ಹುರುಳಿಕಾಳಿನಲ್ಲಿ ಮಿಳ್ಳೆಬೀಜ ಆಯ್ದು ತೆಗೆಯುತ್ತಿದ್ದ ನನ್ನ ಬಾಲ್ಯದ ನೆನಪುಗಳು ಮರುಕಳಿಸಿದವು

2 years ago

ನಮ್ಮ ಗ್ರಾಮೀಣ ಬದುಕಿನ ದಟ್ಟ ಅನುಭವಗಳಿರುವ ಚಿಂತಕಿ- ಕವಯಿತ್ರಿ ಉಮಾದೇವಿ ಕೆ ಎಸ್ ಗ್ಯಾರಳ್ಳ ಅವರ ನೆನಪಿನ ಜೋಳಿಗೆಯಲ್ಲಿ ಮಿಳ್ಳೆಬೀಜಕ್ಕೂ ಜಾಗವಿದೆ. ಅವರು ಮಿಳ್ಳೆಬೀಜದ ಬಗ್ಗೆ ಮಾಹಿತಿ ಕೇಳಿ ನೆನಪಿಸಿದ್ದರಿಂದಾಗಿ, ಹುರುಳಿಕಾಳಿನಲ್ಲಿ ಮಿಳ್ಳೆಬೀಜ ಆಯ್ದು ತೆಗೆಯುತ್ತಿದ್ದ ನನ್ನ ಬಾಲ್ಯದ ನೆನಪುಗಳು ಮರುಕಳಿಸಿದವು. ನಮ್ಮ ಮನೆಯಿಂದ ನಮ್ಮ ಜಮೀನು ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಪ್ರಧಾನ ಬೆಳೆಗಳಾದ ಕಡಲೆಕಾಯಿ ಮತ್ತು ರಾಗಿ ಜೊತೆಯಲ್ಲಿ ಅಕ್ಕಡಿ ಸಾಲುಗಳಲ್ಲಿ ಎಸರಿಗೆ ಬೇಕಾದ ಹಲಸಂದೆ, ಅವರೆ, ಹೆಸರು, ಉದ್ದು, ತೊಗರಿ, ಉಚ್ಚೆಳ್ಳು(ಗುರೆಳ್ಳು), ಸಾಸಿವೆ ಹಾಗೂ ನಮ್ಮ ತಲೆಗಳ ನೆತ್ತಿಗೆ ಸವರಲು ಎಣ್ಣೆಗೆ ಬೇಕಾದ ಅರಳು(ಔಡಲ) ಬೆಳೆಯುತ್ತೇವೆ. ಕಲ್ಗುಟ್ಟೆ ಜಮೀನಿನ ಒಂದು ತುಂಡದಲ್ಲಿ ಹುರುಳಿಕಾಳನ್ನು ಬೆಳೆಯುತ್ತೇವೆ.

ನಮ್ಮ ಹೊಲದಲ್ಲಿ ಯಾವುದೇ ಬೆಳೆಯ ಅಂಚಿನ ಸುತ್ತಲೂ ಪಟ್ಟೆ ಎಳೆದಂತೆ ಚೌಕಾಕಾರ‌‌ ನಾಲ್ಕೈದು ಸಾಲುಗಳಲ್ಲಿ ಹುರುಳಿಕಾಳನ್ನು ಕಡ್ಡಾಯವಾಗಿ ಬೆಳೆಯುತ್ತೇವೆ. ದನಗಳು ಹೊಲದ ಅಂಚಿನಲ್ಲಿ ಬೆಳೆದ ಹುರುಳಿಗಿಡ ತಿಂದುಕೊಂಡು ರಾಗಿಪೈರು -ಕಳ್ಳೆಗಿಡವನ್ನು ತಿನ್ನದಿರಲೆಂಬ ಉದ್ದೇಶದಿಂದ ಬಹುತೇಕ ರೈತಾಪಿಗಳು ಹೊಲದ ಸುತ್ತಲ ಅಂಚಿನಲ್ಲಿ ಹುರುಳಿಕಾಳು ಬಿತ್ತುತ್ತಾರೆ. ನಮ್ಮ ಕಲ್ಗುಟ್ಟೆ ಹೊಲದಲ್ಲಿ ಬೆಳೆದ ಹುರುಳಿಕಾಳು ಕಬ್ಬಿಣದ ಚೂರುಗಳಂತೆ ಬಲು ಗಟ್ಟಿ. ನಮ್ಮ ಹೊಲದ ಹುರುಳಿಕಾಳನ್ನು ಮೊಳಕೆ ಕಟ್ಟಿ ನಮ್ಮಮ್ಮನ ಕೈನಲ್ಲಿ ತಯಾರಾಗುವ ಎಸರಿನ ರುಚಿಯಂತೂ ಬಣ್ಣಿಸಲಸದಳ.

