ಕನ್ನಡ ಪರಂಪರೆಗೆ ಕ್ರೈಸ್ತರ ಕೊಡುಗೆ ಅಪಾರ: ಡಾ.ಮಹೇಶ ಜೋಶಿ
ಬೆಂಗಳೂರು: ಎಲ್ಲ ಧರ್ಮಗಳ ಗುರಿಯೂ ಒಂದೇ. ಕೃಷ್ಣ-ಕ್ರೈಸ್ತರ ವಿಚಾರಗಳಲ್ಲಿ ವ್ಯತಾಸಗಳಿಲ್ಲ. ಅದರಂತೆ ಸಾಹಿತ್ಯಕ್ಕೂ ಯಾವುದೇ ಗಡಿ ಎನ್ನುವುದಿಲ್ಲ. ಕನ್ನಡ ಭಾಷೆಗೆ ಕ್ರೈಸ್ತ ಧರ್ಮದ ಕೊಡುಗೆ ಅಪಾರ. ಕನ್ನಡಕ್ಕೆ ನಿಘಂಟು ಸೇರಿದಂತೆ ಅನೇಕ ಐತಿಹಾಸಿಕ ಕೊಡುಗೆಯನ್ನು ನೀಡುವ ಮೂಲಕ ಭಾಷೆಗೆ ಧರ್ಮ ಅಡ್ಡಿಯಲ್ಲ ಎನ್ನುವುದನ್ನು ಸ್ಪಷ್ಟ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜ ಪೇಟೆಯಲ್ಲಿ ಇರುವ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫಾದರ್ ಚೌರಪ್ಪ ಸೆಲ್ವರಾಜ್ ಸಾಹಿತ್ಯಿಕ, ಸಾಂಸ್ಕೃತಿಕ, ಬಳಗದಲ್ಲಿ ʻಚಸರಾʼ ಎಂದೇ ಪರಿಚಿತರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚಸರಾ ಚರ್ಚ್ಗಳಲ್ಲಿ ಕನ್ನಡ ಬಳಕೆ, ಕನ್ನಡಿಗರಿಗೆ ದೊರೆಯಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ಮಾಡಿದವರು. ಕನ್ನಡಪರ ಕಾಳಜಿಯನ್ನು ಜನಪರ ಕಾಳಜಿಯಿಂದ ಚಸರಾ ಪ್ರಗತಿಪರ ಹೋರಾಟಗಾರಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡುವುದರ ಜೊತೆಗೆ ಕನ್ನಡ ಸಾಹಿತ್ಯ ಕಲೆಗಳ ಬೆಳವಣಿಗೆಗೆ ಶ್ರಮಿಸಿದರು ಎಂದರು.
ಸಾಮಾಜಿಕ ಹೋರಾಟಗಾರ್ತಿ ಡಾ. ರುತ್ ಮನೋರಮಾ ಮಾತನಾಡಿ, ಸಾಹಿತ್ಯಕ್ಕೆ ಭಾಷಿಕರನ್ನು ಒಂದು ಮಾಡುವ ಶಕ್ತಿ ಇದೆ. ಪ್ರೀತಿ, ಶಾಂತಿ ಹಾಗೂ ನ್ಯಾಯ ಇದು ಸಮಾಜ ಸುಧಾರಣೆಯ ಹಿಂದೆ ಇರಬೇಕಾದ ವಸ್ತುವಾಗಬೇಕು. ಸಮಾಜದ ಅಭಿವೃದ್ಧಿಯ ಜವಾಬ್ದಾರಿ ಹೊತ್ತವರು ಯಾವುದೇ ವಿವಾದ ಹುಟ್ಟುಹಾಕುವವರಾಗಬಾರದು. ಇಂದಿನ ದಿನಗಳಲ್ಲಿ ಓದುವ ಸಂಸ್ಕೃತಿ ಕಮ್ಮಿಯಾಗುತ್ತದೆ. ಹೀಗೆ ಸೃಜನಶೀಲ ಬರವಣಿಗೆ ಕೂಡ ಕಮ್ಮಿಯಾಗುತ್ತಿದೆ. ವಿಚಾರಗಳು ಮುಂದಿನ ಪೀಳಿಗೆಗೆ ಹೋಗಲು ಇದು ಅತ್ಯಗತ್ಯ. ಆದ್ದರಿಂದ ಬರೆಯವವರ ಬೆನ್ನುತಟ್ಟುವ ಕೆಲಸ ಆಗಬೇಕಿದೆ ಎಂದರು.
ಖ್ಯಾತ ಹಿರಿಯ ಸಾಹಿತಿ ನಾ. ಡಿಸೋಜ ಹಾಗೂ ಸಾಹಿತಿ ಹಾಗೂ ಸಮಾಜಿಕ ಹೋರಾಟಗಾರ್ತಿ ಡಾ. ದು. ಸರಸ್ವತಿ ಅವರಿಗೆ ೨೦೨೩ನೇ ಸಾಲಿನ ಪಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಾಡೋಜ ಡಾ. ಹಂಪ ನಾಗರಾಜಯ್ಯ ಮಾತನಾಡಿ, ಮಹೇಶ ಜೋಶಿ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೊಸ ದಿಕ್ಕಿನತ್ತ ಸಾಗುತ್ತಿದೆ. ಇವರ ಕೆಲಸ ಕಾರ್ಯಗಳು ಹಾಗೂ ಪರಿಷತ್ತಿನ ಅಭಿವೃದ್ಧಿ ಎಲ್ಲರಲ್ಲಿ ಸಂತಸವನ್ನು ತಂದಿದೆ. ಎಲ್ಲಾ ಬರಹಗಾರರಲ್ಲಿ ಹೋರಟಗಾರ ಅಡಗಿಕೊಂಡು ಇರುತ್ತಾನೆ. ಜಾತಿ, ಧರ್ಮ, ಪದ್ಧತಿಯ ಬಗ್ಗೆ ಗಮನಕೊಡುವ ಬದಲು ಭಾಷೆ ಸಂಸ್ಕೃತಿಯ ಬಗ್ಗೆ ನಾವೆಲ್ಲಾ ಕಾಳಜಿವಹಿಸಬೇಕಿದೆ. ಯಾವುದೇ ಕ್ಷೇತ್ರದಲ್ಲಿ ಇದ್ದರೂ ಸರಿ ಸತ್ವಯುತ ಸಾಹಿತ್ಯ ರಚಿಸುವ ಮೂಲಕ ನಮ್ಮಲ್ಲಿಯ ಅನೇಕರು ಭಾಷೆಯನ್ನು ಉಳಿಸಿ ಬೆಳೆಸಿದ್ದಾರೆ. ಅದನ್ನು ನಾವೆಲ್ಲರೂ ರಕ್ಷಿಸಿಕೊಂಡು ಮುಂದುವರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಚಲನಾ ಬಳಗದ ರೀಟಾರೀನಿ ಮಾತನಾಡಿ, ಕನ್ನಡ ಕ್ರೈಸ್ತರ ಹೋರಾಟ ಮಾರ್ಗ ಸಂಕೀರ್ಣವಾಗಿದ್ದು. ಒಂದು ಮುಖ ಮಾತ್ರ ಸಮಾಜಕ್ಕೆ ಗೊತ್ತಿದೆ. ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಅವರ ನಿರಂತರ ಶ್ರಮದ ಕುರಿತು ಅಧ್ಯಯನವಾಗಬೇಕು. ಆಗ ಮಾತ್ರ ಭಾಷೆ ಭಾಷೆಯ ಮಧ್ಯೆ ಮಧುರ ಸಮನ್ವಯ ಭಾವ ಕಂಡುಬರುತ್ತದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ನಾ. ಡಿಸೋಜಾ, ಭಾಷೆಯನ್ನು ಪ್ರೀತಿಸುವ ಮೂಲಕ ಭಾಷೆಯನ್ನು ಬೆಳೆಸಬೇಕು. ಭಾಷೆ ಬಳಸುವುದರಿಂದ ನಮ್ಮ ಬದುಕನ್ನು ನಾವು ಕಟ್ಟಿಕಟ್ಟಿಕೊಳ್ಳುತ್ತಿದ್ದೇವೆ ಎನ್ನುವುದು ಮೂಲಭೂತ ಸತ್ಯ. ಆಡಳಿತ ರಂಗ ಭಾಷೆ ಮತ್ತು ಅದರ ಮೂಲಕ ರೂಪುಗೊಂಡ ಸಾಹಿತ್ಯವನ್ನು ಗೌರವಿಸಬೇಕು. ಇಂತಹ ಜಾಗೃತಿಯನ್ನು ಉಂಟುಮಾಡುವುದು ನಮ್ಮಂತಹ ಬರಹಗಾರರ ಕರ್ತವ್ಯ ಎಂದರು.
ಇಂದಲ್ಲ ನಾಳೆ ನಮ್ಮ ಕನ್ನಡದ ಮಹತ್ವ, ಭಾಷೆಯ ಹಿರಿಮೆ ತಿಳಿಯುವ ಕಾಲ ಬಂದೇ ಬರುತ್ತದೆ. ನಮ್ಮ ಕನ್ನಡ ಎನ್ನುವುದು ಶ್ರೀಮಂತ ಭಾಷೆ. ಈ ಭಾಷೆಯೇ ನಮ್ಮಬದುಕು ನಮ್ಮ ಬದುಕು ಗಟ್ಟಿಯಾಗಬೇಕು ಎಂದರೆ ಭಾಷೆ ಭದ್ರವಾಗಿರಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ಇನ್ನೋರ್ವ ಸಾಹಿತಿ ಹಾಗೂ ಹೋರಾಟಗಾರ್ತಿ ಡಾ. ದು. ಸರಸ್ವತಿ ಮಾತನಾಡಿ, ಪ್ರಶಸ್ತಿಗಳು ಸಾಧಕರಿಗೆ ಎಚ್ಚರಿಕೆಯ ಗಂಟೆಯಾಗಬೇಕು. ವಂಚಿತರ ಪರವಾಗಿ ಹೋರಾಟ ಮಾಡದವರು ಸಮಾಜೋದ್ದಾರದ ಸೋಗುಹಾಕಬಾರದು. ಧರ್ಮ ಮತ್ತು ಭಾಷೆ ಆಯಾಭಾಗದ ಮಣ್ಣಿನ ಸಂಸ್ಕೃತಿಗೆ ಅನುಗುಣವಾಗಿ ಇರುತ್ತದೆ. ಪ್ರಕೃತಿಯೊಂದಿಗೆ ಭಾಷೆ, ಸಂಸ್ಕೃತಿ ನಮ್ಮತನ ಬೆರೆತುಕೊಂಡಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಾವಿಕ ಸಂಸ್ಥೆಯ ಅಧ್ಯಕ್ಷ ಶಿವಕುಮಾರ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದಶಿ ನೇ.ಭ.ರಾಮಲಿಂಗ ಶೆಟ್ಟಿ, ಪರಿಷತ್ತಿನ ಪ್ರಕಟಣಾ ವಿಭಾಗದ ಮುಖ್ಯಸ್ಥ ಪ್ರೊ. ಎನ್.ಎಸ್.ಶ್ರೀಧರ ಮೂರ್ತಿ, ಡಾ. ಪದ್ಮಿನಿ ನಾಗರಾಜು ಮೊದಲಾದವರು ಹಾಜರಿದ್ದರು.




