ಕನ್ನಡ ಸಾಹಿತ್ಯ ಪರಿಷತ್ತಿನ ಭವಿಷ್ಯದ ಕುರಿತು ಚಿಂತನೆ

5 hours ago

ಬೆಂಗಳೂರು: ಕನ್ನಡ ನಾಡು-ನುಡಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟ ‘ಕನ್ನಡ ಸಾಹಿತ್ಯ ಪರಿಷತ್ತು’ ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಪರಿಷತ್ತಿನ ಇಂದಿನ ಸ್ಥಿತಿಗತಿ, ಎದುರಾಗಿರುವ ಸಮಸ್ಯೆಗಳು ಮತ್ತು ಭವಿಷ್ಯದ ದಾರಿಯ ಕುರಿತು ಚರ್ಚಿಸಲು ಕನ್ನಡಾಸಕ್ತರ ಮಹತ್ವದ ಸಂವಾದ ಕಾರ್ಯಕ್ರಮವೊಂದು ಆಯೋಜನೆಗೊಂಡಿದೆ.

ಪರಿಷತ್ತು ಎದುರಿಸುತ್ತಿರುವ ಸವಾಲುಗಳೇನು?: ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಉದ್ದೇಶಗಳು ಮರೆಯಾಗಿ, ಸಂಸ್ಥೆ ವ್ಯಕ್ತಿಗತ ಹಿತಾಸಕ್ತಿಗಳ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಬೈಲಾ ತಿದ್ದುಪಡಿ, ಸಂಸ್ಥೆಯ ಹಣಕಾಸಿನ ದುರ್ಬಳಕೆ, ಸಾಂಸ್ಥಿಕ ಗೌರವಗಳಿಗೆ ಧಕ್ಕೆ ಸೇರಿದಂತೆ ಅನೇಕ ಸಂಗತಿಗಳು ಕನ್ನಡಿಗರಲ್ಲಿ ಕಳವಳವನ್ನುಂಟುಮಾಡಿವೆ. ನಿಕಟಪೂರ್ವ ಅಧ್ಯಕ್ಷರ ಆಡಳಿತ ವೈಖರಿಯಿಂದಾಗಿ ಸಂಸ್ಥೆ ಆಡಳಿತಾಧಿಕಾರಿ ನೇಮಕವಾಗುವ ಹಂತಕ್ಕೆ ತಲುಪಿರುವುದು ಪರಿಷತ್ತಿನ ದಯನೀಯ ಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಸಂಘಟಕರು ಅಭಿಪ್ರಾಯಪಟ್ಟಿದ್ದಾರೆ.

ಸಂವಾದದ ಉದ್ದೇಶ: ಕ.ಸಾ.ಪ. ಇಂದು ಜಗಳ ಕಟಕಟೆಗೆ ಬಂದು ನಿಂತಿದೆ. ಈ ಸಂದರ್ಭದಲ್ಲಿ ಕನ್ನಡಿಗರಾದ ನಾವು ಒಗ್ಗೂಡಿ, ಪರಿಷತ್ತಿನ ಸಮಸ್ಯೆಗಳ ಮೂಲವನ್ನು ಹುಡುಕಿ, ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಸಮಯ ಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಮಾವೇಶದ ಪ್ರಮುಖ ಆಕರ್ಷಣೆಗಳು:
ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಸಾಹಿತಿಗಳು ಹಾಗೂ ಚಿಂತಕರು ಭಾಗವಹಿಸಲಿದ್ದಾರೆ:
ದಿಕ್ಸೂಚಿ ನುಡಿ: ಪ್ರೊ. ರಾಜೇಂದ್ರ ಚೆನ್ನಿ, ವಿಶ್ರಾಂತ ಪ್ರಾಧ್ಯಾಪಕರು, ಚಿಂತಕರು, ವಿಮರ್ಶಕರು
ಕ.ಸಾ.ಪ ಸಮಸ್ಯೆ-ಸವಾಲು: ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಹಿರಿಯ ಸಾಹಿತಿಗಳು
ಪ್ರತಿಕ್ರಿಯೆ-ಚಾಲನೆ: ಡಾ. ಬಂಜಗೆರೆ ಜಯಪ್ರಕಾಶ್, ಲೇಖಕರು, ಸಾಮಾಜಿಕ ಕಾರ್ಯಕರ್ತರು
ಪ್ರತಿಕ್ರಿಯೆ-ಸಮಾರೋಪ: ಡಾ. ಕರೀಗೌಡ ಬೀಚನಹಳ್ಳಿ, ಹಿರಿಯ ಸಾಹಿತಿಗಳು
ಅಧ್ಯಕ್ಷತೆ: ಅಗ್ರಹಾರ ಕೃಷ್ಣಮೂರ್ತಿ, ಮಾಜಿ ಕಾರ್ಯದರ್ಶಿಗಳು, ಕೇಂದ್ರ ಸಾಹಿತ್ಯ ಅಕಾಡೆಮಿ

ಈ ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ನಡೆ ಮತ್ತು ಸುಧಾರಣೆಗಳ ಕುರಿತು ಕನ್ನಡಿಗರು ತಮ್ಮ ಅಮೂಲ್ಯವಾದ ಆಶಯಗಳನ್ನು ಹಂಚಿಕೊಳ್ಳಬಹುದು. ರಾಜ್ಯಾದ್ಯಕ್ಷ ಸ್ಥಾನದ ಆಕಾಂಕ್ಷಿಗಳು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಕೋರಿದ್ದಾರೆ.

ದಿನಾಂಕ: ೧೬.೦೮.೨೦೨೬
ಸ್ಥಳ: ಪ್ರೆಸ್ ಕ್ಲಬ್, ಬೆಂಗಳೂರು
ಸಮಯ: ಬೆಳಿಗ್ಗೆ ೧೧

Leave a Reply