ತುಮಕೂರು ಜಿಲ್ಲೆಯ ಮಧುಗಿರಿ ಬೆಟ್ಟವು ಏಶಿಯಾ ಖಂಡದಲ್ಲೇ ಅತ್ಯಂತ ಎರಡನೇ ಎತ್ತರದ ಏಕಶಿಲಾ ಬೆಟ್ಟ ಎಂದು ವಿಶ್ವ ದಾಖಲೆಗಳ ಮಾಹಿತಿ ಪುಸ್ತಕದಲ್ಲಿ (Guinness book of world records) ಸೇರ್ಪಡೆಯಾಗಿದೆ. “ಧರೆಯೊಳೆಲ್ಲೇ ಇರಲಿ ನಾ ಮರೆಯಲಾರೆ ಮಧುಗಿರಿ” ಎಂಬ ವಾಕ್ಯ ಕೂಡಾ ಅತ್ಯಂತ ಜನಪ್ರಿಯವಾಗಿದೆ. ಈ ವಾಕ್ಯದ ಕರ್ತೃ ಹೊಯ್ಸಳ ಕವಿ ಎಂದು ಕೆಲವರು ಸುಳ್ಳು ಹಬ್ಬಿಸಿರುವ ಸಾಧ್ಯತೆ ಇದೆ. ಈ ವಾಕ್ಯವನ್ನು ಹೊಯ್ಸಳರ ಯಾವ ಹೆಸರಿನ ಕವಿ ಪ್ರಯೋಗಿಸಿದ್ದಾನೆಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಚಾರಿತ್ರಿಕ ಉಲ್ಲೇಖ ಇರುವುದಿಲ್ಲ. ಇನ್ನೂ ಕೆಲವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ವಾಕ್ಯ ಇದೆಂದು ಮತ್ತೊಂದು ಸುಳ್ಳನ್ನು ಸೃಷ್ಟಿಸಿದ್ದಾರೆ. ಈ ವಾಕ್ಯದ ಕತೃ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಎಂಬುದನ್ನು ಸಮರ್ಥಿಸಲು ಕೂಡಾ ಯಾವುದೇ ಲಿಖಿತ ಚಾರಿತ್ರಿಕ ಸಾಕ್ಷ್ಯಾಧಾರ ಲಭ್ಯವಿರುವುದಿಲ್ಲ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಈಗ ಮಧುಗಿರಿ ಎಂದು ಕರೆಯಲಾಗುತ್ತಿರುವ ಪಟ್ಟಣದ ಹೆಸರು ಕ್ರಿ.ಶ 1927 ನೇ ಇಸವಿಗೂ ಹಿಂದೆ ‘ಮದ್ದಗಿರಿ’ ಎಂಬುದಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ‘ಮಾಸ್ತಿ ಕನ್ನಡದ ಆಸ್ತಿ’ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಮದ್ದಗಿರಿ ಎಂಬ ದ್ರಾವಿಡ ಅಚ್ಚ ಕನ್ನಡದ ಹೆಸರನ್ನು ಮಧುಗಿರಿ (Hill of honey) ಎಂದು ಸಂಸ್ಕೃತದ ಹೆಸರಾಗಿ ಬದಲಾಯಿಸಿದರು.
