ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ನಾಡು, ಅದೇ ರೀತಿಯಲ್ಲಿ ಸಾವಿರಾರು ವರ್ಷಗಳ ಹಿರಿಮೆ ಉಳ್ಳ ನಮ್ಮ ಕನ್ನಡ ಭಾಷೆ. ಇಲ್ಲಿ ಬದುಕುತ್ತಿರುವ ಪ್ರತಿಯೊಬ್ಬರಿಗೂ ಸಹ ಉದ್ಯೋಗವನ್ನು ಪಡೆದುಕೊಳ್ಳುವ ಹಕ್ಕು ಹೊಂದಿರುತ್ತಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ರಾಜ್ಯವನ್ನಾಳಿದ ಅನೇಕ ರಾಜ ಮಹಾರಾಜರು ಅಭಿವೃದ್ಧಿ ಮತ್ತು ಪ್ರಗತಿ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದರಿಂದಾಗಿ ಕೆಲವು ವರ್ಷಗಳ ಹಿಂದೆ ಕಣ್ಣುಬಿಟ್ಟಿರುವ ಉದ್ಯಮಿಗಳಿಂದ ಅಭಿವೃದ್ಧಿ ಮತ್ತು ಪ್ರಗತಿಯ ಪಾಠವನ್ನು ಹೇಳಿಸಿಕೊಳ್ಳುವ ಅವಶ್ಯಕತೆ ಯಾವ ಸರ್ಕಾರಗಳಿಗೂ ಇಲ್ಲ.
ಸುಮಾರು 500 ವರ್ಷಕ್ಕೂ ಹಿಂದೆಯೇ ಕೆಂಪೇಗೌಡರು ಬೆಂಗಳೂರಿನ ಇಲ್ಲಿನ ಜನರಿಗೆ ಬೇಕಾದಂತಹ ಸೌಕರ್ಯ ಸೌಲಭ್ಯಗಳೊಂದಿಗೆ ನಿರ್ಮಿಸಿ ಕೊಟ್ಟಿದ್ದಾರೆ. ಕಸುಬು ಮಾಡುವ ಕುಲಬಾಂಧವರಿಗೆ ಬಡಾವಣೆಗಳನ್ನ ನಿರ್ಮಿಸಿ ಕೊಟ್ಟಿದ್ದಾರೆ. ಅವರಿಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ಇಂತಹ ಬೆಂಗಳೂರಿಗೆ ಇನ್ನೂ ಈಗ ತಾನೇ ಹುಟ್ಟಿರುವ ಉದ್ಯಮಿಗಳಿಂದ ಉಪದೇಶ ಬೇಕಿಲ್ಲ.
ಮೈಸೂರಿನ ಮಹಾರಾಜರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೂರಾರು ವರ್ಷದ ಹಿಂದೆಯೇ ಬೆಂಗಳೂರಿನಲ್ಲಿ ಅನೇಕ ಕಾರ್ಖಾನೆಗಳನ್ನು ಸ್ಥಾಪಿಸಿ ಸಹಸ್ರಾರು ಮಂದಿಗೆ ಉದ್ಯೋಗವನ್ನು ಕೊಟ್ಟಿದ್ದಾರೆ. ಅವರು ಸ್ಥಾಪಿಸಿದ ಕಾರ್ಖಾನೆಗಳು ಕನ್ನಡಿಗರ ಪಾಲಿಗೆ ದೇವಾಲಯಗಳಾಗಿವೆ. ಅದೇ ರೀತಿಯಲ್ಲಿ ಕನ್ನಡಿಗರ ಆರ್ಥಿಕ ಭದ್ರತೆಗೆ ಬ್ಯಾಂಕುಗಳನ್ನು ಸ್ಥಾಪಿಸಿ ಕೊಟ್ಟಿದ್ದಾರೆ ಹಾಗೂ ಜ್ಞಾನಾರ್ಜನೆಗೆ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ಕೊಟ್ಟಿದ್ದಾರೆ. ಕುಡಿಯುವ ನೀರಿಗಾಗಿ ಅಣೆಕಟ್ಟುಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ. ರೈತರ ಬದುಕು ಗಾಗಿ ನೀರಾವರಿ ಯೋಜನೆಗಳನ್ನು ರೂಪಿಸಿದ್ದಾರೆ, ಬೀದಿ ದೀಪಗಳನ್ನು ಹಾಕಿಸಿ ಕೊಟ್ಟಿದ್ದಾರೆ, ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ, ಆಸ್ಪತ್ರೆಗಳನ್ನು ನಿರ್ಮಿಸಿದ್ದಾರೆ.