ಸದಾಕಾಲವೂ ಒಂದಿಲ್ಲೊಂದು ಕೆಲಸಗಳಲ್ಲಿ ನಿರತಳಾಗಿದ್ದ ನನ್ನ ಅಮ್ಮ ಕೆಲವೊಮ್ಮೆ ಹುರುಳಿಕಾಳಿನಲ್ಲಿ ಬೆರೆತ ಮಿಳ್ಳೆಬೀಜ ಆಯ್ದೆಸೆಯುವ ಕೆಲಸಕ್ಕೆ ನನ್ನನ್ನು ಹಚ್ಚುತ್ತಿದ್ದಳು. ಈ ಮಿಳ್ಳೆಬೀಜದ ಮೇಲೆ ಜನಪದರು ಕಟ್ಟಿರುವ
“ಎಳ್ಳಂತೂ ಎಣ್ಣೆಗೆ ಒಣಗುತ್ತೆ. ಮಿಳ್ಳೆ ಬೀಜ ಯಾಕೆ ಒಣಗುತ್ತೆ ?” ಎಂಬ ಗಾದೆಮಾತು ನಮ್ಮ ಸೀಮೆಯಲ್ಲಿ ಚಾಲ್ತಿಯಲ್ಲಿಲ್ಲ. ಉಮಾದೇವಿಯವರ ಊರಿನ ಕಡೆಗಳಲ್ಲಿ ಈ ಗಾದೆ ಮಾತು ಇದೆಯೆಂದು ಉಮಾದೇವಿಯವರಿಂದ ತಿಳಿಯಿತು. ನಮ್ಮ ಕೊರಟಗೆರೆ ಮಧುಗಿರಿ ಸೀಮೆಯಲ್ಲಿ   “ಎಳ್ಳಂತೂ ಎಣ್ಣೆಗ್ ಒಣಗತೈತೆ… ನೀನ್ಯಾಕ್ ಒಣಗ್ತೀಯೇ ಮಿಳ್ಳೆಗೊರ್ಜ?” ಎಂದು ಕಪ್ಪೆಯ ಮರಿಗಳಿಗೆ ಹೇಳುವ ಗಾದೆ ಮಾತೊಂದಿದೆ. ಇದು ನನ್ನ ಅಮ್ಮನಿಂದ ತಿಳಿಯಿತು. ಎಣ್ಣೆ ತೆಗೆಯುವ ಸಲುವಾಗಿ ಎಳ್ಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. (ಎಳ್ಳಂತೂ ಎಣ್ಣೆಗ್ ಒಣಗತೈತೆ). ಮಿಳ್ಳೆಗೊರ್ಜ ಅಂದರೆ ಕಪ್ಪೆಯ ಮೊಟ್ಟೆಗಳಿಂದ ಬಾಲಸಹಿತ ಹೊರಬರುವ ಕಪ್ಪೆಯ ಮರಿ. ನೀರಿನಲ್ಲಿರುವ ಕಪ್ಪೆಮರಿಯು ಎಳ್ಳಿನಂತೆ ಬಿಸಿಲಿನಲ್ಲಿ ಒಣಗುವುದುಂಟೇ ? (ನೀನ್ಯಾಕೆ ಒಣಗ್ತಿಯೇ ಮಿಳ್ಳೆಗೊರ್ಜ?). ನೀರಿನ ಅನುಕೂಲದಲ್ಲಿರುವ ಮಿಳ್ಳೆಗೊರ್ಜ ಬಿಸಿಲಿಗೆ ಒಣಗಲಾರದು. ಹಾಗೆಯೇ ಹಣಕಾಸು ದವಸಧಾನ್ಯಗಳಿರುವ ಅನುಕೂಲಸ್ಥರ ಮನೆಯವರು ಹಸಿವೆಯಿಂದ ಒಣಗಲಾರರೆಂಬುದನ್ನು ಸೂಚಿಸಲು ‘ನೀನ್ಯಾಕೆ ಒಣಗ್ತಿಯೇ ಮಿಳ್ಳೆಗೊರ್ಜ?” ಎಂದು ಹೇಳಲಾಗುತ್ತದೆಯಂತೆ. ಅನುಕೂಲಗಳ ಲಾಭ ಪಡೆಯುವ ಉಪಾಯಗಾರರನ್ನು ಕುರಿತು ಸಹ ಇದೇ ಗಾದೆಮಾತನ್ನು ಸಾಂದರ್ಭಿಕವಾಗಿ ಬಳಸಲಾಗುತ್ತದೆ ಎಂದು ನನ್ನ ಅಮ್ಮ ವಡ್ಡಗೆರೆ ಕದರಮ್ಮನಿಂದ ತಿಳಿಯಿತು.