ಆಗಿನ ಬ್ರಿಟಿಶ್ ಸರ್ಕಾರದ ಭಾರತೀಯ ಆಡಳಿತ ಸೇವೆ (ICS) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಮದ್ದಗಿರಿ ಪಟ್ಟಣದಲ್ಲಿ ಕಂದಾಯ ಇಲಾಖೆಯ ಅಸಿಸ್ಟೆಂಟ್ ಕಮೀಶನರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಷ್ಟಲ್ಲದೆಯೇ ಮದ್ದಗಿರಿಯಲ್ಲಿ ಸಬ್ ಡಿವಿಜನ್ ಅಧಿಕಾರಿಯಾಗಿದ್ದ ಕೃಷ್ಣಸ್ವಾಮಿ ಅಯ್ಯಂಗಾರ್ ಎಂಬುವರ ಮಗಳಾದ ಪಂಕಜಮ್ಮನವರನ್ನು 1910 ರಲ್ಲಿ ಮಾಸ್ತಿಯವರು ಮದುವೆಯಾಗಿ ಒಂದರ್ಥದಲ್ಲಿ ಈ ಪಟ್ಟಣದ ಅಳಿಯನಾಗಿದ್ದರು. ನೆರೆಯ ತೆಲುಗು ಭಾಷಿಕ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶವಾದ ಮಧುಗಿರಿಯಲ್ಲಿ ಈಗಿನಂತೆ ಆಗಲೂ ತೆಲುಗು ಭಾಷೆಯ ಪ್ರಭಾವವಿತ್ತು. ತಮಿಳು ಮಾತೃ ಭಾಷಿಕರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ತೆಲುಗು ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಹುಟ್ಟೂರಾದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಈಗಲೂ ಶೇಕಡಾ ಅರವತ್ತಕ್ಕಿಂತಲೂ ಹೆಚ್ಚು ತೆಲುಗು ಮನೆಭಾಷೆಯ ಜನರಿದ್ದಾರೆ. ಹಾಗಾಗಿ ಮಾಸ್ತಿಯವರಿಗೆ ತೆಲುಗು ಭಾಷೆ ಚೆನ್ನಾಗಿಯೇ ತಿಳಿದಿತ್ತು. ಬ್ರಿಟಿಶ್ ಭಾರತದ ಆಗಿನ ಕಾಲದಲ್ಲಿ ಇಂಗ್ಲಿಶ್ ಆಡಳಿತ ಭಾಷೆಯಾಗಿದ್ದು ಸರ್ಕಾರದ ಹಂತದ ಪತ್ರ ವ್ಯವಹಾರಗಳೆಲ್ಲವೂ ಬಹುತೇಕ ಇಂಗ್ಲಿಶಿನಲ್ಲಿಯೇ ನಡೆಯುತ್ತಿದ್ದವು. ಮದ್ದಗಿರಿ ಎಂಬ ಹೆಸರನ್ನು ಇಂಗ್ಲಿಶಿನಲ್ಲಿ ‘MADDAGIRI’ ಎಂದು ಬರೆದಿರುವುದನ್ನು ಕೆಲವರು ‘ಮಡ್ಡಗಿರಿ’ ಎಂದು ಉಚ್ಚರಿಸುತ್ತಾ ನಗುತ್ತಿದ್ದರು. ತೆಲುಗಿನಲ್ಲಿ ‘ಮಡ್ಡ’ ಎಂದರೆ ಪುರುಷನ ಜನನೇಂದ್ರಿಯ ಎಂದರ್ಥ. ತೆಲುಗು ಭಾಷೆ ತಿಳಿದವರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇದನ್ನು ಅಶ್ಲೀಲ ಅಥವಾ ಅಸಹ್ಯಕರ ಶಬ್ದವೆಂದು ಮನಗಂಡರು. ಮದ್ದಗಿರಿ ಪಟ್ಟಣ ಏಕಶಿಲಾ ಬೆಟ್ಟದ ಕಾರಣದಿಂದ ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿ ತನ್ನ ಘನತೆ ಮತ್ತು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವಾಗ ಮದ್ದಗಿರಿ ಎಂಬ ಹೆಸರೇ ಊರಿನ ಘನತೆಯನ್ನು ಮುಕ್ಕಾಗಿಸುತ್ತಿದೆ ಎಂಬ ಅಂಶವನ್ನು ಮಾಸ್ತಿಯವರು ಕಂಡುಕೊಂಡು ಮಧುಗಿರಿ (MADHUGIRI) ಎಂದು ಮದ್ದಗಿರಿ ಪಟ್ಟಣಕ್ಕೆ ಮರು ನಾಮಕರಣ ಮಾಡಿದರು.