ಹೀಗೆ ಪಟ್ಟಿ ಮಾಡುತ್ತಾ ಹೋದರೆ ಲೆಕ್ಕವಿಲ್ಲದಷ್ಟು ಕೊಡುಗೆಯನ್ನ ಜನರ ಬದುಕಿಗಾಗಿ ನಿರ್ಮಿಸಿ ಕೊಟ್ಟಿದ್ದಾರೆ .ಇಂತಹ ಮಹಾಪುರುಷವನ್ನು ನೆನೆಯುವ ನಾವುಗಳು ಇಂದು ತಾನೆ ಕಣ್ಣು ಬಿಟ್ಟಿರುವ ಉದ್ಯಮಿಗಳಿಂದ ಉಪದೇಶವೂ ಬೇಕಿಲ್ಲ ನಿಮ್ಮ ಕೃಪೆಯು ಬೇಕಿಲ್ಲ.
ಸ್ವಾತಂತ್ರ್ಯ ಬಂದ ಆರಂಭದಲ್ಲಿಯೇ ಬೆಂಗಳೂರು ನಗರದಲ್ಲಿ ಹಲವಾರು ಸಾರ್ವಜನಿಕ ಉದ್ಯಮಗಳು ಸ್ಥಾಪನೆಯಾಗಿ ಲಕ್ಷಾಂತರ ಮಂದಿಗೆ ಉದ್ಯೋಗವನ್ನು ಕೊಟ್ಟಿದ್ದಾರೆ. ಅಂದು ಸ್ಥಾಪಿಸಲ್ಪಟ್ಟ ಕಾರ್ಖಾನೆಗಳಿಂದ ಲಕ್ಷಾಂತರ ಮಂದಿಯ ಬದುಕು ಸುಂದರವಾಗಿ ಅವರ ನಿವೃತ್ತಿಯ ನಂತರವೂ ಪಿಂಚಣಿಯನ್ನ ಪಡೆಯುತ್ತಿದ್ದಾರೆ. ಅವರ ಕುಟುಂಬದವರು ನೆಮ್ಮದಿಯ ದಿನಗಳನ್ನ ಕಾಣುತ್ತಿದ್ದಾರೆ. ಹೀಗಾಗಿ, ಇಂದು ತಾನೆ ಕಣ್ಣು ಬಿಟ್ಟಿರುವ ದುರಹಂಕಾರಿ ಉದ್ಯಮಿಗಳ ಉಪದೇಶವೂ ನಮಗೆ ಬೇಕಿಲ್ಲ .
ನೀವುಗಳು ಬರುವ ಮುನ್ನವೇ ಬೆಂಗಳೂರು ನಗರದ ಜನರು ಉದ್ಯೋಗವನ್ನು ಮಾಡುತ್ತಿದ್ದರು, ಬದುಕನ್ನು ನಡೆಸುತ್ತಿದ್ದರು, ನಗರದ ವಾತಾವರಣ ಮಾಲಿನ್ಯವಾಗಿರಲಿಲ್ಲ, ವಾಹನ ದಟ್ಟಣೆ ಇರಲಿಲ್ಲ, ಇಷ್ಟೊಂದು ಸಮಸ್ಯೆಗಳು ಇರಲಿಲ್ಲ .
