ಸಂಸದರ ಅಮಾನತು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು: ಸ್ವಾತಂತ್ರ್ಯ ಉದ್ಯಾನವನ ಆವರಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ 146 ಸಂಸದರ ಅಮಾನತು ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವದ ಕಗ್ಗೂಲೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನಪರಿಷತ್ ಸದಸ್ಯದ ಸಲೀಮ್ ಅಹಮದ್, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಶಾಸಕ ಎ.ಸಿ.ಶ್ರೀನಿವಾಸ್, ಮಾಜಿ ಲೋಕಸಭಾ ಸದಸ್ಯ ಉಗ್ರಪ್ಪ, ಮಾಜಿ ಶಾಸಕ ಆರ್.ವಿ.ದೇವರಾಜ್ ಮತ್ತು ನಗರ ಜಿಲ್ಲಾಧ್ಯಕ್ಷರುಗಳಾದ ಅಬ್ದುಲ್ ವಾಜಿದ್, ಗೌತಮ್, ಹನುಮಂತರಾಯಪ್ಪ, ಮಾಜಿ ಮೇಯರ್ ಪದ್ಮಾವತಿ, ಜೆ.ಹುಚ್ಚಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಎಸ್.ಕೇಶವಮೂರ್ತಿ, ಉದಯಶಂಕರ್, ಮೋಹನ್ ಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿ, ದೇಶಾದ್ಯಂತ ಸಾಂಕೇತಿಕ ಪ್ರತಿಭಟನೆ ಮಾಡಲಾಗುತ್ತಿದೆ. ಸಂಸತ್ ಮೇಲೆ ದಾಳಿ ಪ್ರಕರಣ ಕುರಿತು, ಭದ್ರತೆ ಲೋಪ ಕುರಿತು ಚರ್ಚೆ ಮಾಡೋಣ ಎಂದರೆ 140ಕ್ಕೂ ಹೆಚ್ಚು ಸಂಸದರ ಅಮಾನತು ಮಾಡಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಇದಿಯೋ, ಇಲ್ಲವೊ ತಿಳಿಯುತ್ತಿಲ್ಲ. ನಾವು ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದೇವೆ, ದುರಾಡಳಿತದ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಜನರೆ ಉತ್ತರ ನೀಡಲಿದ್ದಾರೆ. ಈ ಹೋರಾಟ ಜನರ ಮಧ್ಯ ತೆಗೆದುಕೊಂಡು ಹೋಗುತ್ತೇವೆ ಮತ್ತು ಸರ್ಕಾರದ ಗ್ಯಾರಂಟಿ ತಲುಪಿದಿಯೆ ಎಂಬ ಪರಿಶೀಲನೆ ಮಾಡಲಾಗುತ್ತದೆ. ಕೊಟ್ಟ ಮಾತು ಉಳಿಸಿಕೊಂಡಿದೆ ಕಾಂಗ್ರೆಸ್ ಎಂದರು.
ರಾಮಲಿಂಗಾರೆಡ್ಡಿ ಮಾತನಾಡಿ, ಲೋಕಸಭೆಯಲ್ಲಿ ಯುವಕರ ಗುಂಪು ಹುಸಿ ಬಾಂಬ್ ಹಾಕಿದ ಕುರಿತು ಇದರ ಕುರಿತು ಉತ್ತರಿಸಿ ಎಂದು ಗೃಹ ಸಚಿವರಿಗೆ ಕೇಳಿದಾಗ ಉತ್ತರಿಸದೇ ಲೋಕಸಭಾ ಸದಸ್ಯರನ್ನ ಅಮಾನತು ಮಾಡಿದರು. ಸರ್ವಾಧಿಕಾರಿ ಧೋರಣೆ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ, ದೇಶದ ಜನರು ಲೋಕಸಭಾ ಚುನಾವಣೆಯಲ್ಲಿ ಯೋಚನೆ ಮಾಡಿ ಮತ ನೀಡಬೇಕು ಎಂದು ಕರೆನೀಡಿದರು.
ಸಲೀಮ್ ಅಹಮದ್ ಮಾತನಾಡಿ, ಇತಿಹಾಸದಲ್ಲಿ ಇಂತ ಘಟನೆ ನಡೆದಿಲ್ಲ. ಸಂಸತ್ ಭವನ ದೇಶ ರಕ್ಷಣೆ ಯೋಗ್ಯತೆ ಇಲ್ಲ ನಿಮಗೆ. ವಿರೋಧ ಪಕ್ಷದವರಿಗೆ ಪ್ರಶ್ನೆ ಮಾಡುವ ಹಕ್ಕು ಇದೆ. ಉತ್ತರಿಸುವ ಜವಾಬ್ದಾರಿ ನಿಮ್ಮದು. ಆದರೆ 140ಕ್ಕೂ ಹೆಚ್ಚು ಲೋಕಸಭಾ ಸದಸ್ಯರನ್ನು ಅಮಾನತು ಮಾಡಿ , ಸಂಸತ್ ಸಭೆ ನಡೆಸುತ್ತಿದ್ದಾರೆ. ಸುಳ್ಳಿಗೆ ಪ್ರಧಾನಿ ನರೇಂದ್ರಮೋದಿರವರಿಗೆ ಆಸ್ಕರ್ ಪ್ರಶಸ್ತಿ ಸಿಗಬೇಕು. 2024ರಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.




