ಪೆರಿಯಾರ್ ಹೋರಾಟ ಸ್ವಾಭಿಮಾನದ ಪ್ರತೀಕ: ಅಪ್ಸರ್ ಕೊಡ್ಲಿಪೇಟೆ

1 day ago

ಬೆಂಗಳೂರು: ಪೆರಿಯಾರ್ ಅವರ ಹೋರಾಟ ಯಾವುದೇ ಒಂದು ಸಮುದಾಯ ಅಥವಾ ವರ್ಗಕ್ಕೆ ಸೀಮಿತವಾಗಿರಲಿಲ್ಲ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದರು.

ಸಾಮಾಜಿಕ ನ್ಯಾಯ, ಸಮಾನತೆ, ಸ್ವಾಭಿಮಾನ ಹಾಗೂ ವೈಚಾರಿಕ ಚಿಂತನೆಯ ಮೂಲಕ ಸಮಾಜದಲ್ಲಿ ಮಹತ್ವದ ಪರಿವರ್ತನೆಗೆ ಕಾರಣರಾದ ಪೆರಿಯಾರ್ ಈ.ವಿ. ರಾಮಸ್ವಾಮಿ ನಾಯ್ಕರ್ ಅವರ 147ನೇ ಜನ್ಮ ದಿನಾಚರಣೆಯ ಅಂಗವಾಗಿ ಕರ್ನಾಟಕ ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟ (ರಿ) ವತಿಯಿಂದ ಆನೇಕಲ್‌ನ ಕಾವಲ್ ಹೊಸಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ ತಾರತಮ್ಯ, ಅಸಮಾನತೆ, ಮೂಢನಂಬಿಕೆ ಹಾಗೂ ಸಾಮಾಜಿಕ ಅನ್ಯಾಯದ ವಿರುದ್ಧ ಅವರು ನಡೆಸಿದ ಹೋರಾಟ ಮಾನವ ಘನತೆ ಮತ್ತು ಸಮಾನತೆಯ ಪರವಾಗಿತ್ತು ಎಂದರು.

ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಗೌರವಯುತವಾಗಿ ಬದುಕುವ ಹಕ್ಕು, ಶಿಕ್ಷಣದ ಹಕ್ಕು, ಸಮಾನ ಅವಕಾಶ ಹಾಗೂ ಸ್ವಾಭಿಮಾನದ ಬದುಕು ದೊರೆಯಬೇಕು ಎಂಬುದು ಪೆರಿಯಾರ್ ಅವರ ಚಿಂತನೆಯ ಪ್ರಮುಖ ಆಶಯವಾಗಿತ್ತು. ಇಂದಿಗೂ ಸಮಾಜದಲ್ಲಿರುವ ಜಾತಿ ಆಧಾರಿತ ತಾರತಮ್ಯ, ಸಾಮಾಜಿಕ ಅಸಮಾನತೆ ಮತ್ತು ಅವಕಾಶಗಳಲ್ಲಿನ ಅಂತರಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ಅಗತ್ಯವಿದೆ ಎಂದರು.

ಸ್ವಾಭಿಮಾನದಿಂದ ಬದುಕುವುದು ಪ್ರತಿಯೊಬ್ಬ ಮನುಷ್ಯನ ಹಕ್ಕು. ಈ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪೆರಿಯಾರ್ ಅವರ ಜನ್ಮ ದಿನಾಚರಣೆ ಕೇವಲ ಸ್ಮರಣೆಯ ಕಾರ್ಯಕ್ರಮವಾಗದೆ, ಸಮಾನತೆ, ಸಾಮಾಜಿಕ ನ್ಯಾಯ, ವೈಚಾರಿಕತೆ ಮತ್ತು ಮಾನವ ಘನತೆಗಾಗಿ ನಮ್ಮ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂದರ್ಭವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜ್ಞಾನಲೋಕ ಬಂತೇಜಿ, ಆನಂದ ಬುದ್ಧವಿಹಾರ, ಕುಂದಾಣ, ದೇವನಹಳ್ಳಿ, ಸುರೇಶ್ ಗೌತಮ್, ಬಿಎಸ್‌ಪಿ ಮುಖಂಡರು, ಪಿಟಿಸಿಎಲ್ ಮಂಜು, ರಾಜ್ಯಾಧ್ಯಕ್ಷರು, ಪಿಟಿಸಿಎಲ್ ಹೋರಾಟ ಸಮಿತಿ, ಕೆ. ಮುನಿರಾಜು, ರಾಜ್ಯಾಧ್ಯಕ್ಷ, ಕರ್ನಾಟಕ ದಲಿತ, ಹಿಂದುಳಿದ, ಕ್ರೈಸ್ತ ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟ (ರಿ), ಬಿ.ಎಂ.ವೆಂಕಟೇಶ್, ರಾಜ್ಯ ಉಪಾಧ್ಯಕ್ಷ, ಅಡ್ವೊಕೇಟ್ ವಿಜಯನ್, ಹೈಕೋರ್ಟ್ ವಕೀಲ, ಹುಳಿಮಾವು ಆನಂದ್, ನಾಗರತ್ನಮ್ಮ, ತಿರುಪಾಳ್ಯ, ಪಿ.ಜಿ. ಥಾಮಸ್, ಸೈಯದ್ ಅನ್ಸರ್ ಪಾಷ, ಶಿವರಾಮು ರಾಮಸಾಗರ, ಅನಿತಾ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಕಾರ್ಯಕ್ರಮವನ್ನು ಆಯೋಜಿಸಿದ ಕರ್ನಾಟಕ ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಭಾಗವಹಿಸಿದ ಎಲ್ಲಾ ಗಣ್ಯರಿಗೆ ಅಪ್ಸರ್ ಕೊಡ್ಲಿಪೇಟೆ ಅವರು ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದರು.

Leave a Reply