ಉಮಾದೇವಿ ಕೆಎಸ್ ಗ್ಯಾರಳ್ಳ ಅವರ ಊರಿನ ಕಡೆಗಳಲ್ಲಿ ಬಳಸಲಾಗುವ ಗಾದೆ ಮಾತಿನ ವಿನ್ಯಾಸ “ಎಳ್ಳಂತೂ ಎಣ್ಣೆಗೆ ಒಣಗುತ್ತೆ. ಮಿಳ್ಳೆಬೀಜ ಯಾಕೆ ಒಣಗುತ್ತೆ?” ಎಂಬುದು. ಎಳ್ಳಿನೊಂದಿಗೆ ಬೆರೆತಿರುವ ಮಿಳ್ಳೆಬೀಜಗಳನ್ನು ಯಾಕಾಗಿಯಾದರೂ ಒಣಗಿಸುತ್ತಿದ್ದೇವೆಯೋ ಎಂಬ ನಿರರ್ಥಕ ಭಾವನೆ “ಎಳ್ಳಂತೂ ಎಣ್ಣೆಗೆ ಒಣಗುತ್ತೆ. ಮಿಳ್ಳೆಬೀಜ ಯಾಕೆ ಒಣಗುತ್ತೆ?” ಎಂಬ ಗಾದೆಯ ಹಿಂದಿದೆ. ಈ ಮಿಳ್ಳೆಬೀಜಗಳು ಎಳ್ಳಿಗಿಂತಲೂ ಹುರುಳಿಕಾಳಿನೊಂದಿಗೆ ಹೆಚ್ಚು ಬೆರೆತಿರುತ್ತವೆ. ಎತ್ತರವಾಗಿ ಬೆಳೆಯುವ ಎಳ್ಳಿನ ಗಿಡಗಳ ನೆರಳಿನಲ್ಲಿ ಮಿಳ್ಳೆಬೀಜದ ಸಸಿಗಳು ಹಬ್ಬಿ ಬೆಳೆಯಲಾರದೆ ಕಮರಿಹೋಗುತ್ತವೆ. ಎಳ್ಳುಗಿಡಗಳು ತೆಳುವಾಗಿ ಹುಟ್ಟಿರುವ ಬಯಲುಬಿದ್ದ ಜಾಗದಲ್ಲಿ ಮಾತ್ರ ಬೆಳೆದ ಮಿಳ್ಳೆಬೀಜ ಎಳ್ಳಿನೊಂದಿಗೆ ಬೆರೆಯುತ್ತದೆ. ಹಾಗಾಗಿ ಎಳ್ಳಿನಲ್ಲಿ ಮಿಳ್ಳೆಬೀಜ ಕಾಣಿಸುವುದು ತುಂಬಾ ಕಮ್ಮಿ. ಇದಲ್ಲದೆ ಉಮಾದೇವಿಯವರು ಹೇಳುವಂತೆ ಎಳ್ಳನ್ನು ಜರಡಿಯಾಡಿಸುವಾಗ ಜರಡಿಯ ಕಣ್ಣಿನಲ್ಲಿ ಎಳ್ಳು ಮತ್ತು ಮಿಳ್ಳೆಬೀಜ ಸಲೀಸಾಗಿ ವಿಂಗಡಣೆಯಾಗುತ್ತವೆ. ಹುರುಳಿಕಾಳನ್ನು ಜರಡಿಯಾಡಿಸುವಾಗ ಮಿಳ್ಳೆಬೀಜ ಸಲೀಸಾಗಿ ವಿಂಗಡಣೆಯಾಗುವುದಿಲ್ಲ.

ಹೊಲದಲ್ಲಿ ಹುರುಳಿ ಸಸಿಗಳು ಎಳ್ಳಿನ ಗಿಡಗಳಷ್ಟು ಎತ್ತರ ಬೆಳೆದು ನಿಲ್ಲುವುದಿಲ್ಲ. ಹುರುಳಿ ಗಿಡಗಳನ್ನು ತಬ್ಬಿಕೊಂಡೇ ಮಿಳ್ಳೆಬೀಜದ ಬಳ್ಳಿಗಳು ಬೆಳೆದುಬಿಡುತ್ತವೆ. ಹುರುಳಿಕಾಳನ್ನು ಹೆಚ್ಚಾಗಿ ಗೇಯ್ಮೆಯ ಎತ್ತುಗಳಿಗೆ, ಕುದುರೆಗಳಿಗೆ, ಹಾಲು ಕರೆಯುವ ಹಸು- ಎಮ್ಮೆಗಳಿಗೆ, ಕೃಶವಾದ ದನಗಳಿಗೆ ಬಹುಮಟ್ಟಿಗೆ ಬಳಸುತ್ತಿದ್ದುದರಿಂದಾಗಿ  ಹುರುಳಿ ಹೊಲದಲ್ಲಿ ಯಾರೂ ಕಳೆ ತೆಗೆಸುವ ಕೆಲಸಕ್ಕೆ ಕೈಹಾಕುತ್ತಿರಲಿಲ್ಲ. (ಈಗಲೂ ಹುರುಳಿ ಹೊಲದಲ್ಲಿ ಯಾರೂ ಕಳೆ ತೆಗೆಸುವುದಿಲ್ಲ). ಹೀಗಾಗಿ ಮಿಳ್ಳೆಬೀಜಗಳು ಹುರುಳಿಕಾಳಿನಲ್ಲಿ ಹೆಚ್ಚು ಬೆರೆಯುತ್ತವೆ. ಎಳ್ಳಿನ ಹೊಲದಲ್ಲಿ ಕಳೆ ತೆಗೆಸುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಕಳೆ ತೆಗೆಯುವಾಗ ಕಳೆಯೇ ಆಗಿರುವ ಮಿಳ್ಳೆ ಸಸಿಗಳನ್ನು ಕಿತ್ತು ಬಿಸಾಡುತ್ತಾರೆ. ಪಶುಪಾಲಕರು ತಮ್ಮ ದನಗಳನ್ನು ಹುರುಳಿ ಹೊಲಕ್ಕೆ ಬಿಟ್ಟು ಮಿಳ್ಳೆ ಬಳ್ಳಿಯನ್ನು ತಿನ್ನಿಸುತ್ತಾರೆ. ಹುರುಳಿ ಸರಬು ದನಗಳಿಗೆ ಹೆಚ್ಚು ರುಚಿಯಾಗಿರುವುದರಿಂದ ದನಗಳು ಮಿಳ್ಳೆ ಸರಬನ್ನು ಹಿತಕರವಾಗಿ ತಿನ್ನಲಾರವು.

