ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಕ್ ಅವರ ಜಯಂತಿಯ ಶುಭಾಶಯಗಳು
ಸ್ವಾತಂತ್ರೋತ್ತರ ಭಾರತದಲ್ಲಿ ತೀರಾ ಅರ್ಧ ಶತಮಾನದ ಹಿಂದೆ, ಮುಸ್ಲಿಂ ಹೆಣ್ಣುಮಕ್ಕಳು ಅಕ್ಷರ ಕಲಿಯಲು ಎದುರಿಸುತ್ತಿದ್ದ ಸಾಂಪ್ರದಾಯಿಕ ಬಿಕ್ಕಟ್ಟುಗಳು ಹೇಗಿದ್ದವೆಂಬುದನ್ನು ಕುರಿತು ಕನ್ನಡದ ಮೊದಲ ಮುಸ್ಲಿಂ ಮಹಿಳಾ ಸಾಹಿತಿ ನಾಡೋಜ ಸಾರಾ ಅಬೂಬಕ್ಕರ್ ಅವರು, “ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು” ಎಂಬ ಕಥೆಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಸರಿಸುಮಾರು ಎರಡು ಶತಮಾನಗಳ ಹಿಂದೆ ಮುಸ್ಲಿಂ ಹೆಣ್ಣುಮಗಳಾದ ಫಾತಿಮಾ ಶೇಕ್ ಅವರು ಶಾಲೆ ಕಲಿಯುವುದು ಇನ್ನೆಷ್ಟು ಕಷ್ಟಕರವಾಗಿತ್ತೆಂಬುದು ನಮ್ಮ ಊಹೆಗೂ ನಿಲುಕದಿರುವ ಸಂಗತಿ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
1831ರ ಜನವರಿ 09ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ ಫಾತಿಮಾ ಶೇಕ್ ಸಂಪ್ರದಾಯಸ್ಥ ಮುಸ್ಲಿಮರಿಂದ ಎದುರಾದ ವಿರೋಧಗಳನ್ನು ದಿಟ್ಟತನದಿಂದ ಎದುರಿಸಿ, ತನ್ನ ಅಣ್ಣನಾದ ಉಸ್ಮಾನ್ ಶೇಕ್ ಅವರ ನೆರವಿನಿಂದ ಅಕ್ಷರ ಕಲಿತು ಭಾರತದ ಮುಸ್ಲಿಂ ಲೋಕದ ಮೊದಲ ಶಿಕ್ಷಕಿಯಾಗಿ ಗುರುತಿಸಿಕೊಂಡರು.
ಫಾತಿಮಾ ಶೇಕ್ ಅವರು ಜ್ಯೋತಿಬಾ ಫುಲೆಯವರಿಗೆ ಗೆಳೆಯನಾಗಿದ್ದ ಉಸ್ಮಾನ್ ಶೇಕ್ ಅವರ ತಂಗಿ. ಫುಲೆ ದಂಪತಿಗಳು 1848ರಲ್ಲಿ ಇದೇ ಉಸ್ಮಾನ್ ಶೇಕ್ ಅವರ ಮನೆಯಲ್ಲಿ ಶಾಲೆಯೊಂದನ್ನು ಆರಂಭಿಸುತ್ತಾರೆ. ಇತ್ತ ಮನುವಾದಿ ಮೇಲ್ಜಾತಿಗಳ ಹಿಂದೂಗಳು, ಅತ್ತ ಮತೀಯವಾದಿ ಸಂಪ್ರದಾಯಸ್ಥ ಮುಸ್ಲಿಮರ ವಿರೋಧಗಳ ನಡುವೆಯೂ, ಮುಸ್ಲಿಮರ ಮತ್ತು ಕೆಳಜಾತಿಗಳ ಜನರಿಗೆ ಅಕ್ಷರದ ಬೆಳಕು ನೀಡುವ ಶಾಲೆಯನ್ನು ಪ್ರಾರಂಭಿಸಿದರು. ತನ್ನದೇ ಮನೆಯಲ್ಲಿ ಫುಲೆ ದಂಪತಿಗೆ ಆಶ್ರಯ ನೀಡಿ ಶಾಲೆ ಪ್ರಾರಂಭಿಸಲು ನೆರವಾದ ಉಸ್ಮಾನ್ ಶೇಕ್ ತನ್ನ ತಂಗಿಯಾದ ಫಾತಿಮಾ ಶೇಕ್ ಅವರನ್ನು ಸಾವಿತ್ರಿಬಾಯಿ ಫುಲೆಯವರಿಗೆ ಪರಿಚಯ ಮಾಡಿಕೊಟ್ಟರು. ಅದೇ ಶಾಲೆಯಲ್ಲಿ ಫಾತಿಮಾ ಶೇಕ್ ಅವರಿಗೆ ಶಿಕ್ಷಕಿಯ ಹುದ್ದೆ ನೀಡುತ್ತಾರೆ.
ಫಾತಿಮಾ ಶೇಕ್ ಮತ್ತು ಸಾವಿತ್ರಿಬಾಯಿ ಫುಲೆ ಜೊತೆಗೂಡಿ ದುಡಿದು ಮುಸ್ಲಿಮರ ಹೆಣ್ಣುಮಕ್ಕಳಿಗೆ ಹಾಗೂ ಕೆಳಜಾತಿಗಳ ಜನರಿಗೆ ಅಕ್ಷರದ ಬೆಳಕು ನೀಡುವ ಮೂಲಕ ಇಂದು ಜಗದ್ವಂದ್ಯರೂ ಜಗದ್ಮಾನ್ಯರೂ ಆಗಿದ್ದಾರೆ. ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಕ್ ಅವರ ಈ ಪರಿಯ ಗೆಳೆತನ ಭಾರತದ ಸಾಮಾಜಿಕ ರೋಗಗಳಿಗೆ ಮದ್ದು ನೀಡುವ ದಾರಿಯನ್ನು ನಮಗೆ ತೆರೆದು ತೋರಿಸಿದೆ.
– ಡಾ.ವಡ್ಡಗೆರೆ ನಾಗರಾಜಯ್ಯ, 8722724174