ನೀವು ಕನ್ನಡಿಗರಿಗೆ ಉದ್ಯೋಗವನ್ನು ಕೊಡುವುದಾದರೆ ಹೊರರಾಜ್ಯಕ್ಕೆ ಹೋಗುವುದಾಗಿ ಬೆದರಿಸುತ್ತಿದ್ದೀರಿ , ಹೋಗುವವರನ್ನು ಯಾರೂ ತಡೆಯಲು ಮುಂದೆ ಬರುವುದಿಲ್ಲ. ಬೆಂಗಳೂರು ನಗರಕ್ಕಿಂತ ಉತ್ತಮವಾದಂತಹ ವಾತಾವರಣ ದೇಶದ ಯಾವ ನಗರದಲ್ಲಿ ನಿಮಗೆ ದೊರೆಯದು. ಅದೇ ರೀತಿಯಲ್ಲಿ ಕನ್ನಡಿಗರಿಗಿಂತ ಸೌಜನ್ಯದ ಸಜ್ಜನಿಕೆಯ ಜನ ನಿಮಗೆ ಎಲ್ಲಿಯೂ ದೊರೆಯಲಾರರು .ಆ ಕಾರಣದಿಂದಲೇ ನೀವು ಇಲ್ಲಿ ಬಂದು ಉದ್ಯಮವನ್ನ ಸ್ಥಾಪಿಸಿದ್ದು ಕೋಟಿ ಕೋಟಿ ಹಣವನ್ನು ಸಂಪಾದಿಸಿದ್ದು, ಹಣದಿಂದಾಗಿ ನಿಮ್ಮ ದುರಹಂಕಾರಗಳನ್ನು ಹೆಚ್ಚಿಸಿಕೊಂಡಿದ್ದು, ನೀವು ಬರುವ ಮುನ್ನ ಇಲ್ಲಿ ಯಾರು ಉಪವಾಸವಿರಲಿಲ್ಲ, ನೀವು ಬರುವ ಮುನ್ನ ಯಾರೂ ಬೀದಿಯಲ್ಲಿ ಮಲಗಿರಲಿಲ್ಲ, ನೀವು ಬರುವ ಮುನ್ನ ವಿದ್ಯಾವಂತರು ನಿರುದ್ಯೋಗಿಗಳೇನು ಆಗಿರಲಿಲ್ಲ, ನೀವು ಬರುವ ಮುನ್ನ ಜನರು ದುಃಖದಿಂದಿರಲಿಲ್ಲ, ನೀವು ಬಂದ ಮೇಲೆ ಮಾತ್ರವೇ ಎಲ್ಲವೂ ಆಯಿತು ಎನ್ನುವ ಭ್ರಮೆಯು ನಿಮಗೆ ಬೇಡ, ನೀವು ಇರಲಿ ಬಿಡಲಿ ಜನರ ಬದುಕು ನಡೆಯುತ್ತಲೇ ಇರುತ್ತದೆ.
