ಕನ್ನಡ ಸಾಹಿತ್ಯ ಪರಿಷತ್ತು ವ್ಯಕ್ತಿ ಕೇಂದ್ರಿತವಾದರೆ ಅಪಾಯಕಾರಿ

2 months ago

ಸಾಹಿತಿಗಳು, ಪತ್ರಕರ್ತರು, ಚಿಂತಕರ ಕಳವಳ

ಬೆಂಗಳೂರು: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲ ಹಿತಾಸಕ್ತಿಗೆ ವಿರುದ್ಧವಾಗಿದ್ದು, ವ್ಯಕ್ತಿಕೇಂದ್ರಿತಕ್ಕೆ ಬದಲಾಗಿ ವಿಕೇಂದ್ರೀಕರಣವಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಬೇಕು, ಅದು ತನ್ನ ಪರಂಪರೆ ಉಳಿಸಿಕೊಳ್ಳುವ ಅಧ್ಯಕ್ಷರು  ಬರಬೇಕು ಎಂದು ಹಲವು ಸಾಹಿತಿಗಳು, ಪತ್ರಕರ್ತರು, ಸಾಮಾಜಿಕ ಚಿಂತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಆಯೋಜಿಸಲಾಗಿದ್ದ ‘ನಮ್ಮ ಕನ್ನಡ ಸಾಹಿತ್ಯ ಪರಿಷತ್ತು: ಸಮಸ್ಯೆ – ಸವಾಲು – ಸಂವಾದ – ಮುನ್ನೋಟ’ ಕುರಿತ ಸಾರ್ವಜನಿಕ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ದಿಕ್ಸೂಚಿ ನುಡಿಗಳನ್ನಾಡಿದ ಹಿರಿಯ ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಕನ್ನಡಿಗರ ಅಸ್ಮಿತೆ, ಭಾಷೆ, ಕಲೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ 1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರಿಂದ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಇಂದು ಮೂಲ ಧ್ಯೇಯೋದ್ದೇಶಗಳಿಂದ ವಿಮುಖವಾಗಿ, ವ್ಯಕ್ತಿ ಕೇಂದ್ರಿತ ಸಂಸ್ಥೆಯಾಗಿ ಬದಲಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡ ಸೇವೆ ಇಂದು ಅಧಿಕಾರದ ರೂಪಾಂತರವಾಗಿ ಬದಲಾಗಿದೆ. ಯಾವುದೇ ಸಾಂಸ್ಕೃತಿಕ ಸಂಸ್ಥೆಯು ತನ್ನ ನಿಯಮಾವಳಿಗಳು ಹಾಗೂ ಮೂಲ ಧ್ಯೇಯಗಳನ್ನು ಬದಿಗೊತ್ತಿ ವ್ಯಕ್ತಿ ಕೇಂದ್ರಿತವಾಗಿ ಬೆಳೆದಾಗ ಇಂತಹ ಅವಗಡಗಳು ಸಂಭವಿಸುತ್ತವೆ. ಪರಿಷತ್ತಿನಲ್ಲಿ ಹೆಚ್ಚುತ್ತಿರುವ ಅಧಿಕಾರಶಾಹಿ ಧೋರಣೆಗೆ ತಕ್ಷಣವೇ ತಡೆ ಬೀಳಬೇಕಿದೆ ಎಂದರು.

