ಹಿಂದೆಲ್ಲಾ ನಾಯಕರಾಗಬೇಕಾದರೆ ಹೋರಾಟಗಳು, ತ್ಯಾಗ, ಸೇವೆ, ಹಿರಿತನ ಇವುಗಳ ಆಧಾರದ ಮೇಲೆ ನಿರ್ಧಾರವಾಗುತ್ತಿತ್ತು. ಕಾಲ ಬದಲಾಗಿದೆ, ಗಾಂಧೀಜಿಯಂತೆ ಹೋರಾಟವನ್ನು ಮಾಡಬೇಕಾಗಿಲ್ಲ, ಜೆಪಿ ಅವರಂತೆ ತ್ಯಾಗವನ್ನು ಮಾಡಬೇಕಾಗಿಲ್ಲ, ಲೋಹಿಯಾರವರಂತೆ ಬದ್ಧತೆಯ ಬದುಕು ಬೇಕಿಲ್ಲ, ಅಂಬೇಡ್ಕರ್ ರವರ ರೀತಿಯ ಪಾಂಡಿತ್ಯ, ಅಧ್ಯಯನ, ಜ್ಞಾನದ ಸಂಪತ್ತು ಬೇಕಿಲ್ಲ, ವಿನೋಬಾರವರ ರೀತಿಯಲ್ಲಿ ನಿರ್ದಿಷ್ಟ ಗುರಿಯೂ ಬೇಕಿಲ್ಲ, ಭಗತ್ ಸಿಂಗ್, ಸುಖದೇವ್, ರಾಜಗುರು ಇವರ ರೀತಿಯಲ್ಲಿ ಬಲಿದಾನವು ಬೇಕಿಲ್ಲ. ಬಾಬಾ ಆಮಟೆ ರವರ ರೀತಿಯಲ್ಲಿ ಸೇವೆಯೂ ಬೇಕಿಲ್ಲ, ಜಾರ್ಜ್ ಫರ್ನಾಂಡಿಸರ ರೀತಿಯಲ್ಲಿ ಕಾರ್ಮಿಕರ ಹಿತಕ್ಕಾಗಿ ಬದುಕನ್ನು ಸವೆಸಬೇಕಿಲ್ಲ.
- ಅಮೆರಿಕದಿಂದ 1 ಲಕ್ಷ ಕೋಟಿ ರೂ. ವಾಪಸ್ ಪಡೆಯುವುದಾಗಿ ಮೋದಿ ಶಪಥ ಮಾಡಿದ್ದಾರೆಯೇ?
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
ವಿವಾದಾತ್ಮಕವಾದ ಹೇಳಿಕೆಗಳನ್ನು ಹತ್ತಾರು ಬಾರಿ ಕೊಡುವಂತಹ ಬುದ್ಧಿ ಇದ್ದರೆ ಸಾಕು, ಅನ್ಯ ಧರ್ಮದ ವಿಚಾರದಲ್ಲಿ ಪ್ರಚೋದನೆಯ ಮಾತುಗಳನ್ನು ಆಡಲು ಬಂದರೆ ಸಾಕು, ದ್ವೇಷದ ಅಸೂಯೆ ಬೀಜ ಬಿತ್ತುವ ವಿಚಾರಧಾರೆಗಳನ್ನು, ಪ್ರಚಾರ ಮಾಡಿದರೆ ಸಾಕು.
ಜಾತಿಯ ಹೆಸರಿನಲ್ಲಿ ಯಾರೋ ಒಂದಷ್ಟು ಜನರನ್ನ ಸೇರಿಸಿ ಸಮಾವೇಶಗಳನ್ನ ಮಾಡಿ ಜಾತಿಯ ಜನರ ಪರವಾಗಿ ಆರ್ಭಟಿಸಿ, ಅಬ್ಬರದ ಮಾತುಗಳನಾಡಿದರೆ ಸಾಕು.
ಯಾವುದೋ ಮಾರ್ಗದಲ್ಲಾದರೂ ಚಿಂತೆ ಇಲ್ಲ, ಒಂದಷ್ಟು ಸಂಪತ್ತನ್ನು ಗಳಿಸಿದ್ದು, ಸಾರ್ವಜನಿಕ ಕಾರ್ಯಕ್ರಮಗಳ ಹೆಸರಿನಲ್ಲಿ ದೇಣಿಗೆಯನ್ನು ನೀಡಿ, ಮುಖ್ಯ ಅತಿಥಿಗಳಾಗುತ್ತಾ ಪ್ರಚಾರವನ್ನು ಪಡೆದುಕೊಂಡರೆ ಸಾಕು.