ಮನುಷ್ಯರಾದ ನಾವು ಕೂಡಾ ಹುರುಳಿಯನ್ನು ವಿವಿಧ ಖಾದ್ಯಗಳ ಜೊತೆಯಲ್ಲಿ ಹಿತಕರವಾಗಿ ತಿನ್ನುತ್ತೇವೆಯೇ ಹೊರತು ಮಿಳ್ಳೆ ಬೀಜವನ್ನು ತಿನ್ನಲು ಬಯಸುವುದಿಲ್ಲ. ಮಿಳ್ಳೆಬೀಜಗಳನ್ನು ನೀರಿನಲ್ಲಿ ನೆನೆಸಿದರೆ ಲೋಳೆಯಾಗುತ್ತವೆ. ಕೈಗಳಿಗೂ ತುಟಿಗಳಿಗೂ ಅಂಟು ಸವರಿದಂತೆ ಅಂಟರಿಸುತ್ತವೆ. ತಿನ್ನಲು ಕೂಡಾ ಅಸಸುಕಾಗಿದ್ದು ರುಚಿ ಇರುವುದಿಲ್ಲ. ಹುರಿದಾಗಲೂ ಕಮ್ಮಗೆ ಪರಿಮಳ ಇರುತ್ತವೆಯಾದರೂ ಹಿತಕರವಾದ ರುಚಿ ಇರುವುದಿಲ್ಲ. ಹಾಗಾಗಿ ಯಾರೂ ಮಿಳ್ಳೆಬೀಜ ತಿನ್ನಲು ಬಯಸುವುದಿಲ್ಲ. ಹುರುಳಿಕಾಳಿನಲ್ಲಿ ಬೆರೆತ ಮಿಳ್ಳೆಬೀಜಗಳನ್ನು ಆರಿಸಿ ಆಚೆಗೆ ಎಸೆಯುತ್ತಾರೆ.

ಮಿಳ್ಳೆಬೀಜದ ಬಳ್ಳಿ ತೀವ್ರ ಸಮಸ್ಯಾತ್ಮಕ ಕಳೆಯ ಪ್ರಭೇದವೇನಲ್ಲ. ಹುರುಳಿಕಾಳಿನ ಬಿತ್ತನೆಯೊಂದಿಗೆ ಮಿಳ್ಳೆಬೀಜಗಳು ಸೇರಿ ಹೊಲದಲ್ಲಿ ಮಿಳ್ಳೆಬೀಜದ ಸಸಿಗಳು ಬೆಳೆಯುತ್ತವೆ. ಕಳೆ ಜಾತಿಯ ಮಿಳ್ಳೆಬಳ್ಳಿಯನ್ನು ನಿರ್ವಹಣೆಯ ದೃಷ್ಟಿಯಿಂದ  ತ್ವರಿತವಾಗಿ ಕಿತ್ತುಹಾಕುವುದು ಸುಲಭವಲ್ಲ. ನಮ್ಮ ರೈತರು ಮಿಳ್ಳೆ ಸರಬನ್ನು ಕಿತ್ತುಹಾಕುವ ಕಡೆಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಹುರುಳಿಕಾಳಿನ ಜೊತೆಯಲ್ಲಿ ಕಂಡೂಕಾಣದಂತೆ (ಸುಪ್ತವಾಗಿ) ಅಡಗಿರುವ  ಮಿಳ್ಳೆಬೀಜದ ಆನುವಂಶಿಕ ಬಣ್ಣ ಮತ್ತು ಗಾತ್ರ ಹುರುಳಿಯಂತೆಯೇ ಇರುತ್ತದೆ. ಹುರುಳಿಕಾಳಿನಲ್ಲಿ ಬೆರೆತಿರುವ ಮಿಳ್ಳೆಬೀಜಗಳನ್ನು ಹುಡುಕಿ ಆರಿಸುವುದು ಹೆಚ್ಚು ಸಮಯ ಮತ್ತು ಏಕಾಗ್ರತೆಯನ್ನು ಬೇಡುವ ಕೆಲಸವಾದ್ದರಿಂದ‌ ಅವುಗಳನ್ನು ಸಂಪೂರ್ಣವಾಗಿ ಆರಿಸುವ ಕಡೆಗೆ ಗಮನ ಕೊಡುವುದಿಲ್ಲ. ಸೇರು ಹುರುಳಿಕಾಳಿನಲ್ಲಿ ಒಂದಿಪ್ಪತ್ತು ಮಿಳ್ಳೆಬೀಜ ಆಯುವಷ್ಟರಲ್ಲಿ ನಮ್ಮ ವ್ಯವಧಾನವೂ ಕಳೆದುಹೋಗಿರುತ್ತದೆ.

