ಹಾಲುಗೆನ್ನೆಯ ಹೆಣ್ಣುಮಕ್ಕಳ ಬಾಳು ಹೀಗೆ ಬೀದಿ ಭಿಕ್ಷಾಟನೆಯಲ್ಲಿ ಕರಗಬೇಕೆ?

2 years ago

ಕರ್ನಾಟಕದಲ್ಲಿ ಕಂಡುಬರುವ ಅಲೆಮಾರಿ ಬುಡಕಟ್ಟು ಸಮುದಾಯಗಳಲ್ಲಿ ಸಿಂದೋಳ್ಳು ಸಮುದಾಯದವರು, ಪೆಟ್ಟಿಗೆ ದೇವರುಗಳನ್ನು ಹೊತ್ತುಕೊಂಡು, ಅರೆ ವಾದ್ಯ ಬಾರಿಸುತ್ತಾ ಊರಿನ ಬೀದಿಗಳಲ್ಲಿ ಭಿಕ್ಷಾಟನೆಗೆ ಇಳಿಯುತ್ತಾರೆ. ಗಂಡುಮಕ್ಕಳು ಮೈಮೇಲೆ ಚುಳ್ಳನೆ ರಕ್ತ ಚಿಮ್ಮುವಂತೆ ಚಾಟಿಯಿಂದ ಪಟೀರ್ ಪಟೀರನೆ ಹೊಡೆಕೊಂಡು, ಬಾಯಿಯ ದವಡೆಗಳ ಮೂಲಕ ಕೆನ್ನೆಗೆ ಒಂದು ಕಬ್ಬಿಣದ ತಂತಿಯನ್ನು (ಬಾಯಿಬೀಗ) ತೂರಿಸಿಕೊಂಡು ಭೀಬತ್ಸಕರವಾಗಿ ನೋಡುಗರಲ್ಲಿ ಭಯ ಹುಟ್ಟಿಸುವಂತೆ ಕಾಣಿಸುತ್ತಾರೆ.

ಮುಖ್ಯ ವಾಹಿನಿಯ ಕೇರಿ ಮಾದಿಗರಿಂದ ದೂರ ಸರಿದುಹೋಗಿ ಅಲೆಮಾರಿಗಳಾಗಿರುವ ಸಿಂದೋಳ್ಳು ಸಮುದಾಯದ ಇವರು, ಜಾತಿ ನೆಲೆಯಿಂದ ಮಾದಿಗರಿಗೆ ಹತ್ತಿರದಲ್ಲಿರುವ ನಾಯಕ ಜನಾಂಗದ ಪೋತರಾಜರ ಸಂಸ್ಕೃತಿಯ ಮೂಲ ಚಹರೆಗಳನ್ನು ಹೊಂದಿದ್ದಾರೆ. ಗಜೇಂದ್ರಗಡ- ನರೇಗಲ್ಲು ಊರಿನಿಂದ ಬೆಂಗಳೂರಿಗೆ ಬಂದಿರುವ ಸಿಂದೋಳ್ಳು ಸಮುದಾಯದ ಈ ಹೆಣ್ಣುಮಕ್ಕಳೊಂದಿಗೆ ಮಾತುಕತೆ ನಡೆಸಿದ ವಿಡಿಯೋ ಇಲ್ಲಿದೆ.

ಇವರ ಸ್ಥಿರವಾದ ನೆಲಸುಗೆ, ಜಾತಿಪತ್ರ, ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ, ಸಂಶೋಧನಾ ಕ್ಷೇತ್ರಕಾರ್ಯದ ಸಲುವಾಗಿ ನಾನು ಇದೇ ರೀತಿಯಲ್ಲಿ ಹಲವಾರು ಬುಡಕಟ್ಟುಗಳೊಂದಿಗೆ ಸಂವಾದ ನಡೆಸುತ್ತಿರುತ್ತೇನೆ.

ಸಿಂದೋಳ್ಳು ಎಂಬ ಈ ಅಲೆಮಾರಿಗಳು ತಮ್ಮನ್ನು ಸಿಂಧೂ ಕಣಿವೆಯ ನಾಗರಿಕತೆಯ ಮೊದಲತೊಟ್ಟಿಲು ತೂಗಿದವರು ತಾವೇ ಎಂದು ‘ಸಿಂದ್ ಲೋಯಲವಾಳ್ಳು’ (ಸಿಂಧೂಕಣಿವೆಯವರು) ಎಂದು ಕರೆದುಕೊಳ್ಳುತ್ತಾರೆ. ಇವರನ್ನು ಜನರು ಸಿಂಧುಲು, ಬೂರ್ ಬೂರ್ ಚಾ, ಪುಟ್ಟಿಗೆ ಮಾರಿಯವರು, ದುರುಗಮುರುಗಿಯವರು, ಕೂಗುಮಾರಿಯವರು, ಚಿಂದುಲು, ಚಿಂದುವಾಂಡ್ಲು, ಭೋಗಂಮಾದಿಗಲು, ಚಿ(ಸಿ)ನ್ನಮಾದಿಗಲು, ಸಿಂದ್ ಮಾದಿಗರು ಮುಂತಾದ ಹೆಸರುಗಳಲ್ಲಿ ಕರೆದುಕೊಳ್ಳುತ್ತಾರೆ. ಸಂಶೋಧಕ ಕವಿ ಕೋಟಿಗಾನಹಳ್ಳಿ ರಾಮಯ್ಯ ಇವರನ್ನು ಕುರಿತು “ಸಿಂದ್ ಮಾದಿಗರ ಸಂಸ್ಕೃತಿ” ಮತ್ತು ದೊಡ್ಡಮನೆ ಲೋಕರಾಜ್ “ಸಿಂಧೊಳ್ಳು” ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ.

ಆದಿಜಾಂಬವ ಮಾದಿಗರಿಂದ ಸಿಡಿದುಹೋಗಿ ಅಲೆಮಾರಿಗಳಾಗಿ ಮಾರ್ಪಟ್ಟಿರುವ ಈ ಸಿಂದೋಳ್ಳು, ದಕ್ಕಲಿಗರು, ಮಾಸ್ಟೀಕರು, ಗೋಸಂಗಿ ಮುಂತಾದ ನಿರ್ಗತಿಕರನ್ನು ಕುರಿತು ಎಡಗೈ-ಬಲಗೈ ಎಂದು ಕಚ್ಚಾಡುವ ದಲಿತರಾಗಲೀ, ದಲಿತ ಸಂಘಟನೆಗಳಾಗಲೀ ಯೋಚಿಸಿದಂತೆ ಕಾಣಿಸುತ್ತಿಲ್ಲ.

ದೇವರ ಪಾತ್ರಗಳನ್ನು ಧರಿಸಿಕೊಂಡು ಅಥವಾ ದೇವರ ಪಟಗಳನ್ನು ಹೊತ್ತುಕೊಂಡು ಮನೆ ಮನೆ ಬಾಗಿಲಿಗೆ ಊರು ಕೇರಿಗಳಿಗೆ ಬಂದು ಪುರಾಣಿಮ ಕಥಾಕಾವ್ಯಗಳನ್ನು ಹಾಗೂ ಚಾರಿತ್ರಿಕ ನೆನಪುಗಳನ್ನು ಪ್ರಸಾರ ಮಾಡಲು ಮೊದಲಿಗೆ ಕಲಾವಿದರನ್ನು ಬಳಸಿಕೊಂಡವರೇ ನಮ್ಮ‌ ಸಮಾಜದ ಕುಲೀನ ಆಳುವ ವರ್ಗಗಳು.‌ ಹೀಗೆ ಸಾಂಸ್ಕೃತಿಕ ವಕ್ತಾರರಾದ ಜನರೇ ಬರಬರುತ್ತಾ ಅಲೆಮಾರಿ ಭಿಕ್ಷುಕರಾದ ಕಥನ ನಮಗೆ ಸಂಶೋಧನೆಗಳಿಂದ ತಿಳಿದುಬಂದಿದೆ.

ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ನಿರ್ವಸತಿಗರಾಗಿರುವ ಯಾವುದೇ ಅಲೆಮಾರಿ ಕಲಾವಿದರಿಗೆ ಹಾಗೂ ಅವರ ಕಲಾನೆಲೆಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸದ ಹೊರತು, ಜೀವನ ನಿರ್ವಹಣೆಯ ಉತ್ಪಾದನಾ ನೆಲೆಗಳನ್ನು ನೀಡದ ಹೊರತು “ದೇವತಾ ರೂಪದಲ್ಲಿ ಮತ್ತು ದೇವರ ಪುಟಗಳನ್ನು ಹೊತ್ತು ಭಿಕ್ಷೆ ಬೇಡುವುದು ತಪ್ಪು. ಮೊದಲು ಇದನ್ನು ನಿಲ್ಲಿಸಬೇಕು” ಎಂದು ಅಂತಹ ಅಲೆಮಾರಿ ಭಿಕ್ಷುಕರನ್ನು ಹಿಡಿದು ಪೊಲೀಸ್ ಪ್ರಕರಣ ದಾಖಲಿಸಿದರೆ ನೈತಿಕವಾಗಿ ತಪ್ಪಾಗುತ್ತದೆ.

ಈ ವಿಡಿಯೋದಲ್ಲಿರುವುದು ಸಿಂದೋಳ್ಳು ಸಮುದಾಯದ ದುರುಗವ್ವ, ರೇಣುಕಾ ಮತ್ತು ನೇತ್ರಾ. ನೇತ್ರಾ ಎಂಟನೇ ತರಗತಿವರೆಗೆ ಕಲಿತು ಶಾಲೆ ಬಿಟ್ಟು ಭಿಕ್ಷಾಟನೆ ಮಾಡುತ್ತಿದ್ದಾಳೆ. ಅವಿವಾಹಿತೆ ನೇತ್ರಾ ತನ್ನಂತೆಯೇ ಭಿಕ್ಷೆ ಬೇಡುವ ಬೀದಿ ಭಿಕ್ಷುಕನನ್ನೇ ಮದುವೆಯಾಗಲಿದ್ದಾಳೆ. ದುರುಗವ್ವ ಮದುವೆಯಾಗಿ ಒಂದು ಹೆಣ್ಣುಕೂಸಿನ ತಾಯಿಯಾಗಿದ್ದಾಳೆ. ವಿವಾಹಿತೆ ರೇಣುಕಾಗೆ ಇನ್ನೂ ಮಕ್ಕಳಿಲ್ಲ. ಮುಖಗಳ ಮೇಲೆ ಹಾಲುಗೆನ್ನೆಯ ಬಾಲ್ಯ ಇನ್ನೂ ಮಾಸಿಲ್ಲದ ಇಂತಹ ಹೆಣ್ಣುಮಕ್ಕಳ ಬಾಳು ಹೀಗೆ ಬೀದಿ ಭಿಕ್ಷಾಟನೆಯಲ್ಲಿ ಕರಗಬೇಕೆ?

  • ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ನಾಯಕರು

Leave a Reply