ಅಚ್ಚಗನ್ನಡದಲ್ಲಿ ‘ಮದ್ದ’ ಎಂದರೆ ಶಿವ, ಈಶ್ವರ, ಹಿರೀಕ, ದೊಡ್ಡ, ಮಹತ್ತರ ಮುಂತಾದ ಅರ್ಥಗಳಿವೆ. ನಮ್ಮ ಗ್ರಾಮೀಣ ಜನಪದರು ಶಿವನನ್ನು ಮದ್ದಪ್ಪ, ಮದ್ದೇವಪ್ಪ (ಮಹಾದೇವಪ್ಪ), ಮದ್ದಮಲ್ಲಯ್ಯ (ಮಹದ್ ಮಲೆಯ ಅಯ್ಯ) ಎಂದು ಕರೆದರೆ ಶಿವೆ(ಪಾರ್ವತಿ)ಯನ್ನು ಶಿವಮ್ಮ, ಮದ್ದೇವಮ್ಮ (ಮಹಾದೇವಮ್ಮ) ಎಂದು ಕರೆಯುತ್ತಾರೆ. ಮದ್ದಾನೆ ಎಂದರೆ ದೊಡ್ಡ ಆನೆ ಎಂದರ್ಥ. ಕರ್ನಾಟಕದ ಕನ್ನಡ ಭಾಷಿಕ ಬಯಲುಸೀಮೆಯ ಹಲವಾರು ಭಾಗಗಳಲ್ಲಿ ಹಾಗೂ ನೆರೆಯ ತೆಲುಗು ಭಾಷಿಕ ಆಂಧ್ರಪ್ರದೇಶದ ಹಲವಾರು ಕಡೆಗಳಲ್ಲಿ ಮದ್ದಾನೇಶ, ಮದ್ದಕ್ಕ, ಮದ್ದಮ್ಮ, ಮದ್ದಯ್ಯ, ಮದ್ದರಾಜ, ಮದ್ದೇವಮ್ಮ, ಮದ್ದಲೇಟಪ್ಪ ಎಂಬ ಹೆಸರಿನ ವ್ಯಕ್ತಿಗಳು ಹಾಗೂ ಮದ್ದಕ್ಕನಹಳ್ಳಿ, ಮದ್ದ, ಮದ್ದೆ, ಮದ್ದನಪಲ್ಲಿ ಮದ್ದನಕುಂಟ ಎಂಬ ಹೆಸರಿನ ಗ್ರಾಮಗಳು ಈಗಲೂ ಇರುವುದನ್ನು ನಾವು ನೋಡುತ್ತೇವೆ. ಪಂಚ ಗಣಾಧೀಶ್ವರರಲ್ಲಿ ಒಬ್ಬನಾದ ಮದ್ದಾನೇಶ್ವರನು ಶೈವ ಪರಂಪರೆಯ ದೇಶಿ ಯೋಗಧಾರೆಯಲ್ಲಿ ಆಗಿಹೋಗಿರುವ ಅಗ್ರ ಸಂತನಾಗಿದ್ದಾನೆ. ಕುಂಚಿಟಿಗರು, ಕಾಡುಗೊಲ್ಲರು ಇನ್ನೂ ಮುಂತಾದ ತಳ ಸಮುದಾಯಗಳಿಗೆ ಮದ್ದಮ್ಮ ನೆಲದೇವತೆ- ಮನೆ ದೇವತೆಯಾಗಿ ಆರಾಧಿಸಲ್ಪಡುತ್ತಿದ್ದಾಳೆ. ಕಾಡುಗೊಲ್ಲರ ಮಗಳಾಗಿ ಯೋಗಿನಿಯಾಗಿ ಆಗಿಹೋಗಿರುವ ಮದ್ದಮ್ಮನ ಹೆಸರಿನಲ್ಲಿ ಹಲವಾರು ಊರುಗಳಲ್ಲಿ ಗುಡಿಗಳಿವೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಗ್ರಾಮದ ಪಕ್ಕದಲ್ಲಿರುವ ಎತ್ತಗಾನಹಳ್ಳಿ ಗ್ರಾಮದ ಹೊಲಮಾಳದಲ್ಲಿ ಮದ್ದಮ್ಮನ ಬೆಟ್ಟ ಎಂಬ ಬೆಟ್ಟವಿದೆ. ಈ ಬೆಟ್ಟದ ಗವಿಯಲ್ಲಿ ಮದ್ದಮ್ಮ ದೇವತೆಯಾಗಿ ನೆಲೆಗೊಂಡು ತಳ ಸಮುದಾಯಗಳಿಂದ ಪೂಜಿಸಲ್ಪಡುತ್ತಿದ್ದಾಳೆ. ಅಂತೆಯೇ ಪಾವಗಡ ತಾಲೂಕಿನಲ್ಲಿ ಮದ್ದ ಗ್ರಾಮದ ಗ್ರಾಮದೇವತೆಯಾದ ಸ್ವಾರಾಗಿರಿ- ಮದ್ದದ ಸ್ವಾರಮ್ಮ ಶಕ್ತಿ ದೇವತೆಯಾಗಿ ಪೂಜಿಸಲ್ಪಡುತ್ತಿದ್ದಾಳೆ. ಪೂರ್ವಿಕ ದ್ರಾವಿಡ ಪರಂಪರೆಯ ಮದ್ದ, ಮದ್ದಮ್ಮ, ಮದ್ದಗಿರಿ, ಮದ್ದಾನೇಶ್ವರ ಇಂತಹ ಯಾವುದೇ ಪದಗಳಲ್ಲಿ ಯಾರಿಗೂ ಕಾಣದಿರುವ ಆಶ್ಲೀಲತೆ ಅಥವಾ ಅಸಹ್ಯ ಭಾವನೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ‘ಮದ್ದಗಿರಿ’ (MADDAGIRI) ಎಂಬ ಶಬ್ದದಲ್ಲಿ ಕಂಡುಬಂದಿರುವುದು ಮಾತ್ರ ವಿಶೇಷ. ಅಂತೂ ಅಚ್ಚಗನ್ನಡದ ದ್ರಾವಿಡ ಹೆಸರಿನ ಮದ್ದಗಿರಿ ಪಟ್ಟಣ ಮಧುಗಿರಿ ಎಂಬ ಹೆಸರಿನಿಂದ ತುಂಬಾ ಪ್ರಿಯವೂ ಸಹ್ಯವೂ ಪಾವನವೂ ಆಯಿತು !!
‘ಧರೆಯೊಳೆಲ್ಲೇ ಇರಲಿ ನಾ ಮರೆಯಲಾರೆ ಮಧುಗಿರಿ’ ಎಂಬ ಈ ಜನಪ್ರಿಯ ವಾಕ್ಯವನ್ನು ಕುರಿತು ಹೇಳುವುದಾದರೆ ತೀರಾ ಮೂವತ್ತು ನಲವತ್ತು ವರ್ಷಗಳ ಇತ್ತೀಚೆಗೆ ಯಾರೋ ಜನಸಾಮಾನ್ಯರು ಫೋಟೋ ಸ್ಟುಡಿಯೋಗಳಲ್ಲಿ ಮಧುಗಿರಿ ಬೆಟ್ಟದ ಹಿನ್ನೆಲೆಯಿರುವ ಫೋಟೋಗಳಿಗಾಗಿ ರೂಪಿಸಿ ಜನಪ್ರಿಯಗೊಳಿಸಿರುವ ವಾಕ್ಯ ಇದ್ದಿರಬಹುದು ಅನ್ನಿಸ್ತಿದೆ. ಇದಕ್ಕೂ ಮುಂಚೆ ಈ ವಾಕ್ಯ ನನಗೆಲ್ಲಿಯೂ ಕಾಣಿಸಿಲ್ಲ.