ನನ್ನ ಅಮ್ಮ ನನ್ನೆದುರಿಗೆ ಮಿಳ್ಳೆಬೀಜ ಆಯ್ದೆಸೆಯುವಂತೆ ಹುರುಳಿಕಾಳನ್ನು ಸೇರಿನಲ್ಲಿ ಅಳೆದು ಸುರಿಯುವಾಗ ನನಗೆ ಬಲು ಬೇಸರವಾಗುತ್ತಿತ್ತು. ಕೆಲವೊಮ್ಮೆ ಅಮ್ಮ ಕಥೆ ಹೇಳಿಕೊಂಡು, ಕಥೆಯ ಬೆಳವಣಿಗೆಗೆ ನನ್ನಿಂದ ಹ್ಞೂಂ ಹ್ಞೂಂ ಅಂತಾ ಹ್ಞೂಂಗುಟ್ಟಿಸಿಕೊಂಡು ಉಪಾಯವಾಗಿ ಮಿಳ್ಳೆಬೀಜ ಆಯ್ದಾಕುವ ಕೆಲಸವನ್ನು ತಾನೂ ಜೊತೆಗೂಡಿ ಮಾಡುತ್ತಿದ್ದಳು. ಬೆಲ್ಲದಹಳ್ಳಿಯ ನನ್ನ ಸೋದರತ್ತೆ ನಾಗಮ್ಮ ಹುರುಳಿಕಾಳನ್ನು ಕುರಿತು ಹೇಳುತ್ತಿದ್ದ ಕಥೆಯೊಂದು ಹೀಗಿದೆ :
ಮಾದಿಗ ಕುಲದ ತಾಯಿಯಾದ ಆರಂಜ್ಯೋತಿಗೆ ಏಳು ಜನ ಅಣ್ಣಂದಿರಿದ್ದರು. ಆ ಅಣ್ಣಂದಿರು ತಂಗಡಿ ಚಕ್ಕೆ ತರಲು ಕಾಡಿಗೆ ಹೋಗಿದ್ದಾಗ ಈ ಮುದ್ದಿನ ತಂಗಿಯೊಬ್ಬಳೇ ಮನೆಯಲ್ಲಿದ್ದಳು. ಅದೇ ಸಮಯದಲ್ಲಿ ಇವಳೊಬ್ಬಳೇ ಇರುವುದನ್ನು ನೋಡಿಕೊಂಡು ಬ್ರಾಹ್ಮಣರ ವಸಿಷ್ಠನು ಮನೆಯೊಳಕ್ಕೆ ಬಂದು ಅವಳಿಂದ ಕೈಯೂಟ ಸ್ವೀಕರಿಸಿ, ‘ನೀನೇ ಹೆಂಡತಿ ನಾನೇ ಗಂಡ’ ಎಂದು ಸೆರಗಿಡಿದು ಅವಳ ಕೊರಳಿಗೆ ತಾಳಿ ಕಟ್ಟುತ್ತಾನೆ. ಕಾಡಿಗೆ ಹೋಗಿದ್ದ ಅಣ್ಣಂದಿರು ತಂಗಡಿ ಚಕ್ಕೆಯೊಂದಿಗೆ ಮನೆಗೆ ಹಿಂತಿರುಗಿ ಬಂದಾಗ ಮುದ್ದು ತಂಗಿಯ ಮದುವೆಯಾಗಿರುವುದು ತಿಳಿಯುತ್ತದೆ. ತಂಗಿಯ ವಿರುದ್ಧ ಕೆರಳಿ ಕೆಂಡವಾದ ಅಣ್ಣಂದಿರು ಆರಂಜ್ಯೋತಿ ಮತ್ತು ವಸಿಷ್ಠರನ್ನು ಕತ್ತುಹಿಡಿದು “ನಮ್ಮ ಮನೆಯಿಂದ ಹೊರ ತೊಲಗಿ ಹೋಗಿರಿ” ಎಂದು ಹೊಸ್ತಿಲಾಚೆಗೆ ನೂಕುತ್ತಾರೆ. “ನಮ್ಮಿಂದ ಸರುವದಾ ತಪ್ಪಾಯಿತು. ನಮ್ಮ ತಪ್ಪನ್ನು ಮನ್ನಿಸಿ ಮನೆಯೊಳಕ್ಕೆ ಕರೆದುಕೊಂಡು ಪ್ರಸ್ತಕ್ಕೆ ಏರ್ಪಾಟು ಮಾಡಿರಿ” ಎಂದು ಇಬ್ಬರೂ ಎಷ್ಟು ವಿನಂತಿಸಿದರೂ ಆ ಅಣ್ಣಗಳು ಜಗ್ಗುವುದಿಲ್ಲ. ಕುಪಿತಳಾದ ಮುದ್ದಿನ ತಂಗಿ ಆರಂಜ್ಯೋತಿಯು, “ನನ್ನ ತವರಿನವರಿಗೆ ಎಷ್ಟೇ ಸಿರಿಸಂಪತ್ತು ಬಂದರೂ ಒಲೆಗೆ ತಂಗಡಿ ಪುಳ್ಳೆ ಹೊಟ್ಟೆಗೆ ಹುರುಳಿಕಾಳು ಗತಿಯಾಗಿ ಬದುಕಲಿ” ಎಂದು ಶಾಪವಿಕ್ಕಿ ಬ್ರಾಹ್ಮಣರ ತನ್ನ ಗಂಡನಾದ ವಸಿಷ್ಠನೊಂದಿಗೆ ಹೊರಟು ಹೋದಳಂತೆ. ಅಂದಿನಿಂದ ಮಾದಿಗರಿಗೆ ಹುರುಳಿಕಾಳಿನೊಂದಿಗೆ ಬಿಡಿಸಲಾರದ ನಂಟು ಬೆಳೆಯಿತು.