ನೀವು ಇಲ್ಲಿ ಉದ್ಯಮಗಳನ್ನು ಸ್ಥಾಪಿಸಿ ಸರ್ಕಾರದ ಖಜಾನೆಗೆ ಹಣವನ್ನ ನೀಡುತ್ತಿದ್ದೇವೆ ಎನ್ನುವ ದರ್ಪದ ಮಾತು ಬೇಡ. ನಿಮ್ಮ ಉದ್ಯಮಗಳು ಮತ್ತು ಉದ್ಯೋಗಿಗಳಿಂದಾಗಿಯೇ ಬೆಂಗಳೂರು ನಗರ ಇತಿಮಿತಿ ಇಲ್ಲದೆ ಬೆಳೆದು, ನಿಮಗಾಗಿಯೇ ಮೇಲೆ ಸೇತುವೆಗಳು, ಸುರಂಗ ಮಾರ್ಗಗಳು, ಮೆಟ್ರೋ, ವರ್ತುಲ ರಸ್ತೆಗಳು, ಇವುಗಳೆಲ್ಲವನ್ನ ಮಾಡುತ್ತಿದ್ದಾರೆ. ನೀವು ಕೊಡುವ ಹಣಕ್ಕೆ ದುಪ್ಪಟ್ಟು ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರಗಳು ಹಣವನ್ನ ಖರ್ಚು ಮಾಡುತ್ತಿವೆ. ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಜನರಿಗೆ ಖರ್ಚು ಮಾಡುವುದಕ್ಕಿಂತ ಈಗ ನೀವುಗಳು ವಾಸ ಮಾಡುತ್ತಿರುವ ಬಡಾವಣೆಗಳಿಗಾಗಿಯೇ ಎಲ್ಲ ಸರ್ಕಾರಗಳು ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಿ ಕೊಡುತ್ತಿದ್ದಾರೆ. ಹೀಗಾಗಿ ನಿಮ್ಮ ಹಣದಿಂದಲೇ ಸರ್ಕಾರ ನಡೆಯುತ್ತಿದೆ ಎಂಬ ಅತಿಯಾದ ದೊಡ್ಡಸ್ತಿಕೆಯ ಮಾತುಗಳು ಬೇಡ.
ರಾಜ್ಯ ಸರ್ಕಾರದ ಖಜಾನೆಯನ್ನ ಪ್ರತಿಯೊಬ್ಬ ನಾಗರಿಕರು ತಮ್ಮದೇ ಆದ ರೀತಿಯಲ್ಲಿ ತೆರಿಗೆಯನ್ನು ಕಟ್ಟಿ ತುಂಬಿಸುತ್ತಿದ್ದಾರೆ. ಕೂಲಿ ಮಾಡುವವನು ಕಾಫಿ ಕುಡಿದರು ತೆರಿಗೆಯನ್ನು ಕಟ್ಟುತ್ತಾನೆ, ರೈತರು ಕಾರ್ಮಿಕರು, ವಾಹನ ಸವಾರರು, ಹೀಗೆ ಪ್ರತಿಯೊಬ್ಬ ನಾಗರಿಕರು ತಮ್ಮದೇ ಆದ ಪಾಲಿನಿಂದ ಸರ್ಕಾರವನ್ನು ನಡೆಸುತ್ತಿದ್ದಾರೆ.
ನೀವು ಉದ್ಯಮಗಳನ್ನು ಕಟ್ಟಿಕೊಂಡಿರುವ ಭೂಮಿ ಕನ್ನಡಿಗರದು, ನಿಮಗೆ ಕಟ್ಟಡಗಳನ್ನ ಕಟ್ಟಿಕೊಟ್ಟವರು ಕನ್ನಡಿಗರು, ನಿಮ್ಮ ಬದುಕಿಗೆ ಸಂಕಷ್ಟದ ಸಮಯದಲ್ಲಿ ನೆರವಾಗುವವರು ಇಲ್ಲಿನ ಜನರು. ಹೀಗಿದ್ದ ಮೇಲೆ ಸ್ಥಳೀಯ ಜನರ ಬಗ್ಗೆ ಮತ್ತು ನಾಡಿನ ಬಗ್ಗೆ ನಿಮಗೆ ತಾತ್ಸಾರ ಇರುವುದಾದರೆ ನಿಜಕ್ಕೂ ನೀವು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡವರಲ್ಲ, ಶ್ರೀಮಂತಿಕೆಯ ಸೋಗಿನಲ್ಲಿ ಮೆರೆಯುತ್ತಿರುವಂತಹ ವ್ಯಕ್ತಿಗಳು ಎಂದು ಅಭಿಪ್ರಾಯಕ್ಕೆ ಬರಲೇಬೇಕಾಗಿದೆ.