ಸಂಸ್ಥೆಗಳು ಸಾರ್ವಜನಿಕರ ಮತ್ತು ಕನ್ನಡ ಮನಸ್ಸುಗಳ ಅಭಿಪ್ರಾಯಕ್ಕೆ ಬೆಲೆ ಕೊಡುವುದನ್ನು ಬಿಟ್ಟು, ಕೆಲವು ನಿರ್ದಿಷ್ಟ ಹಿತಾಸಕ್ತಿಗಳ ಕಬ್ಜತನಕ್ಕೆ ಒಳಗಾಗುತ್ತಿರುವುದು ದುರದೃಷ್ಟಕರ. ಪರಿಷತ್ತಿನ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಪುನಃಸ್ಥಾಪನೆಯಾಗಬೇಕಿದೆ. ಇತ್ತೀಚಿನ ವಿದ್ಯಮಾನಗಳಿಂದಾಗಿ ಅಪಾರ ಸಂಖ್ಯೆಯ ಪ್ರಜ್ಞಾವಂತ ಕನ್ನಡಿಗರು ಮತ್ತು ಸಾಹಿತಿಗಳು ಪರಿಷತ್ತಿನಿಂದ ವಿಮುಖರಾಗಿದ್ದಾರೆ. ಪರಿಷತ್ತನ್ನು ಮತ್ತೆ ಜನಪರ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಕೇಂದ್ರವಾಗಿಸುವ ಮೂಲಕ ಅವರೆಲ್ಲರನ್ನೂ ಮರಳಿ ತರಬೇಕಿದೆ. ಸಮಸ್ಯೆಗಳನ್ನಷ್ಟೇ ಎತ್ತಿ ತೋರಿಸುವುದು ನಮ್ಮ ಉದ್ದೇಶವಾಗಬಾರದು. ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಸಂಸ್ಥೆಗೆ ಹೊಸ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಚಿಂತಕರು ಒಂದಾಗಿ ಶ್ರಮಿಸಬೇಕಿದೆ ಎಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಪತ್ರಕರ್ತ ಮತ್ತು ಸಾಮಾಜಿಕ ಹೋರಾಟಗಾರ ಬಿಳಿದಾಳೆ ಈಶ, ಕಸಾಪ ಅಧ್ಯಕ್ಷ ಚುನಾವಣೆ ಸೇರಿದಂತೆ ಅದರ ರಚನೆಯಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿ ಎಂಬ ಉದ್ದೇಶದಿಂದ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ಯೆ – ಸವಾಲು – ಸಂವಾದ – ಮುನ್ನೋಟ ಮೇಲೆ ಕಾರ್ಯಕ್ರಮವನ್ನು ಸಮಾನ ಮನಸ್ಕರು ಆಯೋಜಿಸಿದ್ದೇವೆ ಎಂದು ಹೇಳಿದರು.

ಸಾವಿರಾರು ಘಟಕಗಳಿರುವ ಕಸಾಪ ನಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿ ನಡೆಯಲಿ ಎಂಬುದರಲ್ಲಿ ಯಾವುದೇ ತಪ್ಪು ಇಲ್ಲ. ಇದು ಸಾವಿರಾರು ಪುಸ್ತಕಗಳನ್ನು ಪ್ರಕಟಿಸಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಯಾವುದೇ ಆಮಿಷಗಳಿಲ್ಲದೆ ಕೋಟ್ಯಂತರ ಜನ ಭಾಗವಹಿಸುತ್ತಾರೆ. ಭವಿಷ್ಯದಲ್ಲಿ ಕಸಾಪ ಸರ್ವಾಧಿಕಾರಿ ಧೋರಣೆಯಿಂದ ಮುಕ್ತವಾಗಿ ಕೆಲಸ ನಿರ್ವಹಿಸಬೇಕು ಎಂಬ ಉದ್ದೇಶ ನಮ್ಮೆಲ್ಲರದು ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ವಿಶ್ರಾಂತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಸಂಸ್ಥೆಯೊಂದರ ಘನತೆ ನಿಂತಿರುವುದು ಅದರ ನೀತಿ-ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಹಣಕಾಸಿನ ಪಾರದರ್ಶಕತೆಯ ಮೇಲೆ. ಪರಿಷತ್ತು ಕೇವಲ ಆಡಳಿತಾತ್ಮಕ ಅಥವಾ ಚುನಾವಣಾ ಕೇಂದ್ರವಾಗದೆ, ನಾಡಿನ ಜ್ವಲಂತ ಸಾಂಸ್ಕೃತಿಕ, ಭಾಷಿಕ ಮತ್ತು ಸಾಹಿತ್ಯಿಕ ಚರ್ಚೆಗಳಿಗೆ ಮುಕ್ತ ವೇದಿಕೆಯಾಗಬೇಕು. ಪರಿಷತ್ತಿನಿಂದ ವಿಮುಖರಾಗಿರುವ ಸಾಹಿತಿಗಳು, ಚಿಂತಕರು ಹಾಗೂ ಸಾರ್ವಜನಿಕರನ್ನು ಮತ್ತೆ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದೇ ಇಂದಿನ ಅಗತ್ಯ ಎಂದರು.