ತುಮಕೂರು ಜಿಲ್ಲೆಯ ನಮ್ಮ ಕೊರಟಗೆರೆ- ಮಧುಗಿರಿ ಸೀಮೆಯ ಹೊಲೆಮಾದಿಗರು ಮೊಳಕೆ ಹುರುಳಿಕಾಳನ್ನು ‘ಮೀಸೆ ಹುರುಳಿಕಾಳು’ ಎಂದು ಕರೆಯುವುದು ವಾಡಿಕೆಯಲ್ಲಿದೆ. ನನ್ನ ಅಮ್ಮ ವಡ್ಡಗೆರೆ ಕದರಮ್ಮ ಹೇಳುವ ಪ್ರಕಾರ ಮೊಳಕೆ ಹುರುಳಿಕಾಳನ್ನು ಮೀಸೆ ಹುರುಳಿಕಾಳು ಎಂದು ಕರೆಯಲು ಒಂದು ಕಾರಣವಿದೆ. ಹುರುಳಿಕಾಳಿಗೂ ಮೀಸೆ (ಮೊಳಕೆ) ಬರುತ್ತೆ. ಭೂಮಾಲೀಕರ ಹೊಲಗದ್ದೆಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಹೊಲೆಮಾದಿಗರಿಗೆ ತಮ್ಮ ಧಣಿಗಳು ಪ್ರತಿದಿನವೂ ದನಗಳಿಗೆ ಬಳಸುತ್ತಿದ್ದ ಹುರುಳಿಕಾಳನ್ನೇ ಬೇಯಿಸಿ ಹಾಕುತ್ತಿದ್ದರು. ಹುರುಳಿಕಾಳು ತಿಂದು ದನಗಳಂತೆ ದುಡಿಯಲಿ ಎಂಬುದು ಧಣಿಗಳ ಲೆಕ್ಕಾಚಾರ. ಕೈತಪ್ಪಿ ಸಿಡಿದುಹೋದ ಹುರುಳಿ ಕಾಳುಗಳು ಧಣಿಗಳ ಮನೆಗಳ ನೀರು ಬಚ್ಚಲಿನಲ್ಲಿ ಮೊಳಕೆಯೊಡೆದು ಸಸಿಗಳಾಗುತ್ತಿದ್ದವು. ಧಣಿಗಳ ಮನೆಗಳವರು, ತಮ್ಮ ಬಚ್ಚಲಿನಲ್ಲಿ ಸಸಿಗಳಾಗಿ ಬೆಳೆದರೂ ಪರವಾಗಿಲ್ಲ. ಹೊಲೆಮಾದಿಗರಿಗೆ ಹುರುಳಿಕಾಳನ್ನು ತಮ್ಮ  ಮನೆಗಳಿಗೆ ತೆಗೆದುಕೊಂಡು ಹೋಗಲು ಕೊಡಬಾರದೆಂದು ನಿರ್ಧರಿಸಿದ್ದರು. ಇದನ್ನು ಕಂಡ ಹೊಲೆಮಾದಿಗ ಹೆಂಗಸರು ತಮ್ಮ ಗಂಡಂದಿರಿಗೆ, “ನೀವು ಗಂಡಸರೇ ಆಗಿದ್ದರೆ ಹುರುಳಿಕಾಳು ತೆಗೆದುಕೊಂಡು ಮನೆಗೆ ಬನ್ನಿರಿ” ಎಂದು ಸವಾಲು ಹಾಕಿದರಂತೆ. ಸವಾಲು ಸ್ವೀಕರಿಸಿ ಧಣಿಗಳ ಬಳಿಗೆ ಹೋದ ಆ ಹೊಲೆಮಾದಿಗ ಗಂಡಂದಿರು ಹುರುಳಿಕಾಳು ಕೊಡಲೇಬೇಕೆಂದು ಹಟ ಹಿಡಿದರಂತೆ. “ನಿಮಗೆ ಹುರುಳಿಕಾಳು ನಾವು ಕೊಡಲ್ಲ. ನಮ್ಮ ಕೊಟ್ಟಿಗೆಯಲ್ಲಿರುವ ಎಮ್ಮೆಕೋಣಗಳು ಕೊಟ್ಟರೆ ತಕೊಂಡು ಹೋಗಿರಿ” ಎಂದರಂತೆ ಧಣಿಗಳು. ಈ ಜೀತದಾಳುಗಳು ಪ್ರತಿದಿನವೂ ಎಮ್ಮೆಕೋಣಗಳಿಗೆ ಹುರುಳಿಕಾಳು ತಿನ್ನಿಸುವ ಸಮಯದಲ್ಲಿ “ಹುರುಳಿಕಾಳು ಕೊಡಿರಿ” ಎಂದು ಆ ಎಮ್ಮೆಕೋಣಗಳನ್ನೇ ಬೇಡಿಕೊಳ್ಳುತ್ತಿದ್ದರಂತೆ. ಇವರ ಕೋರಿಕೆ ಅರಿತ ಎಮ್ಮೆಯೊಂದು ಕರುಣೆ ತೋರಿಸಿ, “ನಾನು ಹುರುಳಿಕಾಳನ್ನು ಗಬಗಬನೆ ನುಂಗಿ ಸಾಯುತ್ತೇನೆ. ನನ್ನ ಹೊಟ್ಟೆ ಕೊಯ್ದು ನೀವು  ಹುರುಳಿಕಾಳು ತೆಗೆದುಕೊಳ್ಳಿರಿ, ನನ್ನನ್ನು ಕೂಡಾ ನೀವೇ ತಿಂದುಕೊಳ್ಳಿರಿ. ನಿಮ್ಮ ಕೈಯಿಂದ ಅನ್ನ ತಿಂದ ಋಣವನ್ನು ನಾನು ತೀರಿಸಿಕೊಳ್ಳುತ್ತೇನೆ” ಎಂದು ಹೇಳಿ ಆ ಎಮ್ಮೆ ಹುರುಳಿಕಾಳನ್ನು ತಿಂದು ಸತ್ತುಹೋಯಿತಂತೆ. ಇವರು ಎಮ್ಮೆಯನ್ನು ಕೊಯ್ದು ಅದರ ಹೊಟ್ಟೆಯಲ್ಲಿದ್ದ ಹುರುಳಿಕಾಳನ್ನು ತೆಗೆದುಕೊಂಡರು. ಎಮ್ಮೆಯ ಮಾಂಸ ತಿಂದ ಮಾರನೆಯ ದಿನ ಹುರುಳಿಕಾಳುಗಳು ಮೀಸೆಯೊತ್ತು ಮೊಳಕೆಯೊಡೆದಿದ್ದವು. ಹೊಟ್ಟೆ ತುಂಬಾ ಹುರುಳಿಕಾಳಿನ ಎಸರಿನಲ್ಲಿ ಮುದ್ದೆ ಉಂಡು, ಸಂಜೆ ಹೊಲೆಮಾದಿಗರಿಬ್ಬರೂ ಎಮ್ಮೆಯ ಕೊರಬಾಡನ್ನು ಸುಟ್ಟು ನೆಂಚಿಕೊಂಡು ತಲಾ ಎರಡು ಬುರೆ ಹೆಂಡ ಕುಡಿದು ಧಣಿಯ ಮುಂದೆ ನಿಂತು, “ನಾವು ಮೇಯಿಸಿದ ಎಮ್ಮೆ ನಮಗೆ ಮೀಸೆ ಹುರುಳಿಕಾಳು ಕೊಡ್ತು. ಬಾಡು ಕೊಡ್ತು. ನೀನೇನು ಕೊಟ್ಟೆ” ಎಂದು ಕೇಳಿದರಂತೆ. ಅಂದಿನಿಂದ ಮೊಳಕೆ ಹುರುಳಿಕಾಳಿಗೆ ಮೀಸೆ ಹುರುಳಿಕಾಳು ಎಂಬ ಹೆಸರು ಬಂತು. ಅಂದ್ಹಾಗೆ,
ನಮ್ಮಂತಹ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಹುರುಳಿಕಾಳು ಅತ್ಯಂತ ಜನಪ್ರಿಯ ಮತ್ತು ಪ್ರಮುಖ ಆಹಾರವಾಗಿದೆ. ಹುರುಳಿಕಾಳಿನ ಪೌಷ್ಟಿಕಾಂಶಗಳ ಗುಟ್ಟು ಅರಿತ ಸಿರಿವಂತರು ಕೂಡಾ ಆರೋಗ್ಯದ ದೃಷ್ಟಿಯಿಂದ ಹುರುಳಿಕಾಳಿನ ಪಾದಕ್ಕೆ ಮೊರೆಹೋಗಿದ್ದಾರೆ.

ಹೊಲಮಾಳದಲ್ಲಿ ಪ್ರಕೃತಿ ದತ್ತವಾಗಿ ಬೆಳೆಯುತ್ತಿದ್ದ ಅಣ್ಣೆಸೊಪ್ಪು, ಕನ್ನೆಸೊಪ್ಪು, ಗೊರಜಿ ಸೊಪ್ಪು, ಕಾಡುತಬ್ಬಾಕ್ಷಿ ಸೊಪ್ಪು, ಗೋಣಿಸೊಪ್ಪು, ಅನ್ನಗೊನೆ ಸೊಪ್ಪು, ಬಳೆವೊಡಕಿನ ಸೊಪ್ಪು (ಕೊಮ್ಮೆಸೊಪ್ಪು), ಕೊತ್ತನಗೊರಜಿ ಸೊಪ್ಪು, ಸೀಗೆಸೊಪ್ಪು, ಕುಂಬಳಗಿಡದ ಎಲೆ, ಹುಣುಸೆ ಚಿಗುರು, ಮಂಗರಬಳ್ಳಿ, ನಾರಾಬಳ್ಳಿ ಸೊಪ್ಪು, ಹುಳಿಬಸಲೆ ಸೊಪ್ಪು, ಕಿರುಕಸಾಲೆ ಸೊಪ್ಪು,  ಅರಿವೆಸೊಪ್ಪು, ಗಣಿಕೆ(ಕಾಕಮಂಚಿ)ಸೊಪ್ಪು, ಕಾರೆ ಚಿಗುರು, ಒಂದೆಲಗ, ದೊಗ್ಗರಿವೆ ಸೊಪ್ಪು, ಹಾಲೆಸೊಪ್ಪು, ದಂಟಿನ ಸೊಪ್ಪು ಮುಂತಾದ ಅನೇಕ ಜಾತಿಗಳ ಸೊಪ್ಪುಗಳ ಜೊತೆಯಲ್ಲಿ ಹುರುಳಿಕಾಳು ಇಳಿಬಿಟ್ಟು ಉಪ್ಪಾಕಿ ಬೇಯಿಸಿ ಉಂಡರೂ ನಮ್ಮ ಹಸಿವು ತೀರಿಹೋಗುತ್ತಿತ್ತು. ಇವು ಸಂತೆಯಿಂದ ತರಕಾರಿ ತರುವುದನ್ನೇ ಮರೆಯಿಸಿ ನಮ್ಮನ್ನು ಪೋಷಿಸುವ ಅವ್ವಂದಿರಾಗಿದ್ದವು. ನಮ್ಮ ಬಯಲು ಸೀಮೆಯ ಊರುಗಳಲ್ಲಿ ಮುಂಗಾರು ಮಳೆಹನಿ ನೆಲಕ್ಕೆ ಬಿದ್ದಾಗಿನಿಂದ ಹಿಡಿದು ಕಾರ್ತಿಕ ಮಾಸದವರೆಗೆ ಯಾರಾದರೂ “ನಿಮ್ಮ ಮನೆಯಲ್ಲಿ ಏನು ಎಸರು ಮಾಡಿದ್ದೀರಿ ?” ಎಂದು ಕೇಳಿದರೆ ಈ ಸೊಪ್ಪುಗಳ ಜೊತೆಯಲ್ಲಿ ಹುರುಳಿಕಾಳು ತನ್ನ ಅಸ್ತಿತ್ವದ ಮಹಿಮೆಯನ್ನು ಮಾತ್ರ ಬಿಟ್ಟುಕೊಡುತ್ತಿರಲಿಲ್ಲ. ಹಾಗಾಗಿ ಇವು ಕೇವಲ ಬಾಯಿ ರುಚಿಗೋ ಹಸಿವೆಗೋ ತಿನ್ನುವ ಸೊಪ್ಪುಗಳಾಗಿರದೆ ನಮ್ಮ ಆಹಾರ ಸಂಸ್ಕೃತಿಯನ್ನು ಮೆರೆಸುವ ತಾಯಿಗಳಾಗಿದ್ದವು. ಆ ಕಾಲದ ಹಳ್ಳಿಯ ಬಡವರ ಮನೆಗಳಲ್ಲಿ ಕೂಸುಗಳಾಗಿ ಹುಟ್ಟಿದ ನನ್ನಂಥವರ ಹೊಟ್ಟೆಗಳನ್ನು ತುಂಬಿಸಿ  ಈ ತಾಯಂದಿರು ನಮ್ಮನ್ನು ಇಲ್ಲಿಯವರೆಗೂ ಬದುಕಿಸಿದ್ದಾರೆ. ತುಂಬು ಸಂಸಾರದ ಮಕ್ಕಳೊಂದಿಗಳಾಗಿದ್ದ ನನ್ನಮ್ಮ ನಮಗೆ ಹಸಿವಾದಾಗ ಇಂತಹ ಸೊಪ್ಪುಗಳ ಜೊತೆಗೆ ಹುರುಳಿಕಾಳು ಇಳಿಬಿಟ್ಟು ಬಲು ರುಚಿಯಾಗಿ ಬೇಯಿಸಿ ಬಸಿದು ಉಣ್ಣಲು ಹೇಳಿ ಅಗಲಿಗೆ ಮಡಗುತ್ತಿದ್ದಳು.

– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ

Leave a Reply