ಬಿಜ್ಜಾವರ(ಬಿಜವರ)ವನ್ನು ರಾಜಧಾನಿ ಕೇಂದ್ರವಾಗಿಸಿಕೊಂಡು ಆಳಿದ ಮದ್ದಗಿರಿಯ ಮಹಾನಾಡ ಪ್ರಭುಗಳ ಕಾಲದಿಂದಲೂ ಮದ್ದಗಿರಿ ಎಂದೇ ಪ್ರಸಿದ್ಧವಾಗಿದ್ದ ಪಟ್ಟಣದ ಹೆಸರನ್ನು ಮಧುಗಿರಿ ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕ್ರಿ.ಶ.1927 ರಲ್ಲಿ ಮರು ನಾಮಕರಣ ಮಾಡಿದರು. ಮಧುಗಿರಿ ಬೆಟ್ಟದಲ್ಲಿ ಅಪಾರ ಪ್ರಮಾಣದ ಜೇನುಗೂಡು ಇದ್ದದ್ದರಿಂದಾಗಿ, ಮಧು ಎಂದರೆ ಜೇನು; ಗಿರಿ ಎಂದರೆ ಬೆಟ್ಟ. ಮಧುಗಿರಿ ಎಂದರೆ ಜೇನಿನ ಬೆಟ್ಟ ಎಂದು ಅರ್ಥೈಸಿ ಅವರು ಹೆಸರು ಕೊಟ್ಟಿರುವರಂತೆ ! ಮಧುಗಿರಿ ಬೆಟ್ಟದಲ್ಲಿ ದುಂಬಿಗಳು ಹೆಚ್ಚೇನೂ ಜೇನುಗೂಡು ಕಟ್ಟುವುದಿಲ್ಲ. ಇಡೀ ಮಧುಗಿರಿ ಬೆಟ್ಟ ಸುತ್ತಿದರೂ ಜೇನುಗೂಡು ಕಾಣಿಸುವುದು ತೀರಾ ಅಪರೂಪ. ಯಾಕೆಂದರೆ ಮಧುಗಿರಿಯ ಏಕಶಿಲಾ ಬೆಟ್ಟದಲ್ಲಿ ಜೇನುಗೂಡು ಕಟ್ಟಲು ದುಂಬಿಗಳಿಗೆ ಪಶಸ್ತ ಪ್ರಾಕೃತಿಕ ವಾತಾವರಣ ಇರುವುದಿಲ್ಲ.
ಇಡೀ ಬೆಟ್ಟ ಏಕಶಿಲೆಯದ್ದಾದ್ದರಿಂದ ಬೆಟ್ಟದಲ್ಲಿ ಎಲ್ಲಿಯೂ ದುಂಬಿಗಳಿಗೆ ಮಧು ಹೀರಲು ಅಗತ್ಯವಾದ ಹೂಬಿಡುವ ಮರಗಿಡಗಳು ಬೆಳೆಯಲು ಅನುಕೂಲ ಇರುವುದಿಲ್ಲ. ಬೇಸಿಗೆ ಮಳೆಗಾಲ ಎಂಬ ಭೇದವಿರದೆ ಕಾಯುವ ಬಿಸಿಲಿನೊಂದಿಗೆ ಬೆಟ್ಟವೂ ಬಿಸಿಯೇರಿ ಬಣಗುಡುತ್ತದೆ. ಹೀಗಾಗಿ ದುಂಬಿಗಳಾಗಲೀ, ಚಿಟ್ಟೆಗಳಾಗಲೀ, ಪಕ್ಷಿಗಳಾಗಲೀ, ಯಾವುದೇ ಕ್ರಿಮಿ ಕೀಟಗಳಾಗಲೀ ಈ ಬೆಟ್ಟದಲ್ಲಿ ಗೂಡು ಕಟ್ಟಿಕೊಂಡು ಸಂತಾನಾಭಿವೃದ್ಧಿ ಮಾಡುವ ಅನುಕೂಲಕರ ವಾತಾವರಣ ಇಲ್ಲ. ನಾನು ಈ ಬೆಟ್ಟದ ನೆತ್ತಿಯವರೆಗೂ ಗೆಳೆಯರೊಂದಿಗೆ ಹಲವಾರು ಸಲ ಹತ್ತಿಳಿದು ಕಂಡಿದ್ದೇನೆ. ಬೆಟ್ಟದ ನೆತ್ತಿಯ ಮೇಲೆ ಹೊರತುಪಡಿಸಿ ಎಲ್ಲಿಯೂ ನೀರಿನ ಅನುಕೂಲ ಕಾಣಿಸುವುದಿಲ್ಲ. ಬೆಟ್ಟದ ಕೆಳಗೆ ಪಾದಬುಡದಲ್ಲಿ ಮಾತ್ರ ಅಲ್ಲಲ್ಲಿ ಅಲ್ಪಸ್ವಲ್ಪ ಸಣ್ಣಪುಟ್ಟ ಮರಗಿಡ ಹುಲ್ಲು ಬೆಳೆದಿರುವುದನ್ನು ನೋಡುತ್ತೇವೆ. ಇಲ್ಲಿಯೂ ಯಾವುದೇ ದೊಡ್ಡ ದೊಡ್ಡ ಮರಗಳಾಗಲೀ ಹೇರಳವಾಗಿ ಹೂಬಿಡುವ ಸಸ್ಯಗಳಾಗಲೀ ಇರುವುದಿಲ್ಲ. ಹೀಗಿರುವಾಗ ಮಧುಗಿರಿ ಬೆಟ್ಟದಲ್ಲಿ ಸಾಲು ಸಾಲು ಜೇನುಗೂಡು ಕಟ್ಟುವ ಮಾತೆಲ್ಲಿಯದು? ಮಧುಗಿರಿಯ ಪ್ರಮುಖ ಏಕಶಿಲಾ ಬೆಟ್ಟವನ್ನು ಹೊರತುಪಡಿಸಿದಂತೆ ಸುತ್ತಮುತ್ತಲಿನ ಕೆಲವು ಗುಡ್ಡಗಳಲ್ಲಿ ಕೂಡಾ ಜೇನುಗೂಡು ಕಟ್ಟುವುದು ಅಪರೂಪವಾಗಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಮಧುಗಿರಿಯಲ್ಲಿ ಅಸಿಸ್ಟೆಂಟ್ ಕಮೀಶನರ್ ಆಗಿದ್ದ ಕಾಲದಲ್ಲಿ ದಟ್ಡವಾದ ಕಾಡು ನಮ್ಮಲ್ಲಿತ್ತು, ನಿಜ. ಆಗಲೂ ಈ ಏಕಶಿಲಾ ಬೆಟ್ಟದಲ್ಲಿ ಮರಗಿಡಗಳು ಬೆಳೆಯುವ ಅನುಕೂಲ ಇರಲೇ ಇಲ್ಲ. ಬೀಜಗಳು ಮೊಳೆತು ಸಸಿಗಳಾಗಿ ಬೆಳೆಯಲು ಇಡೀ ಬೆಟ್ಟದ ಬಂಡೆಯಲ್ಲಿ ಬೇರು ಬಿಡಲು ಸ್ಥಳವೇ ಇಲ್ಲವೆಂದ ಮೇಲೆ ಮರಗಿಡಗಳೆಲ್ಲಿ? ದುಂಬಿಗಳಿಗೆ ಆಶ್ರಯವೆಲ್ಲಿ? ಜೇನುಗೂಡು ಕಟ್ಟುವ ಅವಕಾಶ ಇನ್ನೆಲ್ಲಿ? ಹೀಗಿದ್ದರೂ ದ್ರಾವಿಡ ಅಚ್ಚಗನ್ನಡದ ಮದ್ದಗಿರಿ ಎಂಬ ಪಟ್ಟಣದ ಹೆಸರನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸಂಸ್ಕೃತ ಭಾಷೆಯಲ್ಲಿ ಮಧುಗಿರಿ ಎಂದು ಮರು ನಾಮಕರಣ ಮಾಡಿರುವುದನ್ನು ನಾವು ಜೇನಿನಷ್ಟೇ ರುಚಿ ಎಂದು ಸ್ವೀಕರಿಸಿದ್ದೇವೆ l!!
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ, 8722724174