ಸಾಹಿತಿ ಹಾಗೂ ಹಿರಿಯ ವೈದ್ಯೆ ಡಾ. ವಸುಂಧರಾ ಭೂಪತಿ ಮಾತನಾಡಿ, ಸಾಹಿತ್ಯ ಪರಿಷತ್ತು ಮುಂದೆ “ಸಾಹಿತ್ಯ ಸಮಾಜ”  ಸಮಿತಿ ರಚಿಸಿ  ಆಡಳಿತ ಮಾಡಬೇಕು. ಇದರದಲ್ಲಿ ಮಹಿಳೆಯರ ಸೂಕ್ತ ಪ್ರಾತಿನಿಧ್ಯ ಕಾಯ್ದುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಸಾಹಿತ್ಯ ಪರಿಷತ್ತು ವ್ಯಕ್ತಿಗತ ಹಿತಾಸಕ್ತಿಗಳಿಗೆ ಬಳಕೆಯಾಗದೆ, ಕನ್ನಡಿಗರ ಭಾಷೆ-ಸಾಹಿತ್ಯದ ಸೇವೆಗೆ ಮರಳಿ ಬದ್ಧವಾಗಬೇಕು ಎಂದರು.

ಹಿರಿಯ ಸಾಹಿತಿ ಹಾಗೂ ವಿಮರ್ಶಕ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಒಬ್ಬ ವ್ಯಕ್ತಿಯ ಅಥವಾ ಗುಂಪಿನ ಖಾಸಗಿ ಸ್ವತ್ತಲ್ಲ, ಅದು ಇಡೀ ಕನ್ನಡಿಗರ ಸಾರ್ವಜನಿಕ ಆಸ್ತಿ. ಸಂಸ್ಥೆಗಳು ತಮ್ಮ ಮೂಲ ಉದ್ದೇಶ ಮರೆತು ಅಧಿಕಾರಶಾಹಿಯ ಕಬ್ಜಕ್ಕೆ ಒಳಗಾದಾಗ ಇಡೀ ಸಾಂಸ್ಕೃತಿಕ ವಲಯವೇ ಬಿಕ್ಕಟ್ಟು ಎದುರಿಸಬೇಕಾಗುತ್ತದೆ. ಪರಿಷತ್ತಿನ ಆಡಳಿತದಲ್ಲಿ ಪಾರದರ್ಶಕತೆ, ನಿಯಮಾವಳಿಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ತಕ್ಷಣವೇ ಪುನಃಸ್ಥಾಪಿಸಬೇಕಿದೆ. ಸಂಸ್ಥೆಯ ಹಣ ಹಾಗೂ ಅಧಿಕಾರ ದುರುಪಯೋಗವಾಗದಂತೆ ತಡೆಯುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಆರ್ ಜಿ. ಹಳ್ಳಿ ನಾಗರಾಜ, ಹಿರಿಯ ಪತ್ರಕರ್ತರಾದ ಎಂ.ಎ. ಪೊನ್ನಪ್ಪ, ಬಿ.ಎಂ.ಹನೀಫ್, ಲೇಖಕಿಯರಾದ ಡಾ. ಸಂಧ್ಯಾರೆಡ್ಡಿ, ಡಾ. ಎಚ್. ಎಲ್. ಪುಷ್ಪಾ, ಮಂಜುಳಾ ಶಿವಾನಂದ, ಸಂಘಟಕ ಸಿ.ಕೆ. ರಾಮೇಗೌಡ, ಡಾ.ಪ್ರದೀಪ್ ಮಾಲ್ಗುಡಿ, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಮಾವಳ್ಳಿ ಶಂಕರ್ ಮೊದಲಾದವರು ಪ್ರತಿಕ್ರಿಯೆ ನೀಡಿದರು.

ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ನಂಜುಂಡಪ್ಪ. ವಿ ನಿರೂಪಿಸಿದರು. ಹಿರಿಯ ಪತ್ರಕರ್ತರಾದ ನಾಗೇಶ್ ಕಾಳೇನಹಳ್ಳಿ, ಕೆ.ಕರಿಸ್ವಾಮಿ, ಖ್ಯಾತ ವಿಚಾರವಾದಿ ಡಾ.ಎಚ್.ಆರ್.ಸ್ವಾಮಿ, ಹಿರಿಯ ಸಾಹಿತಿ ಡಾ. ಕರೀಗೌಡ ಬೀಚನಹಳ್ಳಿ ಸೇರಿದಂತೆ ಹಲವು ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಚಿಂತಕರು ಉಪಸ್ಥಿತರಿದ್ದರು. ಗಾಯಕ ಲಕ್ಷ್ಮೀ ನಾರಾಯಣ ಮತ್ತು ತಂಡದವರು ನಾಡಗೀತೆ ಸೇರಿದಂತೆ ಹಾಡುಗಳನ್ನು ಪ್ರಸ್ತುತಪಡಿಸಿದರು.

Leave a Reply