ಒಂದೊಂದು ಚುನಾವಣೆಗೆ ಒಂದೊಂದು ಸಮಸ್ಯೆಯನ್ನು ತೆಗೆದುಕೊಂಡು ಜನರ ಭಾವನೆಗಳನ್ನು ಪ್ರಚೋದಿಸುತ್ತಾ ಆ ಮೂಲಕ ತಮ್ಮ ವಿಚಾರಧಾರೆಗಳನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡು ಚುನಾವಣೆಗಳಲ್ಲಿ ಗೆಲುವಿನ ಹಾದಿಯನ್ನು ಹಿಡಿದಿರುವ ಕೇಂದ್ರದ ಬಿ.ಜೆ.ಪಿ. ಸರ್ಕಾರ ಒಂದು ಬಾರಿ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಶೇಷ ಪೀಠವನ್ನು ಸ್ಥಾಪಿಸಿ. ಬಿ.ಜೆ.ಪಿ. ಮತ್ತು ಅವರ ಅಂಗಸಂಸ್ಥೆಯವರು ನಿರೀಕ್ಷಿಸಿರುವ ಎಲ್ಲ ದೇವಾಲಯಗಳ ಸಮೀಕ್ಷೆ ಮತ್ತು ಅಂತಿಮ ನಿರ್ಧಾರಕ್ಕೆ ಒಂದು ವ್ಯವಸ್ಥೆಯನ್ನು ಮಾಡಿ.
ಪ್ರತಿದಿನವೂ ವಿಶೇಷ ಪೀಠ ಸಭೆಯನ್ನು ಸೇರಿ ಎಲ್ಲ ದೇವಾಲಯಗಳು ಮತ್ತು ಮಸೀದಿಗಳ ನಡುವೆ ಇರುವ ಸಮಸ್ಯೆಗಳನ್ನು ಪರಿಹರಿಸಿ ಒಂದು ಬಾರಿ ಎಲ್ಲವನ್ನು ತೀರ್ಮಾನಿಸಿಬಿಡಿ. ಪದೇ ಪದೇ ಒಂದೊಂದೇ ದೇವಾಲಯವನ್ನು ತೆಗೆಯುತ್ತಾ ದೇಶದ ಒಟ್ಟಾರೆ ವ್ಯವಸ್ಥೆಯನ್ನು ಕೇವಲ ಈ ವಿಚಾರಗಳಿಗೆ ಮೀಸಲಿಡಬೇಡಿ.
ದೇವರು, ಧರ್ಮ, ಜಾತಿ, ಮತ ಇವುಗಳಿಗಿಂತ ಮಿಗಿಲಾದ ಮಾನವರ ನೂರಾರು ಸಮಸ್ಯೆಗಳಿವೆ. ಇವುಗಳ ಬಗ್ಗೆ ಚಿಂತಿಸುವವರಾರು? ಇದೇ ಸಂದರ್ಭದಲ್ಲಿ ದೇಶದಲ್ಲಿ ಬೌದ್ಧ ಮಂದಿರಗಳು, ಜೈನರ ಮಂದಿರಗಳು ಎಷ್ಟಿದ್ದವು? ಅವುಗಳ ಸ್ಥಿತಿಗತಿ ಏನಾಗಿದೆ? ಎಂಬುದು ಸಮೀಕ್ಷೆಯಾಗಲಿ. ಯಾವ ಯಾವ ಧರ್ಮದವರಿಗೆ ಅನ್ಯಾಯವಾಗಿದೆಯೋ ಅವರಿಗೆಲ್ಲಾ ನ್ಯಾಯ ದೊರಕಿಸಿಕೊಟ್ಟು ಬಿಡಿ. ಇದನ್ನು ಬಿಟ್ಟು ದೇಶದ ಚುನಾವಣೆಗೆ ಒಂದು ವಿಚಾರ, ರಾಜ್ಯಗಳ ಚುನಾವಣೆಗಳಿಗೆ ಮತ್ತೊಂದು ವಿಚಾರ ಇವುಗಳನ್ನು ಕೆದಕುತ್ತಾ ಸಾಮರಸ್ಯದ ಸಮಾಜಕ್ಕೆ ಅಪಾಯವನ್ನು ತಂದಿಡಬೇಡಿ.
ಯಾವುದೋ ಶತಮಾನದಲ್ಲಿ ಅನ್ಯಾಯವಾಗಿದೆ ಎನ್ನುವುದಾದರೆ ಅದನ್ನು ಈಗ ಸರಿಪಡಿಸುತ್ತಾ ಹೋದರೆ ಮತ್ತಷ್ಟು ಸಮಸ್ಯೆಗಳು ಮೇಲೆಳುತ್ತವೆ.
- ಕೆ.ಎಸ್. ನಾಗರಾಜ್, ಬೆಂಗಳೂರು