ಇಂತಹ ಉದ್ಯಮಿಗಳ ಹುಸಿ ಬೆದರಿಕೆಗಳಿಗೆ ಹೆದರಿ ವಿಧೇಯಕವನ್ನ ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯಬೇಡಿ. ಹೋಗುವವರೆಲ್ಲರೂ ತೊಲಗಲಿ ಮನಸ್ಸು ಇದ್ದವರು ಮಾತ್ರ ಇಲ್ಲಿರಲಿ. ಇವರಿಗಾಗಿ ಕನ್ನಡಿಗರ ಬದುಕನ್ನು ಕನ್ನಡಿಗರ ಹಕ್ಕನ್ನು ಬಲಿಕೊಡುವುದು ಬೇಡ. ಇಂತಹ ದರ್ಪದ ಜನರಿಗೆ ಸರ್ಕಾರಗಳು ಅಷ್ಟೇ ಕಠಿಣವಾದ ರೀತಿಯಲ್ಲಿ ಉತ್ತರಿಸಬೇಕಾಗಿದೆ.
ಕನ್ನಡ ವಿರೋಧಿ ಉದ್ಯಮಿಗಳೆ, ನೀವು ನಮಗೆ ಕೊಡುವ ಉದ್ಯೋಗ ಭಿಕ್ಷೆಯಲ್ಲ ಅದು ನಮ್ಮ ಹಕ್ಕು. ನಾವು ಉದ್ಯೋಗವನ್ನು ಕೇಳುತ್ತಿರುವವರು ಯಾರೂ ಅವಿದ್ಯಾವಂತರು ಅಲ್ಲ, ಅಜ್ಞಾನಿಗಳು ಅಲ್ಲ, ಯಾವ ಉದ್ಯೋಗಕ್ಕೆ ಯಾವ ಮಾನದಂಡ ಬೇಕೋ ಅಂತಹ ವಿದ್ಯೆಯನ್ನು ಉಳ್ಳವರೇ ಉದ್ಯೋಗವನ್ನು ಕೇಳುತ್ತಿದ್ದಾರೆ. ಹೀಗಾಗಿ ತಾವು ಮುಂದಿನ ದಿನಗಳಲ್ಲೂ ನಾಡಿನ ಬಗ್ಗೆ ನಾಡಿನ ಜನರ ಬಗ್ಗೆ ಸರ್ಕಾರಗಳ ಬಗ್ಗೆ ಮಿತಿಮೀರಿ ಮಾತನಾಡುವುದು ಟೀಕಿಸುವುದು ಮುಂದುವರೆದರೆ ನಮ್ಮ ರಾಜ್ಯಕ್ಕೆ ನಿಮ್ಮಂತವರ ಅವಶ್ಯಕತೆ ಇಲ್ಲ. ನಿಮ್ಮ, ಟೆಂಟುಗಳನ್ನು ಹೊತ್ತುಕೊಂಡು ಎಲ್ಲಿಗೆ ಬೇಕಾದರೂ ಹೊರಗಬಹುದು. ನಿಮ್ಮ ಕೈ ಕಾಲು ಹಿಡಿಯುವವರು ಯಾರೂ ಇಲ್ಲ.
ಕನ್ನಡಿಗರಿಗೂ ಸ್ವಾಭಿಮಾನವಿದೆ ಬದುಕನ್ನು ಕಟ್ಟಿಕೊಳ್ಳುವ ಛಲವು ಇದೆ. ಕಾಲ ಬದಲಾದಂತೆ ಹೊಸ ಹೊಸ ರೀತಿಯ ಉದ್ಯೋಗಗಳು ಸೃಷ್ಟಿಯಾಗುತ್ತದೆ. ನೀವು ದೇವಲೋಕದಿಂದ ಇಳಿದು ಬಂದವರು ಅಲ್ಲ , ನೀವು ಸರ್ವಜ್ಞರೂ ಅಲ್ಲ, ನೀವೇ ಎಲ್ಲವೂ ಅಲ್ಲ, ನೀವು ಈ ನಾಡಿನ ಒಂದು ಭಾಗವಷ್ಟೇ
– ಕೆ ಎಸ್ ನಾಗರಾಜ್, ಬೆಂಗಳೂರು




