ಭಾರತ ಹುಣ್ಣಿಮೆಯ ದಿನ ಹೊಸ ಗಡಿಗೆಯ ತಣ್ಣೀರಿನಿಂದ ಹರಿದ ಗಾಯಗಳನ್ನು ತೊಳೆದು, ಹೊಸ ಸೂಜಿ – ಹೊಸ ದಾರಗಳಿಂದ ನೆತ್ತರು ಸೋರುವ ಗಾಯಗಳನ್ನು ಹೊಲಿದುಕೊಂಡ ಗೋಸಂಗಿ ಯುದ್ಧ ವೀರರ ನೆನಪು ನಮ್ಮ ತಾಯಂದಿರ ನಾಲಗೆ ಮೇಲೆ ಇನ್ನೂ ಮಾಸಿಲ್ಲ.
ಗೊಲ್ಲರ ರಾಜ ಕಾಟಮರಾಜನ ತಮ್ಮನಾದ ಚೆನ್ನಯ್ಯಬಾಲುಡು ಸಾರಿದ್ದ ಯುದ್ಧದಲ್ಲಿ ನೆರವಾಗಿ, ವೈರಿಗಳ ವಿರುದ್ಧ ಕಾದಾಡಿ ಚೆನ್ನಯ್ಯಬಾಲುಡುವಿಗೆ ಜಯ ತಂದುಕೊಡಲೆಂದು ಕಾರಂಪೂಡಿಯ ಯುದ್ಧಕ್ಕೆ ಹೋಗಿದ್ದ ಮಾದಿಗರ ಗೋಸಂಗಿ ಯುದ್ಧವೀರರು, ರಣರಂಗದಲ್ಲಿ ವೈರಿಗಳ ವಿರುದ್ಧ ಕಾದಾಡಿ ಕತ್ತಿಗಳಿಂದ ಗಾಯಗೊಂಡು ಇದೇ ಭಾರತ ಹುಣ್ಣಿಮೆಯ ಸಂಜೆ ಊರಿಗೆ ಮರಳಿ ಬರುತ್ತಾರೆ. ಅಂದು ಸಂಜೆ ಊರಿನ ಹೊರಗೆ ಹೊಸ ಗಡಿಗೆಯ ತಣ್ಣೀರಿನಿಂದ ಹರಿದ ಗಾಯಗಳನ್ನು ತೊಳೆದು, ಹೊಸ ಸೂಜಿ – ಹೊಸ ದಾರಗಳಿಂದ ನೆತ್ತರು ಸೋರುವ ಗಾಯಗಳನ್ನು ಹೊಲಿದುಕೊಳ್ಳುತ್ತಾರೆ. ಚೆನ್ನಯ್ಯಬಾಲುಡುವಿಗೆ ಜಯವನ್ನು ತಂದುಕೊಟ್ಟ ಅವರು, ಆ ಗೊಲ್ಲರ ದೊರೆಯಿಂದ ಅನೇಕ ಬಿರುದುಗಳನ್ನೂ ಇನಾಮುಗಳನ್ನೂ ಪಡೆಯುತ್ತಾರೆ.
ಈ ಯುದ್ಧದ ನೆನಪನ್ನು ಮರೆಯಲಾರದ ಮಾದಿಗ ಜನಪದ ತಾಯಂದಿರು ಕಾವ್ಯವನ್ನು ಕಟ್ಟಿ ಹಾಡತೊಡಗಿ, ತಮ್ಮ ಸಮುದಾಯದ ಯುದ್ಧವೀರರ ಕಥನವನ್ನು ಮೌಖಿಕ ಧಾರೆಯಲ್ಲಿ ತಲೆಮಾರುಗಳಿಂದ ಸಾಗಿಸಿಕೊಂಡು ಬಂದಿದ್ದಾರೆ. ಗೋಸಂಗಿ ಯುದ್ಧ ವೀರರ ಈ ಕಥನವು ಗಾರುಡಿ ಗಂಗಭಾರತ ಕಾವ್ಯವಾಗಿ ನರದ ರಕ್ತದಂತೆ ಹರಿಯುತ್ತಿದೆ.
ಅಂತೆಯೇ ಭೀಮಾ ಕೋರೆಗಾಂವ್ ಮಹಾರ್ ವೀರ ಯೋಧರ ನೆನಪೂ ನಮ್ಮಿಂದ ಎಂದಿಗೂ ಮಾಸುವುದಿಲ್ಲ. ಬ್ರಿಟೀಷರಿಗೆ ಜಯ ತಂದುಕೊಡಲು ಪೇಶ್ವೆಗಳ ವಿರುದ್ಧ ಕಾದಾಡಿದ ಕೋರೆಗಾಂವ್ ವೀರಗಾಥೆ (1818 ಜನವರಿ 1) ದಲಿತರ ಪಾಲಿನ ಸ್ವಾಭಿಮಾನದ ಕಥನ. ಮಹಾರ್ ರೆಜಿಮೆಂಟಿನ ಸ್ಥಾಪನೆಯ ಘನತೆಗೂ ಹೊಸ ಪ್ರಸ್ತಾನ ಬರೆದ ಈ ದಲಿತ ದಿಗ್ವಿಜಯವನ್ನು ನಾವು ಪ್ರತಿ ವರ್ಷ ಆಚರಿಸುತ್ತಾ ಬಂದಿದ್ದೇವೆ.
ಸಂವಿಧಾನ ಕತೃ ಡಾ.ಬಿ.ಆರ್.ಅಂಬೇಡ್ಕರ್ ಅವರು, ಪ್ರತಿವರ್ಷ ಜನವರಿ 01ರಂದು ಕೊರೆಗಾಂವ್ ಹುತಾತ್ಮ ಯುದ್ಧವೀರರ ರಣಭೂಮಿಗೆ ಸಕುಟುಂಬ ಸಮೇತರಾಗಿ ಹೋಗಿ ಮಹಾರ್ ಸೈನಿಕರ ವಿಜಯ ಸ್ತೂಪಕ್ಕೆ ವಂದನೆ ಸಲ್ಲಿಸಿ ಬರುತ್ತಿದ್ದರು. ಪ್ರತಿವರ್ಷ ಜನವರಿ 01ನೇ ದಿನವನ್ನು ಕೊರೆಗಾಂವ್ ಯುದ್ಧವೀರರ ವಿಜಯ ದಿವಸವನ್ನಾಗಿ ಆಚರಿಸುವುದನ್ನು ಅಂಬೇಡ್ಕರ್ ರೂಢಿಗೆ ತಂದರು.
ಕೋಮುವಾದಿ ಮರಾಠ ಪೇಶ್ವೆಗಳ ವಿರುದ್ಧ ಹೋರಾಡಿ ಮಡಿದು ಹುತಾತ್ಮರಾದ ಕೊರೆಗಾಂವ್ ವೀರರ ವಿಜಯ ದಿವಸವನ್ನಾಗಿ ನಾವು ಜನವರಿ-02 ರ ದಿನವನ್ನು ಆಚರಿಸುತ್ತಿದ್ದೇವೆ.
