ಟಿಪ್ಪು ಸುಲ್ತಾನ್ ಕೇವಲ ದೇಶಭಕ್ತನಲ್ಲ, ಕನ್ನಡ ಪ್ರೇಮಿ: ಅಪ್ಸರ್ ಕೊಡ್ಲಿಪೇಟೆ

6 months ago

ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ 50% ಮೀಸಲಾತಿ ಕೊಡಿ

ಸರೋಜಿನಿ ಮಹಿಷಿ ವರದಿಯ ಎಲ್ಲಾ ಶಿಫಾರಸುಗಳನ್ನು ಜಾರಿಗೆ ತನ್ನಿ

ಬೆಂಗಳೂರು: ಯಲಚೇನಹಳ್ಳಿ ವಾರ್ಡ್‌ನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಎಸ್‌ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರು “ಒಲವಿನ ಕರ್ನಾಟಕ “ಎಂಬ ವಿಷಯದಲ್ಲಿ ಭಾಷಣ ಮಾಡುತ್ತಾ ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ 50% ಮೀಸಲಾತಿ ಯೊಂದಿಗೆ ಡಾ. ಸರೋಜಿನಿ ಮಹಿಷಿ ವರದಿ ಎಲ್ಲಾ ಶಿಫಾರಸುಗಳನ್ನು ಜಾರಿಗೆ ತರಲು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ನಮ್ಮ ಹೆಮ್ಮೆಯ ದಿನ ಮಾತ್ರವಲ್ಲ, ನಮ್ಮ ಹೋರಾಟದ ಮತ್ತು ಬದ್ಧತೆಯ ಸ್ಮರಣೆಯ ದಿನವೂ ಹೌದು. ನಾವೆಲ್ಲರೂ ಹಕ್ಕು, ಸಮಾನತೆ ಮತ್ತು ನ್ಯಾಯದ ಪರ ಹೋರಾಡಿದ ನಾಯಕರನ್ನು ನೆನೆದು, ಅವರ ಹಾದಿಯಲ್ಲಿ ಮುಂದುವರಿಯಬೇಕಾಗಿದೆ ಎಂದು ಹೇಳಿದರು.

ಅವರು ತಮ್ಮ ಭಾಷಣದಲ್ಲಿ ಕನ್ನಡ ನಾಡಿನ ಸ್ವಾಭಿಮಾನ ಮತ್ತು ಒಗ್ಗಟ್ಟಿನ ಹೋರಾಟವನ್ನು ಸ್ಮರಿಸುತ್ತಾ, ರಾಣಿ ಚೆನ್ನಮ್ಮ, ಹುತಾತ್ಮ ಟಿಪ್ಪು ಸುಲ್ತಾನ್ ಮತ್ತು ಪೈಲ್ವಾನ್ ರಂಜಾನ್ ಸಾಬ್‌ರಂತಹ ಶೂರ ನಾಯಕರ ತ್ಯಾಗವನ್ನು ಉಲ್ಲೇಖಿಸಿದರು.

ಟಿಪ್ಪು ಸುಲ್ತಾನ್ ಕೇವಲ ದೇಶಭಕ್ತನಲ್ಲ, ಅವರು ಕನ್ನಡ ಪ್ರೇಮಿಯಾಗಿದ್ದರು. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದವರು, ನಾಡಿನ ರಕ್ಷಣೆಗೆ ತಮ್ಮ ಪ್ರಾಣವನ್ನೇ ಅರ್ಪಿಸಿದವರು. ಅವರ ನಾಡುಪ್ರೇಮವು ಇಂದಿಗೂ ಕನ್ನಡಿಗರಿಗೆ ಪ್ರೇರಣೆ ಎಂದರು.

ಒಲವಿನ ಕರ್ನಾಟಕ ಅಂದರೆ ಎಲ್ಲ ವರ್ಗಗಳ, ಧರ್ಮಗಳ ಮತ್ತು ಸಮುದಾಯಗಳ ಜನರ ಹಕ್ಕುಗಳು ಕಾಪಾಡಲ್ಪಡುವ, ಸಮಾನತೆಯ ಆಧಾರಿತ ರಾಜ್ಯ. ಇಂದಿನ ಸಮಾಜದಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು, ಕಾರ್ಮಿಕರು ಎದುರಿಸುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಮ್ಮ ನೈತಿಕ ಕರ್ತವ್ಯವಾಗಿದೆ ಎಂದರು.

ಎಸ್‌ಡಿಪಿಐ ಪಕ್ಷದ ಹೋರಾಟವನ್ನು ಉಲ್ಲೇಖಿಸಿ, ಜನರ ಸಾಂವಿಧಾನಿಕ ಹಕ್ಕುಗಳ ಕಾಪಾಡುವ ದೃಷ್ಟಿಯಿಂದ ನಡೆಯುತ್ತಿರುವ ಚಳುವಳಿಯ ಬಗ್ಗೆ ಪ್ರಸ್ತಾಪಿಸಿದರು. ಎಲ್ಲಾ ಕನ್ನಡಿಗರು ಒಟ್ಟಾಗಿ ಎಸ್‌ಡಿಪಿಐ ಕನಸಾಗಿರುವ ಸದೃಢ, ಸಮೃದ್ಧ, ಸ್ವಾಭಿಮಾನಿ ಎಂಬ ಒಲವಿನ ಕರ್ನಾಟಕವನ್ನು ನಿರ್ಮಿಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಧ್ವಜಕ್ಕೆ ಪುಷ್ಪಾರ್ಪಣೆ, ನಾಡಗೀತೆ, ಹಾಗೂ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ, ಎಸ್‌ಡಿಪಿಐ ಬೆಂಗಳೂರು ದಕ್ಷಿಣ ಪ್ರಧಾನ ಕಾರ್ಯದರ್ಶಿ ಡಾ. ಶೇಕ್ ತಬ್ರೇಜ್, ಜಿಲ್ಲಾ ಸದಸ್ಯ ಖಾಲಿದ್, ಯಲಚೇನಹಳ್ಳಿ ವಾರ್ಡ್ ಅಧ್ಯಕ್ಷ ಸೈಯದ್ ಇರ್ಫಾನ್, ಕಾರ್ಯದರ್ಶಿ ಸೈಯದ್ ಐಜಾಜ್, ಬನಶಂಕರಿ ವಾರ್ಡ್ ಅಧ್ಯಕ್ಷ ಅಜೀಜ್, ಕಾರ್ಯದರ್ಶಿ ಶಬಾಜ್ ಖುರೇಷಿ ಮತ್ತು ಪಕ್ಷದ ಕಾರ್ಯಕರ್ತರು, ಅನೇಕ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು, ಹಿರಿಯರು ಮತ್ತು ಯುವಕರು ಭಾಗವಹಿಸಿ ಕನ್ನಡ ನಾಡ ಪ್ರೇಮವನ್ನು ವ್ಯಕ್ತಪಡಿಸಿದರು.

Leave a Reply