ಅಧಿಕಾರದಲ್ಲಿರುವ ನಾಯಕರುಗಳ ಮನೆಯ ಬಾಗಿಲಲ್ಲಿ ನಿಷ್ಠೆಯಿಂದ ಹಗಲು ರಾತ್ರಿ ಕಾಣಿಸಿಕೊಂಡು ಅವರ ಮನೆಯ ಮಂದಿಯ ಸೇವೆಯನ್ನ ಮಾಡುತ್ತಾ ವಿಶ್ವಾಸ ಗಳಿಸಿದರೆ ಸಾಕು.
ಅಧಿಕಾರದಲ್ಲಿರುವ ಇಲ್ಲವೇ ಪ್ರಭಾವಿ ನಾಯಕರ ಮನೆಯ ಅಳಿಯನಾದರೆ ಸಾಕು, ಅವರ ಮನೆಯ ಮಕ್ಕಳಾದರೂ ಸಾಕು, ಇಲ್ಲದಿದ್ದರೆ ಹತ್ತಿರದ ಸಂಬಂಧಿಗಳಾದರೂ ಸಾಕು, ಚಿಕ್ಕ ಸಾಹೇಬರೆಂಬ ಪಟ್ಟ ಸಿಗುತ್ತದೆ, ಅವರುಗಳ ಸಾವಿನ ಅನುಕಂಪದ ಅಲೆಯಲ್ಲಿ ತೇಲಿ ಬರಬಹುದು. ಜನಪ್ರತಿನಿಧಿಗಳಾಗಿ, ನಾಡನ್ನು ಆಳುವ ಮುಖಂಡರುಗಳಾಗಿ…
ಜನಪರ ಕಾಳಜಿಯಿಂದ ದುಡಿಯುತ್ತಾ, ಜನರ ಸೇವೆಯನ್ನ ಮಾಡುತ್ತಾ, ವಿಚಾರಗಳಿಗೆ ಬದ್ಧರಾಗಿ ಹೋರಾಟಗಳನ್ನ ನಡೆಸುತ್ತಾ, ಜನರ ಬದುಕಿನ ಬಗ್ಗೆ ಮಾತನಾಡುವವರನ್ನು ಮಾಧ್ಯಮದವರು ಮಾತನಾಡಿಸುವುದಿಲ್ಲ. ಜನರು ಗುರುತಿಸುವುದಿಲ್ಲ.
ಈಗ ಬೇಕಿರುವುದು ಪ್ರಚೋದಿಸಿ ಮಾತನಾಡುವವರು, ಧರ್ಮ ಧರ್ಮಗಳ ವಿಚಾರದಲ್ಲಿ ಅಬ್ಬರಿಸುವರು, ವಿವಾದಾತ್ಮಕವಾದ ಮಾತುಗಳನ್ನಾಡುವವರು, ಬೆಂಕಿ ಹಚ್ಚುವವರು, ವಿಷದ ಬೀಜವನ್ನು ಬಿತ್ತುವವರು, ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುವವರು, ಇವರಷ್ಟೇ ಆದ್ಯತೆ. ಸುಲಭವಾಗುತ್ತಿದೆ ದಾರಿ ನಾಯಕರಾಗಲು, ಅತಿ ಸುಲಭವಾಗುತ್ತಿದೆ , ಜನಪ್ರಿಯರಾಗಲು.
ನಿರುದ್ಯೋಗಿ ಯುವಕರ ಆತ್ಮಹತ್ಯೆಯ ಪ್ರಕರಣಗಳು, ಸಾಲಗಾರರ ಸಾಮೂಹಿಕ ಆತ್ಮಹತ್ಯೆಯ ಸುದ್ದಿಗಳು, ದೇವಾಲಯಗಳಲ್ಲಿ ದಲಿತರ ಪ್ರವೇಶದ ಕಾರಣಕ್ಕೆ ಹಲ್ಲೆ, ಮರ್ಯಾದೆ ಹತ್ಯೆಗಳು, ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ, ಸರ್ಕಾರಿ ಕಚೇರಿಗಳಲ್ಲಿನ ಅವಾಂತರಗಳು, ಕಾರ್ಮಿಕರ ಬೆವರಿನ ಬದುಕು – ಇವುಗಳು ಯಾವುದು ಸುದ್ದಿಯೇ ಅಲ್ಲ ಬಹಳಷ್ಟು ಮಾಧ್ಯಮದವರಿಗೆ.
– ಕೆ ಎಸ್ ನಾಗರಾಜ್, ಬೆಂಗಳೂರು



