜೆಪಿಯವರು ರಾಜಕೀಯಕ್ಕಾಗಿ ಸಹಜವಾಗಿ ಆರೋಪ ಮಾಡುತ್ತಾರೆ. ಕಾನೂನು ಬೇರೆ, ರಾಜಕೀಯ ಬೇರೆ. ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇರಲಿಲ್ಲ, ಯಾವುದೇ ರೀತಿ ಅಪರಾಧ ಪರಾಮರ್ಶೆ ನಡೆದಿರಲಿಲ್ಲ ಎಂದು ಕಿಡಿಕಾರಿದರು.

ಈಗ 31 ವರ್ಷಗಳಿಂದ ಇದ್ದ ಪ್ರಕರಣಗಳಿಗೆ ಅಂತ್ಯವಾಡಲು ಕ್ರಮ ಕೈಗೊಳ್ಳಬೇಕಿದೆ‌. ಕರಸೇವಕರನ್ನು ಬಂಧಿಸಬೇಕು ಎಂಬ ಕಾರಣದಿಂದ ಯಾರನ್ನು ಬಂಧಿಸಿಲ್ಲ. ಕಾನೂನು ಪ್ರಕ್ರಿಯೆಗಳಿಗೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿದರು.

ಕೊಡಗು ಜಿಲ್ಲಾ ಪ್ರವಾಸದಲ್ಲಿರುವ ಬೋಸರಾಜು ಅವರು, 31ನೇ ರಾಷ್ಟ್ರೀಯ ವಿದ್ಯಾರ್ಥಿ ವಿಜ್ಞಾನ ಸಮ್ಮೇಳನದಲ್ಲಿ “ಕಲುಷಿತಗೊಳ್ಳುತ್ತಿರುವ ನದಿ ತೀರಗಳು” ಕುರಿತು ಅಧ್ಯಯನ ವರದಿಯನ್ನು ಮಂಡಿಸಿ ಬಾಲ ವಿಜ್ಞಾನಿ ಪ್ರಶಸ್ತಿ ಪಡೆದ ಸುಂಟಿಕೊಪ್ಪದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಸಿರಿಷಾಳನ್ನು ಮಡಿಕೇರಿಯ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸನ್ಮಾನಿಸಿ ಶುಭ ಕೋರಿದರು. ಇಂಥ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಕೊಡುಗೆ ನೀಡುವಂತೆ ಪ್ರೇರೇಪಿಸಿ ಅಗತ್ಯ ಸಹಕಾರ ನೀಡಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದರು.

ಜೊತೆಗೆ, ಮಡಿಕೇರಿ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಕೆಡಿಪಿ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಸಿದರು. ಸಭೆಯಲ್ಲಿ ಹಲವು ಯೋಜನೆಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಹಿರಿಯ ಶಾಸಕ ಪೊನ್ನಣ್ಣ, ಮಂಥರ್ ಗೌಡ ಮತ್ತು ಹಿರಿಯ ಅಧಿಕಾರಿಗಳು ಹಾಜರಿದ್ದರು.

Leave a Reply