ಕರುಣಾಳು ಕಾವಲುಗಾರ ಕನಕ ನಮ್ಮ ಹೆಮ್ಮೆ

2 years ago

#KanakadasaJayanti #hrswamy #Kanakadasa #watchman #pride

ಮಹಾ ದಂಡನಾಯಕನಾಗಿದ್ದ ತಿಮ್ಮಪ್ಪ ನಾಯಕ ಭೂಮಿಯಲ್ಲಿ ಸಿಕ್ಕ ಅಪಾರ ಕನಕದಿಂದ ಕನಕ ನಾಯಕನಾಗುತ್ತಾನೆ. ಯುದ್ಧಗಳು ಸದಾ ಸಾವುನೋವನ್ನು ಕೊಡುವುದನ್ನು ಅರಿತು “ಯುದ್ಧ ಎಂದೂ ಮಾಯದ ಗಾಯ” ಎಂದು ಕಂಡುಕೊಂಡು ಕನಕ ಪ್ರಾಪಂಚಿಕ ಸುಖಭೋಗಗಳನ್ನು ತೊರೆದು ಶಾಶ್ವತವಾದ ಮಾರ್ಗಕ್ಕಾಗಿ ಕೇಶವನ ದಾಸನಾಗಲು ಸಜ್ಜಾಗುತ್ತಾನೆ.

ವ್ಯಾಸ ತೀರ್ಥರ ಬಳಿ ಹೋಗಿ ಶಿಷ್ಯನಾಗಿ ಸ್ವೀಕರಿಸಿ ಎಂದು ಕೇಳಿಕೊಂಡಾಗ “ಕುರುಬನಿಗೇಕೋ ಕೋಣ ಮಂತ್ರ” ಎಂದು ನಗುತ್ತಲೇ ವ್ಯಾಸರಿಗೆ ಕನಕನ ಸಾಮರ್ಥ್ಯದ ಅರಿವಾಗಿ ಕೂಡಲೇ ಶಿಷ್ಯನಾಗಿ ಸ್ವೀಕರಿಸುತ್ತಾರೆ. ಬೇರೆಲ್ಲರಿಗಿಂತ ಹೆಚ್ಚಿನ ಗೌರವ ಕೊಡಲು ಆರಂಭಿಸುತ್ತಾರೆ. ಹೀಗೆ ತಿಮ್ಮಪ್ಪ ನಾಯಕ ಕನಕ ನಾಯಕನಾಗಿ ಕೊನೆಗೆ ರೋಗಗ್ರಸ್ತ ಸಮಾಜಕ್ಕೆ ಚಿಕಿತ್ಸಕನಾಗಿ ಪರಿವರ್ತನೆಯಾಗುತ್ತಾನೆ.

ಇಂತಹ ಕರುಣಾಳು ಕನಕನನ್ನು ನಾನು ಮತ್ತೆ ಕಾವಲುಗಾರನಾಗಿ ಮಾಡಿದ್ದು ನಮ್ಮ ಕಾಲೇಜು ನೆಲದಲ್ಲಿನ ಹಸಿರು ಕನಕವನ್ನು ಉಳಿಸಲು. ನನಗೆ ಅನೇಕ ಸಾಮಾಜಿಕ, ಸಾಂಸ್ಕೃತಿಕ ತೆವಲುಗಳಿದ್ದದ್ದರಿಂದ ಯಾವುದೇ ಇಲಾಖೆಯ ಪರೀಕ್ಷೆಗಳನ್ನು ಪಾಸು ಮಾಡಿಕೊಂಡಿರಲಿಲ್ಲ. ಬಡ್ತಿಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದ್ದೆ. ಆದರೆ ನಮ್ಮ ಸಹೋದ್ಯೋಗಿ ಮಿತ್ರರು ನೀನು S C ಆಗಿರೋದ್ರಿಂದ ಬೇಗ ಬಡ್ತಿ ಸಿಗುತ್ತೆ ಮಾರಾಯ ಎಂದು ಇಲಾಖಾ ಪರೀಕ್ಷೆ ಬರೆಯಲು ಒತ್ತಾಯಿಸಿದರ ಫಲ ಅದು ಎರಡನೇ ಬಾರಿಗೆ ಪಾಸಾಯಿತು.

2006ಕ್ಕೆ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ಬಂದೇಬಿಟ್ಟಿತು. ಅದೇ ಸಮಯಕ್ಕೆ ಅರಸೀಕೆರೆ ನಗರಕ್ಕೆ ಮಂಜೂರಾಗಿದ್ದ ಸ‌ರ್ಕಾರಿ ಪದವಿಪೂರ್ವ ಕಾಲೇಜನ್ನು ಇಲ್ಲಿನ ಖಾಸಗಿ ಕಾಲೇಜುಗಳ ಸಂಸ್ಥೆಯವರಿಗೆ ತೊಂದರೆಯಾಗುತ್ತದೆ ಎಂದು ಬರೀ ಹತ್ತು ಕಿಲೋಮೀಟರ್ ಅಂತರದಲ್ಲಿರುವ ಬಾಳೇನಹಳ್ಳಿಗೆ ಕಾಲೇಜನ್ನು ವರ್ಗಾಯಿಸಿಬಿಟ್ಟರು. ನನಗೂ ಅರಸೀಕೆರೆ ಕ್ಷೇತ್ರವನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಆದರೂ ಬಾಳೇನಹಳ್ಳಿಯ ವಿದ್ಯಾರ್ಥಿಗಳೇ ಇಲ್ಲದ ಕಾಲೇಜಿಗೆ ಪ್ರಾಂಶುಪಾಲನಾಗಿ ರಿಪೋರ್ಟ್ ಮಾಡಿಕೊಂಡೆ.

ಗ್ರಾಮಸ್ಥರ ಉತ್ಸಾಹದಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ SSLC ಪಾಸಾಗಿ ಕಾಲೇಜು ಸೇರದ ಹೆಣ್ಣು ಮಕ್ಕಳ, ಬಡ ವಿದ್ಯಾರ್ಥಿಗಳ T C ತಂದು ಹಾಗೂ ಹೀಗೂ 15 ವಿದ್ಯಾರ್ಥಿಗಳಾಗಿ ಅಡ್ಮಿಷನ್ ಆಗಿದ್ದರಿಂದ ಊರಿನವರು ಖುಷಿಯಾಗಿದ್ದರು. ಇಡೀ ದಿನ ಬಿಲ್ಲು ಬೆಲ್ಲಿಗಾಗಿ ಕಾಯುತ್ತ ಕೂರಬೇಕಲ್ಲ ಎಂದು ಯೋಚಿಸುತ್ತಿದ್ದೆ.

ಇದೇ ಹೊತ್ತೆಗೆ ಹೈಸ್ಕೂಲನ್ನು ನೋಡಿಕೊಳ್ಳುವ ಉಸಾಬರಿ ಇದ್ದುದರಿಂದ ಇರುವ ಅನಿವಾರ್ಯತೆ ಇತ್ತು. ಹಾಗೆ ಅಡ್ಡಾಡುತ್ತಿರುವಾಗ, ನನ್ನ ಮನ ಸೆಳೆದದ್ದು ಶಾಲೆಯ ವಿಶಾಲವಾದ ಮೈದಾನ. ನನಗೆ ಈ ಎರಡು ಎಕರೆಗೆ ಸಸಿ ನೆಟ್ಟರೆ ಹೇಗೆ ಎಂದು ಯೋಚಿಸಿದೆ. ಆದರೆ ಮಕ್ಕಳೇ ಇಲ್ಲ, ಇದಕ್ಕೆ ಬೇಲಿಯೂ ಇಲ್ಲ.0 ತಕ್ಷಣ ನನಗೆ ನೆನಪಿಗೆ ಬಂದದ್ದು ನಾನು ಹಿಂದೆ ಸೇವೆ ಮಾಡಿದ್ದ ಅರಸೀಕೆರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ NSS ಘಟಕ ಪ್ರಾಂಶುಪಾಲರ ಭೇಟಿ ಮಾಡಿ ದಸರಾ ರಜೆಯಲ್ಲಿ ನನ್ನ ಹಳೇ ಸಹೋದ್ಯೋಗಿಗಳಾದ ಶಿವಕುಮಾರ್, ಜಯದೇವ ಮೊದಲಾದವರ ಸಹಕಾರದಿಂದ ಹಬ್ಬನಘಟ್ಟ ಪಂಚಾಯಿತಿಯು ತಂತಿ ಕಂಬ, ಬೇಲಿಗೆ ವ್ಯವಸ್ಥೆ ಮಾಡಿದರು. ನನ್ನ ಹಳೇ ವಿದ್ಯಾರ್ಥಿಗಳೇ ಆಗಿದ್ದರಿಂದ ಹತ್ತು ದಿನಗಳ ಕಾಲ ಗುಂಡಿ ಅಗೆದು ತಂತಿ ಕಂಬ ನೆಟ್ಟು ಬೇಲಿ ಹಾಕಿ, ಗುಂಡಿಗೆ ಗೊಬ್ಬರ, ಸಸಿ ತಂದು ನೆಟ್ಟು ಹತ್ತು ದಿನಗಳ ಕಾಲ ಸಂಪೂರ್ಣ ಶ್ರಮದಾನ ಮಾಡಿದರು. ಈ ವನವನ್ನು ಕನ್ನಡ ರಾಜ್ಯೋತ್ಸವ ದಿನಾಚರಣೆ ಜೊತೆಗೆ ಉದ್ಘಾಟನೆ ಮಾಡಲು ತೀರ್ಮಾನಿಸಿ ಅಂದಿನ ಶಾಸಕರಾದ ಮಾನ್ಯ ಶ್ರೀ ಎ ಎಸ್ ಬಸವರಾಜು, ಗೆಳೆಯ ಕವಿಗಳಾಗಿರುವ ಶ್ರೀ ಎಲ್ ಎನ್ ಮುಕುಂದರಾಜ್, ಮೈಸೂರಿನ ಜನಮನ ಕೃಷ್ಣ ಇವರ ಕಲಾತಂಡ ಕರೆಸಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.

ಹಬ್ಬನಘಟ್ಟ ಪಂಚಾಯಿತಿ, ಎಪಿಎಂಸಿ ಕಟ್ಟಡಕ್ಕೆ, ಶಾಲೆಗೆ ಜಮೀನನ್ನು ದಾನ ಮಾಡಿರುವ ದಿವಂಗತ ಸಣ್ಣ ನಿಂಗೇಗೌಡರ ನೆನಪಾರ್ಥವಾಗಿ ಬಾಳೇನಹಳ್ಳಿ ಗ್ರಾಮದವರು ಕುರುಬ ಸಮುದಾಯಕ್ಕೆ ಸೇರಿದವರೇ ಆಗಿದ್ದರಿಂದ ಈ ವೈವಿಧ್ಯ ಸಸ್ಯರಾಶಿಗೆ “ಕನಕಶ್ರೀ” ಸಸ್ಯವನವೆಂದು ಹೆಸರಿಟ್ಟು ದಂಡನಾಯಕ ತಿಮ್ಮಪ್ಪ ನಾಯಕ, ಕನಕನಾಯಕ, ಕನಕದಾಸನಾಗಿ ಈಗ ಕಾವಲುಗಾರ ಕನಕನಾಗಿ ಈ ಸಾವಿರಾರು ಸಸ್ಯಗಳನ್ನು ಕಾಪಾಡುತ್ತಿರುವಲ್ಲಿ ಸಹಕಾರವಾಗಿದೆ.. ಗ್ರಾಮದ ಸಮಸ್ತರ, ಶಾಲಾ ಕಾಲೇಜಿನ ವಿದ್ಯಾರ್ಥಿಗಳ, ಶಿಕ್ಷಕಮಿತ್ರರ ಸಹಕಾರದಿಂದ ಸಾವಿರಾರು ಗಿಡಗಳು ಬೆಳೆದು ಇಂದು ಹೂವು ಹಣ್ಣು ಬಿಟ್ಟು ನಳನಳಿಸುತ್ತಿದೆ. ಕರುಣಾಳು ಕಾವಲುಗಾರ ಕನಕ ನಮ್ಮ ಹೆಮ್ಮೆ…

  • ಡಾ.ಸ್ವಾಮಿ ಎಚ್.ಆರ್., ನಿವೃತ್ತ ಪ್ರಾಂಶುಪಾಲ

Leave a Reply