2018ನೇ ಜನವರಿ 02 ರ ಭಾರತ ಹುಣ್ಣಿಮೆಯ ದಿನ ದಲಿತರ ಪಾಲಿಗೊಂದು ಕರಾಳ ನೆನಪನ್ನು ಬೆಸೆದುಬಿಟ್ಟಿದೆ. ಕರುಣಾಮೈತ್ರಿಗಳ ಸಂಕೇತವಾದ ನೀಲಿ ಮತ್ತು ಪಂಚಶೀಲ ಧ್ವಜಗಳನ್ನು ಹಿಡಿದು ಮಹಾರಾಷ್ಟ್ರದ ಕೊರೆಗಾಂವ್ ವೀರಭೂಮಿಗೆ ಕೋರೆಗಾಂವ್ ವಿಜಯ ದಿವಸದ 200ನೇ ವರ್ಷಾಚರಣೆಯನ್ನು ಆಚರಿಸಲು ಹೋಗಿದ್ದ ನಮ್ಮ ಬಂಧುಗಳ ವಿರುದ್ಧ, ಮತೀಯ ದ್ವೇಷ ಮತ್ತು ರಕ್ತಪಾತದ ಸಂಕೇತವಾದ ಭಗವಾಧ್ವಜವನ್ನು ಹಿಡಿದುಕೊಂಡು ಬಂದ ಸಂಘಪರಿವಾರದ ಗೂಂಡಾಗಳು ಗುಂಪು ಘರ್ಷಣೆ ನಡೆಸಿ ನಮ್ಮ ಅನೇಕ ಬಂಧುಗಳು ಗಾಯಗೊಂಡರು. ಸಾರ್ವಜನಿಕ ಆಸ್ತಿ-ಪಾಸ್ತಿಗಳೂ ನಾಶವಾಗಿ ಸಾಮಾನ್ಯ ಜನಜೀವನ ಕದಡಿ ಹೋಯಿತು. ದಲಿತರ ಜೀವಹಾನಿಯೂ ಆಗಿಹೋದ ಅಂತಹ ಹೊತ್ತಿನಲ್ಲಿ ಸಹಜವಾಗಿ ವ್ಯಗ್ರಗೊಳ್ಳಬೇಕಿದ್ದ ದಲಿತರು ತಮ್ಮ ಕೋಪವನ್ನು ಸಾರ್ವಜನಿಕರ ಮೇಲಾಗಲೀ ಸಾರ್ವಜನಿಕ ಆಸ್ತಿ-ಪಾಸ್ತಿಗಳ ಮೇಲಾಗಲೀ ಹರಿಯಬಿಡದೆ ಶಾಂತಿಯನ್ನು ಕಾಪಾಡಿಕೊಂಡರು.
ಗೋಸಂಗಿ ಯುದ್ಧವೀರರ ಮತ್ತು ಕೋರೆಗಾಂವ್ ಯುದ್ಧ ವೀರರ ಅಮರ ಕಾವ್ಯಗಳನ್ನು ಕಟ್ಟಿ ಹಾಡುವ ಮೂಲಕ ದಲಿತರು ತಮಗಾದ ನೋವನ್ನು ಹೊರ ಹಾಕಿದರು. ಹರಿದ ಗಾಯಗಳನ್ನು ಹೊಲೆಯುವಂತೆ ಸಂಬಂಧಗಳನ್ನೂ ಹೊಲೆದುಕೊಳ್ಳುವುದನ್ನು ನಮ್ಮ ಜನಪದರು ಧ್ಯಾನಿಸಿದ್ದರು. 01-01-2023 ಕೊರೆಗಾಂವ್ ವಿಜಯ ದಿವಸದ 206 ನೇ ವರ್ಷಾಚರಣೆಯ ಹೊತ್ತಿನಲ್ಲಿ ಇಲ್ಲಿಯತನಕ ಮತೀಯವಾದಿಗಳಿಂದ ನಮಗಾಗಿರುವ ಗಾಯಗಳನ್ನೂ….. ಹರಿದ ಸಂಬಂಧಗಳನ್ನೂ ಹೊಲಿದುಕೊಳ್ಳೋಣ.
ಕರುಣಾಮೈತ್ರಿಗಳ ಸಂಕೇತವಾದ ನೀಲಿ ಮತ್ತು ಪಂಚಶೀಲ ಧ್ವಜಗಳನ್ನು ಎಲ್ಲೆಡೆ ಎತ್ತಿ ಹಿಡಿಯೋಣ.
- ಡಾ. ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು




