ಬೇಡಜಂಗಮ ಯಾತ್ರೆಯ ಒಂದು ಚಿತ್ರ fb ಯಲ್ಲಿ ಕಂಡಿತು. ಯಾರಿವರು? ಪದೆ ಪದೆ ಸ್ಕ್ರೀನ್ ಅಗಲಿಸಿ ಚಿತ್ರದಲ್ಲಿರುವವರನ್ನು ನೋಡಿದೆ. ಪರಿಚಯದ ಮುಖಗಳು ಅಲ್ಲಿ ಕಾಣಲಿಲ್ಲ. ಅವರು ಹಿಡಿದಿರುವ ಬ್ಯಾನರ್ ನಲ್ಲಿ ಎಲ್ಲರಿಗಿಂತ ಮೇಲೆ ಐವರು ಪಂಚಾಚಾರ್ಯ ಗುರುಗಳು ಕಂಡರು. ಎರಡನೆಯ ಸಾಲಿನಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು, ಅವರ ಪಕ್ಕದಲ್ಲಿ ಬಸವಣ್ಣನವರು ನಂತರ ಡಾ.ಬಾಬಾಸಾಹೇಬರ ಚಿತ್ರಗಳೊಂದಿಗೆ ಬೇಡುವ ಜಂಗಮ ವೇಶಧಾರಿಯ ಚಿತ್ರಗಳು ಕಂಡವು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇವರು ತಮ್ಮನ್ನು ಎಸ್.ಸಿ. ಗಳೆಂದು ಪರಿಗಣಿಸಬೇಕೆಂದು ಸರಕಾರಕ್ಕೆ ಆಗ್ರಹಿಸುವ ಚಿತ್ರವೆಂದು ಕೆಳಗಿನ ವಿವರಣೆಯಿಂದ ತಿಳಿದುಬಂತು.
“ಬದುಕು ಇತರರನ್ನು ಬದುಕಲು ಬಿಡು” ಎನ್ನುವುದು ಧರ್ಮ. ಬದುಕಲು ಬೇಕು ಆಹಾರ ಮತ್ತು ಆಶ್ರಯ. ಇವುಗಳನ್ನು ದೊರಕಿಸಿಕೊಳ್ಳಲು ಬೇಕು ಕಾಯಕ. ಕಾಯಕ ಸತ್ಯ ಶುದ್ಧವಾಗಿರಬೇಕೆಂದು ಬಯಸಿದ್ದರು ಶರಣರು. ಸತ್ಯ ಶುದ್ಧ ಕಾಯಕದಿಂದ ಬಂದ ಆದಾಯದಲ್ಲಿ ಹಂಚಿಕೊಂಡು ತಿನ್ನಿ ಎಂದು ನಾಡಿನ ಜನರಿಗೆ ತಿಳಿಸಿ, ಲಿಂಗಾಯತ ಧರ್ಮವನ್ನು ಸಾರಿ ಸಾರಿ ಹೇಳಿ ಅದನ್ನು ಜನರಿಗೆ ತಲುಪಿಸಲು ಜಂಗಮ ವರ್ಗವನ್ನು ನೇಮಿಸಿದವರು ಬಸವಣ್ಣನವರು. ಇನ್ನು ಬೇಡುವ ಜಂಗಮನ ಬಗ್ಗೆ ತಿಳಿಯುವಾ.
ಯಾರೀ ಬೇಡುವ ಜಂಗಮ ಅಥವಾ ‘ಬೇಡ ಜಂಗಮ’?: ‘ಬೇಡಜಂಗಮ’ ಅಥವಾ ‘ಸಾರುವ ಅಯ್ಯ’ ಎಂಬ ಕೊಳಕು ಕಾವಿಧಾರಿಯನ್ನು ನಾವು ಚಿಕ್ಕವರಿದ್ದಾಗ ಕಾಣುತ್ತಿದ್ದೆವು. ಆ ‘ಬೇಡ ಜಂಗಮ’ನ ಮೂಲ ಕಾಯಕವಾಗಿತ್ತು ಭಿಕ್ಷಾಟನೆ. ಭಿಕ್ಷುಕ ಹಾಗು ಇವನ ಮಧ್ಯದ ಅಂತರ ಅವರುಗಳು ಧರಿಸಿದ ಬಟ್ಟೆಯ ಬಣ್ಣ ಮಾತ್ರ. ಭಿಕ್ಷುಕನು ಹರಿದ ಬಟ್ಟೆಯನ್ನು ತೊಟ್ಟು ಕೈಯಲ್ಲಿ ಮುರುಕುತಟ್ಟೆ ಹಿಡಿದು ಭಿಕ್ಷಾಟನೆ ಮಾಡಿದರೆ, ಇವನು ಕೊಳಕಾದ ಕಾವಿ ನಿಲುವಂಗಿ, ಬಗಲಲ್ಲಿ ಹರಿದ ಖಾವಿ ಜೋಳಿಗೆಯನ್ನು ಹಾಕಿಕೊಂಡು, ಕಾಲು ನಡಿಗೆಯಲ್ಲಿ ಊರಿಂದೂರಿಗೆ ಪ್ರಯಾಣಿಸುತ್ತ, ಊರ ಕಟ್ಟೆಯ ಮೇಲೋ, ದೇವಸ್ಥಾನದಲ್ಲಿಯೋ ಮಲಗುತ್ತ, ಹೊಟ್ಟೆಗಾಗಿ ಕಂತಿ ಭಿಕ್ಷೇ ಮಾಡುವ ಬೇಡಜಂಗಮನಾಗಿದ್ದ.
ಕಂತಿಭಿಕ್ಷೇ ತಿಂದು ಮುಂದಿನೂರಿಗೆ ಹೊರಡುವಾಗ ಮತ್ತೊಂದಿಷ್ಟು ಹಣ ಅಥವಾ ಧಾನ್ಯ ಬೇಡುತ್ತಿದ್ದ. ಅವನ ಬೇಡಿಕೆಗೆ ಊರಜನ ಸ್ಪಂದಿಸದಿದ್ದಲ್ಲಿ ಜನರಿಗೆ ಭಾವನಾತ್ಮಕವಾಗಿ ಹೆದರಿಸಲು ತನ್ನನ್ನು ತಾನೆ ಶಿಕ್ಷೆಗೆ ಒಳಪಡಿಸಿಕೊಳ್ಳುತ್ತಿದ್ದ. ಅವನು ಊರ ಮಧ್ಯದಲ್ಲಿ ಮುಳ್ಳಾವಿಗೆ (ಮಳೆ ಹೊಡೆದ ಕಟ್ಟಿಗೆಯ ಹಲಗೆ) ಮೇಲೆ ನಿಂತು, ನಿರಾಹಾರವಿಲ್ಲದೆ ಸ್ವಯಂ ದೈಹಿಕ ಶಿಕ್ಷೇಯನ್ನು ಅನುಭವಿಸಲು ಪ್ರಾರಂಭಿಸುತ್ತಿದ್ದ. ಅವನ ಶಿಕ್ಷೆ ಊರಿಗೆ ಅನರ್ಥ ತಂದೀತೆಂಬ ನಂಬಿಕೆ ಊರಿನವರದಾಗಿತ್ತು. “ಎವ್ವಾ ಸಾರುಐನಾರು ಮಳ್ಳಾವಿಗೆ ಎರ್ಯಾನ ಊರಿಗೆ ಎನ ಕಾದಿದೆಯೋ ಏನೋ, ಅಂವಗ ರೊಕ್ಕಾ ಇಲ್ಲಾಂದ್ರ ಜ್ವಾಳಾ ದಾನ ಮಾಡ್ರೆವ್ವಾ” ಎನ್ನುವುದನ್ನು ಕಿವಿಯಾರೆ ಕೇಳಿದ್ದೇ ನಾನು ನನ್ನ ಬಾಲ್ಯದಲ್ಲಿ.
ಕಾವಿಧಾರಿ ಜಂಗಮ ಮುಳ್ಳಾವಿಗೆ ಮೇಲೆ ನಿಂತಾಗ ಅವನ ಪಾದಗಳಲ್ಲಿ ಜಿನುಗುವ ರಕ್ತ ಕಂಡು ಹೆದರಿ ಅವ್ವನ ಸೆರಗಿನಲ್ಲಿ ಅವಿತುಕೊಂಡಿದ್ದ ನೆನಪು ಹಸಿರಾಗಿದೆ ಇಂದಿಗೂ.
ದೇವರಾಜ ಅರಸರು ಇಂತಹ ನಿರ್ಗತಿಕರನ್ನು ಗುರುತಿಸಲು ಹಾವನೂರ ವಕೀಲರನ್ನು ಕೇಳಿಕೊಂಡರು. ಹಾವನೂರು ವಕೀಲರು ಅತ್ಯಂತ ವೈಜ್ಞಾನಿಕವಾಗಿ ಇಂಥಹ ನಿರ್ಗತಿಕ ಸಮಾಜಗಳನ್ನು ಗುರುತಿಸಿ ಯಾವ್ಯಾವ ಸಮಾಜಗಳು ಎಷ್ಟೆಷ್ಟು ಹಿಂದುಳಿದಿವೆ? ಎಂದು ವೈಜ್ಞಾನಿಕವಾಗಿ ಪರೀಕ್ಷಿಸಿ ಅವರಿಗೆ ಜೀವನ ನಿರ್ವಹಣೆಗಾಗಿ ಮೀಸಲಾತಿ ಕೊಟ್ಟರು.
ಈಗ ಈ ಬ್ಯಾನರ್ ಹಿಡಿದಿರುವವರು ನಿಜವಾಗಲೂ ಬೇಡುವ ಜಂಗಮರಾಗಿದ್ದರೆ, ಸಾಮಾಜಿಕವಾಗಿ ಆರ್ಥಿಕವಾಗಿ ಅತ್ಯಂತ ಹಿಂದುಳಿದವರಾಗಿದ್ದರೆ, ಇವರಿಗೆ ನ್ಯಾಯಯುತವಾದ ಸೌಲಭ್ಯ ಸಿಗಲೇಬೇಕು.
ಇಲ್ಲವಾದರೆ ಶ್ರೇಷ್ಠವಾದ ಜಾತಿಜಂಗಮರಾಗಿ ಹುಟ್ಟಿ ವೀರಶೈವ/ಲಿಂಗಾಯತ ಧರ್ಮಗುರುಗಳು ಎಂದು ಕರೆಸಿಕೊಳ್ಳುತ್ತ ಸಮಾಜದಲ್ಲಿ ಶ್ರೇಷ್ಠರೆಂದು ಪರಿಗಣಸಲ್ಪಟ್ಟವರು ಇನ್ನೊಬ್ಬರ ಅನ್ನಕ್ಕೆ ಕೈ ಹಾಕುವುದು ಹಾಸ್ಯಾಸ್ಪದ. ಕಾರಣ ಜಾತಿ ಜಂಗಮರನ್ನು ಶ್ರೇಷ್ಠರೆಂದು ನಮ್ಮ ಪುರಾಣ ಪುಣ್ಯಕತೆಗಳು, ವೀರಶೈವಾಗಮಗಳು ಹೇಳುತ್ತವೆ. ಅವುಗಳ ಆಧಾರದ ಮೇಲೆ ಇಂದಿಗೂ ಈ ಧರ್ಮದ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಸ್ವಲ್ಪ ಈ ಆಚಾರ ಸಂಹಿತೆಗಳು ಏನು ಹೇಳುತ್ತವೆ ನೋಡೋಣ ಬನ್ನಿ.
ವೈದಿಕ ಅಥವಾ ಸನಾತನ ಧರ್ಮದಲ್ಲಿ ವೇದ, ಆಗಮ, ಪುರಾಣಗಳು ಪವಿತ್ರ ಗ್ರಂಥಗಳು. ಇದೇ ಧರ್ಮದ ಭಾಗವಾದ ವೀರಶೈವ ಪಂಥವೂ ಸಹ ವೇದ, ಆಗಮ, ಪುರಾಣಗಳನ್ನು ನಂಬುತ್ತ ಅವುಗಳು ಶ್ರೇಷ್ಠವೆನ್ನುತ್ತದೆ. ಈ ಧರ್ಮದ ಗುರುಪೀಠವು ಪೂಜ್ಯನೀಯವಾಗಿದೆ. ಆಗಮಗಳಲ್ಲಿ ಶ್ರೇಷ್ಠ ಧರ್ಮದ ಆಚಾರ್ಯ ಇನ್ನೂ ಶ್ರೇಷ್ಠ ಎಂದು ಪದೆಪದೆ ಹೇಳಲ್ಪಟ್ಟಿದೆ.
ವೀರಶೈವ ಪವಿತ್ರ ಗ್ರಂಥಗಳಲ್ಲಿ ಶಿವ ಹಾಗು ಪಾರ್ವತಿಯ ಮಧ್ಯದ ಸಂಭಾಷಣೆಯ ಮುಖಾಂತರ ಈ ಧರ್ಮದ ಸಿದ್ಧಾಂತ ಆಚರಣೆಗಳನ್ನು ಹೇಳಿಸಲಾಗಿದೆ. ಶ್ರುತಿ ಹಾಗು ವೇದಗಳಲ್ಲಿ ಬರುವ ದೇವಾನುದೇವತೆಗಳು ಹೇಗೆ ವೈದಿಕ ಧರ್ಮವನ್ನು ಸ್ಥಾಪನೆಗೊಳಿಸಿದವೋ ಹಾಗೆಯೇ ವೀರಶೈವ ಮತವು ಸಹ ದೇವರಿಂದ ಸ್ಥಾಪಿತವಾಗಿದೆ ಎಂದು ಚಿತ್ರಿಸಲಾಗಿದೆ. ಇರಲಿ. ವಿಷಯಕ್ಕೆ ಬರುವೆ.
“ಸುಪ್ರಭೇದಾಗಮೋಕ್ತ”ಗಳಾದ “ವೀರಶೈವ ಪ್ರಕಾಶಿಕೆ”ಯಲ್ಲಿ ಶಿವನು ಪಾರ್ವತಿಯ ಒಂದು ಪ್ರಶ್ನೆಗೆ “ತನ್ನ ಪಂಚ ಮುಖಗಳಿಂದ ಹುಟ್ಟಿದವರಾದ ಪಂಚಾಚಾರ್ಯರೆ ವೀರಶೈವರ ಅಧಿಕೃತ ಮಹಾಪೀಠಾಧಿಗಳಾಗಳು” ಎನ್ನುತ್ತಾನೆ. (*೧) ಅದೆ ಪುಸ್ತಕದಲ್ಲಿ ಬರೆದಂತೆ ಪಾರ್ವತಿಯ ಇನ್ನೊಂದು ಪ್ರಶ್ನೆ ಕೇಳುತ್ತಾಳೆ: “ಗ್ರಹಸ್ತರಾದ ಮಾಹೇಶ್ವರರ ಮನೆಗಳಲ್ಲಿ ಗುರುಗಳು ಬಹಳ ಜನ ಇರುತ್ತಾರೆ. ಇವರಲ್ಲಿ ಮುಖ್ಯಗುರು ಯಾರು ? ಗೌಣಗುರುಗಳು ಯಾರು?ಎಂದು ಕೇಳಲು; ಶಿವನು ಉತ್ತರಿಸುತ್ತಾನೆ “ಜಗತ್ತಿನಲ್ಲಿ ಗುರುತ್ವವು ಎರಡು ವಿಧವಾಗಿರುತ್ತವೆ. ಒಂದು ಮುಖ್ಯ ಗುರುತ್ವ, ಇನ್ನೊಂದು ಗೌಣಗುರುತ್ವ. ಮುಖ್ಯ ಗುರುತ್ವವು ನನ್ನ ಮುಖಗಳಿಂದ ಹುಟ್ಟಿದ ರೇಣುಕಾದಿ ಐವರಲ್ಲಿ ಮಾತ್ರ ಇರುತ್ತದೆ…; ಈ ಆಚಾರ್ಯರೆ ಪ್ರಧಾನ ಗುರುಗಳು. ಇವರ ಆಧಿನದಲ್ಲಿ ಲಿಂಗಧಾರಣ, ದೀಕ್ಷಾ, ವಿವಾಹ, ಉಪದೇಶ ಕೊಡುವ ಮುಂತಾದ ಕಾರ್ಯಗಳನ್ನು ಮಾಡುವವರು ಗೌಣಗುರುಗಳು ಎನ್ನಿಸುತ್ತಾರೆ. ಸಾಮಾನ್ಯ ವೀರಶೈವ ಮನೆಗಳಲ್ಲಿ ನಡೆಯುವ ಯಾವತ್ತು ಧರ್ಮಕಾರ್ಯಗಳಲ್ಲಿ ಈ ಇಬ್ಬರೂ ಗುರುಗಳಾಗಿ ಕೆಲಸ ಮಾಡುತ್ತಾರೆ.
ಪಾರ್ವತಿಯ ಇನ್ನೊಂದು ಪ್ರಶ್ನೆಗೆ ವೀರಶೈವ ಮತದ ಶ್ರೇಷ್ಠತೆಯ ಬಗ್ಗೆ ಶಿವನ ಉತ್ತರ ಹೀಗಿದೆ: “ಯಾವ ರೀತಿಯಲ್ಲಿ ಗಂಗಾನದಿಯೂ ಶ್ರೇಷ್ಠ. ಎಲ್ಲ ಸ್ತ್ರಿಯರಲ್ಲಿ ನೀನು ಶ್ರೇಷ್ಠ, ಎಲ್ಲಾ ಪುರುಷರಲ್ಲಿ ನಾನು ಶ್ರೇಷ್ಠ, ಎಲ್ಲಾ ಕ್ಷೇತ್ರಗಳಲ್ಲಿ ಕಾಶಿ ಕ್ಷೇತ್ರವು ಶ್ರೇಷ್ಠ, ಎಲ್ಲಾ ತೀರ್ಥಗಳಲ್ಲಿ ಮಣಿಕರ್ಣಿಕಾ ಶ್ರೇಷ್ಠ, ಎಲ್ಲಾ ಮಂತ್ರಗಳಲ್ಲಿ ಪಂಚಾಕ್ಷರಿ ಮಂತ್ರ ಶ್ರೇಷ್ಠ, ಎಲ್ಲಾ ಲೋಕಗಳಲ್ಲಿ ಕೈಲಾಸ ಲೋಕ ಶ್ರೇಷ್ಠ, ಎಲ್ಲಾ ವೃಕ್ಷಗಳಲ್ಲಿ ಕಲ್ಪವೃಕ್ಷ ಶ್ರೇಷ್ಠ, ಅದೇ ಪ್ರಕಾರವಾಗಿ ಎಲ್ಲಾ ಮತಗಳಲ್ಲಿ ವೀರಶೈವ ಮತವು ಶ್ರೇಷ್ಠವಾದುದು” ಎಂದು ಹೇಳುತ್ತ ವೀರಶೈವ ಶ್ರೇಷ್ಠ ಮತವೆಂದು ಹೇಳುವನು.
ಆಗ ಪಾರ್ವತಿಯ ಮತ್ತೊಂದು ಪ್ರಶ್ನೆ ಮಾಡುತ್ತಾಳೆ: “ಎಲೈ ಭಗವಂತನೇ, ಬೇರೆಬೇರೆ ಹೆಸರುಳ್ಳ ಐದು ಜನಾ ಮಹಾಚಾರ್ಯರು ಕರ್ತೃಗಳು (ಪಂಚ ಪೀಠಗಳು) ಎಂದು ನೀನೇ ಹೇಳಿರುವಿ, ಆದರೆ ಎಲೈ ಜಗದೀಶನೇ ನಿನ್ನಿಂದ ಹೇಳಲ್ಪಟ್ಟ ಸರ್ವಶ್ರೇಷ್ಠವಾದ ವೀರಶೈವ ಮತದಲ್ಲಿ ಮಠಾರ್ಯ(ಮಠಸ್ಥ), ಗಣಾರ್ಯ (ಗಣಾಚಾರಿ), ಸ್ತಾವರಾರ್ಯ (ಸ್ತಾವರದ), ಕೌಮಾರ್ಯ (ಗಣಕುಮಾರ) ಮಾಲಾರ್ಯ (ಮಠಪತಿ) ಎಂದು ಪ್ರಸಿದ್ಧರಾದ ಐದು ಜನ ಉಪಾಚಾರ್ಯರು ಈ ಲೋಕದಲ್ಲಿ ಇರುತ್ತಾರೆ. ಸರ್ವವಿಧರಾದ ವೀರಶೈವರಿಗೆ ಲಿಂಗಧಾರಣ ಮಾಡುವಲ್ಲಿ, ವಿವಾಹಾದಿ ಮಂಗಲ ಕಾರ್ಯಗಳಲ್ಲಿ, ಇತರ ಸಮಸ್ತ ಪುಣ್ಯ ಕಾರ್ಯಗಳಲ್ಲಿ, ದಿನ ಕರ್ಮದಲ್ಲಿ ಇತ್ಯಾದಿ ಇನ್ನೂ ಅನೇಕ ಕಾರ್ಯಗಳಲ್ಲಿ ಈ ಐದು ಜನ ಉಪಾಚಾರ್ಯರನ್ನು ಬಿಟ್ಟರೆ ವೀರಶೈವರಾದವರಿಗೆ ಮಾರ್ಗವೆ ಇರುವುದಿಲ್ಲ. ಆದುದರಿಂದಲೇ ಎಲ್ಲಾ ದೇಶದಲ್ಲಿ ಎಲ್ಲಾ ಕಾಲದಲ್ಲಿ ಈ ಐದು ಜನ ಉಪಾಚಾರ್ಯರೇ ಎಲ್ಲ ಧರ್ಮ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಾರೆ” ಎಂದು ಪಂಚಪೀಠಾದೀಶ್ವರರ ಹಾಗು ಸ್ಥಳೀಯವಾದ ಮಠಾಧೀಶರ ಕಾರ್ಯಗಳ ಬಗ್ಗೆ ಸಂದೇಹ ನಿವಾರಣಾ ಪ್ರಶ್ನೆ ಕೇಳುತ್ತಾಳೆ. ಸರ್ವಸ್ವವನ್ನು ಬಲ್ಲ ಮಹಾತಾಯಿ.
“ಎಲೈ ಪ್ರಭುವೆ; ನೀನು ಮೊದಲು ಹೇಳಿದ ಸಿಂಹಾಸನಾಧಿಪತಿಗಳಾದ ಪಂಚಾಚಾರ್ಯರು ವೀರಶೈವರ ಮನೆಮನೆಗಳಲ್ಲಿ ನಡೆಯುವ ಸರ್ವ ವಿಧದ ಕಾರ್ಯಗಳಲ್ಲಿ ಕತೃಗಳೋ ಅಥವಾ ಉಪಾಚಾರ್ಯರು ಕರ್ತೃಗಳೋ? ಹೇಳು?
ಆಗ ಶಿವನ ಉತ್ತರಿಸುತ್ತಾನೆ “ನನ್ನ ಹೃದಯದಿಂದ ಮಠಾರ್ಯನೆಂಬ ಹೆಸರುಳ್ಳ ಉಪಾಚಾರ್ಯನು ಹುಟ್ಟಿರುವನು. ನನ್ನ ಬಲಗಡೆಯ ಹೆಗಲಿನಿಂದ ಗಣಾಚಾರಿಯು ಹುಟ್ಟಿರುವನು. ಎಡಗಡೆಯ ಹೆಗಲಿನಿಂದ ಮಠಪತಿ ಎಂಬುವನು ಹುಟ್ಟಿರುವನು. ನನ್ನ ಬಲಪಾದದಿಂದ ಸ್ಥಾವರನೆಂಬುವನು ಹುಟ್ಟಿರುವನು. ಈ ಹೆಸರುಳ್ಳ ಐವರು ಉಪಾಚಾರ್ಯರ್ಯರೆಂದು ಪ್ರಸಿದ್ದರಾಗಿರುವರು; ಅದರಂತೆ ಮಹಾಚಾರ್ಯರ ಸೇವೆಗಾಗಿ ಉಪಾಚಾರ್ಯರು ಇರುತ್ತಾರೆ. ನನ್ನ ಮುಖಗಳಿಂದ ಉತ್ಪನ್ನರಾದ ಐದು ಜನ ಸಿಂಹಾಸನಾಧಿಪತಿಗಳಾದ ಮಾಹಾಚಾರ್ಯರೆ ವೀರಶೈವರಿಗೆ ಮುಖ್ಯಾಧಿಕಾರಿಗಳೆಂದು ಅವರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುವ ಸ್ಥಳೀಯ ಪೂಜ್ಯರು ಮುಖ್ಯರೆಂದು” ಶಿವ ಉತ್ತರಿಸುವ.
ವಾಸ್ತವಕ್ಕೆ ಬರೋಣ; ಶ್ರೇಷ್ಠರೆಂದು ಪುರಾಣ ಪುಣ್ಯ ಕತೆಗಳಲ್ಲಿ ಕರೆಸಿಕೊಂಡಿರುವ ಪೂಜ್ಯರು ಅವರೆ ಹೇಳಿರುವ ಪಾದದಿಂದ ಹುಟ್ಟಿದ ಶೂದ್ರರಾಗಲು ಹೊರಟಿರುವುದನ್ನು ಅವರ ಭಕ್ತ ವರ್ಗದ ವೀರಶೈವರು ಹೇಗೆ ಸ್ವಾಗತಿಸುವರು? ಪೂಜ್ಯರ ಪಾದೋದಕವಿಲ್ಲದೆ ಅನ್ನ ನೀರು ಮುಟ್ಟದ ವೀರಶೈವ ಭಕ್ತರ ಗತಿ ಏನು? ಪ್ರತಿ ಗ್ರಾಮಗಳಲ್ಲಿ ಶ್ರಿಮಂತಿಕೆ, ಆಸ್ತಿ, ಉನ್ನತ ಸಾಮಾಜಿಕ ಸ್ಥಾನಮಾನ ಹೊಂದಿರುವ ಮಠಾಧಿಪತಿಗಳು ಷೆಡೂಲ್ಡ್ ಕಾಸ್ಟ್ ಆಗಿ ಈಗಾಗಲೆ ಈ ವರ್ಗದಲ್ಲಿರುವರೊಂದಿಗೆ ಸಹ ಭೋಜನ, ವಿವಾಹ ಸಂಬಂಧಗಳನ್ನು ಬೆಳಸಬೇಕಾಗಬಹುದಲ್ಲವೆ?
“ಕುಚ್ ಪಾನೇಕೇ ಲಿಯೇ ಕುಚ್ ಕೋನಾ ಪಡತಾ ಹೈ” ಎಂದು ಮಠಾಧಿಪತಿಗಳು ಒಪ್ಪಿ ಕಾರ್ಯರೂಪಕ್ಕೆ ತಂದರೆ ಇವರ ಬೇಡಿಕೆಯನ್ನು ಸರಕಾರ ಪರಿಗಣಿಸಬಹುದು.
ಆಧಾರ: ಪೂಜ್ಯ ಜಚನಿ ಸಾಹಿತ್ಯ ಮತ್ತು ಡಾ.ಕೌಂಟೆ ಸಾಹಿತ್ಯ
- ಜಿ.ಬಿ.ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ




